ಪ್ರತಿಯೊಬ್ಬ ವ್ಯಕ್ತಿಯ ಒಳಗೂ ಅದಮ್ಯವಾದ ಶಕ್ತಿಯನ್ನು ಅಡಗಿಸಿ ಪರಮಾತ್ಮ ಈ ಜಗತ್ತಿಗೆ ಕಳುಹಿಸುತ್ತಾನಂತೆ. ಆದರೆ ತನ್ನೊಳಗೆ ಅಡಗಿರುವ ಆ ಶಕ್ತಿಯ ಅರಿವನ್ನು ಮಾನವನು ತಿಳಿಯಬೇಕಾದರೆ ಬಹಳಷ್ಟು ಶ್ರಮವನ್ನು ಪಡಬೇಕಾಗುತ್ತದೆ. ಕೆಲವರು ಅದನ್ನು ಅರಿತುಕೊಂಡು ಬಹಳ ಶ್ರಮದಿಂದ ಅದನ್ನು ಹೊರಗೆ ತರುತ್ತಾರೆ. ಆದರೆ ಅಂತಹವರು ಈ ಸಮಾಜದಲ್ಲಿ ಕೇವಲ ಬೆರಳೆಣಿಕೆಯಷ್ಟು ಮಾತ್ರ. ಅಂತಹವರಲ್ಲಿ ಒಬ್ಬರು ಈ ತುಳುನಾಡು ಕಂಡ ಅದ್ಭುತ ಪ್ರತಿಭಾವಂತ ಲಯನ್ ಎಂಜೆಎಫ್ ಕದ್ರಿ ನವನೀತ ಶೆಟ್ಟಿ. ತೌಳವ ನೆಲದ ಪೂರ್ಣ ಸತ್ವವನ್ನು ಮೈಗೂಡಿಸಿಕೊಂಡು ಬೆಳೆದು ಬಂದ ಶ್ರೀಯುತರು ಸರ್ವ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರೋರ್ವ ಮಹಾ ಮೇಧಾವಿ, ಪ್ರತಿಭೆಗಳ ಮಹಾ ಸಂಗಮ, ಉತ್ತಮ ನಿರೂಪಕ, ಸಮಾಜ ಸೇವಕ, ಸಂಘಟಕ, ತುಳು ಕನ್ನಡ ಸಾಹಿತಿ, ಕವಿ, ನಾಟಕಕಾರ, ಪ್ರಯೋಗಶೀಲ ನಿರ್ದೇಶಕ, ರಂಗನಟ, ಹವ್ಯಾಸಿ ಯಕ್ಷಗಾನ ಅರ್ಥಧಾರಿ, ಪ್ರಸಂಗಕರ್ತೃ, ಧಾರ್ಮಿಕ-ಸಾಂಸ್ಕೃತಿಕ-ಸಾಮಾಜಿಕ ಸಂಘಟಕ, ವೈವಿಧ್ಯಮಯ ಕ್ಷೇತ್ರಗಳ ನಿರೂಪಕ, ಟಿ.ವಿ. ಮಾಧ್ಯಮ ನಿರೂಪಕ, ರಾಷ್ಟ್ರೀಯ ಚಿಂತಕ ಹೀಗೇ ಮುಗಿಯಲಾರದ ಪಟ್ಟಿಯ ಮಹಾ ವ್ಯಕ್ತಿ! ಎಂತಹವರನ್ನೂ ಸೂಜಿಗಲ್ಲಿನಂತೆ ತಮ್ಮೆಡೆಗೆ ಸೆಳೆಯುವ ಆಕರ್ಷಕ ವ್ಯಕ್ತಿತ್ವ ಹಾಗೂ ಅಂಗಸೌಷ್ಟವದ ಆಜಾನುಬಾಹು! ಅಪರೂಪದಲ್ಲಿ ಅಪರೂಪದ ಮಹಾನುಭಾವ.
ಮಂಗಳೂರಿನ ಹೆಸರಾಂತ ಬಂಟ ಸಮುದಾಯದ ಕದ್ರಿ ಕಂಬಳಗುತ್ತು ದಿ. ಬಾಲಕೃಷ್ಣ ಶೆಟ್ಟಿ ಹಾಗೂ ಎಕ್ಕಾರು ನಡ್ಯೋಡಿಗುತ್ತು ವಾಸವಿ ಶೆಟ್ಟಿ ದಂಪತಿಗಳ ಪುಣ್ಯಗರ್ಭದಲ್ಲಿ ಹಿರಿಯ ಪುತ್ರನಾಗಿ ಜನ್ಮ ತಳೆದ ನವನೀತರು ಎಳವೆಯಲ್ಲಿಯೇ ತಮ್ಮ ಬಹುಮುಖ ಪ್ರತಿಭೆಯ ಸಾಮರ್ಥ್ಯವನ್ನು ಕಲಾಕ್ಷೇತ್ರದಲ್ಲೂ ಶೈಕ್ಷಣಿಕ ಕ್ಷೇತ್ರದಲ್ಲೂ ದಾಖಲಿಸುತ್ತಲೇ ಬೆಳೆದು ಬಂದವರು. ಹಿರಿಯರಿಂದ ಬಂದ ಸಂಸ್ಕಾರ ಹಾಗೂ ಕಲಾಸಕ್ತಿ ಅವರಿಗೆ ರಕ್ತದಲ್ಲಿಯೇ ಸೇರಿಕೊಂಡಿತ್ತು. ಹತ್ತನೇ ತರಗತಿಯಲ್ಲಿ ‘ಕುಶಲವರ ಕಾಳಗ’ದ ಪ್ರಸಂಗದಲ್ಲಿ ವಾಲ್ಮೀಕಿಯ ಪಾತ್ರಕ್ಕಾಗಿ ಮೊದಲಿಗೆ ಬಣ್ಣ ಹಚ್ಚಿದವರು.
