ಹತ್ತೊಂಬತ್ತನೇ ಶತಮಾನದ ಉತ್ತರಾರ್ಧದಲ್ಲಿ ಕನ್ನಡ ಮತ್ತು ಮಲಯಾಳಂ ಸಾಹಿತ್ಯವು ಮಹತ್ವದ ಬೆಳವಣಿಗೆಯನ್ನು ಕಂಡಿತು. ಸಂಸ್ಕೃತ, ಇಂಗ್ಲೀಷ್, ಬಂಗಾಳಿ ಭಾಷೆಗಳಿಂದ ಎರಡೂ ಭಾಷೆಗಳು ಅನುವಾದ, ರೂಪಾಂತರ, ಅನುಕರಣೆ, ಪುನರ್ ನಿರೂಪಣೆಗಳ ಮೂಲಕ ಅನೇಕ ಬಗೆಯ ಗದ್ಯ ರಚನೆಗಳನ್ನು ಪಡೆದವು. ಪುರಾಣ, ಇತಿಹಾಸ, ಜಾನಪದಗಳಿಂದ ವಸ್ತುಗಳನ್ನು ತೆಗೆದುಕೊಂಡು ಹೊಸ ಬಗೆಯ ಗದ್ಯ ಕಥನಗಳನ್ನು ರಚಿಸುವ ಪ್ರಯತ್ನಗಳಾದವು. ಒಂದು ನಿಟ್ಟಿನಲ್ಲಿ ಸಾಂಪ್ರದಾಯಿಕ ಭಾರತೀಯ ಕಥನ ಮಾದರಿಗಳಲ್ಲಿ ಸಮಕಾಲೀನ ಪಾತ್ರ, ವಿವರಗಳನ್ನು ಒಳಗೊಳ್ಳುವ ಪ್ರಯೋಗಗಳು ನಡೆದರೆ ಇನ್ನೊಂದು ನಿಟ್ಟಿನಲ್ಲಿ ಸ್ಥಳೀಯವೂ ದೇಶೀಯವೂ ಆದ ವಸ್ತು ವಿವರಗಳನ್ನು ಪಾಶ್ಚಾತ್ಯ ಮಾದರಿಯ ಗದ್ಯ ಬಂಧದಲ್ಲಿ ಕೂಡಿಸುವ ಪ್ರಯೋಗಗಳು ನಡೆದವು. ಈ ಮೂಲಕ ಕಾದಂಬರಿ ಪ್ರಕಾರವು ಭಾರತೀಯ ಸಾಹಿತ್ಯವನ್ನು ಪ್ರವೇಶಿಸಿತು. ಮರಾಠಿಯ ಮೊದಲ ಸಾಮಾಜಿಕ ಕಾದಂಬರಿ ‘ಯಮುನಾ ಪರ್ಯಟನ’ (1857) ಬಂಗಾಳಿಯ ‘ಅಲಾಲೇರ ಘರೇರ ದುಲಾರ’ (1858) ಸೇರಿದಂತೆ ಇತರ ಭಾರತೀಯ ಭಾಷೆಗಳಲ್ಲೂ ಕಾದಂಬರಿಗಳು ಪ್ರಕಟವಾಗತೊಡಗಿದವು. ಕನ್ನಡದಲ್ಲಿ ಗುಲ್ವಾಡಿ ವೆಂಕಟರಾಯರು, ಬೋಳಾರ ಬಾಬುರಾವ್, ಎಂ.ಎಸ್. ಪುಟ್ಟಣ್ಣ, ಗಳಗನಾಥ, ಬಿ. ವೆಂಕಟಾಚಾರ್ಯ ಮತ್ತು ಮಲಯಾಳಂನಲ್ಲಿ ಅಪ್ಪು ನೆಡುಂಗಾಡಿ, ಸಿ.ವಿ. ರಾಮನ್ ಪಿಳ್ಳೆ, ಚಂದು ಮೇನೋನ್ ಮುಂತಾದವರು ಕಾದಂಬರಿಗಳನ್ನು ಬರೆದ ಆದ್ಯರೆನಿಸಿಕೊಂಡರು.
ಮಲಯಾಳಂ ಭಾಷೆಯ ಮೊದಲ ಸಾಮಾಜಿಕ ಕಾದಂಬರಿ ‘ಇಂದುಲೇಖಾ’ (1889)ವನ್ನು ಬರೆದ ಒಯ್ಯಾರತ್ತ್ ಚಂದು ಮೇನೋನ್ (09.01.1847 – 07.09.1899) ಅವರ ಎರಡನೇ ಕಾದಂಬರಿ ‘ಶಾರದ’ (1892) ಮಲಯಾಳ ಸಮಾಜದ ನೈತಿಕತೆಯು ಸಡಿಲಗೊಳ್ಳುತ್ತಿರುವ ರೀತಿಯನ್ನು ಬಿಚ್ಚಿಡುವುದರೊಂದಿಗೆ ನ್ಯಾಯಾಲಯಗಳ ವ್ಯಾಜ್ಯಗಳ ವ್ಯವಹಾರವನ್ನು ದಾಖಲಿಸುತ್ತದೆ. ಕ್ಷುಲ್ಲಕ ವ್ಯವಹಾರ, ಅನಗತ್ಯ ಜಿದ್ದುಗಳಲ್ಲಿ ಕಳೆದುಹೋಗಿ ಸಾಮಾಜಿಕ ಸ್ವಾಸ್ಥ್ಯವನ್ನು ಕದಡುವ ಬಗೆಯನ್ನು ವಿವರಿಸುತ್ತಾ ವ್ಯಕ್ತಿಗಳ ಕ್ರೌರ್ಯದ ಬಗೆಗಳನ್ನು ಅನಾವರಣಗೊಳಿಸುತ್ತದೆ. ಹಂಪಿ ವಿಶ್ವವಿದ್ಯಾಲಯದ ಭಾಷಾಂತರ ವಿಭಾಗದ ಮುಖ್ಯಸ್ಥರಾದ ಡಾ. ಮೋಹನ ಕುಂಟಾರ್ ಅವರು ಈ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
ಕೇರಳೀಯ ಸಮಾಜ ಮತ್ತು ಮಲಯಾಳಂ ಕಾದಂಬರಿಯ ಚಾರಿತ್ರಿಕ ಸಂದರ್ಭದ ಹಿನ್ನೆಲೆಯಲ್ಲಿ ಈ ಕಾದಂಬರಿಯನ್ನು ವಿಶ್ಲೇಷಿಸುವುದು ಅರ್ಥಪೂರ್ಣವೆನಿಸುತ್ತದೆ. ಕುಟುಂಬದ ಹಿರಿಯ ಮಗನು ಮಾತ್ರವೇ ಸ್ವಜಾತಿಯ ಕನ್ಯೆಯನ್ನು ಮದುವೆಯಾಗಬಹುದು ಎಂಬ ರೂಢಿ ನಂಬೂದಿರಿ ಬ್ರಾಹ್ಮಣರಲ್ಲಿತ್ತು. ಆದ್ದರಿಂದ ಅವಿವಾಹಿತ ನಂಬೂದಿರಿ ಬ್ರಾಹ್ಮಣರು ನಾಯರ್ ಕನ್ಯೆಯರೊಂದಿಗೆ ಸಂಬಂಧ (ಕರ್ನಾಟಕದಲ್ಲಿರುವ ಕೂಡಿಕೆ ಪದ್ಧತಿಯನ್ನು ಹೋಲುವ ಸಂಪ್ರದಾಯ)ವನ್ನು ಇಟ್ಟುಕೊಳ್ಳುವ ವ್ಯವಸ್ಥೆಯು ಜಾರಿಗೆ ಬಂದಿತು. ಸ್ವಪ್ರತಿಷ್ಠೆಗಾಗಿಯೋ, ನಂಬೂದಿರಿಗಳ ಬಳಿಯಿಂದ ದೊರಕುವ ಹಣದ ಆಸೆಗಾಗಿಯೋ ನಾಯರ್ ತರವಾಡಿನ ಹಿರಿಯರು ಇದನ್ನು ಅಂಗೀಕರಿಸಿದರು. ಇದರ ಪರಿಣಾಮವಾಗಿ ನಾಯರ್ ಕನ್ಯೆಯರು ವ್ಯವಸ್ಥೆಯ ಬಲಿಪಶುಗಳಾದರು. ಪ್ರತಿಷ್ಠಿತ ನಾಯರ್ ಕುಟುಂಬದ ಪೂಂಜೋಲಕ್ಕರ ಮನೆತನಕ್ಕೆ ಸೇರಿದ ಕಲ್ಯಾಣಿಯಮ್ಮನನ್ನು ಆಕೆಯ ಇಚ್ಛೆಗೆ ವಿರುದ್ಧವಾಗಿ ಮುದುಕ ನಂಬೂದಿರಿಯೊಂದಿಗೆ ಸಂಬಂಧ ಮಾಡಿಕೊಳ್ಳಲು ನಿರ್ಧರಿಸಿದಾಗ ಆಕೆಯು ಅಲ್ಲಿಂದ ತಪ್ಪಿಸಿಕೊಂಡು ಬನಾರಸಿಗೆ ಹೋಗುತ್ತಾಳೆ. ಕೇರಳ ಮೂಲದವನಾದ ಚಿತ್ರ ಕಲಾವಿದ ರಾಮನ್ ಮೆನೋನ್‌ನ ಜೊತೆ ಸೇರಿ ಆತನ ಹೆಂಡತಿಯಂತೆ ಬಾಳುತ್ತಾಳೆ. ಅವರ ಪ್ರೀತಿಯ ಕುರುಹಾಗಿ ಶಾರದ ಹುಟ್ಟುತ್ತಾಳೆ. ರಾಮನ್ ಮೆನೋನ್‌ನ ಕಣ್ಣಿಗೆ ಸೋಂಕು ತಗುಲಿ ಚಿತ್ರಕಲೆಯ ವೃತ್ತಿಯನ್ನು ಅನಿವಾರ್ಯವಾಗಿ ಕೈಬಿಡುತ್ತಾನೆ. ಇದುವರೆಗಿನ ಸಂಪಾದನೆಯನ್ನು ಠೇವಣಿ ಇರಿಸಿದ ಬ್ಯಾಂಕ್ ದಿವಾಳಿ ಎದ್ದುದರಿಂದ ಆರ್ಥಿಕ ನಷ್ಟವನ್ನು ಅನುಭವಿಸುತ್ತಾನೆ. ಕುಟುಂಬದೊಂದಿಗೆ ಕೇರಳಕ್ಕೆ ಹಿಂತಿರುಗುವ ಹಾದಿಯಲ್ಲಿ ಕಲ್ಯಾಣಿಯಮ್ಮ ಜ್ವರಕ್ಕೆ ತುತ್ತಾಗಿ ತೀರಿಹೋಗುತ್ತಾಳೆ. ಮಗಳಾದ ಶಾರದೆಗೆ ಆಸರೆಯನ್ನು ಒದಗಿಸುವ ಉದ್ದೇಶದಿಂದ ರಾಮನ್ ಮೆನೋನ್ ಅವರು ಕಲ್ಯಾಣಿಯಮ್ಮನ ತವರುಮನೆಗೆ ಪತ್ರವನ್ನು ಬರೆಯುತ್ತಾನೆ. ಇದರಿಂದ ದಿಗಿಲುಗೊಂಡ ತವರುಮನೆಯವರು ನ್ಯಾಯವಾದಿಗಳ ಮೊರೆ ಹೊಕ್ಕು, ರಾಮನ್ ಮೆನೋನ್ ವಿರುದ್ಧ ಮೊಕದ್ದಮೆಯನ್ನು ಹೂಡುತ್ತಾರೆ. ಕಾನೂನು ಹೋರಾಟವು ಆರಂಭಗೊಳ್ಳುವಷ್ಟರಲ್ಲಿ ಕಾದಂಬರಿಯು ಕೊನೆಗೊಳ್ಳುತ್ತದೆ.
