ಮಂಗಳೂರು : ಹರಿಕಥಾ ಪರಿಷತ್ (ರಿ.) ಮಂಗಳೂರು, ರಾಮಕೃಷ್ಣ ಮಠ ಮಂಗಳೂರು ಮತ್ತು ಬೆಂಗಳೂರಿನ ಷಡ್ಜ ಕಲಾ ಕೇಂದ್ರ ಟ್ರಸ್ಟ್ (ರಿ.) ಇವುಗಳ ಸಂಯುಕ್ತ ಸಹಯೋಗದಲ್ಲಿ ಹರಿಕಥಾ ಸಮ್ಮೇಳನ ಸಮಿತಿ ಮಂಗಳೂರು ಆಯೋಜಿಸುವ ‘ಹರಿಕಥಾ ಸಮ್ಮೇಳನ-2025’ ದಿನಾಂಕ 19 ಜನವರಿ 2025ರಂದು ಮಂಗಳಾದೇವಿ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ನಡೆಯಲಿದೆ.
‘ಹರಿಕಥಾ ಪರಂಪರೆಯ ಪುನರುತ್ಥಾನ’ ಧ್ಯೇಯದೊಂದಿಗೆ ಈ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಬೆಳಗ್ಗೆ 8-00 ಗಂಟೆಗೆ ಸಂಕೀರ್ತನಾ ಮೆರವಣಿಗೆ, ದಾಸ ಸಂಕೀರ್ತನೆ, ಮತ್ತು ಉದ್ಘಾಟನಾ ಸಮಾರಂಭ ನಡೆಯಲಿದೆ. ಮಂಗಳೂರಿನ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. ಮಂಗಳೂರು ಹರಿಕಥಾ ಪರಿಷತ್ ಅಧ್ಯಕ್ಷ ಕೆ. ಮಹಾಬಲ ಶೆಟ್ಟಿ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಲಿದ್ದು, ಉದ್ಘಾಟನಾ ಸಮಾರಂಭದಲ್ಲಿ ಡಾ. ಎಂ. ಪ್ರಭಾಕರ ಜೋಷಿ ದಿಕ್ಕೂಚಿ ಭಾಷಣ ಮಾಡಲಿದ್ದಾರೆ. ಸಂಸದರು, ಶಾಸಕರು ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಇದೇ ಸಂದರ್ಭದಲ್ಲಿ ಶ್ರೀದೇವಕೀತನಯ ಕೂಡ್ಲು ಇವರ ಕುರಿತಾದ ‘ಮಹಾಪರ್ವ’ ಎಂಬ ಕೃತಿ ಲೋಕಾರ್ಪಣೆಗೊಳ್ಳಲಿದೆ.
ಪೂರ್ವಾಹ್ನ 10-40 ಗಂಟೆಗೆ ‘ತುಳುನಾಡಿನ ಹರಿಕಥಾ ಪರಂಪರೆ’ ಎಂಬ ವಿಷಯದಲ್ಲಿ ಪ್ರಥಮ ಗೋಷ್ಠಿ ನಡೆಯಲಿದೆ. 11-45 ಗಂಟೆಗೆ ಕುಮಾರಿ ಪ್ರಣಮ್ಯ ಕೆ.ಎಸ್. ಅವರಿಂದ ಹರಿಕಥೆ, ಗಂಟೆ 12-15ಕ್ಕೆ ‘ಹರಿಕಥೆಯಲ್ಲಿ ಪೀಠಿಕೆ, ಉಪಕಥೆ, ಸಂಗೀತ ಮತ್ತು ಜೀವನ ಮೌಲ್ಯಗಳು’ ಎಂಬ ವಿಷಯದಲ್ಲಿ ದ್ವಿತೀಯ ಗೋಷ್ಠಿ, ಅಪರಾಹ್ನ ಗಂಟೆ 1-45ಕ್ಕೆ ಕುಮಾರಿ ಪೂಜಾ ವಾಸುದೇವ ಐಲ ಇವರಿಂದ ಹರಿಕಥೆ, ಗಂಟೆ 2-15ಕ್ಕೆ ‘ಹಳೆಬೇರು-ಹೊಸಚಿಗುರು’ ಹಿರಿಯ ಹರಿದಾಸಹೊಂದಿಗೆ ಯುವ ಹರಿಕಥಾಭ್ಯಾಸಿಗಳ ಸಂವಾದ, ಬಳಿಕ ಹಿರಿಯ ಹರಿದಾಸರಾದ ಆಚಾರ್ಯ ಡಾ. ಶ್ರೀಧರ ದಾಸ್ ಜೀ ಕುಂಭಾಶಿ, ಹಿರಿಯ ಮಹಿಳಾ ಹರಿದಾಸರಾದ ಶ್ರೀಮತಿ ರುಕ್ಕಿಣಿ ಹಂಡೆ ಉಡುಪಿ, ಹಿರಿಯ ತಬ್ಲಾ ವಾದಕ ಎಂ. ಲಕ್ಷ್ಮೀನಾರಾಯಣ ಭಟ್ ಮಂಗಳೂರು, ಹಿರಿಯ ಹಾರ್ಮೋನಿಯಂ ವಾದಕಿ ಶೈಲಶ್ರೀ ಕಾಮತ್ ಬಿಜೈ ಮತ್ತು ಕೀರ್ತನ ಕುಟೀರ ಕುಂಬ್ಳೆ ಇವರುಗಳಿಗೆ ಗೌರವಾಭಿನಂದನೆ, ಅಪರಾಹ್ನ ಗಂಟೆ 3-15ಕ್ಕೆ ‘ಹರಿಕಥಾ ಕಲೆಯ ಪುನರುತ್ಥಾನದ ಸವಾಲುಗಳು’ ತೃತೀಯ ಗೋಷ್ಠಿ, 4-30 ಗಂಟೆಗೆ ಕಲಾಶ್ರೀ ಡಾ.ಲಕ್ಷ್ಮಣದಾಸ ತುಮಕೂರು ಇವರಿಂದ ಹರಿಕಥೆ ನಡೆಯಲಿದೆ. ಸಂಜೆ ಗಂಟೆ 5-30ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸ್ಪೀಕರ್ ಯು.ಟಿ. ಖಾದರ್ ಇವರು ಸಮ್ಮೇಳನದ ನಡಾವಳಿ ಕೈಪಿಡಿ ‘ಅರ್ಪಣೆ’ ಬಿಡುಗಡೆಗೊಳಿಸಲಿದ್ದಾರೆ.