ಕಮತಗಿ : ಮೇಘಮೈತ್ರಿ ಕನ್ನಡ ಸಾಹಿತ್ಯ ಸಂಘ (ರಿ.) ಮತ್ತು ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ (ರಿ.) ಇವುಗಳ ಸಹಯೋಗದಲ್ಲಿ ಜಾನಪದ ಹಾಡುಗಾರ, ಗೀತ ರಚನೆಕಾರ, ನಾಟಕಕಾರ ಹಾಗೂ ಚಲಚಿತ್ರ ನಟರಾದ ಶ್ರೀ ಗುರುರಾಜ್ ಹೊಸಕೋಟೆಯವರ ಸರ್ವಾಧ್ಯಕ್ಷತೆಯಲ್ಲಿ ಕರ್ನಾಟಕ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ‘ಮೇಘಮೈತ್ರಿ ನೇಕಾರ ಸಾಹಿತ್ಯ ಸಮ್ಮೇಳನ – 2024’ವನ್ನು ದಿನಾಂಕ 23 ನವೆಂಬರ್ 2024ರಂದು ಕಮತಗಿಯ ಹಿರೇಮಠದ ಶ್ರೀ ಚೆನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ. ಈ ಸಮ್ಮೇಳನದಲ್ಲಿ ಮೆರವಣಿಗೆ, ನೇಕಾರರ ಬದುಕು-ಬವಣೆ ಕುರಿತ ಕವಿಗೋಷ್ಠಿ, ವಿಚಾರಗೋಷ್ಠಿ, ಕಲಾ ಪ್ರದರ್ಶನ, ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಗಾಂಧಿ ಚೌಕದಿಂದ ಹಿರೇಮಠದವರೆಗೆ ನಡೆಯಲಿರುವ ಕಾಲ್ನಡಿಗೆ ಮೆರೆವಣಿಗೆಗೆ ಹುನಗುಂದ ತಾಲೂಕು ಕ.ಸಾ.ಪ.ದ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಸಜ್ಜನ ಇವರು ಚಾಲನೆ ನೀಡಲಿದ್ದು, ಧ್ವಜಾರೋಹಣ, ಭುವನೇಶ್ವರಿ ಪ್ರತಿಮೆಗೆ ಪುಷ್ಪಾರ್ಚನೆ ಮತ್ತು ಖಾದಿ ಭಂಡಾರಕ್ಕೆ ಚಾಲನೆ ನಡೆಯಲಿದೆ. ಕಮತಗಿಯ ಹಿರೇಮಠದ ಶ್ರೀ ಶ್ರೀ ಶಿವ ಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಶಾಸಕರಾದ ಶ್ರೀ ಎಚ್.ವೈ. ಮೇಟಿ ಇವರು ಈ ಸಮ್ಮೇಳನವನ್ನು ಉದ್ಘಾಟನೆ ಮಾಡಲಿರುವರು.
ಗುಳೇದಗುಡ್ಡದ ಸಾಹಿತಿಗಳಾದ ಡಾ. ಶಾಂತಾ ಕರಡಿಗುಡ್ಡ ಇವರ ಅಧ್ಯಕ್ಷತೆಯಲ್ಲಿ ನೇಕಾರ ಬದುಕು-ಬವಣೆ ವಿಚಾರ ಗೋಷ್ಠಿ, ಸಾಹಿತಿ ಶ್ರೀ ಲಕ್ಷ್ಮಣ ಬದಾಮಿ ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ಮತ್ತು ಕಲಾ ಪ್ರದರ್ಶನ ನಡೆಯಲಿದೆ. ಕೊಪ್ಪಳ ಜಿಲ್ಲೆಯ ತಾವರಗೇರಾ ಪೂಜ್ಯಶ್ರೀ ಮಹೇಶ್ವರ ತಾತನವರು ಶಿವಯೋಗಿ ಶರಣರು ಇವರ ದಿವ್ಯ ಸಾನಿಧ್ಯದಲ್ಲಿ ಸನ್ಮಾನ, ಪ್ರಶಸ್ತಿ ಪ್ರದಾನ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ.