08 ಮಾರ್ಚ್ 2023, ಮಂಗಳೂರು: ಇತ್ತೀಚಿಗೆ ಎರಡು ಕೈಗಳಲ್ಲಿ ಏಕಕಾಲದಲ್ಲಿ ಬರೆಯುವ ಮೂಲಕ ಮಂಗಳೂರಿನ ಒಬ್ಬಳು ಹುಡುಗಿ ಸುದ್ದಿಯಾಗಿದ್ದಳು. ಆಕೆ ಎರಡು ಕೈಗಳಲ್ಲಿ ಏಕಕಾಲದಲ್ಲಿ ಬರೆಯುವುದಷ್ಟೇ ಅಲ್ಲ ಸುಂದರವಾಗಿ ಬರೆಯಬಲ್ಲಳು ಕೂಡ. ಎರಡು ಕೈಗಳಲ್ಲಿ ಏಕಕಾಲದಲ್ಲಿ ಅತ್ಯಂತ ವೇಗವಾಗಿ ಬರೆಯುವ ಮೂಲಕ ಆಕೆ ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ದಾಖಲೆ ಮಾಡಿದಳು. ಆಶ್ಚರ್ಯವೆಂದರೆ ಇವೆಲ್ಲವನ್ನೂ ಈಕೆ ಸಾಧಿಸಿದ್ದು ಯಾವುದೇ ಮೆಂಟರ್ ಮೂಲಕ ಅಲ್ಲ, ಕರೋನ ಕಾಲದಲ್ಲಿ ಸ್ವ ಪ್ರಯತ್ನದ ಮೂಲಕ.
ಮಂಗಳೂರು ನಗರದ ಸ್ವರೂಪ ಅಧ್ಯಯನ ಕೇಂದ್ರದ ಗೋಪಾಡ್ಕರ್, ಸುಮಾಡ್ಕರ್ ದಂಪತಿಯ ಸುಪುತ್ರಿ ಆದಿ ಸ್ವರೂಪಳೇ ಆ ಹುಡುಗಿ.
ಇದಕ್ಕಿಂತಲೂ ಮೊದಲು ಗುಂಪಿನಲ್ಲಿ ರುಬಿಕ್ ಕ್ಯೂಬ್ ಮೊಸೈಕ್ ನಲ್ಲಿ ಗಿನ್ನಿಸ್ ದಾಖಲೆ ಮಾಡಿದ್ದಾಳೆ . ಆಬಳಿಕ ವರ್ಷಕ್ಕೊಂದರಂತೆ ವಿಶ್ವ ದಾಖಲೆಗಳನ್ನು ಮಾಡುತ್ತಾ ಬಂದಿದ್ದಾಳೆ. ಸತತ ಛಲ ಮತ್ತು ಪರಿಶ್ರಮದಿಂದ ಬರೆಯುವುದರಲ್ಲಿ ಸವ್ಯಸಾಚಿambidextrous ಎನಿಸಿಕೊಂಡ ಈಕೆ ಈಗ 20 ವಿವಿಧ ಶೈಲಿಗಳಲ್ಲಿ ಆರಕ್ಕಿಂತ ಹೆಚ್ಚು ಭಾಷೆಗಳಲ್ಲಿ ಬರೆಯಬಲ್ಲಳು.
ಇನ್ನು ಅನೇಕ ಅಚ್ಚರಿಗಳು ಇವಳ ಜೀವನದ ಜೊತೆ ಹೆಣೆದುಕೊಂಡಿವೆ. ತನ್ನ ಎರಡುವರೆ ವರ್ಷದ ವಯಸ್ಸಿನಲ್ಲಿ ಪುಟಗಟ್ಟಲೆ ಬರೆಯುತ್ತಿದ್ದ ಈ ಜಾಣೆ ಶಾಲೆಗೆ ಹೋಗಿ ಕಲಿತೆ ಇಲ್ಲ. ಸ್ವಕಲಿಕೆಯಿಂದಲೇ 10 ನೇ ತರಗತಿಯನ್ನು ವಿಶೇಷ ದರ್ಜೆಯಲ್ಲಿ ಪಾಸ್ ಮಾಡಿದ್ದಾಳೆ. ಈಗ ಪಿಯುಸಿಯನ್ನು ಸ್ವಕಲಿಕೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಕೇವಲ ಪಠ್ಯಪುಸ್ತಕಗಳಿಗೆ ಕಲಿಕೆಯನ್ನು ಸೀಮಿತಗೊಳಿಸದೆ ಯಕ್ಷಗಾನ, ಭರತನಾಟ್ಯ, ಹಿಂದೂಸ್ತಾನಿ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದಾಳೆ. ಚಿತ್ರಕಲೆಯೂ ಇವಳ ಒಂದು ವಿಶೇಷ ಆಸಕ್ತಿ. ಭಾವಚಿತ್ರ ಮತ್ತು ಕ್ರಿಯಾತ್ಮಕ ಚಿತ್ರಗಳನ್ನು ಮಾಡುವ ಈಕೆ ಚಿಕಣಿ ಚಿತ್ರಗಳ ಮೂಲಕ SSLC ನೋಟ್ಸ್ ಅನ್ನು ದೊಡ್ಡ ಕ್ಯಾನ್ವಾಸ್ ನಲ್ಲಿ ಎಂಟು ಏ ಫೋರ್ ಹಾಳೆಗಳಲ್ಲಿ ಬಿಡಿಸುವುದರ ಮೂಲಕ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಇಂದ ಇನ್ಕ್ರೆಡಿಬಲ್ ವಿಶುಯಲ್ ಮೆಮೊರಿ ಆರ್ಟಿಸ್ಟ್ ಎಂಬ ದಾಖಲೆಯ ಬಿರುದನ್ನು ಪಡೆದಿರುತ್ತಾಳೆ.
