ತೆಕ್ಕಟ್ಟೆ: ಸಂಯಮಂ (ರಿ.)ಕೋಟೇಶ್ವರ ಹಾಗೂ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆಯ ‘ಸಿನ್ಸ್ 1999’ ಶ್ವೇತಯಾನ-8’ ಇದರ ಜಂಟಿ ಆಶ್ರಯದಲ್ಲಿ ನಾಲ್ಕನೇ ವರ್ಷದ ವಾಸುದೇವ ಸಾಮಗರ ಸಂಸ್ಮರಣೆ ಕಾರ್ಯಕ್ರಮವು ದಿನಾಂಕ 21 ಡಿಸೆಂಬರ್ 2024 ರಂದು ತೆಕ್ಕಟ್ಟೆಯ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಮಾಜಿ ಸಂಸದ ಮತ್ತು ಸಚಿವರಾದ ಪ್ರಮೋದ ಮಧ್ವರಾಜ್ ಮಾತನಾಡಿ “ಮಲ್ಪೆಯ ಸಾಮಗ ಮನೆತನದವರೆಲ್ಲರೂ ವಿಶಿಷ್ಟ ಪ್ರತಿಭಾವಂತರು. ವಾಸುದೇವ ಸಾಮಗರು ವಿದ್ವತ್ತಿನಲ್ಲಿ ತಮ್ಮ ಹಿರಿಯರನ್ನು ಅನುಸರಿಸಿದರೂ, ತಮ್ಮದೇ ಆದ ಅಭಿವ್ಯಕ್ತಿಯ ಕ್ರಮವನ್ನು ರೂಪಿಸಿಕೊಂಡು ಜನಪ್ರಿಯ ಕಲಾವಿದರಾದರು. ಪಾತ್ರ ಪೂರಕವಾಗಿ ಬೇಕಾದಾಗ, ಎದುರು ಪಾತ್ರಧಾರಿ ತಮ್ಮ ತಂದೆಯೇ ಆಗಿದ್ದರೂ ನಿಷ್ಠುರವಾಗಿ ಮಾತನಾಡುತ್ತಿದ್ದುದನ್ನು ನಾನು ನೋಡಿದ್ದೇನೆ.” ಎಂದರು.
ಸಾಮಗ ಪ್ರಶಸ್ತಿಯನ್ನು ಸ್ವೀಕರಿಸಿದ ಪ್ರಸಿದ್ಧ ಸ್ತ್ರೀ ವೇಷಧಾರಿ ಎಂ. ಎ. ನಾಯ್ಕ ಮಾತನಾಡಿ “ವಾಸುದೇವ ಸಾಮಗರು ಎಲ್ಲರಿಗೂ ಆತ್ಮೀಯರು. ನಾರಣಪ್ಪ ಉಪ್ಪೂರರ ಅಮೃತೇಶ್ವರಿ ಮೇಳದಲ್ಲಿ ಉದಯೋನ್ಮುಖ ಕಲಾವಿದರಾಗಿ ಹೆಸರಿಸಿಕೊಂಡವರು ಸಾಮಗರು. ಸಾಮಗರೊಂದಿಗಿನ ಸಹವಾಸದಲ್ಲಿ ನಾನು ಮಾತನ್ನು ಹಾಗೂ ಚುರುಕಿನ ಕುಣಿತವನ್ನು ಕಲಿತೆ. ಇದು ನನ್ನ ಪ್ರಸಿದ್ಧಿಗೆ ಕಾರಣವಾಯ್ತು’ ಎಂದರು.
ಸಂಸ್ಮರಣಾ ಮಾತುಗಳನ್ನಾಡಿದ ಡಾ. ವೈಕುಂಠ ಹೇರ್ಳೆ “ಸಾಮಗರ ಜೀವನೋತ್ಸಾಹ, ಗುಣಗ್ರಾಹಿತ್ವ, ಪಾತ್ರಚಿತ್ರಣ ಜನರಿಗೆ ಆಪ್ತವಾಗಿ ತಲುಪುವ ಶೈಲಿ, ಬಹುಮುಖೀ ವ್ಯಕ್ತಿತ್ವ ಮೊದಲಾದವು ಎಲ್ಲರಿಗೂ ಆದರ್ಶ.” ಎಂದರು.
ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರಾದ ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿ “ಹೊರಗೆ ಒರಟರಂತೆ ಕಾಣುವ ನಿಷ್ಠುರ ನುಡಿಯ ಸಾಮಗರು, ಮಾನವೀಯತೆಯ ಅಂತಃಕರಣವನ್ನು ಹೊಂದಿದವರು.” ಎಂಬದನ್ನು ನೆನಪಿಸಿಕೊಂಡರು.
ಸಾಮಗರ ಅರ್ಥ ಸಹಿತವಾದ ‘ಯಕ್ಷ ರಸಾಯನ’ ಗ್ರಂಥವನ್ನು ವಿಶ್ಲೇಷಿಸಿದ ಪ್ರಸಿದ್ಧ ಅರ್ಥಧಾರಿ ಉಜಿರೆ ಅಶೋಕ ಭಟ್ “ವಾಸುದೇವ ಸಾಮಗರ ಈ ಗ್ರಂಥ ಮತ್ತು ‘ಸಂಯಮಂ’ ಎಂಬ ತಂಡಗಳು ಯಕ್ಷಗಾನದ ಕ್ರಾಂತಿ, ಉತ್ಕ್ರಾಂತಿ ಮತ್ತು ಸಂತ್ಕ್ರಾಂತಿ.” ಎಂದರು.
ಯಕ್ಷಗಾನ ಕಲಾರಂಗದ ಕಾರ್ಯದರ್ಶಿಗಳಾದ ಮುರಳೀ ಕಡೆಕಾರ್ ಕಲಾರಂಗದೊಂದಿಗೆ ಸಾಮಗರ ಒಡನಾಟ ಮತ್ತು ಅವರಲ್ಲಿದ್ದ ಕಲಾವಿದರಿಗಿರಬೇಕಾದ ಸಾಂಘಿಕ ಪ್ರಜ್ಷೆಯ ಕಳಕಳಿಯ ಬಗ್ಗೆ ಪ್ರಸ್ತಾಪಿಸಿದರು.
ಮೇಳದ ಯಜಮಾನರಾದ ಪಳ್ಳಿ ಕಿಶನ್ ಹೆಗ್ಡೆ ಉಪಸ್ಥಿತರಿದ್ದರು. ಕು. ಆರಭಿ ಸಾಮಗ ಪ್ರಾರ್ಥಿಸಿ, ಡಾ. ಪ್ರದೀಪ ಸಾಮಗ ಪ್ರಾಸ್ತಾವಿಕ ನುಡಿಗಳನ್ನಾಡಿ, ಯಶಸ್ವೀ ಕಲಾವೃಂದದ ಅಧ್ಯಕ್ಷ ಮಲ್ಯಾಡಿ ಸೀತಾರಾಮ ಶೆಟ್ಟಿ ವಂದಿಸಿದರು.
ಈ ಸಂದರ್ಭದಲ್ಲಿ ‘ಯಕ್ಷ ರಸಾಯನ’ದಿಂದ ಆಯ್ದ ಭಾಗಗಳ ಪ್ರಸ್ತುತಿ ‘ಪಡಿನುಡಿ’ ಪ್ರೇಕ್ಷಕರ ಮೆಚ್ಚುಗೆ ಪಡೆಯಿತು. ಸಾಮಗರ ಪರಿಕಲ್ಪನೆಯ ವಿಶಿಷ್ಠ ಪ್ರಯೋಗ ‘ದುರಂತ ನಾಯಕಿ’ ಎಂಬ ಯಕ್ಷ ನಾಟಕವು ಪ್ರಸಿದ್ಧ ಕಲಾವಿದರಿಂದ ಪ್ರದರ್ಶನ ಕಂಡಿತು.