ಕಾನೂನು ಹೋರಾಟದ ಪ್ರಕ್ರಿಯೆಯಲ್ಲಿ ಲಾಭವನ್ನು ಪಡೆಯಲು ಯತ್ನಿಸುವ ವೈತಿಪಟ್ಟರಂಥ ನೀಚರ ಮನಸ್ಥಿತಿ, ಸಣ್ಣಪುಟ್ಟ ವಿಚಾರಗಳಿಗೂ ವ್ಯಾಜ್ಯವನ್ನು ಮಾಡುವ ನಾಯರ್ ತರವಾಡಿನ ಪ್ರತಿಷ್ಠಿತ ವ್ಯಕ್ತಿಗಳು, ತಾವೇ ಬುದ್ಧಿವಂತರೆಂದುಕೊಂಡು ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುವ ನ್ಯಾಯವಾದಿಗಳು ಸಮಾಜದ ಕ್ಷುದ್ರ ಜೀವಿಗಳಾಗಿ ಕಾಣಿಸಿಕೊಳ್ಳುತ್ತಾರೆ. ಕಾನೂನು ವ್ಯವಹಾರಕ್ಕೆ ಸಂಬಂಧಿಸಿದ ವಿಚಾರಗಳು ಕಾದಂಬರಿಯಲ್ಲಿ ವಿಸ್ತಾರವನ್ನು ಪಡೆದಿದ್ದರೂ ಕೋಪ್ಪುಣ್ಣಿ ಅಚ್ಛನ್, ವೈತಿಪಟ್ಟರ್ ಮತ್ತು ನ್ಯಾಯವಾದಿಗಳ ಹೀನತನವನ್ನು ಚಿತ್ರಣವು ಮುಖ್ಯವೆನಿಸುತ್ತದೆ. “ಈ ಪುಸ್ತಕವನ್ನು ಮೂರು ಭಾಗಗಳಾಗಿ ಪ್ರಕಟಿಸಬೇಕೆಂದು ನಿಶ್ಚೈಸಿದ್ದೆ. ಎರಡನೇ ಭಾಗ ಮತ್ತು ಮೂರನೇ ಭಾಗ ಈ ಇಂಗ್ಲೀಷ್ ಸಂವತ್ಸರ ಕೊನೆಗೊಳ್ಳುವುದಕ್ಕೂ ಮೊದಲೇ ಪ್ರಕಟಿಸುವುದು ಸಾಧ್ಯವಾಗಬಹುದೆಂದು ತೋರುತ್ತದೆ” ಎಂದು ಕಾದಂಬರಿಕಾರರು ಪೀಠಿಕೆಯಲ್ಲಿ ಹೇಳಿದ್ದರೂ ಮೊದಲ ಭಾಗ ಮಾತ್ರವೇ ಪ್ರಕಟವಾಗಿರುವುದರಿಂದ ‘ಶಾರದ’ ಅಪೂರ್ಣ ಕೃತಿಯಾಗಿ ಉಳಿದುಕೊಂಡಿದೆ. ಶಾರದೆಗೆ ನ್ಯಾಯ ದೊರಕಿತೇ ಎಂಬುದು ಪ್ರಶ್ನೆಯಾಗಿ ಉಳಿದರೂ ಚಾರಿತ್ರಿಕ ದೃಷ್ಟಿಯಿಂದ ಕಾದಂಬರಿಯು ಮಹತ್ವವನ್ನು ಪಡೆದುಕೊಳ್ಳುತ್ತದೆ.
ಮನಸ್ಸಿಗೆ ಒಪ್ಪದ ಸಂಬಂಧವನ್ನು ವಿರೋಧಿಸಿ, ಮನೆ ಬಿಟ್ಟು ಹೋದ ಕಲ್ಯಾಣಿಯಮ್ಮನ ನಡವಳಿಕೆಯು ವ್ಯವಸ್ಥೆಯ ವಿರುದ್ಧ ತೋರಿದ ಪ್ರತಿಭಟನೆಯಾಗಿದೆ. ನಾಯರ್ ಸಮುದಾಯದ ‘ಕಾರಣವರ್’ನ ದರ್ಪಕ್ಕೆ ಗಂಡಸರೇ ನಲುಗಿ ಹೋಗಿದ್ದ ಆ ಕಾಲಕ್ಕೆ ಹೆಣ್ಣೊಬ್ಬಳಿಂದ ಪ್ರತಿರೋಧವು ಎದುರಾದದ್ದು, ಮಲಯಾಳದ ಮೊದಲ ಘಟ್ಟದ ಕಾದಂಬರಿಯಲ್ಲೇ ಬಂಡಾಯದ ನೆಲೆಯು ಕಾಣಿಸಿಕೊಂಡಿರುವುದು ಅಚ್ಚರಿಯ ವಿಚಾರವಾಗಿದೆ. ಆ ಕಾಲದ ಸಾಮಾಜಿಕ ಪರಿಸ್ಥಿತಿಯ ಪ್ರತಿಫಲನ ಮತ್ತು ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವ ಕಾದಂಬರಿಯಲ್ಲಿ ಹೆಣ್ಣು ಸನ್ನಿವೇಶದ ಹಿಡಿತದಲ್ಲಿ ಸಿಲುಕಿ ನಲುಗಿದರೂ ಆಕೆಯು ಕೇವಲ ಅಬಲೆಯಂತೆ, ಶೋಷಿತೆಯಂತೆ ಏಕಶಿಲಾಕೃತಿಯಾಗಿ ಮೂಡಿ ಬಂದಿಲ್ಲ. ಪ್ರೀತಿಸಿದವನೊಂದಿಗೆ ಬಾಳುವ ದಿಟ್ಟತನವನ್ನು ತೋರಿದರೂ ಕಾದಂಬರಿಯಲ್ಲಿ ಯಾವುದೇ ರೀತಿಯ ಪ್ರಾಬಲ್ಯವನ್ನು ತೋರುವುದಿಲ್ಲ. ಸಂಪ್ರದಾಯಸ್ಥ ಮತ್ತು ಸುಧಾರಿತ ಹೆಣ್ಣಿನ ಪಾತ್ರ ಮಾದರಿಗಳಿಗಿಂತ ಭಿನ್ನವಾದ ಮಾದರಿಯನ್ನು ಕಟ್ಟಿಕೊಡುವ ಈ ಕಾದಂಬರಿಯಲ್ಲಿ ಅಂಶಿಕವಾಗಿ ಕಾಣಿಸಿಕೊಂಡಿರುವ ತರವಾಡಿನ ಅಧಪತನದ ಚಿತ್ರಣ ಮತ್ತು ಪ್ರತಿಭಟನೆಯ ಸ್ವರೂಪವು ಮುಂದಿನ ತಲೆಮಾರಿಗೆ ಸೇರಿದ ತಗಳಿ ಶಿವಶಂಕರ ಪಿಳ್ಳೆ, ಉರೂಬ್, ಲಲಿತಾಂಬಿಕ ಅಂತರ್ಜನಂ, ಎಂ.ಟಿ. ವಾಸುದೇವನ್ ನಾಯರ್, ಪಿ. ವತ್ಸಲ ಮೊದಲಾದವರ ಕತೆ ಕಾದಂಬರಿಗಳಲ್ಲಿ ವಿಸ್ತಾರವನ್ನು ಪಡೆದಿವೆ.