ಮಂಗಳೂರಿನ ಕದ್ರಿ ಕಂಬಳದಲ್ಲಿ ವಾಸವಾಗಿರುವ ಶ್ರೀ ನವನೀತ ಶೆಟ್ಟರದು ಸಂತೃಪ್ತವಾದ ಕುಟುಂಬ ಜೀವನ, ಮಂಗಳೂರಿನ ಬೆಸೆಂಟ್ ಮಹಿಳಾ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿಯಾಗಿ ನಿವೃತ್ತರಾಗಿರುವ, ಸ್ನೇಹಮಯಿಯಾದ ಮೋಹದ ಮಡದಿ ಪ್ರೊ. ಶ್ರೀಮತಿ) ಉಷಾ ಶೆಟ್ಟಿ ಮನೆ ಮತ್ತು ಮನದೊಡತಿಯಾಗಿ, ಪತಿಯ ಸಾಧನೆಗಳಿಗೆ ಪ್ರೇರಕರಾಗಿ ಮರೆಯಲ್ಲಿ ನಿಂತು ಬದುಕಿನುದ್ದಕ್ಕೂ ಸಹಕರಿಸುತ್ತಾ ಬಂದವರು. ಮಕ್ಕಳಾದ ಸಾಕೇತ್ ಮತ್ತು ಸಾತ್ವಿಕ್ ಇಂಜಿನಿಯರಿಂಗ್ ಪದವೀಧರರು.
ಎಂ.ಬಿ.ಎ. ಪದವೀಧರರಾದ ನವನೀತರ ಆಯ್ಕೆಯ ಉದ್ಯೋಗ ಕ್ಷೇತ್ರ ಪತ್ರಿಕಾ ಕ್ಷೇತ್ರವಾಗಿತ್ತು. ಟೈಮ್ಸ್ ಆಫ್ ಇಂಡಿಯಾ ಹಾಗೂ ವಿಜಯ ಕರ್ನಾಟಕ ಪತ್ರಿಕೆಗಳ ಐದು ಜಿಲ್ಲೆಗಳ ಪ್ರಸರಣ ವಿಭಾಗದ ಮುಖ್ಯಸ್ಥರಾಗಿ ಮೂವತ್ತಮೂರು ವರ್ಷಗಳಷ್ಟು ದೀರ್ಘಕಾಲ ಸೇವೆಗೈದು ನಿವೃತ್ತರಾದವರು.
ಸದಾ ಕ್ರಿಯಾಶೀಲರಾದ ಪಾದರಸದಂತಹ ವ್ಯಕ್ತಿತ್ವದ ನವನೀತರು ಕರಾವಳಿಯ ಹಲವಾರು ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಸಂಘಸಂಸ್ಥೆಗಳಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು ನಿರಂತರ ಸಮಾಜಸೇವೆಗೆ ಸಮರ್ಪಿಸಿಕೊಂಡ ಸಮಾಜಸ್ನೇಹಿ, ಅಖಿಲ ಭಾರತ ತುಳು ಒಕ್ಕೂಟದ ಸಂಘಟನಾ ಕಾರ್ಯದರ್ಶಿ, ಇಂಟರ್ ನೇಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟಿನ ಸಂಪಾದಕ/ಸಂಯೋಜಕ, ಯಕ್ಷಧ್ರುವ ಪಟ್ಲ ಫಂಡೇಶನ್ ಟ್ರಸ್ಟಿನ ಸಂಘಟನಾ ಕಾರ್ಯದರ್ಶಿ, ಶ್ರೀ ವಾಗೀಶ್ವರಿ ಯಕ್ಷಗಾನ ಕಲಾವರ್ಧಕ ಸಂಘದ ಪ್ರಧಾನ ಸಂಚಾಲಕ, ಕಲ್ಕೂರ ಪ್ರತಿಷ್ಠಾನದ ಪ್ರಧಾನ ಸಂಚಾಲಕ, ನಮ್ಮ ಕುಡ್ಲ ಕೂಟದ ಪ್ರಧಾನ ಸಂಚಾಲಕ, ಲಯನ್ಸ್ ಕ್ಲಬ್ ಇಂಟರ್‌ನ್ಯಾಷನಲ್ ಜಿಲ್ಲಾ ಸಂಪುಟ ಸದಸ್ಯ, ನಮ್ಮೂರ ಆಟಕೂಟ ಟ್ರಸ್ಟಿನ ಗೌರವಾಧ್ಯಕ್ಷ, ಶ್ರೀ ಶನೀಶ್ವರ ದೇವಸ್ಥಾನ ನಿರ್ಮಾಣ ಸಮಿತಿ (ಹಿಂದೂ ಯುವಸೇನೆ)ಯ ಅಧ್ಯಕ್ಷ, ಹೀಗೇ.. ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಸಹಜವಾಗಿಯೇ ಪ್ರತಿಭಾವಂತರಾಗಿ ವೈವಿಧ್ಯಮಯ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಾ ಬಂದಿರುವ ಕದ್ರಿ ನವನೀತ ಶೆಟ್ಟರನ್ನು ಹಲವಾರು ಪ್ರಶಸ್ತಿಗಳು ಅರಸುತ್ತಾ ಬಂದಿವೆ. 2005ರಲ್ಲಿ ಕರ್ನಾಟಕ ತುಳುನಾಡ ಸಂಘ, ಮೀರಜ್‌ನಿಂದ ಸಾಂಸ್ಕೃತಿಕ ತುಳು ರತ್ನ ಪ್ರಶಸ್ತಿ, 2005ರಲ್ಲಿ ದೃಶ್ಯಮಾಧ್ಯಮದಲ್ಲಿ ಸಲ್ಲಿಸಿದ ಸಾಂಸ್ಕೃತಿಕ ಸೇವೆಗೆ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2008ರಲ್ಲಿ ‘ಮೈಮೆ’ ತುಳು ನಾಟಕ ಕೃತಿಗೆ ತುಳು ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿ, 2016ರಲ್ಲಿ ಯು.ಎ.ಇ. ದುಬಾಯಿ ಪ್ರಶಸ್ತಿ, 2017ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಶಸ್ತಿ, 2019ರಲ್ಲಿ ಮುಲ್ಕಿ ಸುಂದರರಾಮ ಶೆಟ್ಟಿ ಪ್ರಶಸ್ತಿ, 2021ರಲ್ಲಿ ಶರವು ಮಂಗಳೂರಿನ ರಂಗ ಕಲಾ ಬಂಧು ಪ್ರಶಸ್ತಿ, ಉರ್ವ ಚಿಲಿಂಬಿಯ ಶ್ರೀ ಶಿರಡಿ ಸಾಯಿಬಾಬಾ ಮಂದಿರದಿಂದ ‘ದಾಸಗಣ’ ಪ್ರಶಸ್ತಿಗಳನ್ನು ಪಡೆದುಕೊಂಡಿರುವುದಲ್ಲದೆ ನೂರಕ್ಕೂ ಹೆಚ್ಚಿನ ಸನ್ಮಾನಗಳಿಗೆ ಭಾಜನರಾಗಿದ್ದಾರೆ.
