ಉಡುಪಿ : ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಳದ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಎಂ.ಜಿ.ಎಂ. ಕಾಲೇಜು ಉಡುಪಿ ಸಹಕಾರದಲ್ಲಿ ರಂಗಭೂಮಿ ಉಡುಪಿ ಆಯೋಜಸಿರುವ ಡಾ. ನಿ.ಬೀ. ಅಣ್ಣಾಜಿ ಬಲ್ಲಾಳ್ ಅವರ ಸ್ಮರಣಾರ್ಥ ‘ಅಂಬಲಪಾಡಿ ನಾಟಕೋತ್ಸವ’ವು ದಿನಾಂಕ 12 ಜನವರಿ 2025ರಂದು ಎಂ.ಜಿ.ಎಂ. ಕಾಲೇಜಿನ ಮುದ್ದಣ ಮಂಟಪದಲ್ಲಿ ಉದ್ಘಾಟನೆಗೊಂಡಿತು.
ಈ ನಾಟಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ಎನ್.ಬಿ. ವಿಜಯ ಬಲ್ಲಾಳ್ “ನಾಟಕಗಳು ನಮ್ಮ ಜೀವ, ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಹಾಸುಹೊಕ್ಕಾಗಿವೆ. ಸಾಮಾಜಿಕ, ಐತಿಹಾಸಿಕ, ಧಾರ್ಮಿಕ ವಿಷಯಗಳಲ್ಲಿ ರಂಗಭೂಮಿ ಇಂದು ಬೆಳೆದು ಸಮೃದ್ಧವಾಗಿದೆ. ಉತ್ತಮ ಜೀವನ ಸಂದೇಶವನ್ನು ಭಿತ್ತರಿಸುವ ಈ ರಂಗಭೂಮಿ ಆರೋಗ್ಯವಂತ ಸಮಾಜದ ಪ್ರತಿಬಿಂಬವೂ ಹೌದು. ಬ್ರಿಟೀಷರ ಕಾಲದಲ್ಲಿ ಅವರ ವಿರುದ್ಧ ಹೋರಾಡಲು ನಾಟಕಗಳ ಮೂಲಕ ಪರಿಣಾಮಕಾರಿ ಜಾಗೃತಿ ಮೂಡಿಸಲಾಗಿತ್ತು. ರಂಗಭೂಮಿಗೆ ಬಿ.ವಿ. ಕಾರಂತ, ಗುಬ್ಬಿ ವೀರಣ್ಣ, ಕಾರ್ನಾಡ್ ಇವರ ಕೊಡುಗೆಯನ್ನು ಮರೆಯುವಂತಿಲ್ಲ. ನೀನಾಸಂ ಹೆಗ್ಗೋಡಿನ ಕೆ.ವಿ. ಸುಬ್ಬಣ್ಣರವರನ್ನು ಇಲ್ಲಿ ನೆನೆಯಲೇಬೇಕು. ಅವರ ಮಾರ್ಗದರ್ಶನದಲ್ಲಿ ಈ ನಾಟಕಗಳು ನಡೆಯುತ್ತಿರುವುದು ಸಂತೋಷ ತಂದಿದೆ. ರಂಗಭೂಮಿ ಉಡುಪಿ ಸಂಸ್ಥೆಯನ್ನು ಹುಟ್ಟುಹಾಕಿದ ಆನಂದ ಗಾಣಿಗರು, ಇದೀಗ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ ಹಾಗೂ ಅವರ ಪದಾಧಿಕಾರಿಗಳ ಶ್ರಮ ಶ್ಲಾಘನೀಯ” ಎಂದು ಹೇಳಿದರು.
