ಮೂಡಬಿದಿರೆ : ಸುವರ್ಣ ಹಬ್ಬದ ಸಂಭ್ರಮದಲ್ಲಿರುವ ಶ್ರೀದೇವಿ ನೃತ್ಯ ಕೇಂದ್ರದ ದ್ವಿತೀಯ ಶಾಖೆಯ ಉದ್ಘಾಟನಾ ಸಮಾರಂಭವು ದಿನಾಂಕ 05 ಜನವರಿ 2025ರ ಭಾನುವಾರ ಬೆಳಿಗ್ಗೆ ಘಂಟೆ 10.00ಕ್ಕೆ ಮೂಡಬಿದಿರೆಯ ರಮಾಮಣಿ ಶೋಧ ಸಂಸ್ಥಾನ ಸಭಾಭವನದಲ್ಲಿ ನಡೆಯಿತು.
ದವಳತ್ರಯ ಜೈನ ಕಾಶಿ ಟ್ರಸ್ಟ್ (ರಿ )ಮೂಡಬಿದಿರೆ ಹಾಗೂ ಶ್ರೀ ದಿಗಂಬರ ಜೈನ ಮಠ ಇದರ ಸಹಯೋಗದಲ್ಲಿ ನಡೆದ ಈ ಕಾರ್ಯಕ್ರಮವನ್ನು ಜಗದ್ಗುರು ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ, ಶ್ರೀ ದಿಗಂಬರ ಜೈನ ಮಠ ಮೂಡುಬಿದಿರೆ ಇವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಆಶೀರ್ವಚನ ನೀಡಿದ ಸ್ವಾಮೀಜಿ “ನೃತ್ಯ ಕಲೆಯು ಭಾರತೀಯ ಪ್ರಾಚೀನ ಎಪ್ಪತ್ತೆರಡು ಕಲೆ(64ಕಲೆ ಅಂತಲೂ ಹೇಳುತ್ತಾರೆ) ಗಳಲ್ಲಿ ಒಂದು. ಶಾಸ್ತ್ರೀಯ ನೃತ್ಯ ಅಧಿನಾಥ ತೀರ್ಥoಕರ ಕಾಲದಲ್ಲೇ ಆರಾಧನ ಪದ್ಧತಿಯಾಗಿ ರಾಜರ ಆಸ್ಥಾನದಲ್ಲಿ ಪ್ರದರ್ಶನಗೊಳ್ಳುತ್ತಿತ್ತು. ಅಂಗಿಕ, ಅಭಿನಯ, ಮುದ್ರೆ, ಹೆಜ್ಜೆಗಳ ಶಾಸ್ತ್ರೀಯ ಪಟ್ಟುಗಳನ್ನು ಕಲಿತ ನೃತ್ಯಗಾರರು ತಮ್ಮ ಗುರುಗಳಿಂದ ಅಭ್ಯಾಸ ಕಾಲದಲ್ಲಿ ನವರಸಗಳ ಪ್ರಾಮುಖ್ಯತೆ, ಸೌಂದರ್ಯ ಪ್ರಜ್ಞೆ, ಶಾಂತ, ಭಕ್ತಿ, ಜ್ಞಾನ ರಸಗಳ ಮಹತ್ವ ತಿಳಿದು, ಪ್ರೇಕ್ಷಕ ವರ್ಗಕ್ಕೆ ನೃತ್ಯ ಹಾಗೂ ಅಭಿನಯದ ಮೂಲಕ ಪ್ರದರ್ಶಿಸಿದಾಗ ಭಾರತಿಯ ಕಲೆಯ ಮಹತ್ವ ತಿಳಿಯುವುದು ಹಾಗೂ ಉತ್ತಮ ಕಲಾ ಪ್ರಜ್ಞೆ ಮೂಡಿಸಲು ಸಾಧ್ಯ” ಎಂದು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸ್ಥಾಪಕ ಟ್ರಸ್ಟಿ ಹಾಗೂ ಧರ್ಮದರ್ಶಿಗಳಾದ ಶ್ರೀಯುತ ಡಾ. ಹರಿಕೃಷ್ಣ ಪುನರೂರು ಮಾತನಾಡಿ “ಶ್ರೀ ಮಠ ಕಲೆ ಸಾಹಿತ್ಯ ಸಂಸ್ಕೃತಿಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವುದು ಸಂತೋಷ” ಎಂದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ ಸಂಸ್ಥೆಯ ಟ್ರಸ್ಟಿಗಳಾದ ಶ್ರೀಯುತ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ “ಸುಸಂಸ್ಕೃತಿಯನ್ನು ತೋರಿಸಲ್ಪಡುವ ಏಕೈಕ ವಿದ್ಯೆ ಶಾಸ್ತ್ರೀಯ ನೃತ್ಯ” ಎಂದು ತಿಳಿಸಿದರು. ಯುಗಪುರುಷ ಪತ್ರಿಕೆಯ ಸಂಪಾದಕರಾದ ಶ್ರೀಯುತ ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಶ್ರೀಮತಿ ಸಾತ್ವಿಕ ರೈ ಪ್ರಾರ್ಥಿಸಿ, ಸಂಸ್ಥೆಯ ನಿರ್ದೇಶಕಕಿಯಾದ ಡಾ. ಆರತಿ ಶೆಟ್ಟಿ ಪ್ರಸ್ತಾವಿಕ ಮಾತುಗಳನ್ನಾಡಿ, ಟ್ರಸ್ಟಿ ಮಿಲನ್ ರೈ ಸ್ವಾಗತಿಸಿ, ವಿದುಷಿ ನಯನ ಕೆ. ಕಾರ್ಯಕ್ರಮವನ್ನು ನಿರೂಪಿಸಿ, ಟ್ರಸ್ಟಿ ಹರೀಶ್ ಶೆಟ್ಟಿ ವಂದನಾರ್ಪಣೆ ಸಲ್ಲಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ಭರತ ನಾಟ್ಯ ಕಾರ್ಯಕ್ರಮ ಪ್ರಸ್ತುತಗೊಂಡಿತು.