ಕರಾವಳಿ ಕರ್ನಾಟಕದ ಗಂಡುಕಲೆ ಎನಿಸಿದ ಯಕ್ಷಗಾನ ಕ್ಷೇತ್ರ ಶ್ರೀಯುತ ನವನೀತ ಕದ್ರಿಯವರ ಅಚ್ಚುಮೆಚ್ಚಿನ ಕಲಾಕ್ಷೇತ್ರಗಳಲ್ಲಿ ಒಂದು. ಎಳವೆಯಿಂದಲೇ ಯಕ್ಷಗಾನದ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಂಡು ಬಂದ ಅವರು ತಮ್ಮ ಹದಿನೈದನೇ ವಯಸ್ಸಿನಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವಾಗ, ವಾಲ್ಮೀಕಿ ರಾಮಾಯಣದಲ್ಲಿ ರಾಮನ ಪಾತ್ರಕ್ಕಾಗಿ ಮೊದಲಿಗೆ ಬಣ್ಣ ಹಚ್ಚಿದವರು. ಆನಂತರ ನಿರಂತರವಾಗಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸುತ್ತಾ ತಮ್ಮದೇ ಆದ ವಿಶಿಷ್ಟತೆಯಿಂದ ಜನಮನವನ್ನು ಗೆದ್ದ ಉತ್ತಮ ಪಾತ್ರಧಾರಿ, ವರ್ಕಾಡಿ ಎಂಬಲ್ಲಿ ನಡೆದ ‘ಶ್ವೇತ ಕುಮಾರ ಚರಿತ್ರೆ’ ಪ್ರಸಂಗದಲ್ಲಿ ಪ್ರೇತದ ವೇಷ ಹಾಕಿ ಸಭೆಯ ಮೂಲಕವಾಗಿ ರಂಗ ಪ್ರವೇಶ ಮಾಡಿದ ಅವರ ಪಾತ್ರವನ್ನು ಕಂಡು ಮಹಿಳೆಯೊಬ್ಬರು ಹೆದರಿ ಪ್ರಜ್ಞೆತಪ್ಪಿ ಬಿದ್ದು ಅರ್ಧಗಂಟೆ ಯಕ್ಷಗಾನ ನಿಂತುಹೋದುದು ಅವರ ಸಹಜ ಪಾತ್ರನಿರ್ವಹಣೆಗೆ ಒಂದು ಸಾಕ್ಷಿ! ಯಕ್ಷಭಾಗವತಿಕೆಯ ಮಾಂತ್ರಿಕ ಶ್ರೀ ಪಟ್ಲ ಸತೀಶ್ ಶೆಟ್ಟರೊಂದಿಗೆ ಆಮೇರಿಕಾ ಯಕ್ಷ ಪ್ರವಾಸದ ಸಂದರ್ಭದಲ್ಲಿ ‘ಕಂಸವಧೆ’ ಪ್ರಸಂಗದಲ್ಲಿ ‘ಕಂಸ’ನಾಗಿ ಕಡಲಾಚೆಯ ರಂಗರಸಿಕರ ಮನಗೆದ್ದುದು ಒಂದು ದಾಖಲೆ. ಯಕ್ಷಗಾನ ತಂಡದೊಂದಿಗೆ ಹಲವಾರು ಬಾರಿ ದುಬಾಯಿ, ಅಬುದಾಬಿ, ಮಸ್ಕತ್ ಇತ್ಯಾದಿ ವಿದೇಶಗಳಿಗೆ ತೆರಳಿ ಪ್ರದರ್ಶನ ನೀಡಿದ ಹಿರಿಮೆಯೂ ಅವರದು. ನಾಲ್ಕು ಬಾರಿ ಮುಂಬಯಿಯಲ್ಲೂ ಯಕ್ಷಗಾನದ ತಿರುಗಾಟ ನಡೆಸಿದವರು. ತಾಳಮದ್ದಳೆಯಲ್ಲಿ ವೈವಿಧ್ಯಮಯ ಪಾತ್ರಗಳಿಗೆ ಅದ್ಭುತವಾದ ತಮ್ಮ ಮಾತಿನ ಕೌಶಲಗಳೊಂದಿಗೆ ಪಾತ್ರಗಳಿಗೆ ಜೀವತುಂಬುತ್ತಾ ಬಂದ ಅವರು ಓರ್ವ ಶ್ರೇಷ್ಠ ಅರ್ಥಧಾರಿ ಎಂದು ಯಕ್ಷಗಾನ ಕ್ಷೇತ್ರದಲ್ಲಿ ಗುರುತಿಸಿಕೊಂಡ ಅಪರೂಪದ ಕಲಾವಿದ.
ಯಕ್ಷಗಾನ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಗಳು ಅಗಣಿತವಾದುದು. ಅರ್ಥಧಾರಿ, ವೇಷಧಾರಿ, ಸಂಯೋಜಕ, ನಿರ್ದೇಶಕ, ಪ್ರಸಂಗ ಸಂಪಾದಕ, ಮಾತ್ರವಲ್ಲದೆ ಸನ್ಮಾನ ಪತ್ರಗಳ ವಿನ್ಯಾಸಕಾರರೂ ಆಗಿದ್ದಾರೆ. ಯಕ್ಷಗಾನ ಸಾಹಿತ್ಯಕ್ಕೆ ಸಂಬಂಧಿಸಿದಂತೆ, ‘ಯಕ್ಷಬಂಟರು’ ಎನ್ನುವ ಯಕ್ಷ ಕಲಾವಿದರ ಮಾಹಿತಿ ಗ್ರಂಥವನ್ನು ಸಂಪಾದಿಸುವುದರೊಂದಿಗೆ, ‘ಒಡ್ಡೋಲಗ’ ಎನ್ನುವ ಯಕ್ಷಗಾನ ಗ್ರಂಥದ ಸಂಪಾದನಾ ಮಂಡಳಿಯ ಸದಸ್ಯರೂ ಆಗಿದ್ದಾರೆ.