ಹತ್ತೊಂಬತ್ತನೇ ಶತಮಾನದ ಸಾಮಾಜಿಕ ಹಿನ್ನೆಲೆಯಲ್ಲಿ ರೂಪು ಪಡೆದಿರುವ ‘ಶಾರದ’ ಕಾದಂಬರಿಯಲ್ಲಿ ಕೇರಳದ ದೇವಾಲಯದಲ್ಲಿ ಅರ್ಚಕ ವೃತ್ತಿಯನ್ನು ಕೈಗೊಳ್ಳುತ್ತಿರುವ ತುಳು ಬ್ರಾಹ್ಮಣ, ತಮಿಳು ಬ್ರಾಹ್ಮಣ ವೈತಿಪಟ್ಟರ್, ಕ್ಷತ್ರಿಯ ಜನಾಂಗಕ್ಕೆ ಸೇರಿದ ತಿರುಮುಲ್‌ಪಾಡ್, ನಾಯರ್ ಸಮುದಾಯಕ್ಕೆ ಸೇರಿದ ಅಚ್ಛನ್ ನಾಯರ್ ಮತ್ತು ಅವರ ಕುಟುಂಬಸ್ಥರು, ದೇವಾಲಯದ ಚಾಕರಿ ವೃತ್ತಿಯನ್ನು ಮಾಡುವ ಜಾತಿಗೆ ಸೇರಿದ ಶಂಕರ ವಾರಿಯರ್ ಸಮುದಾಯಗಳ ವಿವರಗಳು ದೊರೆಯುತ್ತವೆ. ಸಮಕಾಲೀನ ವಿದ್ಯಮಾನಗಳಿಗೆ ಸ್ಪಂದಿಸುವ ಕಾದಂಬರಿಯು ಶಾರದೆಯ ಸಮಸ್ಯೆಗೆ ಮಾತ್ರ ಮೀಸಲಾಗದೆ ವಸಾಹತುಶಾಹಿ ಆಡಳಿತ, ಆಧುನಿಕ ಶಿಕ್ಷಣ, ಆ ಕಾಲದ ಮಲಯಾಳಂ ಲೇಖಕರ ಸಾಹಿತ್ಯಿಕ ಧೋರಣೆಗಳಿಗೆ ಪ್ರತಿಕ್ರಿಯಿಸುತ್ತದೆ. ಸಂಸ್ಕೃತಮಯವಾದ ನೀಳ ವಾಕ್ಯಗಳಿಂದ ಕೂಡಿದ್ದರೂ ಓದುಗರ ಸಂವಹನಕ್ಕೆ ಅಡ್ಡಿಯನ್ನು ಉಂಟು ಮಾಡದೆ ಗುಣಮಟ್ಟವನ್ನು ಕಾಯ್ದುಕೊಳ್ಳುತ್ತದೆ. ವೃತ್ತಿಯಲ್ಲಿ ಸಬ್ ಜಡ್ಜ್ ಆಗಿದ್ದ ಕಾದಂಬರಿಕಾರರು ಮನುಷ್ಯರ ಸ್ವಭಾವ ಮತ್ತು ಸಮಾಜದ ಕ್ಷುದ್ರ ಕ್ಷುಲ್ಲಕತೆಗಳನ್ನು ಅರಿತುಕೊಳ್ಳಲು ಕಾನೂನು ಶಾಸ್ತ್ರದ ಅರಿವನ್ನು ಉಪಯೋಗಿಸಿಕೊಂಡಿದ್ದಾರೆ. ಮನೆತನದ ಮರ್ಯಾದೆಗಿಂತಲೂ ಪ್ರತಿಷ್ಠೆಯನ್ನು ಮೆರೆಸುವ ನಾಯರ್‌ಗಳು, ಬೌದ್ಧಿಕ ದಿವಾಳಿತನವನ್ನು ತೋರಿಸುವ ನ್ಯಾಯವಾದಿಗಳು, ತನ್ನ ಅಸ್ತಿತ್ವ ಇಲ್ಲದಾಗುವ ಪರಿಸ್ಥಿತಿಗೆ ತಲುಪಿದರೂ ಅಚ್ಛನ್ ವಿರುದ್ಧ ಕತ್ತಿ ಮಸೆಯುವ ತಿರುಮುಲ್‌ಪಾಡ್, ಇವರಿಗೆ ವಿರುದ್ಧವಾಗಿ ನಿಲ್ಲುವ ಸಾತ್ವಿಕ ಶಕ್ತಿಗಳಿಗೆ ಪ್ರತೀಕವಾದ ರಾಮನ್ ಮೆನೋನ್, ಮುಗ್ಧೆಯಾದರೂ ಅಪಾಯವನ್ನು ತಪ್ಪಿಸಿಕೊಳ್ಳುವ ಜಾಣತನವನ್ನು ಹೊಂದಿರುವ ಶಾರದ, ಬುದ್ಧಿವಂತನೂ ಪ್ರಾಮಾಣಿಕನೂ ಆದ ಶಂಕರ ವಾರಿಯರ್, ಎರಡು ತಂಡಗಳಿಗೂ ಬೇಕಾದವರಾಗಿ ಕಾರ್ಯ ಸಾಧಿಸಿಕೊಳ್ಳುವ ಧೂರ್ತ ಕೃಷ್ಣ, ಕುಟಿಲ ನೀತಿಯ ವೈತಿಪಟ್ಟರ್, ವಿದೂಷಕನಂತಿರುವ ಕುಂಡನ್ ಮೆನೋನ್, ಆಧುನಿಕ ಶಿಕ್ಷಣವನ್ನು ವಿರೋಧಿಸಿ ಮಾತನಾಡುವ ದಾಸನ್ ಮೆನೋನ್ ಮುಂತಾದ ವೈವಿಧ್ಯಮಯ ಪಾತ್ರಗಳು ಹಲವು ಸ್ತರಗಳಲ್ಲಿ ಓದುಗರನ್ನು ತಟ್ಟುತ್ತವೆ. ಕಥನ ತಂತ್ರ, ನಾಟಕೀಯತೆ, ಹಾಸ್ಯ, ವ್ಯಂಗ್ಯ ವಿಡಂಬನೆಗಳು ಗಮನವನ್ನು ಸೆಳೆಯುತ್ತವೆ.
