ಧಾರವಾಡ : ಗಳಗನಾಥ ಮತ್ತು ನಾ. ಶ್ರೀ. ರಾಜಪುರೋಹಿತ ಪ್ರತಿಷ್ಠಾನ ಹಾವೇರಿ ಮತ್ತು ಮನೋಹರ ಗ್ರಂಥ ಮಾಲಾ ಧಾರವಾಡ ಇವರ ವತಿಯಿಂದ ಕನ್ನಡ ಕಾದಂಬರಿ ಪಿತಾಮಹ ಗಳಗನಾಥರ ಎಲ್ಲ ಕಾದಂಬರಿಗಳ ಹಾಗೆಯೇ ಅವರ ಜೀವನವನ್ನು ಕುರಿತು ಡಾ. ಕೃಷ್ಣಮೂರ್ತಿ ಕಿತ್ತೂರ ಇವರು ಸಂಶೋಧಿಸಿ ಬರೆದ ‘ಗಳಗನಾಥರು ಮತ್ತು ಅವರ ಕಾದಂಬರಿಗಳು’ ಎಂಬ ಕೃತಿಯ ಲೋಕಾರ್ಪಣೆ ಸಮಾರಂಭವನ್ನು ದಿನಾಂಕ 14 ಡಿಸೆಂಬರ್ 2024ರಂದು ಬೆಳಿಗ್ಗೆ 10-30 ಗಂಟೆಗೆ ಧಾರವಾಡದ ರಂಗಾಯಣ ಆವರಣದಲ್ಲಿಯ ಸುವರ್ಣ ಸಾಂಸ್ಕೃತಿಕ ಸಮುಚ್ಚಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಖ್ಯಾತ ಕಾದಂಬರಿಕಾರ ಪ್ರೊ. ರಾಘವೇಂದ್ರ ಪಾಟೀಲರು ಪುಸ್ತಕ ಬಿಡುಗಡೆ ಮಾಡಲಿದ್ದು, ಸಾಹಿತಿ ಪ್ರೊ. ಹರ್ಷ ಡಂಬಳ ಪುಸ್ತಕದ ಕುರಿತು ಮಾತನಾಡಲಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾವೇರಿಯ ಶ್ರೀ ಗಳಗನಾಥ ಮತ್ತು ನಾ ಶ್ರೀ ರಾಜಪುರೋಹಿತ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ದುಷ್ಯಂತ ನಾಡಗೌಡರು ವಹಿಸಲಿದ್ದಾರೆ. ಬಿಡುಗಡೆ ಸಮಾರಂಭದಲ್ಲಿ ಈ ಗ್ರಂಥದ ಮುಖ್ಯಪ್ರೇರಣೆಯಾದ ಶ್ರೀ ಬಿ.ವಿ. ಕುಲಕರ್ಣಿ ಇವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಅಂತೆಯೇ ಗಳಗನಾಥ ಕುಟುಂಬದ ಶ್ರೀ ವೆಂಕಟೇಶ ಗಳಗನಾಥ ಹಾಗೂ ಕುಟುಂಬದವರು ಮತ್ತು ಡಾ. ಕೃಷ್ಣಮೂರ್ತಿ ಕಿತ್ತೂರರ ಕುಟುಂಬದವರಾದ ಅವರ ಮಗ ಶ್ರೀ ಆನಂದತೀರ್ಥ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ. ಗ್ರಂಥ ಮಾಲೆಯ ಹಿರಿಯ ಪ್ರಕಾಶಕರಾದ ಡಾ. ರಮಾಕಾಂತ ಜೋಶಿ ವೇದಿಕೆಯಲ್ಲಿದ್ದು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಗಳಗನಾಥರ ಜನ್ಮಶತಮಾನೋತ್ಸವವನ್ನು 1969ರಲ್ಲಿ ಆಚರಿಸಿಲಾಗುತ್ತಿದ್ದ ಅವಧಿಯಲ್ಲಿ ಪ್ರೊ. ಕೃಷ್ಣಮೂರ್ತಿಯವರು ಹಾವೇರಿಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರು. ಅವರಿಗೆ ಗಳಗನಾಥ ಕಾದಂಬರಿಗಳಷ್ಟೇ ಅಲ್ಲದೆ ಗಳಗನಾಥರ ಜೀವನದ ಬಗ್ಗೆ ಆಸಕ್ತಿ ಹುಟ್ಟಿತು. ಕಾದಂಬರಿಗಳನೆಲ್ಲ ಓದಿದ್ದಲ್ಲದೆ ಗಳಗನಾಥರನ್ನು ಬಲ್ಲ ವ್ಯಕ್ತಿಗಳಿಂದ ಅವರ ಜೀವನದ ಬಗೆಗೆ ಮಾಹಿತಿ ದೊರಕಿಸಿಕೊಂಡರು. ಈ ಎಲ್ಲ ಮಾಹಿತಿಯನ್ನು ವಿಶ್ಲೇಷಿಸಿ ವಿವೇಚಿಸಿ ಸಂಶೋಧನೆ ಮಾಡುವಲ್ಲಿ ಐದಾರು ವರ್ಷ ಕಳೆದವು. 1979ರಲ್ಲಿ ಗುಣಗ್ರಾಹಿ ಶಿಕ್ಷಕ ಪ್ರೊ. ಆರ್.ಸಿ. ಹಿರೇಮಠರು ಈ ಪುಸ್ತಕವನ್ನು ಪಿಹೆಚ್.ಡಿ. ಗಾಗಿ ಬರೆದ ಪ್ರಬಂಧವೆಂದು ಪರಿಗಣಿಸಿ ಕೃಷ್ಣಮೂರ್ತಿ ಕಿತ್ತೂರ ಇವರಿಗೆ ಡಾಕ್ಟರೇಟ್ ಪದವಿ ದೊರೆಯಿತು. ಹೀಗೆ ಪ್ರೊ. ಕೃಷ್ಣಮೂರ್ತಿ ಕಿತ್ತೂರ ಅವರ ಪ್ರಬಂಧ ಕನ್ನಡ ಕಾದಂಬರಿ ಓದುಗರಿಗೆ ಒಂದು ಮಾರ್ಗದರ್ಶಿ ಪುಸ್ತಕವಾಗಿ ಸಿಕ್ಕಿತು. ಈ ಪುಸ್ತಕ ಮೊದಲ ಮುದ್ರಣ ಕಂಡದ್ದು 1978ರಲ್ಲಿ. ಈಗ ಇದು ಮನೋಹರ ಗ್ರಂಥ ಮಾಲಾ, ಧಾರವಾಡದಿಂದ 2024ರಲ್ಲಿ ಎರಡನೇ ಮುದ್ರಣ ಕಾಣುತ್ತಿದೆ. ಸುಮಾರು 488 ಪುಟಗಳಷ್ಠಿರುವ ಈ ಪುಸ್ತಕಕ್ಕೆ ರೂ.625/- ಬೆಲೆಯಿಡಲಾಗಿದ್ದು, ಬಿಡುಗಡೆಯ ದಿನ ರಿಯಾಯಿತಿ ದರದಲ್ಲಿ ರೂ.500/-ಕ್ಕೇ ಗ್ರಂಥ ಮಾಲೆಯವರು ನೀಡಲಿದ್ದಾರೆ.
