ಉಡುಪಿ : ಕನ್ನಡ ನಾಡಿನ ಪ್ರತಿಷ್ಠಿತ ರಂಗಭೂಮಿ ಸಂಸ್ಥೆಗಳಲ್ಲಿ ಒಂದಾಗಿರುವ ರಂಗಭೂಮಿ ಉಡುಪಿ ಸದಾ ಹೊಸತನ್ನು, ಪ್ರಥಮವನ್ನು ನಾಡಿಗೆ ನೀಡಿ ಪ್ರಸಿದ್ಧಿ ಪಡೆದಿದೆ. ಪ್ರಸ್ತುತ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವ ಈ ಸಂಸ್ಥೆ ಇದೀಗ ಪ್ರೌಢಶಾಲೆ ಹಾಗೂ ಕಾಲೇಜು ಮಕ್ಕಳಿಗೆ ರಂಗಶಿಕ್ಷಣವನ್ನು ನೀಡುವ ಮೂಲಕ ರಾಜ್ಯದ ರಂಗಭೂಮಿಯಲ್ಲಿ ಮಹಾನ್ ಕ್ರಾಂತಿಯನ್ನೇ ನಿರ್ಮಿಸಲು ಹೊರಟಿದೆ. ದೂರದೃಷ್ಟಿಯಿಂದ ಈ ಮಹಾತ್ವಾಕಾಂಕ್ಷಿ ಯೋಜನೆ ಇದೀಗ ಉಡುಪಿಯ ಆಯ್ದ 12 ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಯೋಗಿಕವಾಗಿ ಪ್ರಾರಂಭವಾಗಿ ಅಭೂತಪೂರ್ವ ಯಶಸ್ಸನ್ನು ಕಂಡಿದೆ. 300ಕ್ಕೂ ಅಧಿಕ ವಿದ್ಯಾರ್ಥಿಗಳು ರಂಗಶಿಕ್ಷಣ ಪಡೆದು, ಇದೀಗ ಎರಡು ಹಂತದಲ್ಲಿ ನಾಟಕಗಳನ್ನು ಆಡಿ ತೋರಿಸುವ ಮೂಲಕ ತಾವು ಕಲಿತ ರಂಗ ಶಿಕ್ಷಣವನ್ನು ಎಂ.ಜಿ.ಎಂ. ಕಾಲೇಜಿನ ನೂತನ ರಂಗಮಂದಿರದಲ್ಲಿ ಯಶಸ್ವಿಯಾಗಿ ಪ್ರಸ್ತುತಿ ಪಡಿಸಿ, ಸಂಸ್ಥೆ ಹೆಮ್ಮೆಯಿಂದ ಬೀಗುವಂತೆ ಮಾಡಿದ್ದಾರೆ.
ಯಾಕೆ ಈ ರಂಗ ಶಿಕ್ಷಣ ? : ನಾನು ಯಕ್ಷಗಾನ ಕಲಾರಂಗದ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಯಕ್ಷಗಾನಕ್ಕೆ ಭವಿಷ್ಯದಲ್ಲಿ ಪ್ರೇಕ್ಷಕರ ಕೊರತೆಯನ್ನು ನೀಗಿಸಲು ಹಾಗೂ ಉತ್ತಮ ಕಲಾವಿದರು ಬೆಳೆದು ಬರುವಂತಾಗಬೇಕು ಎಂಬ ಉದ್ದೇಶದಿಂದ ಉಡುಪಿ ಜಿಲ್ಲೆಯ ಪ್ರೌಢಶಾಲೆಗಳಲ್ಲಿ ಯಕ್ಷ ಶಿಕ್ಷಣವನ್ನು ಪ್ರಾರಂಭಿಸಲಾಯಿತು. ಈ ಅಭಿಯಾನ ಪ್ರಸ್ತುತ ಉಡುಪಿ ಜಿಲ್ಲೆಯಾದ್ಯಂತ ಪಸರಿಸಿ, 90ಕ್ಕೂ ಅಧಿಕ ಪ್ರೌಢಶಾಲೆಗಳಲ್ಲಿ 3,000ಕ್ಕೂ ಆಧಿಕ ವಿದ್ಯಾರ್ಥಿಗಳು ಗಂಡು-ಹೆಣ್ಣು ಎಂಬ ಬೇಧವಿಲ್ಲದೆ ಯಕ್ಷಗಾನ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಇದೇ ಮಾದರಿಯಲ್ಲಿ ರಂಗಭೂಮಿ ಉಡುಪಿ ಮೂಲಕ ಪ್ರೌಢಶಾಲೆಯಲ್ಲಿ ರಂಗ ಶಿಕ್ಷಣವನ್ನು ಪ್ರಾರಂಭಿಸಬೇಕು. ಈ ಮೂಲಕ ಬಹುತೇಕ ಶಾಲೆಗಳಲ್ಲಿ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಿಂತೇ ಹೋಗಿರುವ ನಾಟಕಗಳನ್ನು ಪುನರುಜ್ಜೀವಗೊಳಿಸಬೇಕು ಎಂಬ ಉದ್ದೇಶವಿಟ್ಟುಕೊಂಡು ಪ್ರಾರಂಭಿಸಲಾಗಿದೆ.
