ಬೆಂಗಳೂರು : ಜಯನಗರದ ಯುವಕ ಸಂಘದ ಬೆಂಗಳೂರು ಆರ್ಟ್ ಗ್ಯಾಲರಿಯಲ್ಲಿ ಕಾವಿ ಆರ್ಟ್ ಫೌಂಡೇಶನ್ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ಸಹಯೋಗದೊಂದಿಗೆ ಉಡುಪಿಯ ಕಲಾವಿದ ಜನಾರ್ದನ ರಾವ್ ಹಾವಂಜೆಯವರ ‘ಕಾವ್ಯರೇಖಾ’ ಕಾವಿ ಕಲೆಯ ಏಕವ್ಯಕ್ತಿ ಕಲಾ ಪ್ರದರ್ಶನವು 25 ನವೆಂಬರ್ 2024ರಂದು ಉದ್ಘಾಟನೆಗೊಂಡಿತು.
ಈ ಕಲಾ ಪ್ರದರ್ಶನವನ್ನು ಉದ್ಘಾಟಿಸಿದ ಡನ್ ಆಂಡ್ ಪರ್ಟ್ ನರ್ಸ್ ಸಂಸ್ಥಾಪಕರಾದ ಅರವಿಂದ ಹೆಗಡೆಯವರು ಮಾತನಾಡಿ “ಪುರಾತನ ಕಟ್ಟಡಗಳಲ್ಲಿನ ಕಾವಿ ಕಲೆ ನನ್ನ ಬಾಲ್ಯದ ದಿನಗಳಲ್ಲಿ ಶಿರಸಿಯ ಭಾಗಗಳಲ್ಲೆಲ್ಲ ನೋಡಿದ ನೆನಪು ಇಂದು ಹಸಿರಾದಂತಾಯಿತು. ಅಳಿವಿನಂಚಿನಲ್ಲಿನ ನಮ್ಮ ಕರ್ನಾಟಕದ ಈ ಕಲೆಯನ್ನು ಕಾಪಿಡಲು ಹಾಗೂ ಅದನ್ನು ಈ ತೆರನಾದ ಕಲಾಪ್ರದರ್ಶನದ ಮೂಲಕ ಇನ್ನಷ್ಟು ಜನರಿಗೆ ಹಂಚಲು ಉತ್ಸುಕರಾಗಿರುವ ಕಲಾವಿದ ಜನಾರ್ದನ ಹಾವಂಜೆಯವರ ಶ್ರಮ ಅಭಿನಂದನೀಯ. ಇನ್ನಷ್ಟು ಯುವ ಕಲಾವಿದರು ಈ ಕಲೆಯಲ್ಲಿ ತೊಡಗಿಸಿಕೊಂಡು ನಮ್ಮ ಸಂಸ್ಕೃತಿಯ ಭಾಗವೇ ಆಗಿರುವ ಕರಾವಳಿಯ ಕಲೆಯನ್ನು ಬೆಳೆಸುವಂತಾಗಲಿ” ಎಂಬುದಾಗಿ ಆಶಿಸಿದರು.
“ಸುಣ್ಣ ಮತ್ತು ಕೆಮ್ಮಣ್ಣಿನಲ್ಲಿ ಗೀರಿ ನಿರ್ಮಾಣವಾಗುವ ಕಾವಿ ಕಲೆ ಕರಾವಳಿ ಭಾಗದ ವಿಶೇಷತೆ. ಇದೊಂದು ದೇಶೀಯ ಕಲೆಯಾಗಿದ್ದು, ಇದರ ಒಳ ಹೊರಗನ್ನು ನನ್ನ ಸಂಶೋಧನೆಯ ಮೂಲಕ ಅರ್ಥೈಸಿಕೊಳ್ಳುತ್ತಿದ್ದೇನೆ. ಈ ಕಲಾ ಪ್ರದರ್ಶನ ಕರ್ನಾಟಕಕ್ಕೆ ಜಿಐಟ್ಯಾಗ್ (ಜಿಯಾಗ್ರಾಫಿಕಲ್ ಇಂಡಿಕೇಶನ್ ಟ್ಯಾಗ್) ಹೊಂದುವ ಪ್ರಯತ್ನದ ಸದುದ್ದೇಶವನ್ನೂ ಹೊಂದಿದ್ದು, ಕನ್ನಡ ರಾಜ್ಯೋತ್ಸವದ ಆಚರಣೆಯ ಈ ಸಂದರ್ಭದಲ್ಲಿ ಇಲ್ಲಿ ಪ್ರದರ್ಶನಗೊಳ್ಳುತ್ತಿದೆ” ಎಂಬುದಾಗಿ ಈ ಕಲೆಯ ಮಹತ್ವವನ್ನು ಕಲಾವಿದ ಹಾವಂಜೆಯವರು ವಿವರಿಸಿದರು.
ಪೌರಾಣಿಕ ಹಾಗೂ ಭಾಗವತ ಕಥಾ ಸಂಬಂಧಿತ ಕಲಾಕೃತಿಗಳು, ಮಂಡಲ ವಿನ್ಯಾಸಗಳು ಹಾಗೂ ನಿಸರ್ಗ ಜೀವನವೇ ಮೊದಲಾಗಿ ಸುಮಾರು ಅರುವತ್ತಕ್ಕೂ ಮಿಕ್ಕಿ ಗೀರು ಕಾವಿ ಕಲಾಕೃತಿಗಳು ಈ ಪ್ರದರ್ಶನದಲ್ಲಿರಲಿದೆ. ಮುಖ್ಯ ಅತಿಥಿಗಳಾಗಿ ಯುವಕ ಸಂಘದ ಯೋಜನಾ ನಿರ್ದೇಶಕರಾದ ಮಹೇಶ್, ಕಾವಿ ಆರ್ಟ್ ಫೌಂಡೇಶನ್‌ನ ನಿರ್ದೇಶಕರಲ್ಲೋರ್ವರಾದ ಬೇಬಿ ಎಂ. ರಾವ್ ಉಪಸ್ಥಿತರಿದ್ದರು. ಬೆಂಗಳೂರು ಕಲಾ ಗ್ಯಾಲರಿಯ ಸಂಯೋಜಕರಾದ ಶಿವಪ್ರಸಾದ್‌ರವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಈ ಕಲಾ ಪ್ರದರ್ಶನವು ದಿನಾಂಕ 08 ಡಿಸೆಂಬರ್ 2024ರವರೆಗೆ ಪೂರ್ವಾಹ್ನ 10-00ರಿಂದ ಸಂಜೆ 7-30ರ ತನಕ ಸಾರ್ವಜನಿಕ ವೀಕ್ಷಣೆಗೆ ತೆರೆದಿರಲಿದೆ.