ರಂಗಭೂಮಿ ಉಡುಪಿ ಇದರ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಮಾತನಾಡಿ “ರಂಗಭೂಮಿಗೆ ಪ್ರಸ್ತುತ 60 ವರ್ಷ ತುಂಬಿದ್ದು, ಈ ಬಾರಿ ಶಾಲಾ ಕಾಲೇಜುಗಳಲ್ಲಿ ರಂಗಶಿಕ್ಷಣ ಹಮ್ಮಿಕೊಳ್ಳುವ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ. ಸುಮಾರು 12 ಶಾಲೆಗಳಲ್ಲಿ ಈ ಪ್ರಯೋಗ ಯಶಸ್ವಿಗಾಗಿ ನಡೆದಿದ್ದು, 420ಕ್ಕೂ ಅಧಿಕ ಮಕ್ಕಳು ಇದರ ಪ್ರಯೋಜನ ಪಡೆದಿದ್ದಾರೆ. ನಮ್ಮ ಈ ಯೋಜನೆಗೆ ಸಂಘಸಂಸ್ಥೆಗಳು ಸೇರಿದಂತೆ ಎಲ್ಲಾ ಕಡೆಯಿಂದ ಉತ್ತಮ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ರಂಗಶಿಕ್ಷಣವನ್ನು ಇನ್ನಷ್ಟು ಶಾಲೆಗೆ ವಿಸ್ತರಿಸುವ ಯೋಜನೆಯಿದೆ. ನಾಟಕ ನೋಡಲು ಬರೀ ವೃದ್ಧರೇ ಬರುವುದಲ್ಲ, ಯುವಕರು ಕೂಡಾ ಬರಬೇಕು. ಮೊಬೈಲ್, ಸಾಮಾಜಿಕ ಜಾಲತಾಣಗಳಿಂದ ಯುವ ಜನತೆಯನ್ನು ಹೊರ ತರಬೇಕು ಎಂಬುದೇ ನಮ್ಮ ಆಶಯ. ನಾನು ಕಲಾರಂಗದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಯಕ್ಷ ಶಿಕ್ಷಣವನ್ನು ಶಾಲೆಗಳಲ್ಲಿ ಆರಂಭಿಸಲಾಯಿತು. ಇದೀಗ 90ಕ್ಕೂ ಅಧಿಕ ಶಾಲೆಗಳಲ್ಲಿ 3000ಕ್ಕೂ ಅಧಿಕ ಮಕ್ಕಳು ಯಕ್ಷ ಶಿಕ್ಷಣ ಪಡೆಯುತ್ತಿದ್ದಾರೆ. ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ತುಂಬಿಸಲು ಈ ರಂಗಭೂಮಿ, ಯಕ್ಷಗಾನ ಸಹಕಾರಿಯಾಗಿದೆ. ಈ ಮೂಲಕ ಸುಸಂಸ್ಕೃತ ಸಮಾಜವನ್ನು ನಿರ್ಮಿಸುವುದು ನಮ್ಮ ಕನಸಾಗಿದೆ” ಎಂದರು.
ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. “ರಂಗಭೂಮಿ ಉಡುಪಿ ಹಲವಾರು ವರ್ಷಗಳಿಂದ ಈ ನಾಟಕೋತ್ಸವವನ್ನು ಆಯೋಜಿಸಿಕೊಂಡು ಬರುತ್ತಿದೆ. ಅಂದು ದಿ. ಅಣ್ಣಾಜಿ ಬಲ್ಲಾಳ್ ಇವರ ಪ್ರೋತ್ಸಾಹ ಹಾಗೂ ಇಂದು ಡಾ. ಎನ್.ಬಿ. ವಿಜಯ ಬಲ್ಲಾಳರ ಬೆಂಬಲದಲ್ಲಿ ಈ ನಾಟಕೋತ್ಸವವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳುತ್ತಿದ್ದೇವೆ. ಇಲ್ಲಿ ನಾಟಕ ನೋಡುವ ಪ್ರೇಕ್ಷಕ ವರ್ಗ ಹುಟ್ಟು ಹಾಕಬೇಕು ಎಂಬ ನಮ್ಮ ಶ್ರಮ ಇಂದು ಸಾಕಾರಗೊಂಡಿದೆ” ಎಂದರು.
ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಎಂ.ಜಿ.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ರಂಗಭೂಮಿ ಉಡುಪಿ ಉಪಾಧ್ಯಕ್ಷರುಗಳಾದ ಎನ್.ಆರ್. ಬಲ್ಲಾಳ್ ಹಾಗೂ ಭಾಸ್ಕರ ರಾವ್ ಕಿದಿಯೂರು ಉಪಸ್ಥಿತರಿದ್ದರು. ನಾಟಕೋತ್ಸವದಲ್ಲಿ ನೀನಾಸಂ ತಂಡದವರಿಂದ ದಿನಾಂಕ 12 ಜನವರಿ 2025 ಭಾನುವಾರ ‘ಮಾಲತೀ ಮಾಧವ’ ಹಾಗೂ ದಿನಾಂಕ 13 ಜನವರಿ 2025 ಸೋಮವಾರ ‘ಅಂಕದ ಪರದೆ’ ನಾಟಕಗಳು ಪ್ರಸ್ತುತಗೊಂಡವು.