ಲಾಡ್ಜ್ ಪ್ರೊಫೆಷನಲ್ ಗ್ರೂಪ್ ಇವರ ವತಿಯಿಂದ ಫೆ.19ರಂದು ಜೆ.ಪಿ. ನಗರ 7ನೇ ಹಂತದಲ್ಲಿ ಭಕ್ತಿ ಗಂಧರ್ವ ವಿದ್ವಾನ್ ಎಂ.ಎಸ್. ದೀಪಕ್ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿಯನ್ನು ನಡೆಸಲಾಯಿತು. ಪಕ್ಕ ವಾದ್ಯದಲ್ಲಿ ಪಿಟೀಲು ವಿದ್ವಾನ್ ಶಂಕರ್ ರಾಜನ್ ಹಾಗು ಮೃದಂಗ ವಿದ್ವಾನ್ ಫಣೀಂದ್ರ ಭಾಸ್ಕರ್ ಇವರು ವಾದ್ಯ ಸಹಕಾರ ನೀಡಿದರು. ಈ ಕಚೇರಿಯನ್ನು ಬಹಳ ವಿಭಿನ್ನವಾಗಿ ಆಯೋಜಿಸಲಾಗಿತ್ತು. ಹಾಡುಗಾರಿಕೆಯೊಂದಿಗೆ ಸಂವಾದ ಹಾಗೂ ಪ್ರಶ್ನೋತ್ತರಗಳಿಂದ ಕೂಡಿದ ಕಾರಣ ಸಭಿಕರಿಗೆ ಗಾನ ರಸದೌತಣದ ಜೊತೆಗೆ ಸಂಗೀತದ ಜ್ಞಾನಾರ್ಜನೆಯು ನಡೆಯಿತು.
ವಿದ್ವಾನ್ ದೀಪಕ್ ರವರು ಬಹಳ ಸೊಗಸಾಗಿ ಯುಗ ಯುಗಗಳಿಂದಲೂ ಸಂಗೀತಕ್ಕೆ ಇರುವ ಮಹತ್ವ ಹಾಗೂ ಅದು ಮೂಡಿಸಿದ ಛಾಪಿನ ಬಗ್ಗೆ ಮಾಹಿತಿ ನೀಡಿ ಓಂಕಾರವೇ ಸಂಗೀತದ ಮೂಲ ಎಂದು ವಿವರಿಸುತ್ತಾ, ಭರತನ ನಾಟ್ಯ ಶಾಸ್ತ್ರ ಈಗಲೂ ಹೇಗೆ ಪ್ರಸ್ತುತ ಎಂಬದನ್ನು ತಿಳಿಸಿದರು. ಮಾತೇ ಸರಸ್ವತಿಯಿಂದ ಆದಿಯಾಗಿ, ಸತ್ಯ ಯುಗದಲ್ಲಿ ನಾರದರು-ಗಂಧರ್ವ-ಕಿನ್ನರರು ಸಂಗೀತದ ಜ್ಞಾನ ಪಸರಿಸಿದರೆ, ತ್ರೇತಾಯುಗದಲ್ಲಿ ರಾಮ ಲಕ್ಷ್ಮಣ ಹನುಮರ ಮೈತ್ರಿಗೆ ಕಾರಣವೇ ಸಂಗೀತ. ಹನುಮ ತನ್ನ ಸಂಗೀತ ನುಡಿಯಿಂದ ರಾಮನಿಗೆ ಆಪ್ಯಾಯಮಾನವಾಗಲು ಹೇಗೆ ಕಾರಣವಾಯಿತು ಮತ್ತು ರಾವಣ ಕೂಡ ಪ್ರಚಂಡ ಸಂಗೀತಗಾರನಾಗಿದ್ದ, ರುದ್ರ ವೀಣೆಯ ನಾದದಿಂದ ತೃಪ್ತಿ ಸಿಗದಿರುವಾಗ, ತನ್ನ ಬೆನ್ನಿನ ನರಗಳನ್ನೇ ತಂತಿಗಳನ್ನಾಗಿ ಮಾಡಿ ನುಡಿಸುತಿದ್ದ ಎನ್ನುವ ಪ್ರತೀತಿ ಇದೆ ಎಂದು ವಿವರಿಸಿದರು. ಮುಂದೆ ದ್ವಾಪರಯುಗದಲ್ಲಿ ಕೃಷ್ಣ ತನ್ನ ಕೊಳಲು ವಾದನದಿಂದ ಎಲ್ಲೆಡೆ ಹೇಗೆ ಸಂಗೀತ ಪಸರಿಸಿದ್ದ ಎಂಬುದನ್ನು ರಾಮ-ಹನುಮ-ಕೃಷ್ಣರ ಕೀರ್ತನೆಗಳನ್ನು ಹಾಡಿ ಅವರು ಜನಮನಗಳಿಗೆ ಮುದ ನೀಡಿದರು. ಈ ಕಲಿಯುಗದಲ್ಲಿ ಹೇಗೆ ಸಂಗೀತಕ್ಕೆ ವಿಶೇಷ ಮಹತ್ವ ಇದೆ, ಈ ಬಗ್ಗೆ ಅನೇಕ ದೃಷ್ಟಾಂತವನ್ನು ನೀಡುವ ಕೃತಿ, ವಚನ, ದಾಸರಪದಗಳನ್ನು ವಿದ್ವಾನ್ ದೀಪಕ್ ರವರು ಪ್ರಸ್ತುತ ಪಡಿಸುತ್ತಾ, ನಮ್ಮಲ್ಲಿ ದಾಸ ಶ್ರೇಷ್ಠರು, ಸಂತರು, ವಿದ್ವಾಂಸರು ಕಾಲದಿಂದ ಕಾಲಕ್ಕೆ ಧರ್ಮ ಪ್ರಚಾರಕ್ಕೆ, ಸಮಾಜ ಸುಧಾರಣೆಗೆ, ಭಗವಂತನ ಸಾಕ್ಷಾತ್ಕಾರಕ್ಕೆ ಸಂಗೀತವನ್ನು ಹೇಗೆ ಬಳಸಿದರು ಎಂದು ಉಲ್ಲೇಖಿಸಿದರು. ಎಂಟನೇ ಶತಮಾನದಲ್ಲಿ ಆದಿ ಗುರು ಶಂಕರಾಚಾರ್ಯರ ಅಪಾರವಾದ ಸಂಗೀತ ಜ್ಞಾನವನ್ನು ವಿವರಿಸುತ್ತಾ, ಆ ಸೌಂದರ್ಯ ಲಹರಿಯ ಒಂದು ತುಣುಕನ್ನು ಶ್ಲೋಕದ ಮೂಲಕ ವಿವರಿಸಿದರು
|| ರೇಖಾಸ್ತಿಸ್ರೋ ಗತಿಗಮಕಗೀತೈಕನಿಪುಣೇ | ವಿರಾಜಂತೇ ನಾನಾವಿಧ-ಮಧುರರಾಗಾಕರಭುವಾಂ | ತ್ರಯಾಣಾಂ ಗ್ರಾಮಾಣಾಂ ಸ್ಥಿತಿನಿಯಮಸೀಮಾನ ಇವ ತೇ ||
ಈ ಶ್ಲೋಕದಲ್ಲಿ ಹೇಳಲಾದ ಜಗನ್ಮಾತೆಯ ಕಂಠದಲ್ಲಿರುವ ಮೂರು ನರಗಳು, ಸಂಗೀತದ ಮೂರು ಗ್ರಾಮಗಳು (ಷಡ್ಜ ಗ್ರಾಮ, ಪಂಚಮ ಗ್ರಾಮ ಹಾಗೂ ಮಧ್ಯಮ ಗ್ರಾಮ), ಅವುಗಳಿಂದ ವಿಧ ವಿಧವಾದ ಮಧುರ ರಾಗಗಳು ಹೊರ ಹೊಮ್ಮುತ್ತವೆ ಎಂದು ಆ ಮನಮುಟ್ಟುವಂತೆ ತಿಳಿಸಿ ಇಂತಹ ಸಂಗೀತದ ಕ್ಲಿಷ್ಟ ವಿಚಾರವನ್ನು ವಿದ್ವಾಂಸರು, ಪಾಂಡಿತ್ಯ ಹೊಂದಿರುವವರು ಮಾತ್ರ ಅರ್ಥೈಸಿಕೊಳ್ಳಲು ಸಾಧ್ಯ ! ಶಂಕರಾಚಾರ್ಯರು ಕೇವಲ ಆಚಾರ್ಯರಾಗಿ, ದಾರ್ಶನಿಕರಾಗಿ ಇರದೆ ಸಂಗೀತ ಪಂಡಿತರೂ ಆಗಿದ್ದರು ಎಂಬುದಕ್ಕೆ ಇದೇ ಸಾಕ್ಷಿ ಎಂದರು. ಮುಂದೆ ಬಂದಂತಹ ಬಸವಣ್ಣನವರು ವಚನ ಸಂಗೀತದ ಮೂಲಕ ಲೋಕದ ಡೊಂಕು ತಿದ್ದುವ ಪ್ರಯತ್ನ ಹೇಗೆ ಮಾಡಿದ್ದಾರೆ ಎಂದು ತಿಳಿಸುತ್ತಾ ಅವರ “ಉಳ್ಳವರು ಶಿವಾಲಯ ಮಾಡುವರು” ಎಂಬ ವಚನವನ್ನು ಪ್ರಸ್ತುತಪಡಿಸಿದರು. ಭಾರತದಲ್ಲಿ ಮೊಘಲ್ ಆಳ್ವಿಕೆಯಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಜನನ ಹೇಗೆ ಆಯಿತು ಎಂಬ ಕುತೂಹಲಕಾರಿ ವಿಚಾರವನ್ನು ತಿಳಿಸುತ್ತಾ, ಆಗಿನ ದಿಲ್ಲಿ ಸುಲ್ತಾನರಾಗಿದ್ದ ಅಲಾವುದ್ದೀನ್ ಖಿಲ್ಜಿಯ ಆಸ್ಥಾನ ವಿದ್ವಾಂಸರಾಗಿದ್ದ ಅಮೀರ್ ಖುಸ್ರೋ ಅವರ ಕೋರಿಕೆಯ ಮೇರೆಗೆ, ಆ ಪ್ರದೇಶದಲ್ಲಿ ಹಾಡುತ್ತಿದ್ದ ಅನೇಕ ಪ್ರಕಾರದ ಸಂಗೀತವನ್ನು ಒಗ್ಗೂಡಿಸಿ ಒಂದು ಪ್ರಕಾರ ಮಾಡಿ ಅದಕ್ಕೆ ಒಂದು ಗಟ್ಟಿಯಾದ ತಳಪಾಯ ಹಾಕಬೇಕು ಅಂದುಕೊಂಡು ಅದಕ್ಕಾಗಿ ದಕ್ಷಿಣ ಭಾರತದ ಸಾಮಂತ ರಾಜರಲ್ಲಿ ಒಬ್ಬರಾದ ದೇವಗಿರಿ ರಾಮದೇವರಾಯರ ಆಸ್ಥಾನದಲ್ಲಿದ್ದ ಪ್ರಕಾಂಡ ಪಂಡಿತರಾದ ಗೋಪಾಲ ನಾಯಕರನ್ನು ತಮ್ಮ ಆಸ್ಥಾನಕ್ಕೆ ಕರೆಸಿಕೊಂಡ ರೋಚಕ ಕಥೆಯನ್ನು ಹೇಳಿ ಹೇಗೆ ಇಬ್ಬರೂ ಜೊತೆಗೆ ಸೇರಿ ಹಿಂದೂಸ್ತಾನಿ ಶಾಸ್ರೀಯ ಸಂಗೀತಕ್ಕೆ ಒಂದು ಭದ್ರ ಬುನಾದಿಯನ್ನು ಹಾಕಿಕೊಟ್ಟರು ಎಂದು ತಿಳಿಸಿದರು. ನಂತರ ಬಂದ ದಾಸ ಶ್ರೇಷ್ಠರಲ್ಲಿ, ಪುರಂದರ ದಾಸರು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಒಂದು ಭದ್ರ ಬುನಾದಿ ಹಾಕಿ ನಮಗೆ ಅನೇಕ ದಾಸರ ಪದಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಹಾಗೂ ಅವರನ್ನು ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹ ಎಂದು ಕರೆಯಲು ಇರುವ ವೈಜ್ಞಾನಿಕ ಕಾರಣಗಳನ್ನು ವಿವರಿಸಿ ಅವರ ಗುರುಗಳಾದ ವಿ|| ಆರ್. ಕೆ. ಪದ್ಮನಾಭ ಅವರು ಈ ಎಲ್ಲಾ ವಿಚಾರಗಳನ್ನು ಹೊಂದಿರುವ ಪುಸ್ತಕವನ್ನು ಬಿಡುಗಡೆ ಮಾಡಿರುವ ಬಗ್ಗೆ ಮಾಹಿತಿ ನೀಡಿ, ಇನ್ನೂ ಅನೇಕ ದಾಸರು ಅಂದು ಮಧುಕರ ವೃತ್ತಿ ಮಾಡಿ ದಾಸರ ಪದಗಳನ್ನು ರಚಿಸಿ ಹಾಡಿದ ಕಾರಣದಿಂದ ಇಂದು ಕರ್ನಾಟಕ ಶಾಸ್ತ್ರೀಯ ಸಂಗೀತ ಉಳಿದಿರುವುದು ಹಾಗು ಜನ ಸಾಮಾನ್ಯರಿಗೆ ತಲುಪಿರುವುದು ಎಂದು ಹೇಳುತ್ತಾ, ಸಂಗೀತವು ಕೇವಲ ಮನರಂಜನೆಯ ಸಾಧನವಾಗಿರದೇ, ಕೇಳುಗರಿಗೂ ಹಾಗು ಹಾಡುಗಾರರಿಗೂ ಆರೋಗ್ಯಕರ ದೃಷ್ಟಿಯಿಂದ ಅನೇಕ ಉಪಯೋಗ ನೀಡುತ್ತದೆ ಎಂದು ತೋರುತ್ತಾ, ತ್ಯಾಗರಾಜರು ಮೋಕ್ಷಮು ಗಲದಾ ಕೃತಿಯಲ್ಲಿ ಸಂಗೀತಕ್ಕೆ ಇರುವ ಮಹತ್ವವನ್ನು, ಸಂಗೀತ ಜ್ಞಾನ ಇಲ್ಲದವರಿಗೆ ಮೋಕ್ಷ ಸಿಗುವುದಿಲ್ಲ ಎಂದು ಹೇಳುವ ಮೂಲಕ ತಿಳಿಸಿದ್ದಾರೆ ಎಂದು ತಿಳಿಸಿ ಸಾರಮತಿ ರಾಗದ ಈ ಕೃತಿಯನ್ನು ಹೃದಯಸ್ಪರ್ಶಿಯಾಗುವಂತೆ ಪ್ರಸ್ತುತ ಪಡಿಸಿದರು. ರಾಗಗಳ ಅನೇಕ ವಿಶಿಷ್ಟ ಸಂಗತಿಗಳನ್ನು ತಿಳಿಸುತ್ತಾ, ಮುತ್ತುಸ್ವಾಮಿ ದೀಕ್ಷಿತರು ಅಮೃತವರ್ಷಿಣಿ ರಾಗದಲ್ಲಿ ಹಾಡಿದಾಗ ಹೇಗೆ ಮಳೆ ಸುರಿಯಿತು, ಸಂಗೀತಕ್ಕೆ ಇರುವ ಅಗಾಧ ಶಕ್ತಿ ಹಾಗೂ ಅದನ್ನು ಸಿದ್ಧಿಸಿಕೊಳ್ಳಲು ಕಠಿಣ ಪರಿಶ್ರಮ, ಸಾಧನೆ ಇಂದ ಮಾತ್ರ ಸಾಧ್ಯ ಎಂದು ತಿಳಿಸುತ್ತಾ ಆನಂದಾಮೃತಾಕರ್ಷಿಣಿ ಕೃತಿಯನ್ನು ಹಾಡಿ, ತಾನವನ್ನು ಹಾಡಿದ ಪರಿ ಸಭಿಕರಿಗೆಲ್ಲಾ ಗುಡುಗು ಸಹಿತ ಮಳೆಯಾಯಿತೇನೋ ಎಂಬ ರೋಚಕ ಅನುಭವವನ್ನು ನೀಡಿತು