ಯಕ್ಷಗಾನ ಪ್ರಸಂಗ ರಚನೆಯಲ್ಲಿಯೂ ಕೈಯಾಡಿಸಿ, ‘ಆದಿತ್ಯ ಮಂಜರಿ’, ‘ಶ್ರೀ ಶಿರಡಿ ಸಾಯಿಬಾಬಾ’, ‘ಶ್ರೀ ದೇವೀ ಮಹಾತ್ಮ’ ಮಂತಾದ ಸ್ವತಂತ್ರ ಪ್ರಸಂಗಗಳ ರಚನೆಯೊಂದಿಗೆ ಪ್ರಧಾನ ಸಂಪಾದಕರಾಗಿ,’ಪಾಂಡವಾಶ್ವಮೇಧ’, ‘ತಾಳಮದ್ದಳೆಯ ಚಾಲ್ತಿ ಪ್ರಸಂಗಗಳು’, ಯಕ್ಷಗಾನ ಅಕಾಡೆಮಿಗಾಗಿ ‘ತುಳು ಯಕ್ಷಗಾನ ಪ್ರಸಂಗ ಜೊಂಕಿಲ್’ ಎನ್ನುವ ಎರಡು ಗೊಂಚಲುಗಳು ಮತ್ತು ‘ಶ್ರೀ ಎಂ.ಎ. ಹೆಗಡೆ ಕೃತಿ ಸಂಪುಟ’ಗಳನ್ನು ರಚಿಸಿದ್ದಾರೆ.
ದೂರದರ್ಶನದ ‘ಯಕ್ಷಲೋಕ’, ‘ಯಕ್ಷಾರಾಧನೆ’ ಮುಂತಾದ ಕಾರ್ಯಕ್ರಮಗಳ ಮೂಲಕ ನೂರಾರು ಯಕ್ಷಗಾನ ಕಲಾವಿದರಿಗೆ ವೇದಿಕೆ ಒದಗಿಸಿದ ಹೃದಯವಂತ ಕಲಾವಿದರು. ಕರಾವಳಿಯ ಜನಪ್ರಿಯ ದೂರದರ್ಶನ ವಾಹಿನಿಯಲ್ಲಿ ಒಂದಾದ ‘ನಮ್ಮ ಟಿ.ವಿ.’ಯ ‘ಯಕ್ಷ ರಾಮಾಯಣ’ ಧಾರವಾಹಿಯ ನಿರೂಪಕರು.
ಯಕ್ಷರಂಗದಲ್ಲಿ ನೂತನ ಪ್ರಯೋಗಗಳನ್ನು ತರುವ ಅವರ ಪ್ರಯತ್ನದ ಫಲವಾಗಿ, ‘ಕುರುಕ್ಷೇತ್ರಕ್ಕೊಂದು ಆಯೋಗ’ ಎನ್ನುವ ಹೆಸರಿನಲ್ಲಿ ಯಕ್ಷಗಾನ, ನಾಟಕ, ಭರತನಾಟ್ಯವನ್ನು ಒಳಗೊಂಡ ವಿಶಿಷ್ಟ ರಂಗ ಪ್ರಯೋಗವನ್ನು ತಮ್ಮ ವಿಶಿಷ್ಟ ಕಲ್ಪನೆಯೊಂದಿಗೆ ನಿರ್ದೇಶನ ಮಾಡಿದ್ದಾರೆ. ಅಂತೆಯೇ, ‘ಯಕ್ಷ ಸಂಗೀತ ವೈಭವ’ ಎನ್ನುವ ಹೆಸರಿನಲ್ಲಿ ವಿವಿಧ ವಾದ್ಯ ಪರಿಕರಗಳೊಂದಿಗೆ ಯಕ್ಷಗಾನ ರಂಗಭೂಮಿ ಕಲಾವಿದರ ನೃತ್ಯಾಭಿನಯವನ್ನು ಸಂಯೋಜಿಸಿ ನಿರ್ದೇಶನ ಮಾಡಿದ ಹಿರಿಮೆಯೂ ಅವರದು. ‘ಶ್ರೀ ಶಿರಡಿ ಸಾಯಿಬಾಬಾ’ ಯಕ್ಷ ನೃತ್ಯ ರೂಪಕವಾಗಿ ಅವರಿಂದ ರೂಪುಗೊಂಡು ರಂಗದ ಮೇಲೆ ಪ್ರದರ್ಶನಗೊಂಡಿದೆ.
ರಂಗಕಲೆಯನ್ನು ತಮ್ಮ ಬದುಕಿನ ಪ್ರಮುಖ ಅಂಗವಾಗಿಸಿಕೊಂಡ ನವನೀತ ಶೆಟ್ಟರು ಕರಾವಳಿಯ ಪ್ರಮುಖ ನಾಟಕ ಕಲಾವಿದರೂ ಹೌದು. ಎಳವೆಯಲ್ಲಿ ನವನೀತರ ತಂದೆ ಮಗ ಯಕ್ಷಗಾನ ಕ್ಷೇತ್ರದಲ್ಲಿ ಬೆಳೆಯಬೇಕು ಎನ್ನುವ ಆಸೆಯೊಂದನ್ನೇ ಇರಿಸಿ ಪ್ರೋತ್ಸಾಹವನ್ನು ಇತ್ತಿದ್ದರು. ಮಗ ನಾಟಕ ಕ್ಷೇತ್ರಕ್ಕೆ ಕಾಲಿಡುವುದು ಅವರಿಗೆ ಇಷ್ಟವಿಲ್ಲದ ವಿಚಾರವಾಗಿತ್ತು. ಆದರೆ ಕಲಾವಿದ ಮಗನನ್ನು ನಾಟಕ ಕ್ಷೇತ್ರ ಕೈಬೀಸಿ ಕರೆಯತೊಡಗಿತು. ಆರನೇ ತರಗತಿಯಲ್ಲಿ ಕಲಿಯುತ್ತಿದ್ದ ವೇಳೆಯಲ್ಲಿಯೇ ಅಂತರ್ ತರಗತಿ ನಾಟಕ ಸ್ಪರ್ಧೆಗಾಗಿ ನವನೀತರು “12 ಜನ ಬುದ್ದಿವಂತರು” ಎನ್ನುವ ನಾಟಕವನ್ನು ಬರೆದು ಬಹುಮಾನ ಗಿಟ್ಟಿಸಿಕೊಂಡರು. ಮುಂದೆ ಪ್ರೌಢ ಶಾಲೆಗೆ ಬಂದಾಗ ಐತಾಳ ಮಾಸ್ಟು, ಶಂಭು ಶೆಟ್ರು ಮುಂತಾದ ಗುರುಗಳ ಪ್ರೋತ್ಸಾಹ ಅವರಲ್ಲಿನ ನಾಟಕ ರಚನೆ ಮತ್ತು ನಟನಾ ಕೌಶಲಗಳನ್ನು ಪೋಷಿಸಿದವು. ಅವರ ನಿರ್ದೇಶನಗಳಲ್ಲಿ ಹಲವಾರು ಪೌರಾಣಿಕ ಹಾಗೂ ಐತಿಹಾಸಿಕ, ನಾಟಕಗಳಲ್ಲಿ ಅಭಿನಯಿಸಿದರು. ಒಂಭತ್ತನೇ ತರಗತಿಯಲ್ಲಿ ಇರುವ ಸಮಯದಲ್ಲಿಯೇ ಕದ್ರಿಯ ‘ಮುಕ್ಕಣ್ಣೇಶ್ವರ ನಾಟಕ ಸಂಘ’ವನ್ನು ಕಟ್ಟಿ ‘ವಿಟ್ಲದ ವೀರವರ್ಮೆ’ ನಾಟಕದಲ್ಲಿ ಅಭಿನಯಿಸಿ, ಹತ್ತನೇ ತರಗತಿಯಲ್ಲಿ ‘ರಾಣಿ ಅಬ್ಬಕ್ಕ’ ನಾಟಕವನ್ನು ಸ್ವಯಂನಿರ್ದೇಶಿಸಿದ್ದು ಮಾತ್ರವಲ್ಲದೆ ಅದನ್ನು ಆಡಿಸಿ ಎಲ್ಲರಿಂದ ಭೇಷ್ ಅನ್ನಿಸಿಕೊಂಡಿದ್ದ ಆಗಿನ ಬಾಲಕನೇ ಇಂದಿನ ಸಾಂಸ್ಕೃತಿಕ ಹರಿಕಾರ . ಮುಂದೆ ಕೆ.ಎನ್. ಟೇಲರ್ ಅವರ “ಶಾಂತಿ” ನಾಟಕವನ್ನು ಕದ್ರಿ ಕಂಬಳದ ಬಳಿ ಆಡಿ, ಅನಂತರ ಕಟ್ಟಿದ ‘ಕದ್ರಿ ಕಂಬಳ ಮಿತ್ರ ವೃಂದ’ದ ವಾರ್ಷಿಕೋತ್ಸವದ ನಾಟಕಗಳಲ್ಲಿ ನಾಯಕ ನಟನಾಗಿ ಅಭಿನಯಯಿಸಿದ ಖ್ಯಾತಿ ಇವರದ್ದು. ” ಕಾರ್ಣಿಕದ ಶನೀಶ್ವರೆ ” ಪೌರಾಣಿಕ ನಾಟಕವನ್ನು ತಾನೇ ರಚಿಸಿ, ನಟಿಸಿ ರಂಗ ಭೂಮಿಯಲ್ಲಿ ಬೆಳೆದವರು. ಹೀಗೆ ‘ಕದ್ರಿ ಕಂಬ್ಳ ಮಿತ್ರವೃಂದ’ದ ಮೂಲಕ ವಾರ್ಷಿಕೋತ್ಸವ ಸಂದರ್ಭದಲ್ಲಿ ಮತ್ತು ಕದ್ರಿ ದೇಗುಲದ ಜಾತ್ರೆಯ ಸಂದರ್ಭದಲ್ಲಿ ನಿರಂತರ ನಾಟಕಗಳನ್ನು ಪ್ರದರ್ಶಿಸುತ್ತಾ ಬಂದವರು. ಬಲ್ಮಠ ಟ್ರೈನಿಂಗ್ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಪ್ರತೀ ವರ್ಷ ಶಾಲಾ ಮಕ್ಕಳಿಗೆ ಪುಸ್ತಕ, ಸಮವಸ್ತ್ರ ವಿತರಣೆ ಮಾಡುತ್ತಾ ಸರಸ್ವತಿ ಸೇವೆಯನ್ನು ಮಾಡುವುದರೊಂದಿಗೆ ಹಳೇ ವಿದ್ಯಾರ್ಥಿ ಸಂಘ ವಾರ್ಷಿಕೋತ್ಸವದಲ್ಲಿ ಹತ್ತಾರು ವರ್ಷ ನಾಟಕ ಸಂಯೋಜನೆ ಮಾಡಿ ನಟಿಸಿ ಕಲಾ ಶಾರದೆಯ ಸೇವೆ ಮಾಡಿದ ಹೆಗ್ಗಳಿಕೆ ಕದ್ರಿ ನವನೀತ ಶೆಟ್ಟಿಯವರದ್ದು.
ಸ್ವಯಂ ನಾಟಕಗಳನ್ನು ಬರೆಯುವುದು ಮತ್ತು ಪ್ರದರ್ಶಿಸುವುದು ಶ್ರೀ ನವನೀತರ ಅಚ್ಚುಮೆಚ್ಚಿನ ಕಾರ್ಯ, ಪೌರಾಣಿಕ, ಐತಿಹಾಸಿಕ ನಾಟಕ ರಚನೆಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ ಉತ್ತಮ ನಾಟಕಕರ್ತೃ. ಕನ್ನಡ ತುಳು ಭಾಷೆಗಳಲ್ಲಿ ನಿರಂತರವಾಗಿ ನಾಟಕ ರಚನೆಗಳಲ್ಲಿ ತೊಡಗಿಸಿಕೊಂಡಿರುವ ಅವರ ಅನ್ಯಾದೃಶ ಪ್ರತಿಭೆಯಿಂದ ಹೊರಬಂದ ಪ್ರಮುಖ ನಾಟಕಗಳಿವು:- ಕಾರ್ನಿಕದ ಶನೀಶ್ವರೆ, ಶಿವಮಂತ್ರ, ಯಕ್ಷಮಣಿ, ಮದನಮಂಜರಿ, ಮಾಯಿದ ಪುಣ್ಣಮೆ, ಬ್ರಹ್ಮಶ್ರೀ ವಿಶ್ವಾಮಿತ್ರೆ, ಮೈಮೆದವ ಜೋಗಿಲು, ಮೈಮೆದ ಮತ್ಸ್ಯೇಂದ್ರೆ, ಸಿರಿ ಲಲಿತೆ ಪರಮೇಶ್ವರಿ, ಜೈ ಶಂಕರ್ ಸೀತಾರಾಂ, ಬ್ರಹ್ಮಕಪಾಲ, ಸತ್ಯೊದ ಸಿರಿ, ಆದಿತ್ಯಮಂಜರಿ, ಕುಕ್ಕೆದ ಸ್ವಾಮಿ ಸುಬ್ರಹ್ಮಣ್ಯೆ, ಅಮರ್ ಬೀರೆರ್, ಮೈಮೆದಪ್ಪ ಭಗವತಿ, ಮುಂಡೇರ್ದಪ್ಪ ಉಳ್ಳಾಲ್ದಿ, ಗಂಧರ್ವ ಸಿರಿ ಕನ್ನಿಕೆ, ಕದ್ರದ ಮೈಮೆ, ಬಿರ್ದದ ಲಂಕೇಸೆ, ರಾಮಪಗರಿ, ಪಂಚಮುಖಿ ಆಂಜನೇಯೆ, ಬೊಂಬೆ ಪಂಡಿನ ಕತೆ, ಶ್ರೀ ದೇವಿ ಮಾರಿಯಮ್ಮ ಮತ್ತು ಸಾಯಿನಾಥ ಶಿರ್ಡಿ ಸಾಯಿಬಾಬಾ.
ಇಷ್ಟೇ ಅಲ್ಲದೆ ಶ್ರೀ ನವನೀತರಿಗೆ ಪ್ರಶಸ್ತಿಯನ್ನು ತಂದುಕೊಟ್ಟ ಕೆಲವು ಉತ್ತಮ ನಾಟಕ ಕೃತಿಗಳಾದ, ‘ದೇವುಪೂಂಜೆ’, ‘ತುಂಬೆದ ಪುರ್ಪ’, ‘ಮೈಮೆ’, ‘ಕುದುರುವ ಸಿರಿ’, ‘ಮೈಮೆದ ಸಿರಿದುರ್ಗೆ’, ‘ಕೊಂಬು ಮಾಣಿ’, ‘ಅಹಲೈ’ ಮುಂತಾದ ಸುಮಾರು ಮೂವತ್ತರಷ್ಟು ಚಾರಿತ್ರಿಕ ಮತ್ತು ಪೌರಾಣಿಕ ನಾಟಕಗಳು ಜನಮನ್ನಣೆ ಪಡೆದಿವೆ. ಆರು ಬಾರಿ ‘ಶ್ರೀ ಧರ್ಮಸ್ಥಳ ರತ್ನವರ್ಮ ಹೆಗ್ಗಡೆ ಪ್ರಶಸ್ತಿ’ಯನ್ನು ಮುಡಿಗೇರಿಸಿಕೊಂಡ ನಾಟಕ ಕ್ಷೇತ್ರದ ಸರದಾರರು ಅವರು ! ತುಳು ಅಕಾಡೆಮಿಯ ‘ತುಳು ನಾಟಕ ಸಂಪುಟ’ -1 ಮತ್ತು 2ರ ಪ್ರಧಾನ ಸಂಪಾದಕರಾಗಿ ದುಡಿದ ಶ್ರೇಯಸ್ಸೂ ಅವರದಾಗಿದೆ.
ತುಳು ಕನ್ನಡ ನಾಟಕ ಕ್ಷೇತ್ರದಲ್ಲಿ ಮಾತ್ರವಲ್ಲದೆ, ಸಾಹಿತ್ಯದ ಇನ್ನಿತರ ಕ್ಷೇತ್ರಕ್ಕೂ ಶ್ರೀ ನವನೀತರ ಕೊಡುಗೆ ಗಮನಾರ್ಹವಾದುದು. ‘ನಮ್ಮ ತುಳುವೆರೆ ಎದುರು ಕತೆಕುಲು’, ‘ಕದ್ರಿ ಕಂಬಳದ ಇತಿಹಾಸ’, ‘ಬೋಳಾರದ ಮಾರಿಯಮ್ಮ’ (ಬೋಳಾರ ಹಳೇಕೋಟೆ ಮಾರಿಯಮ್ಮ ದೇವಸ್ಥಾನದ ಚರಿತ್ರೆಯೊಂದಿಗೆ ಮಾರಿದೇವಿಯ ಇತಿಹಾಸ ಮತ್ತು ಪುರಾಣ), ‘ಶ್ರೀ ದೇವಿ ಚರಿತಾಮೃತ – ಶ್ರೀ ದೇವಿ ಮಾಹಿತಿ ಕೋಶ’ ಎನ್ನುವ ಮಾಹಿತಿಪೂರ್ಣವಾದ ಸಂಶೋಧನಾತ್ಮಕ ಕೃತಿಗಳನ್ನೂ ರಚಿಸಿದ್ದಾರೆ. ದಬಕ್ ದಬಾ, ಪತ್ತನಾಜೆ ತುಳು ಸಿನೆಮಾಗಳಿಗಾಗಿ ಗೀತೆಗಳನ್ನು ರಚಿಸಿ ಸಿನಿಮಾ ಗೀತರಚನಾಕಾರರೂ ಆಗಿದ್ದಾರೆ. ಪತ್ರಿಕೆಗಳಲ್ಲಿ ವಿಮರ್ಶೆ, ಪುರವಣಿ ಲೇಖನಗಳ ಬರವಣಿಗೆ, ಸ್ಮರಣ ಸಂಚಿಕೆಗಳ ಸಂಪಾದನೆ ಹಾಗೂ ಲೇಖನಗಳ ಬರಹ, ಸ್ತಬ್ಧ ಚಿತ್ರಗಳಿಗೆ ಸಾಹಿತ್ಯ, ಸಮ್ಮೇಳನಗಳಿಗೆ ಶೀರ್ಷಿಕೆ ಗೀತೆ ಹೀಗೆ ವೈವಿಧ್ಯಮಯ ಬರಹಗಳನ್ನು ಬರೆಯುತ್ತಲೇ ಇದ್ದಾರೆ.