ಈ ಕಾದಂಬರಿಯಲ್ಲಿರುವ ಮನುಷ್ಯ ಪ್ರಪಂಚವು ಕಠೋರವಾದ ನೋವು ಮತ್ತು ಮಿತಿಯಿಲ್ಲದ ದುಃಖಗಳಿಂದ ಕೂಡಿದೆ. ವ್ಯವಸ್ಥೆಯೊಳಗಿನ ಕ್ರೌರ್ಯ, ಜಾತಿ ಪದ್ಧತಿ, ಮನುಷ್ಯತ್ವದ ಸೆಲೆಯಿಲ್ಲದಂತೆ ಹೊಗೆಯಾಡುತ್ತಿರುವ ದ್ವೇಷ, ಜಿದ್ದು, ಸ್ವಾರ್ಥಗಳು ನರಕದ ಬೇಲಿಯನ್ನು ಹೆಣೆಯುತ್ತವೆ. ನೆಮ್ಮದಿಯ ಉಸಿರಿಗೆ ಆಸ್ಪದವಿಲ್ಲದ ಮುಖಗಳನ್ನು ತೋರಿಸುತ್ತವೆ. ವ್ಯವಸ್ಥೆಯೊಳಗೆ ಜನರು ನಲುಗುವ ರೀತಿ, ಅದನ್ನು ಮೆಟ್ಟಿ ನಿಲ್ಲುವ ವ್ಯಕ್ತಿಯ ಘನತೆ, ಸ್ವಾಭಿಮಾನಗಳನ್ನು ವಿವೇಚಿಸುವ ಕಾದಂಬರಿಕಾರರ ಮಾನವೀಯ ದೃಷ್ಟಿಕೋನವು ಮನುಷ್ಯರಲ್ಲಿನ ಉತ್ತಮ ಗುಣಗಳ ಸಾಧ್ಯತೆಗಳೆಡೆಗೆ ಗಮನವನ್ನು ಹರಿಸುತ್ತದೆ. ಪಾತ್ರಗಳ ಅಂತರಂಗದ ನೋವಿಗೆ ಸ್ಪಂದಿಸುತ್ತದೆ. ಬದುಕನ್ನು ದಿಟ್ಟತನದಿಂದ ಸ್ವೀಕರಿಸಿ ಓದುಗರ ಮನದಲ್ಲಿ ನೆಲೆ ನಿಲ್ಲುವ ಮುಕ್ತ ಮನಸ್ಸಿನ ಪಾತ್ರಗಳಲ್ಲಿ ಉಕ್ಕುವ ಮಾನವೀಯ ಸಂವೇದನೆಗಳು ಯಾವುದೇ ಸಿದ್ಧಾಂತದಿಂದ ಮೂಡಿ ಬರದೆ ಬದುಕಿನ ಸಂಘರ್ಷದಿಂದ ರೂಪುಗೊಂಡಿವೆ. ಆವೇಶದಿಂದ ತೊಯ್ದ ಮಾತುಗಳ ಹಂಗುತೊರೆದ ಕಾದಂಬರಿಯು ಮಾನವನ ಅಲ್ಪತನ, ಆಕ್ರಮಣಕಾರಿ ಪ್ರವೃತ್ತಿ, ವ್ಯಕ್ತಿತ್ವದ ಬಿರುಕುಗಳು, ಸ್ವಾರ್ಥಪ್ರೇರಿತ ಸುಲಿಗೆ, ಕ್ರೌರ್ಯಗಳ ಹಿಂದೆ ಅಡಗಿದ ಕೆಟ್ಟತನಗಳನ್ನು ಬಯಲಿಗೆಳೆಯುತ್ತದೆ. ವಾಸ್ತವದ ನೆಲೆಯಲ್ಲಿ ಬದುಕನ್ನು ಶೋಧಿಸುತ್ತಾ ಜೀವನಿಷ್ಠೆ, ಮೌಲ್ಯಗಳನ್ನು ಗುರುತಿಸುತ್ತದೆ. ಬದುಕಿನ ವಿಸ್ತಾರವನ್ನು ಅರಿಯುವಂತೆ ಮಾಡುತ್ತದೆ. ಪ್ರತಿಯೊಂದು ಪಾತ್ರದ ನೋವು, ನರಳಾಟ, ಆದರ್ಶದ ಪ್ರತಿರೂಪವಾಗಿ ಮೂಡಿದ ಕಾದಂಬರಿಕಾರರ ಸಹಾನುಭೂತಿ, ಸಂಯಮ, ಜೀವನ ಪ್ರೀತಿಯಿಂದ ಕೂಡಿರುವ ವ್ಯಕ್ತಿತ್ವವು ಜೀವಂತವಾಗಿ ಗೋಚರಿಸುತ್ತದೆ.
ಸಹಜ ಸಾಮಾನ್ಯ ಘಟನೆಗಳ ಆಧಾರದಲ್ಲಿ ವ್ಯಕ್ತಿ ವೈಲಕ್ಷಣ್ಯಗಳನ್ನು ತೋರಿಸುವ ಕಾದಂಬರಿಯಲ್ಲಿ ಕಂಡುಬರುವ ಸಂವಾದ, ಕಥನ ತಂತ್ರಗಳಲ್ಲಿ ಪಾಶ್ಚಾತ್ಯ ಕಾದಂಬರಿಗಳ ಪ್ರಭಾವವಿದ್ದರೂ ತನ್ನದೇ ಆದ ಸ್ವಂತಿಕೆಯನ್ನು ಉಳಿಸಿಕೊಂಡಿದೆ. ಮಾನವರ ಮನಸ್ಸಿನ ದಾಖಲೆಯಾಗಿರುವ ಈ ಕಾದಂಬರಿಯು ಬದುಕಿನ ಕಂಪನ, ಬಾಗು ಬಳುಕು, ಹಾವ ಭಾವಗಳನ್ನು ತೋರಿಸಿ ಅರ್ಥವಂತಿಕೆಯನ್ನು ಧ್ವನಿಸುತ್ತದೆ. ಒಬ್ಬರ ಸ್ವಭಾವದಲ್ಲಿ ಒಬ್ಬರು ಕಲಸಿ ಹೋಗದೆ, ಒಂದು ಸನ್ನಿವೇಶವು ಮತ್ತೊಂದರ ನಕಲಾಗದೆ, ತಮ್ಮತನವನ್ನು ಕಾಯ್ದುಕೊಂಡು ಬಂದ ಪಾತ್ರಗಳ ವೈವಿಧ್ಯವು ಗಮನವನ್ನು ಸೆಳೆಯುತ್ತದೆ. ಪ್ರಕೃತಿಯು ಮಾನವನ ಮೇಲೆ ಹೇರಿರುವ ಗುಣ ದೌರ್ಬಲ್ಯಗಳು, ಒಡ್ಡಿದ ಆಕರ್ಷಣೆಗಳು, ಹರೆಯದ ಚೆಲ್ಲುತನ, ಲವಲವಿಕೆ, ಪಿತೂರಿಗಾರರ ಪೀಡೆ, ಧಾರಾಳತನ, ಮುಂಗೋಪ, ಹಗೆ, ಪ್ರೀತಿ, ಅಕ್ಕರೆಗಳು ಅನೇಕ ಮಜಲಿನಲ್ಲಿ ಕಾಣಸಿಗುತ್ತವೆ. ಪಾತ್ರಗಳು ತಮ್ಮ ಸುತ್ತುಮುತ್ತಲಿಗೆ ಸ್ಪಂದಿಸಿದ ರೀತಿ, ಹೊಮ್ಮಿಸಿದ ಮಾತು, ತಳೆದ ನಿರ್ಧಾರಗಳು ಮುಖ್ಯವಾಗುತ್ತವೆ. ಕಾದಂಬರಿಕಾರರು ತಮ್ಮ ಕೃತಿಯೊಳಗೆ ಹಲವು ರೀತಿಯ ವ್ಯಕ್ತಿಗಳನ್ನು ಅಡ್ಡಾಡಿಸಿದ್ದರೂ, ಸದ್ಗುಣಗಳಿಂದ ದುರ್ಗುಣಗಳವರೆಗೆ ದೃಷ್ಟಿ ಹಾಯಿಸಿದ್ದರೂ ಸದಾಚಾರದ ತಕ್ಕಡಿಯನ್ನು ಹಿಡಿದು ಕುಳಿತುಕೊಳ್ಳಲಿಲ್ಲ. ಕಪ್ಪು ಬಿಳುಪಿನ ಲೆಕ್ಕಾಚಾರಕ್ಕೆ ದುಡುಕಲಿಲ್ಲ.
ಚಂದು ಮೆನೋನ್ ಅವರ ‘ಇಂದುಲೇಖಾ’ ರಮ್ಯ ಕಾದಂಬರಿಯಾಗಿದ್ದರೆ ‘ಶಾರದ’ ವಾಸ್ತವವಾದಿ ನೆಲೆಯನ್ನು ಹೊಂದಿದೆ. ಅನವಶ್ಯಕ ಆಖ್ಯಾನ-ಉಪಾಖ್ಯಾನ, ಪ್ರಸಂಗ-ಉಪಪ್ರಸಂಗ, ಪಾತ್ರ-ಉಪಪಾತ್ರಗಳ ಆಟಾಟೋಪಗಳಿಲ್ಲ. ಭಾಷೆಯಲ್ಲಿ ಗಂಭೀರತೆ ಮತ್ತು ಹುಡುಗಾಟಿಕೆಗಳ ಕಲಬೆರಕೆಯಿಲ್ಲ. ಶೈಲಿಯು ಸಂಸ್ಕೃತಮಯವಾಗಿದ್ದರೂ ಪಾಂಡಿತ್ಯ ಪ್ರದರ್ಶನವಿಲ್ಲ. ಆಯಾ ಪರಿಸರ, ಧರ್ಮ, ವೃತ್ತಿಗಳಿಗೆ ತಕ್ಕಂಥ ವಿಶಿಷ್ಟ ಭಾಷೆಗಳನ್ನು ಬಳಸಲಾಗಿದೆ. ಎಚ್ಚರ ತಪ್ಪಿದ್ದರೆ ಕಾದಂಬರಿಯ ಏಕಾಗ್ರತೆಗೆ ಭಂಗ ತರಬಹುದಾಗಿದ್ದ ದಾಸುಮೆನೋನ್ ಮತ್ತು ವಿದ್ಯಾರ್ಥಿ ನಡುವಿನ ಸಂವಾದ, ನ್ಯಾಯವಾದಿಗಳ ಮಾತುಕತೆಗಳು ಸಮುಚಿತ ಸಂಯೋಗ, ಪಾತ್ರ, ಘಟನೆ, ಸ್ಥಿತಿಗತಿಗಳ ಹದವರಿತ ಹೊಂದಾಣಿಕೆಯೊಂದಿಗೆ ಕೃತಿಯಲ್ಲಿ ಬೆರೆತುಕೊಳ್ಳುತ್ತವೆ. ಕುಟಿಲೋಪಾಯಗಳನ್ನು ಮಾಡುವ ವೈತಿಪಟ್ಟರ್, ಕೋಪ್ಪುಣ್ಣಿ ಅಚ್ಛನ್, ಕೃಷ್ಣ ಮೊದಲಾದವರು ತಮ್ಮ ರೂಪಗಳಿಂದ ಭಯವನ್ನು ಹುಟ್ಟಿಸುವ ಪಾತ್ರಗಳಲ್ಲ. ಅವರ ಪರಿಸರ, ರಾಗ ವಿಕಾರ, ಅಹಂತೃಪ್ತಿಗಳು ಅವರ ಕೆಟ್ಟತನಗಳಿಗೆ ಚಾಲಕ ಶಕ್ತಿಯಾಗುತ್ತವೆ. ತಮ್ಮ ಕುತ್ಸಿತಗಳಿಗೆ ಅವರು ನೀಡುವ ಸಮರ್ಥನೆಗಳು ತೆಳ್ಳಗಿದ್ದರೂ ತಮ್ಮ ಮೇಲುಗಾರಿಕೆ, ಜಾಣ್ಮೆಗಳನ್ನು ಇತರರ ಅರಿವಿಗೆ ತರುವ ಕುಚೋದ್ಯಗಳು ಉದ್ದೇಶರಹಿತ ವೈರದಿಂದ ಕೂಡಿವೆ.
ಮಾನವ ಸ್ವಭಾವದ ಬಗೆಗಿನ ಕಾದಂಬರಿಕಾರರ ತಿಳುವಳಿಕೆಯ ಪರಿಚಯವಾಗಿರಬೇಕಾದರೆ ವೈತಿಪಟ್ಟರ್ ಮತ್ತು ಕೋಪುಣ್ಣಿ ಅಚ್ಛನ್ ಎಂಬ ಪಾತ್ರಗಳ ಹಿನ್ನೆಲೆಯಲ್ಲಿ ಪಾತಕಿ ಮತ್ತು ಖಳನ ನಡುವಿನ ಅಂತರವನ್ನು ಪರಿಶೀಲಿಸಬೇಕು. ತನ್ನ ಲಾಭಕ್ಕಾಗಿ ವ್ಯಕ್ತಿ, ಸಮಾಜ ಕಲ್ಯಾಣಕಾರಿಯಾದ ಕಾನೂನು ಕಟ್ಟಳೆಗಳನ್ನು ಮುರಿಯುವವನನ್ನು ಪಾತಕಿ ಎನ್ನಲಾಗುತ್ತದೆ. ವೈತಿಪಟ್ಟರಿಗೆ ರಾಮನ್ ಮೆನೋನ್ ಮತ್ತು ಅವನ ವಿರೋಧಿ ಬಣದ ಕೋಪುಣ್ಣಿ ಅಚ್ಛನ್ ಬಳಿಯಲ್ಲಿರುವ ಹಣದ ಮೇಲೆ ಆಸೆಯಿದೆ. ವಿರೋಧಿಗಳ ಸಂಪತ್ತು ಅವನ ಮನದಲ್ಲಿ ದ್ರವ್ಯಲೋಭದ ವಿಷವನ್ನು ಬೆರೆಸಿ ವಿವೇಕದ ಕೊರಳನ್ನು ಹಿಸುಕುವಂತೆ ಮಾಡಿದೆ. ಬದುಕು ಮತ್ತು ಸಮಾಜ ತನಗೆ ಕೇಡನ್ನು ಎಸಗದಿದ್ದರೂ ಅದರ ಬಗ್ಗೆ ಕರುಬುವ ಅಸಂತುಷ್ಟ ವ್ಯಕ್ತಿಯನ್ನು ಖಳ ಎನ್ನುತ್ತಾರೆ. ಪಾತಕಿಯಂತೆ ಅವನಿಗೆ ಲಾಭವು ಮುಖ್ಯವಲ್ಲ. ಪರಪೀಡನೆ ಮತ್ತು ತನ್ನ ಬಲಪ್ರದರ್ಶನ ಅವನಿಗೆ ಸಂತಸವನ್ನು ನೀಡುತ್ತದೆ. ಆತ್ಮತೃಪ್ತಿ ಮಾತ್ರ ಅವನ ಪಾಲಿಗೆ ಒದಗುವ ಲಾಭವಾಗುತ್ತದೆ. ಅಚ್ಛನ್ ಮತ್ತು ತಿರುಮುಲ್‌ಪಾಡ್ ಅವರ ನಡುವಿನ ಉದ್ದೇಶರಹಿತ ಹಗೆತನವು ಇದಕ್ಕೆ ಉದಾಹರಣೆಯಾಗಿದೆ. ಅವರ ಪ್ರತೀಕಾರಕ್ಕೆ ಸ್ವಪ್ರತಿಷ್ಠೆ ಮತ್ತು ಪ್ರದರ್ಶನಪ್ರಿಯತೆಗಳು ಮೂಲವಾಗಿದ್ದು ವೈರಿಯನ್ನು ಸಾರ್ವಜನಿಕವಾಗಿ ಅವಮಾನಗೊಳಿಸಿ ಆನಂದಪಡುವ ಉದ್ದೇಶವನ್ನು ಹೊಂದಿದೆ. ಇತರರ ಮೇಲೆ ಅನುಕಂಪವು ಇಲ್ಲದಿರುವುದರಿಂದ ಅವರು ಪರಮ ಸ್ವಾರ್ಥಿಗಳಾಗಿ, ಕೃತಘ್ನತೆ ಮತ್ತು ಕ್ರೌರ್ಯಗಳ ಮೊತ್ತವಾಗಿ ಉಳಿಯುತ್ತಾರೆ. ವೈತಿಪಟ್ಟರಲ್ಲಿ ಸಂಕೋಚ, ಮಾನವೀಯತೆಗಳ ಸಾಕ್ಷಿ ಪ್ರಜ್ಞೆಯ ತುಣುಕುಗಳು ಅಣುವಿನಷ್ಟಾದರೂ ಇಲ್ಲದೆ ಕೇವಲ ಸ್ವಾರ್ಥ, ರಕ್ಕಸತನಗಳೇ ಮುಖ್ಯವಾಗಿದ್ದಲ್ಲಿ ಆತನು ಅಮಾನುಷನಾಗಿ ಬಿಡುತ್ತಿದ್ದ. ಅವನು ಕೇವಲ ಸ್ವಾರ್ಥಿಯಾಗಿರುತ್ತಿದ್ದರೆ ಒಳಿತಿನ ಪಕ್ಷದವನಾದ ರಾಮನ್ ಮೆನೋನರ ಅಭಿಪ್ರಾಯಗಳನ್ನು ತಾಳ್ಮೆಯಿಂದ ಆಲಿಸುವುದರ ಬದಲು ನಿರ್ಲಕ್ಷಿಸುತ್ತಿದ್ದ. ಆದ್ದರಿಂದ ಸ್ವಾರ್ಥ ದಾನವೀಯತೆಗಳು ಒಂದಷ್ಟು ನಿಯಂತ್ರಣದೊಂದಿಗೆ ಅವನಲ್ಲಿ ಕ್ರಿಯಾಶೀಲವಾಗಿವೆ ಎನ್ನಬಹುದು.
ಆದರ್ಶ ಮತ್ತು ವಾಸ್ತವದ ನೆಲೆಗಳಿಗೆ ಹತ್ತಿರವಾಗಿರುವುದರಿಂದ ‘ಶಾರದ’ ಮಲಯಾಳಂ ಕಾದಂಬರಿಯ ಇತಿಹಾಸ ಮತ್ತು ಬೆಳವಣಿಗೆ ದೃಷ್ಟಿಯಿಂದ ಮುಖ್ಯವಾಗುತ್ತದೆ. ಮಲಯಾಳಂ ಸಾಹಿತ್ಯದ ಮೊದಲ ಘಟ್ಟದ ಕಾದಂಬರಿಯ ಶೈಲಿಯನ್ನು ಕನ್ನಡಿಗರಿಗೆ ಪರಿಚಯಿಸುವ ಉದ್ದೇಶದಿಂದ ಮೋಹನ ಕುಂಟಾರ್ ಅವರು ಈ ಕಾದಂಬರಿಯನ್ನು ಅನುವಾದಿಸಿದ್ದರಿಂದ ಆ ಕಾಲದ ಕನ್ನಡ ಕಾದಂಬರಿಗಳ ವಸ್ತು, ಆಶಯ, ಶೈಲಿಗಳಿಗೆ ಸಂಬಂಧಿಸಿದ ಸಮಾನ ಅಂಶಗಳನ್ನು ‘ಶಾರದ’ದೊಂದಿಗೆ ತುಲನೆ ಮಾಡುವ ಚೌಕಟ್ಟು ಸೃಷ್ಟಿಯಾಗಿದೆ. ಎರಡೂ ಭಾಷೆಗಳ ಕಾದಂಬರಿಗಳಲ್ಲಿ ಸಂಸ್ಕೃತದ ಪಾರಮ್ಯವು ಕಂಡುಬರುತ್ತಿದ್ದರೂ ‘ಶಾರದ’ ಜನಸಾಮಾನ್ಯರ ಓದಿಗೆ ನಿಲುಕುವಂಥ ಭಾಷೆಯನ್ನು ಒಳಗೊಂಡಿರುವುದರಿಂದ ಮಲಯಾಳಂ ಭಾಷೆಯನ್ನು ಬಲ್ಲ ಕನ್ನಡಿಗರ ಓದಿಗೆ ಅಡ್ಡಿ ಉಂಟಾಗುವುದಿಲ್ಲ. ‘ಇಂದುಲೇಖಾ ಕಾದಂಬರಿಯಲ್ಲಿರುವಂತೆ ಸಾಂಸ್ಕೃತಿಕ ಪಾರಿಭಾಷಿಕ ಪದಗಳು ಇಲ್ಲದಿರುವುದರಿಂದ ಅನುವಾದಿಸುವ ಸಂದರ್ಭದಲ್ಲಿ ಮೋಹನ ಕುಂಟಾರ್ ಅವರಿಗೆ ಸವಾಲುಗಳು ಎದುರಾಗಿಲ್ಲ. ಕನ್ನಡದ ಮೊದಲ ಸಾಮಾಜಿಕ ಕಾದಂಬರಿ ಇಂದಿರಾಬಾಯಿ (1899)ಯಲ್ಲಿ ಲೇಖಕರು ತೋರಿಸಲು ಉದ್ದೇಶಿಸಿದ ಮೌಲ್ಯಗಳು ವಿಜಯವನ್ನು ಪಡೆದು ‘ಸದ್ಧರ್ಮ ವಿಜಯ’ ಎಂಬ ಉಪಶೀರ್ಷಿಕೆಯನ್ನು ನಿಜಗೊಳಿಸಿದರೆ ‘ಶಾರದ’ ಅಪೂರ್ಣ ಕೃತಿಯಾಗಿರುವುದರಿಂದ ಒಳಿತಿನ ಗೆಲುವನ್ನು ಪ್ರತಿಪಾದಿಸಬಹುದೋ ಅಥವಾ ದುರಂತದೆಡೆಗೆ ಸಾಗುವ ಸಾಧ್ಯತೆಯನ್ನು ಉಂಟು ಮಾಡಬಹುದೋ ಎನ್ನಲು ಸಾಧ್ಯವಿಲ್ಲ. ಆದರೆ ಒಳಿತಿನ ಪಕ್ಷಕ್ಕೆ ಸೇರಿದ ಶಂಕರ ವಾರಿಯರ್ ಕುಡಿಯಬೇಕಿದ್ದ ವಿಷ ಬೆರೆತ ಹಾಲನ್ನು ಶಾರದಳೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳಲು ಹಾತೊರೆದ ನಂಬೂದಿರಿಯು ಕುಡಿದು ಸಾಯುವ ಸನ್ನಿವೇಶವು ಇರುವುದರಿಂದ ಕಾದಂಬರಿಯ ದಿಕ್ಕು ನೇತ್ಯಾತ್ಮಕತೆಯ ಕಡೆಗೆ ಇರಬಹುದು ಎಂದು ಊಹಿಸಲು ಅಡ್ಡಿಯಿಲ್ಲ. ಈ ಕಾದಂಬರಿ ಸಂಪೂರ್ಣಗೊಳಿಸುತ್ತಿದ್ದರೆ ಅದು ಇಂದುಲೇಖಾಗೆ ಸರಿಮಿಗಿಲಾಗುವ ಕಾದಂಬರಿಯಾಗುತ್ತಿತ್ತು. ‘ಇಂದುಲೇಖಾ’ ಮತ್ತು ‘ಶಾರದ’ದಂಥ ಕಾದಂಬರಿಯನ್ನು ಮಲಯಾಳಕ್ಕೆ ಕೊಟ್ಟ ಚಂದು ಮೆನೋನರು ಮತ್ತಷ್ಟು ಕಾಲ ಬದುಕಿರುತ್ತಿದ್ದರೆ ಮಲಯಾಳಂ ಸಾಹಿತ್ಯಕ್ಕೆ ಇನ್ನಷ್ಟು ಗಟ್ಟಿ ಕಾದಂಬರಿಗಳನ್ನು ನೀಡುತ್ತಿದ್ದರು. ಆದರೆ ಅವರ ಅಕಾಲ ಮರಣವು ಮಲಯಾಳಂ ಸಾಹಿತ್ಯಕ್ಕೆ ತುಂಬಲಾರದ ನಷ್ಟವಾಗಿದೆ.
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಹವ್ಯಾಸಿ ಕತೆಗಾರರಾಗಿರುವ ಇವರ ಕತೆ, ಕವಿತೆ, ಲೇಖನ ಮತ್ತು ಇನ್ನೂರಕ್ಕೂ ಮಿಕ್ಕ ಪುಸ್ತಕ ವಿಮರ್ಶೆಗಳು ಕನ್ನಡ ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ, ಡಿಜಿಟಲ್ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರಗೊಂಡಿವೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.