ಎಂದರೆ ಅದು ಅತಿಶಯೋಕ್ತಿ ಅಲ್ಲ. ಕಾರ್ಯಕ್ರಮದ ಮುಖ್ಯ ಭಾಗವಾಗಿ ಹಲವು ವಿಧವಾದ ತಾನಗಳನ್ನು ಪ್ರಸ್ತುತ ಪಡಿಸುತ್ತಾ ‘ತಾನ’ ಎಂದರೆ ಏನು? ಅದನ್ನು ಹಾಡುವ ವಿಧಾನದ ಬಗ್ಗೆ ಪರಿಚಯ ಮಾಡಿಸಿ ತಮ್ಮ ಗುರುಗಳಾದ ವಿದ್ವಾನ್ ಆರ್.ಕೆ. ಪದ್ಮನಾಭ ಅವರನ್ನು ಸ್ಮರಿಸಿ, ಅವರು ಹೇಗೆ ತಿಟ್ಟೇ ಕೃಷ್ಣ ಐಯ್ಯಂಗಾರ್ ಅವರ ಬಳಿ ತಾನ ಪ್ರಭೇದಗಳನ್ನು ಕಲಿತರು ಎಂದು ವಿವರಿಸುತ್ತಾ ಹೇಗೆ ದೀಪಕ್ ಅವರು ತ್ಯಾಗರಾಜರ ಶಿಷ್ಯ ಪರಂಪರೆಗೆ ಸೇರುತ್ತಾರೆ ಎಂದು ತಿಳಿಸಿದರು. ಮುಂದೆ ನಾಭಿತಾನ, ಗಜತಾನ, ಚಕ್ರತಾನ, ಮರ್ಕಟ ತಾನ, ಮಂಡೂಕ ತಾನ, ಮಯೂರ ತಾನ, ಅಶ್ವ ತಾನ, ಭೃಂಗ ತಾನ, ಶಂಖ ತಾನ, ಘಂಟಾ ತಾನ, ರುದ್ರ ತಾನಗಳ ಪ್ರಸ್ತುತಿ ಪಡಿಸಿ ಸಭಿಕರನ್ನು ಇಂತಹ ಅಮೋಘ ವೈವಿಧ್ಯಮಯ ತಾನ ಪ್ರಭೇದಗಳಿಂದ ಮೂಕವಿಸ್ಮಿತರನ್ನಾಗಿ ಮಾಡಿಸಿದರು. ನಂತರ ನೆರೆದಿದ್ದ ಸಭಿಕರು ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಂಡು ಇನ್ನೂ ಹೆಚ್ಚು ಈ ರೀತಿಯ ಪ್ರಾತ್ಯಕ್ಷಿಕಾ ಕಚೇರಿಗಳು ಆಗಬೇಕೆಂದು ದೀಪಕ್ ರಲ್ಲಿ ಕೋರಿಕೊಂಡರು.
- ಮನ್ವಿತ ಜಿ., ಗಾಯಕಿ
1 Comment
ಸಂಗೀತದ ಬಗ್ಗೆ, ಪುರಂದರ ದಾಸರ ಬಗ್ಗೆ,ಬಹಳ ಸೊಗಸಾಗಿ ವಿವರಿಸಿದ್ದೀರ.. ಬಹಳ ಸಂತೋಷ.. ದೀಪಕ್ ಅವರು ತ್ಯಾಗರಾಜರ ಶಿಷ್ಯ ಪರಂಪರೆಗೆ ಸೇರುತ್ತಾರೆ ಅನ್ನುವುದು ನಿಜಕ್ಕೂ ಹೆಮ್ಮೆಯ ವಿಷಯ. ಗುರುಗಳಾದ ವಿಧ್ವಾನ್ ಶ್ರೀ ಪದ್ಮನಾಭನ್ ಸರ್ ಹಾಗೂ ಅವರ ಶಿಷ್ಯರಾದ ದೀಪಕ್ ಅವರಿಗೂ ಆ ಸರಸ್ವತಿ ದೇವಿ ಹೀಗೇ ಸಂಗೀತದ ರಸಾಮೃತವನ್ನು ಕಲಾ ರಸಿಕರಿಗೆ ನೀಡುತ್ತಿರಲಿ 🙏🙏