ಮಡಿಕೇರಿ : ರಾಷ್ಟ್ರಕವಿ ರಸಋಷಿ ಕುವೆಂಪು ಅವರು ರಚಿಸಿದ ನಾಡಗೀತೆ “ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ” ಈ ಗೀತೆಗೆ ನೂರು ಪರುಷ ತುಂಬಿದೆ. 1924ರಲ್ಲಿ ಕುವೆಂಪುರವರು ಈ ಗೀತೆಯನ್ನು ರಚಿಸಿದ್ದು ಭಾರಿ ಜನಮನ್ನಣೆ ಗಳಿಸಿಕೊಂಡಿತ್ತು. ಕರ್ನಾಟಕ ಸರಕಾರ ಈ ಗೀತೆಯನ್ನು ನಾಡಗೀತೆ ಎಂದು ಘೋಷಿಸಿತು. ನಂತರ ಸರಕಾರಿ ಮತ್ತು ಸರಕಾರೇತರ ಕಾರ್ಯಕ್ರಮಗಳಲ್ಲಿ ಪ್ರಾರಂಭದಲ್ಲಿ ಹಾಡುವುದು ಕಡ್ಡಾಯವಾಗಿಸಿತು. ಕನ್ನಡ ಸಾಹಿತ್ಯ ಪರಿಷತ್ತು ಬಹಳ ಹಿಂದಿನಿಂದಲೇ ಈ ಗೀತೆಯನ್ನು ತನ್ನ ಕಾರ್ಯಕ್ರಮಗಳಲ್ಲಿ ಅಳವಡಿಸಿಕೊಂಡು ಬಂದಿದೆ.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಾಡಗೀತೆಯ ನೂರನೆಯ ವರ್ಷ ಆಚರಣೆಯನ್ನು ಜಿಲ್ಲೆಯಲ್ಲಿ ವೈವಿಧ್ಯಪೂರ್ಣವಾಗಿ ನಡೆಸುವಂತೆ ತೀರ್ಮಾನಿಸಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ದಿನಾಂಕ 29 ಡಿಸೆಂಬರ್ 2024ರಂದು ಕುವೆಂಪು ಜನ್ಮದಿನದಂದು ಮಡಿಕೇರಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಇದರ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ನಾಡಗೀತೆ ಗಾಯನ ಸ್ಪರ್ಧೆ, ನಾಡಗೀತೆ ವಿಶ್ಲೇಷಣೆ, ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ತಿಳಿಸಿದ್ದಾರೆ.