ಗಳಗನಾಥ
ಗಳಗನಾಥರ ನಿಜ ನಾಮ ವೆಂಕಟೇಶ ತಿರಕೋ ಕುಲಕರ್ಣಿ ಎಂದು ಇದ್ದು, ಅವರು ಹಾವೇರಿ ತಾಲೂಕಿನ ಗಳಗನಾಥ ಕುಟುಂಬದಲ್ಲಿ ಶಾನುಭೋಗರ ಮಗನಾಗಿ ಹುಟ್ಟಿದ್ದರು. ಧಾರವಾಡದ ಟ್ರೇನಿಂಗ್ ಕಾಲೇಜಿನಲ್ಲಿ ತರಬೇತಿ ಪಡೆದು ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ನರೇಂದ್ರ, ಮುಳಮುತ್ತಲ ಹಾಗೂ ಗುತ್ತಲ ಶಾಲೆಗಳಲ್ಲಿ ಕಲಿಸಿದರು. ಅಂದಿನ ಟ್ರೇನಿಂಗ್ ಕಾಲೇಜಿನ ಪ್ರಾಚಾರ್ಯರಾಗಿದ್ದ ರಾವಜಿ ಕಾರಂದೀಕರ ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘ ಸಂಸ್ಥೆ ಸಂಸ್ಥಾಪಕರಾಗಿದ್ದ ಮಾನ್ಯ ರಾ.ಹ. ದೇಶಪಾಂಡೆಯವರ ಪ್ರೇರಣೆಯಿಂದಾಗಿ ಸಂಘದ ಕಾದಂಬರಿ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗೆ ಭಾಜನರಾದರು. 1826-27ನೇ ಇಸ್ವಿಯಿಂದ ಸುಮಾರು ನಾಲ್ಕು ದಶಕಗಳಲ್ಲಿ ಅವರು ಇಪ್ಪತ್ತಕ್ಕೂ ಹೆಚ್ಚು ಕಾದಂಬರಿಗಳನ್ನು ಬರೆದರು. ಅಲ್ಲಿಯವರೆಗೆ ಕನ್ನಡದಲ್ಲಿ ಮನರಂಜನೆಗಾಗಿ ಬರೆದ ಕಾದಂಬರಿಗಳೇ ಇಲ್ಲವಾದ್ದರಿಂದ ಕನ್ನಡ ನಾಡಿನ ಈ ಭಾಗದ ಜನರು ಮರಾಠಿ ಕಾದಂಬರಿಗಳನ್ನು ಓದುತ್ತಿದ್ದರು. ಗಳಗನಾಥರು ಬರೆದ ಎಲ್ಲ ಕಾದಂಬರಿಗಳು ಅವುಗಳ ಭಾಷೆ ಶೈಲಿ ಹಾಗೂ ವಸ್ತು ಇವುಗಳಿಂದ ಜನಮನಗೆದ್ದದಲ್ಲದೆ ಓದುಗರಲ್ಲಿ ಸದಬಿರುಚಿಯನ್ನು ಹುಟ್ಟಿಸಿದಂತಹವುಗಳಾದವು. ಗಳಗನಾಥರು ಬಹಳಷ್ಟು ಕಾದಂಬರಿಗಳು ದೇಶಪ್ರೇಮಿ ಶೂರರ ಬಗೆಗೆ ಬರೆದ ಐತಿಹಾಸಿಕ ಕಾದಂಬರಿಗಳು. ಅವುಗಳೆಲ್ಲವೂ ಓದುಗರ ಮನಸೆಳೆದವು ಓದುಗ ಸ್ನೇಹಿ ಆತ್ಮೀಯ ಶೈಲಿಯಲ್ಲಿ ಬರೆಯಲ್ಪಟ್ಟಿವೆ. ಗಳಗನಾಥರ ಜೀವನ ಕಷ್ಟ ನಷ್ಟಗಳನ್ನು ಅನುಭವಿಸಿ ಬದುಕಿನಲ್ಲಿ ಬರಹಗಾರ, ಮುದ್ರಕ, ಪ್ರಕಾಶಕ ಹಾಗೂ ಮಾರಾಟಗಾರನಾಗಿ ಕನ್ನಡ ಸೇವೆ ಮಾಡಿದ ವ್ಯಕ್ತಿಯೊಬ್ಬರಾಗಿದ್ದರು.