ತುಳುನಾಡಿನ ಪ್ರಪ್ರಥಮ ಟಿ.ವಿ. ವಾರ್ತಾವಾಹಿನಿ ‘ನಮ್ಮ ಕುಡ್ಲ’ದ ಪ್ರಪ್ರಥಮ ತುಳು ವಾರ್ತಾ ನಿರೂಪಕರಾದ ಶ್ರೀ ನವನೀತರು, ಹಲವಾರು ನೇರ ಪ್ರಸಾರ ಹಾಗೂ ವಿಶೇಷ ಕಾರ್ಯಕ್ರಮಗಳ ನಿರೂಪಕ, ಸಂಯೋಜಕ ಹಾಗೂ ಸಂದರ್ಶನಕಾರರು. ನಮ್ಮ ಕುಡ್ಲ ವಾಹಿನಿಯ ‘ಐತಾರೊಡ್ಡು ಐತಾರ’ ಅವರಿಗೆ ಬಹಳಷ್ಟು ಜನಪ್ರಿಯತೆ ತಂದುಕೊಟ್ಟ ಕಾರ್ಯಕ್ರಮ. ಅಂತೆಯೇ ‘ನಮ್ಮ ಟಿ.ವಿ.’ ವಾಹಿನಿಯ ‘ಪಟ್ಟಾಂಗ’ ವಾರದ ನೇರ ಪ್ರಸಾರದ ರೂವಾರಿಯೂ ಹೌದು. ನಮ್ಮ ಕುಡ್ಲ ವಾಹಿನಿಯಲ್ಲಿ ಅವರ ಪರಿಕಲ್ಪನೆಯಲ್ಲಿ ಮೂಡಿಬಂದ ಕಾರ್ಯಕ್ರಮಗಳೂ ಗಣನೀಯವಾದವುಗಳು. ‘ಯಕ್ಷಲೋಕ’-200ಕ್ಕೂ ಹೆಚ್ಚಿನ ಕಾರ್ಯಕ್ರಮಗಳು, ‘ಭೂತಾರಾಧನೆ’-150ಕ್ಕೂ ಹೆಚ್ಚಿನ ಕಾರ್ಯಕ್ರಮಗಳು, ‘ಯಕ್ಷಾರಾಧನೆ’ 25ಕ್ಕೂ ಹೆಚ್ಚಿನ ಕಾರ್ಯಕ್ರಮಗಳು, ‘ನಮ್ಮ ಕಂಬಳ’- 25ಕ್ಕೂ ಹೆಚ್ಚಿನ ಕಾರ್ಯಕ್ರಮಗಳು, ಹಾಗೂ ‘ವಿದೂಷಕ’ – 25ಕ್ಕೂ ಹೆಚ್ಚಿನ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಸಮಾಜ ಸೇವಾ ತತ್ಪರರಾದ ಶ್ರೀ ನವನೀತರು ಹಲವಾರು ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲೂ ತಮ್ಮ ಅನನ್ಯತೆಯನ್ನು ಮೆರೆದವರು. ಐತಿಹಾಸಿಕ ಕದ್ರಿ ಕಂಬಳ ಕೆಸರು ಗದ್ದೆ ಓಟ, ಹಗ್ಗ ಜಗ್ಗಾಟ ಸ್ಪರ್ಧೆಗಳ ಆಯೋಜಕರು. ರಾಜ್ಯದಲ್ಲಿಯೇ ಹೆಸರಾಂತ ‘ಶ್ರೀ ಕೃಷ್ಣ ವೇಷ ಸ್ಪರ್ಧೆ’ಯನ್ನು ಕದ್ರಿಯಲ್ಲಿ ಆರಂಭಿಸಲು ಕಾರಣಕರ್ತರಾದವರು. ಮಂಗಳೂರಿನಲ್ಲಿ ‘ನಮ್ಮ ಕುಡ್ಲ ಗೂಡುದೀಪ ಸ್ಪರ್ಧೆ’ಯ ಪರಿಕಲ್ಪನೆಯನ್ನು ರೂಪಿಸಿದ ಮಹಾನುಭಾವರು.
ತುಳುನಾಡಿಗೆ ಹೆಸರು ತಂದ ಸಾಂಸ್ಕೃತಿಕ ಉತ್ಸವಗಳಾದ, ಉಜಿರೆಯಲ್ಲಿ ನಡೆದ ‘ವಿಶ್ವ ತುಳು ಸಮ್ಮೇಳನ 2009’ ರ ಸಾಂಸ್ಕೃತಿಕ ಕಾರ್ಯದರ್ಶಿತ್ವ, ಅಡ್ಯಾರಿನಲ್ಲಿ ನಡೆದ ವಿಶ್ವ ತುಳುವೆರೆ ಪರ್ಬ – 2014ರ ಪ್ರಧಾನ ಸಂಚಾಲಕತ್ವ, ದುಬಾಯಿಯಲ್ಲಿ ನಡೆದ ‘ವಿಶ್ವ ತುಳು ಸಮ್ಮೇಳನ’ 2018ರ ಪ್ರಧಾನ ನಿರೂಪಕರಾಗಿ ಅವರ ಕಾರ್ಯವೈಖರಿಗಳು ಅಪ್ರತಿಮವಾದವುಗಳು.
ಅಪಾರವಾದ ಲೋಕ ಜ್ಞಾನ, ಕನ್ನಡ ಹಾಗೂ ತುಳು ಭಾಷೆಗಳ ಮೇಲಿನ ಪ್ರಬುದ್ಧತೆ ಮತ್ತು ಹಿಡಿತ, ಅಪ್ರತಿಮ ವಾಕ್ಚಾತುರ್ಯದೊಂದಿಗೆ ಅಪೂರ್ವವಾದ ಕಂಚಿನ ಕಂಠವನ್ನೂ ಹೊಂದಿದ ಶ್ರೀ ನವನೀತರ ವೀಕ್ಷಕ ವಿವರಣೆಗಳು ಮಂಗಳೂರು ದಸರಾ, ಮಂಗಳೂರು ಶಾರದೋತ್ಸವ, ಉಡುಪಿ ಪರ್ಯಾಯ, ಮಂಗಳೂರು ಗಣೇಶೋತ್ಸವ, ಆಳ್ವಾಸ್ ನುಡಿಸಿರಿ, ಕದ್ರಿ ಕಂಬಳ, ಕೆಸರು ಗದ್ದೆ ಓಟ, ಆಟಿಡೊಂಜಿ ಕೂಟ ಮೊದಲಾದ ಕಾರ್ಯಕ್ರಮಗಳಿಗೆ ಇನ್ನಷ್ಟು ಮೆರುಗನ್ನು ಕೊಟ್ಟಿವೆ. ಉತ್ತಮ ವಾಗ್ಮಿಯೂ, ಈ ನಾಡಿನ ಹೆಸರಾಂತ ನಿರೂಪಕರೂ ಆಗಿರುವ ಶ್ರೀ ನವನೀತರು ನಡೆಸಿದ ಸಂದರ್ಶನಗಳು ಹಾಗೂ ಮಾಹಿತಿಪೂರ್ಣ ವಿವರಗಳು ಶ್ರೋತೃಗಳ ಮನಸ್ಸನ್ನು ಗೆದ್ದಿವೆ.
