17 ಮಾರ್ಚ್ 2023, ಮಂಗಳೂರು: ನಾರಾಯಣ ಗುರುಗಳಿಂದ ಶೂದ್ರ ಶಿವನ ಅನಾವರಣ –ಶ್ರೀ ಜಯಾನಂದ ಚೇಳಾಯರು
“19ನೇ ಶತಮಾನದ ವಿಶ್ವ ಸಂತ ನಾರಾಯಣ ಗುರುಗಳು ದೇವರಿಂದ ವಂಚಿತರಾದವರಿಗೆ ದೇವರನ್ನು ನೀಡಿದ, ಪೂಜಿಸುವ ಅಧಿಕಾರ ಕೊಟ್ಟ ಸಂತ ಸತ್ವ. ಅವರಿಂದ ಶೂದ್ರ ಶಿವನ ಅನಾವರಣ ಆದುದು 19ನೇ ಶತಮಾನದ ದೊಡ್ಡ ಧಾರ್ಮಿಕ ಕ್ರಾಂತಿ” ಎಂದು ಯುವ ಚಿಂತಕ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಶ್ರೀ ಜಯಾನಂದ ಚೇಳಾಯರು ಹೇಳಿದರು. ಅವರು ಚೇಳಾಯರು ಸರಕಾರಿ ಪ್ರೌಢಶಾಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ನಾರಾಯಣಗುರು ಅಧ್ಯಯನ ಪೀಠ ಸಂಯೋಜಿಸಿದ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಪುಷ್ಪರಾಜ ಶೆಟ್ಟಿ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ “ವಿಶ್ವವಿದ್ಯಾನಿಲಯದ ಅಧ್ಯಯನ ಪೀಠ ನಾರಾಯಣ ಗುರುಗಳ ತತ್ವದ ಮೂಲಕ ಗ್ರಾಮೀಣ ಯುವ ಜನಾಂಗವನ್ನು ಸಾಮರಸ್ಯದ ಬದುಕಿಗೆ ಕೊಂಡು ಹೋಗುವ ಮಾರ್ಗದರ್ಶನವನ್ನು ನೀಡುತ್ತಿರುವುದು ಸಂತೋಷ” ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮುಖ್ಯೋಪಾಧ್ಯಾಯಿನಿ ಶ್ರೀಮತಿ ತೆರೇಸಾ ವೇಗಸ್ ಅವರು “ಭಾರತದ ಸರ್ವಧರ್ಮಗಳ ಸಾರ ನಾರಾಯಣ ಗುರುಗಳ ಸಂದೇಶದಲ್ಲಿದೆ. ಅವರು ಮತ ಧರ್ಮವನ್ನು ಮೀರಿ ನಿಂತ ವಿಶ್ವಗುರು” ಎಂದರು.
ಅಧ್ಯಯನ ಪೀಠದ ನಿರ್ದೇಶಕರಾದ ಡಾ. ಗಣೇಶ್ ಅಮೀನ್ ಸಂಕಮಾರ್ ಸ್ವಾಗತದೊಂದಿಗೆ ಪ್ರಸ್ತಾವನೆಯನ್ನು ಮಾಡುತ್ತಾ ಅಧ್ಯಯನ ಪೀಠದ ಕೆಲಸಗಳಿಗೆ ಜಿಲ್ಲೆಯ ಶಿಕ್ಷಣ ಸಂಸ್ಥೆಗಳ ಪ್ರೋತ್ಸಾಹ ಅಭಿನಂದನೀಯ ಎಂದರು. ಕೊನೆಯಲ್ಲಿ ನಾರಾಯಣ ಗುರುಗಳ ಸಂದೇಶಗಳ ಬಗ್ಗೆ ರಸಪ್ರಶ್ನೆ ಕಾರ್ಯಕ್ರಮ ನಡೆಯಿತು.