ಎಷ್ಟು ಶಾಲೆಗಳಲ್ಲಿ ಪ್ರಾರಂಭ ? : ರಂಗ ಶಿಕ್ಷಣವನ್ನು ಪ್ರಾರಂಭಿಸುವಾಗ ನಮ್ಮ ಮುಂದೆ ಈ ಅಭಿಯಾನವನ್ನು ಹೇಗೆ ಅನುಷ್ಠಾನಗೊಳಿಸುವುದು ಎಂಬ ದೊಡ್ಡ ಸವಾಲು ಎದುರಾಗಿತ್ತು. ಹಣಕಾಸಿನ ಸಮಸ್ಯೆಗಿಂತಲೂ ಮಕ್ಕಳಿಗೆ ರಂಗಶಿಕ್ಷಣ ನೀಡುವ ‘ಗುರು’ಗಳನ್ನು ಹುಡುಕುವುದು ದೊಡ್ಡ ಸವಾಲಾಗಿತ್ತು. ಹೀಗಾಗಿ ಅಭಿಯಾನದ ಆರಂಭದಲ್ಲಿ ತುಂಬಾ ಆಸಕ್ತಿಯಿಂದ ಮುಂದೆ ಬಂದ 12 ಶಿಕ್ಷಣ ಸಂಸ್ಥೆಗಳಲ್ಲಿ ಈ ರಂಗ ಶಿಕ್ಷಣವನ್ನು ಪ್ರಾಯೋಗಿಕವಾಗಿ ಪ್ರಾರಂಭಿಸಲಾಯಿತು. ಈ ಅಭಿಯಾನ ನಮ್ಮೆಲ್ಲರ ನಿರೀಕ್ಷೆಗೂ ಮೀರಿ ಯಶಸ್ಸನ್ನು ಕಂಡಿದೆ. ಬಣ್ಣ ಹಚ್ಚಿ ಮಕ್ಕಳು ವೇದಿಕೆಯನ್ನು ಹತ್ತುವಾಗ, ಅಭಿನಯಿಸುವಾಗ, ಅವರಲ್ಲಿರುವ ಆತ್ಮವಿಶ್ವಾಸ, ಪ್ರತಿಭೆಯನ್ನು ಕಂಡು ದಂಗಾಗಿದ್ದೇನೆ. ಈ ಯೋಜನೆ ಸಾಕಷ್ಟು ಮೊದಲೇ ಪ್ರಾರಂಭವಾಗಿದ್ದರೆ ಒಳ್ಳೆದಿತ್ತು ಎಂಬ ಯೋಚನೆ ನಮ್ಮೆಲ್ಲಾ ಪದಾಧಿಕಾರಿಗಳಲ್ಲಿ ಹಾದುಹೋಗಿದೆ ಎಂಬುದು ದಿಟ.
ಅನುಷ್ಠಾನ ಮಾಡಿದ ಬಗೆ ಹೇಗೆ ? : ಪ್ರೌಢಶಾಲಾ ಮಕ್ಕಳಿಗೆ ‘ರಂಗ ಶಿಕ್ಷಣ’ ಹಾಗೂ ಕಾಲೇಜು ಮಕ್ಕಳಿಗೆ ‘ರಂಗ ಭಾಷೆ’ ಎಂಬ ಎರಡು ಹಂತದಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಯಿತು. ಈ ಕಾರ್ಯಕ್ಕಾಗಿ ಸಂಚಾಲಕರಾಗಿ ಶಿಕ್ಷಣ ತಜ್ಞ ವಿದ್ಯಾವಂತ ಆಚಾರ್ಯ, ಸಹ ಸಂಚಾಲಕರಾಗಿ ರವಿರಾಜ್ ನಾಯಕ್ ಸೇರಿದಂತೆ ವಿವಿಧ ಜವಾಬ್ದಾರಿಗಳನ್ನು ಹಂಚಲಾಯಿತು. ರಂಗಭೂಮಿ ರಸಗ್ರಹಣ ಶಿಬಿರ ನವೆಂಬರ್ 16ರಿಂದ 18ರವರೆಗೆ ಕಲ್ಯಾಣಪುರದ ಮಿಲಾಗ್ರಿಸ್ ಕಾಲೇಜಿನಲ್ಲಿ ನಡೆದು ಮೂರು ದಿನಗಳ ಈ ವಸತಿ ಸಹಿತ ಶಿಬಿರದಲ್ಲಿ ಉಡುಪಿ ಪರಿಸರದ ವಿವಿಧ ಕಾಲೇಜುಗಳ ಸುಮಾರು 100 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕಾರ್ಕಳದ ಯಕ್ಷ ರಂಗಾಯಣ ಸಂಸ್ಥೆ ಕೈ ಜೋಡಿಸಿತ್ತು. ಸಂಸ್ಥೆಯ ನಿರ್ದೇಶಕ ವೆಂಕಟರಮಣ ಐತಾಳ್, ಹೆಸರಾಂತ ರಂಗಕರ್ಮಿಗಳಾದ ಪ್ರಸನ್ನ, ಅಕ್ಷರ, ನಾಗಾಭರಣ, ಮಂಡ್ಯ ರಮೇಶ್ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಶ್ರಮಿಸಿದರು. ಹಾಗೆಯೇ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ರಂಗ ಶಿಕ್ಷಣ ನೀಡಲು ನೀನಾಸಂ, ರಂಗಾಯಣ, ರಂಗ ಸಮುದಾಯ ಸೇರಿದಂತೆ ಪ್ರತಿಷ್ಠಿತ ರಂಗಸಂಸ್ಥೆಗಳ 10 ಮಂದಿ ರಂಗ ನಿರ್ದೇಶಕರನ್ನು ಬಳಸಿಕೊಳ್ಳಲಾಯಿತು. ನವಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಈ ಗುರುಗಳಿಂದ 30 ತರಗತಿಗಳು ಸುಮಾರು 50ರಿಂದ 60 ಗಂಟೆಗಳಷ್ಟು ಕಾಲ ನಡೆದಿವೆ. 300ಕ್ಕೂ ಅಧಿಕ ವಿದ್ಯಾರ್ಥಿಗಳು ಈ ಮೂಲಕ ರಂಗ ಶಿಕ್ಷಣ ಪಡೆದಿದ್ದಾರೆ.
ಮಕ್ಕಳ ನಾಟಕೋತ್ಸವ ಅದ್ಭುತ : ಎರಡು ಹಂತದಲ್ಲಿ ರಂಗಶಿಕ್ಷಣ ಪಡೆದ ಮಕ್ಕಳ ನಾಟಕಗಳನ್ನು ಪ್ರದರ್ಶಿಸಲು ಅವಕಾಶ ಕಲ್ಪಿಸಲಾಯಿತು. ಡಿಸೆಂಬರ್ 21ರಂದು ಉದ್ಘಾಟನೆಗೊಂಡ ಮಕ್ಕಳ ನಾಟಕೋತ್ಸವದ ಪ್ರಥಮ ಹಂತದಲ್ಲಿ 5 ಪ್ರೌಢಶಾಲೆಗಳ ಮಕ್ಕಳಿಂದ 5 ನಾಟಕಗಳು ಪ್ರದರ್ಶನಗೊಂಡವು. ಈ ನಾಟಕೋತ್ಸವವನ್ನು ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ಉದ್ಘಾಟಿಸಿದ್ದರು. ಜನವರಿ 2ರಂದು ಇನ್ನುಳಿದ 7 ಶಾಲೆಗಳ ಮಕ್ಕಳಿಂದ 7 ನಾಟಕಗಳು ಪ್ರಸ್ತುತಿಗೊಂಡವು. ಸಮಾರೋಪದಲ್ಲಿ ಖ್ಯಾತ ರಂಗಕರ್ಮಿ ಡಾ. ಜೀವನ್‌ರಾಂ ಸುಳ್ಯ ಇವರು ಸಮಾರೋಪ ಭಾಷಣ ಮಾಡಿ ರಂಗಶಿಕ್ಷಣದ ಪ್ರಸ್ತುತತೆಯ ಬಗ್ಗೆ ಮನದಟ್ಟು ಮಾಡಿದರು.
ಈ ಅಭಿಯಾನದಡಿ ಮುಂದಿನ ವರ್ಷಗಳಲ್ಲಿ ಇನ್ನಷ್ಟು ಶಾಲೆಗಳಿಗೆ ರಂಗಶಿಕ್ಷಣವನ್ನು ವಿಸ್ತರಿಸಲು ರಂಗಭೂಮಿ ಉಡುಪಿ ಚಿಂತನೆ ನಡೆಸಿದೆ. ನಮ್ಮೆಲ್ಲರ ಯೋಜನೆಗಳು ಯಶಸ್ವಿಯಾದರೆ, ಸಮಾಜ ಹಾಗೂ ಶಿಕ್ಷಣ ಸಂಸ್ಥೆಗಳು ಕೈ ಜೋಡಿಸಿದರೆ ಯಕ್ಷ ಶಿಕ್ಷಣದಂತೆ ಈ ಯೋಜನೆ ಕೂಡಾ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ. ಮುಂದಿನ ದಿನಗಳಲ್ಲಿ ಪ್ರತೀ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವದಂದು ಮಕ್ಕಳ ನಾಟಕಗಳು ಪ್ರದರ್ಶನಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದೇ ನನ್ನ ಅಂಬೋಣ. ಶುಭವಾಗಲಿ.
ಲೇಖನ : ಡಾ. ತಲ್ಲೂರು ಶಿವರಾಮ ಶೆಟ್ಟಿ, ಅಧ್ಯಕ್ಷರು, ರಂಗಭೂಮಿ ಉಡುಪಿ