ತನ್ನ ಹತ್ತನೇ ವಯಸ್ಸಿನಲ್ಲಿ ಒಂದು ದ್ವಿಭಾಷಾ ಕಥಾ ಸಂಕಲನವನ್ನು ಬಿಡುಗಡೆ ಮಾಡಿ ಅದೇ ದಿನ ಕಥೆಗಳಿಗೆ ಇಲ್ಲ ಸ್ಟೇಷನ್ ಮಾಡಿದ ಕ್ರಿಯಾತ್ಮಕ ಚಿತ್ರಗಳ ಪ್ರದರ್ಶನವನ್ನು ನೀಡಿದ್ದಾಳೆ .
ಗಿಟಾರ್ ಹಾಗೂ ಕೀಬೋರ್ಡ್ ನುಡಿಸುವ ಆದಿ ಉತ್ತಮ ಹಾಡುಗಾರ್ತಿ ಕೂಡ. ಈ ವರ್ಷ ಒಂದು e-ಪತ್ರಿಕೆಗೆ ಆದಿಯ ಚಿತ್ರ ಪತ್ರ ಎನ್ನುವ ಅಂಕಣವನ್ನು ಬರೆದು ಅನೇಕ ಓದುಗ ಮಿತ್ರರನ್ನು ಸಂಪಾದಿಸಿಕೊಂಡಿದ್ದಾಳೆ. ಮಿಮಿಕ್ರಿ ಬೀಟ್ ಬಾಕ್ಸ್ ಗಳಲ್ಲೂ ಕೂಡ ವಿಶೇಷ ಸಾಧನೆಗೈದಿರುವ ಈಕೆ ಸತತ ಆರು ವರ್ಷಗಳ ಕಾಲ ಕರ್ನಾಟಕದದ್ಯಂತ 1600 ಕೇಂದ್ರಗಳಲ್ಲಿ ಮೆಮೋರಿಯ ವಿಶೇಷ ಪ್ರದರ್ಶನವನ್ನು ನೀಡಿರುವುದು ಹೆಮ್ಮೆಯ ವಿಷಯವಾಗಿದೆ. ಕೇರಳ ಮಹಾರಾಷ್ಟ್ರ ಹಾಗೂ ದೆಹಲಿಯ ಕನ್ನಡ ಸಂಘಗಳಲ್ಲಿಯೂ ಇವಳು ಕಾರ್ಯಕ್ರಮಗಳನ್ನು ನೀಡಿದ್ದಾಳೆ.ತನಗೆ ಪರಿಚಯವಾದ ಖ್ಯಾತನಾಮರ ಫೋನ್ ನಂಬರ್ ಗಳನ್ನು ಕಥೆಯ ಮೂಲಕ ದಾಖಲಿಸುವುದು ಇವಳ ವಿಶೇಷ ಹವ್ಯಾಸ. ರಾಜ್ಯ ಹಾಗೂ ಇತರ ರಾಜ್ಯಗಳ ಆಕಾಶವಾಣಿ ಹಾಗೂ ರೆಡ್ ಎಫ್.ಎಮ್ ಗಳಲ್ಲಿ ಈಕೆಯ ಸಂದರ್ಶನಗಳು ಬಿತ್ತರಗೊಂಡಿವೆ. ದೇಶದ ಎಲ್ಲಾ ಮುಖ್ಯ ಸುದ್ದಿ ಚಾನೆಲ್ ಗಳು ಈಕೆಯ ವಿಶೇಷ ಪ್ರತಿಭೆಯನ್ನು ಪರಿಚಯಿಸಿವೆ. ಇತ್ತೀಚೆಗೆ ಬಿಬಿಸಿ ಕೂಡ ಪರಿಚಯವನ್ನು ಪ್ರಸಾರ ಮಾಡಿದೆ.
ಸಾಹಿತ್ಯ ಸಂಗೀತ ಮುಂತಾದ ಲಲಿತ ಕಲೆಗಳಲ್ಲಿ ಸಾಧಕಿಯಾಗುವುದರೊಂದಿಗೆ ಈಗಾಗಲೇ ಐದು ವಿಶ್ವ ದಾಖಲೆಗಳನ್ನು ಮುಡಿಗೇರಿಸಿ ಕೊಂಡು ಇಂದಿನ ವಿದ್ಯಾರ್ಥಿಗಳಿಗೆ ಹಾಗೂ ಯುವ ಸಮುದಾಯಕ್ಕೆ ವಿಶೇಷವಾಗಿ ಮಹಿಳೆಯರಿಗೆ ಸ್ಪೂರ್ತಿಯಾಗಿರುವ ಆದಿ ಸ್ವರೂಪಳಿಂದ ಇನ್ನಷ್ಟು ಜಾಗತಿಕ ದಾಖಲೆಗಳು ಆಗಲಿ ಹಾಗೂ ಶಿಕ್ಷಣಕ್ಕೆ ಹೊಸ ದಿಕ್ಸೂಚಿ ಸಿಗಲಿ ಎನ್ನುವುದು ನಮ್ಮ ಆಶಯ.
- ಸುಮಂಗಲ ಕೃಷ್ಣಾಪುರ