ಬೆಂಗಳೂರು : ಯಕ್ಷಗಾನದ ಹಾಸ್ಯಚಕ್ರವರ್ತಿ ಎಂದು ಹೆಸರಾಗಿ ಹಾಸ್ಯ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ್ದ ಬಂಟ್ವಾಳ ಜಯರಾಮ ಆಚಾರ್ಯ ಬೆಂಗಳೂರಿನಲ್ಲಿ ಅ.21ರಂದು ಬೆಳಗ್ಗೆ ನಿಧನ ಹೊಂದಿದ್ದಾರೆ. ಚಂದ್ರಶೇಖರ ಧರ್ಮಸ್ಥಳ ಅವರ ನೇತೃತ್ವದ ತಂಡದಲ್ಲಿ ಇಂದಿನಿಂದ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಯಕ್ಷಗಾನ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿನ್ನೆ ಬೆಳಗ್ಗೆ ಬೆಂಗಳೂರಿನಲ್ಲಿ ಬಂದು ಇಳಿದ ತಂಡದಲ್ಲಿದ್ದ ಬಂಟ್ವಾಳರು ಮುಂಜಾನೆ ತೀವ್ರತರವಾದ ಹೃದಯ ಸ್ತಂಭನವಾದಾಗ ಜೊತೆ ಕಲಾವಿದರು ಆಸ್ಪತ್ರೆಗೆ ಸೇರಿಸಿದರೂ ಫಲವಾಗದೆ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ದಿ. ಗಣಪತಿ ಆಚಾರ್ಯ ಹಾಗೂ ದಿ. ಭವಾನಿ ದಂಪತಿಗಳ ಸುಪುತ್ರನಾಗಿ ದಿನಾಂಕ 12 ಅಕ್ಟೋಬರ್ 1957ರಂದು ಜನಿಸಿ, ತಮ್ಮ ಹದಿಮೂರನೇ ವಯಸ್ಸಿನಲ್ಲಿ ಯಕ್ಷಗಾನ ಕ್ಷೇತ್ರಕ್ಕೆ ಪಾದಾರ್ಪಣೆಗೈದು, ಸುಮಾರು ಐದು ದಶಕಗಳ ಸುದೀರ್ಘ ತಿರುಗಾಟದಲ್ಲಿ ಆಡ್ವಾಡಿ, ಸುಂಕದಕಟ್ಟೆ, ಸೊರ್ನಾಡು, ಕಟೀಲು, ಪುತ್ತೂರು, ಕದ್ರಿ, ಸುರತ್ಕಲ್, ಹೊಸನಗರ, ಹನುಮಗಿರಿ ಮೊದಲಾದ ಮೇಳಗಳಲ್ಲಿ ತಿರುಗಾಟವನ್ನು ಮಾಡಿದ ಯಕ್ಷರಂಗದ ಅನೂಹ್ಯ ಅನುಭವದ ಸರದಾರರು ಶ್ರೀ ಬಂಟ್ವಾಳ ಜಯರಾಮ ಆಚಾರ್ಯರು.
ಪ್ರಸಂಗಜ್ಞಾನ, ಶುದ್ಧ ಹಾಗೂ ಸರಳ ಮಾತುಗಾರಿಕೆ, ಪಾತ್ರವೈವಿಧ್ಯಗಳ ಪೋಷಣೆ, ವಿಶಿಷ್ಟ ಶೈಲಿಯ ಹಾಸ್ಯ ಪ್ರಸ್ತುತಿಯ ಮೂಲಕ ಮನೆಮಾತಾಗಿರುವ ಜಯರಾಮ ಆಚಾರ್ಯರು, ಸ್ತ್ರೀಪಾತ್ರ, ಕಿರೀಟ ವೇಷ, ಭಾಗವತಿಕೆ ಹಾಗೂ ಚೆಂಡೆ ಮದ್ದಳೆ ವಾದನದಲ್ಲೂ ಆಳವಾದ ಜ್ಞಾನವನ್ನು ಹೊಂದಿರುವ ಯಕ್ಷಸವ್ಯಸಾಚಿ.
ದಕ್ಷಿಣ ಕನ್ನಡ ರಾಜ್ಯೋತ್ಸ ಪ್ರಶಸ್ತಿ ಹಾಗೂ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ನೂರಾರು ಸನ್ಮಾನ-ಪ್ರಶಸ್ತಿಗಳಿಗೆ ಶ್ರೀಯುತರು ಭಾಜನರಾಗಿದ್ದರು. ಇವರು ಪತ್ನಿ, ಮಗ, ಮಗಳು ಹಾಗೂ ಸಹಸ್ರಾರ ಅಭಿಮಾನಿಗಳನ್ನು ಅಗಲಿದ್ದಾರೆ. ಇವರ ಅಗಲುವಿಕೆ ಯಕ್ಷಗಾನ ಕಲಾಕ್ಷೇತ್ರಕ್ಕೆ ತುಂಬಲಾರದ ನಷ್ಟ.