ಧಾರ್ಮಿಕ ಕ್ಷೇತ್ರದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀ ನವನೀತರು. ‘ನಾಗಮಂಡಲ’ ಸಮಿತಿಯ ಕಾರ್ಯಾಧ್ಯಕ್ಷ ಹಾಗೂ ಸಂಚಾಲಕರಾಗಿ ಉಳ್ಳಾಲ, ಬೋಳಾರ, ಕೂಳೂರು, ಬಜಾಲ್, ಬಪ್ಪನಾಡುಗಳಲ್ಲಿ ನಡೆದ ಚಾರಿತ್ರಿಕ ನಾಗಮಂಡಲಗಳ ನೇತೃತ್ವವನ್ನು ವಹಿಸಿ ಯಶಸ್ವಿಗೊಳಿಸಿದ್ದಾರೆ. ಬೋಳಾರ ಹಳೆಕೋಟೆ ಮಾರಿಯಮ್ಮ ಭಂಡಾರ ಮನೆಯ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿಯೂ ಅವರ ಸೇವೆ ಗಮನಾರ್ಹವಾದುದು. ಇಷ್ಟು ಮಾತ್ರವಲ್ಲದೆ, ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಷಷ್ಠ್ಯಬ್ಧ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ, ಉಳ್ಳಾಲ ಅಯ್ಯಪ್ಪ ಭಜನಾ ಮಂದಿರ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ, ಉಳ್ಳಾಲ ಉಳಿಯ ಕ್ಷೇತ್ರ, ಅತ್ತಾವರ ಚಂದ್ರಕಾವಿ ಮಠ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಬೋಳಾರ ಮಾರಿಯಮ್ಮ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ, ಶ್ರೀ ಸಿದ್ಧಿವಿನಾಯಕ ಗಣೇಶೋತ್ಸವ ಸಮಿತಿ, ಬಂಟರ ಮಾತೃ ಸಂಘದ ಅಧ್ಯಕ್ಷ, ಪಡುಬಿದ್ರಿ ಶ್ರೀ ಬಾಲಗಣಪತಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಸಂಚಾಲಕ ಹೀಗೆ ನಾಡಿನಾದ್ಯಂತದ ಧಾರ್ಮಿಕ ಕ್ಷೇತ್ರಗಳಲ್ಲಿ ಅಪೂರ್ವವಾಗಿ ತಮ್ಮ ಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ.
2016-17ರ ಅವಧಿಯಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಹಾಗೂ 2019-2022ರಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸದಸ್ಯರೂ ಆಗಿದ್ದ ಹಿರಿಮೆಯೂ ಅವರದು. ಲಯನ್ಸ್ ಕ್ಲಬ್ ಮಂಗಳೂರು ಕೊಡಿಯಾಲಬೈಲಿನ ಸ್ಥಾಪಕ ಸದಸ್ಯರಾಗಿ, ಸ್ಥಾಪಕ ಉಪಾಧ್ಯಕ್ಷರಾಗಿ, ಮರುವರ್ಷದಲ್ಲೇ ಅಧ್ಯಕ್ಷರಾಗಿ ಅತ್ಯುತ್ತಮ ಸಾಧನೆಯನ್ನು ಗೈದು, ನಿರಂತರವಾಗಿ ಜಿಲ್ಲಾ ಸಂಪುಟದಲ್ಲಿ ಜಿಲ್ಲಾಧ್ಯಕ್ಷರಾಗಿ ಹಲವಾರು ಪ್ರಶಸ್ತಿಗಳನ್ನು ತಂದುಕೊಟ್ಟವರು. ಶ್ರೀ ನವನೀತರು ಪ್ರಾಂತೀಯ ಅಧ್ಯಕ್ಷರಾಗಿದ್ದಾಗಲೂ, ಜಿಲ್ಲಾ ಸಂಪುಟ ಸಂಯೋಜಕರಾಗಿರುವಾಗಲೂ ಅಂತಾರಾಷ್ಟ್ರೀಯ ಪ್ರಶಸ್ತಿಗೂ ಲಯನ್ಸ್ ಕ್ಲಬ್ ಭಾಜನವಾಗಿತ್ತು.
ಶ್ರೀ ನವನೀತರ ಕೈಯ ಮುದ್ರೆ ಅಚ್ಚೊತ್ತದ ಯಾವುದೇ ಕ್ಷೇತ್ರವೂ ಈ ತುಳುನಾಡಿನಲ್ಲಿ ಇಲ್ಲವೆಂದೇ ಹೇಳಿದರೆ ಉತ್ಪ್ರೇಕ್ಷೆಯಾಗಲಾರದು. ಈ ನಾಡು ಕಂಡ ಅಪೂರ್ವ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ಶ್ರೀ ಲಯನ್ ಎಂಜೆಎಫ್ ಕದ್ರಿ ನವನೀತ ಶೆಟ್ಟರು ಸಾಧನೆಯ ಶಿಖರದ ತುತ್ತತುದಿಯಲ್ಲಿ ನಿಂತವರು. ತುಳುನಾಡಿನ ಈ ಮಹಾಪ್ರತಿಭೆಗಳ ಗಣಿಯಿಂದ ಈ ನಾಡಿಗೆ ಇನ್ನಷ್ಟು ಕೀರ್ತಿಯು ಸಲ್ಲುವಂತಾಗಲಿ.
ಡಾ. ಮೀನಾಕ್ಷಿ ರಾಮಚಂದ್ರ ಮಂಗಳೂರು