ಉಡುಪಿ : ಕಲಾವಿದ ಮಹೇಶ್ ಮರ್ಣೆ ಇತ್ತೀಚಿಗೆ ಎರಡು ಗಂಟೆ 30 ನಿಮಿಷಗಳ ಕಾಲ ಉರಿ ಬಿಸಿಲಿನಲ್ಲಿ ಕುಳಿತು ಸೂರ್ಯನ ಕಿರಣಗಳಿಂದ ಮರದ ಹಲಗೆಯಲ್ಲಿ ರಚಿಸಿದ ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರ ಭಾವಚಿತ್ರ ರಚಿಸಿದ್ದರು. ಇದೀಗ ಈ ಕಲಾಕೃತಿಯು ಕಿಂಗ್ಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೆ ಸೇರ್ಪಡೆಗೊಂಡಿದೆ. ಈ ಕಲಾಕೃತಿಯನ್ನು ರಾಷ್ಟ್ರಪತಿ ಮೆಚ್ಚಿ ಸಂದೇಶ ಕಳುಹಿಸಿದ್ದರು.
ಮಹೇಶ್ ಮರ್ಣೆಯವರ ಕಲಾಕೃತಿಯು ಮೂರನೇ ದಾಖಲೆಗೆ ಸೇರ್ಪಡೆಗೊಳ್ಳುವುದರ ಮೂಲಕ ತಮ್ಮ ಕಲಾ ಸಾಧನೆಯಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ. ಇವರು ಮರ್ಣೆ ಗ್ರಾಮದ ಶ್ರೀಧರ ಆಚಾರ್ಯ ಮತ್ತು ಲಲಿತಾ ದಂಪತಿಯ ಸುಪುತ್ರ. ಇವರು ಐಸ್ ಕ್ರೀಮ್ ಕಡ್ಡಿ ಮತ್ತು ಬೆಂಕಿ ಕಡ್ಡಿಯಿಂದ ಮಾಡಿದ ಗಣಪತಿ ಕಲಾಕೃತಿ 2015ರಲ್ಲಿ ‘ಇಂಡಿಯಾ ಬುಕ್ ಆಫ್ ರೆಕಾರ್ಡ್’ಗೆ ಸೇರ್ಪಡೆಗೊಂಡಿದೆ. ಸೋಪಿನಿಂದ ಕಲಾಕೃತಿ, ಥರ್ಮಕೋಲ್ ಮತ್ತು ಥರ್ಮಫೋಮ್ ನಿಂದ ಶಿಲ್ಪಗಳು, ಚಾಕ್ ಪೀಸ್ ನಲ್ಲಿ ಕೆತ್ತನೆ, ಬಳಪದಲ್ಲಿ ಗಣಪ, ಬಾಟಲಿಯ ಒಳಗೆ ಆವೆ ಮಣ್ಣಿನಲ್ಲಿ ಗಣೇಶ, ಅಶ್ವತ್ಥ ಎಲೆಯಲ್ಲಿ ಭಾವಚಿತ್ರಗಳು, ಪೇಪರ್ ಕಟ್ಟಿಂಗ್ ಆರ್ಟ್, ಕಸದಿಂದ ರಸ, ಕಲಾತ್ಮಕ ವೇದಿಕೆ, ವಿನ್ಯಾಸ ಮತ್ತು ಟ್ಯಾಬ್ಲೋ ಇವರ ಪ್ರಮುಖ ಕಲಾಕೃತಿಗಳು. ‘ಕಲಾ ರತ್ನ ಪ್ರಶಸ್ತಿ’, ‘ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’, ‘ವಿಶ್ವ ಕಲಾರತ್ನ ಶ್ರೀ ಲೋಕೇಶ್ ಪ್ರಶಸ್ತಿ’ ಇವರಿಗೆ ಸಂದ ಪ್ರಮುಖ ಪ್ರಶಸ್ತಿಗಳು. ಹಲವು ಶಿಬಿರಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಕ್ಕಳಿಗೆ ತರಬೇತಿ ನೀಡಿರುತ್ತಾರೆ.