ಮಂಗಳೂರು : ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವು ಮೌಲ್ಯಾಧಾರಿತ ಸಮಾಜವನ್ನು ಪೋಷಿಸುವ ದೃಢವಾದ ಬದ್ಧತೆಯಿಂದ ಹುಟ್ಟಿಕೊಂಡ ಸಂಸ್ಥೆ. 1989ರಲ್ಲಿ ಸ್ಥಾಪಿಸಲಾದ ಈ ಸಂಸ್ಥೆಯು 1991ರಲ್ಲಿ ದತ್ತಿಸಂಸ್ಥೆಯಾಗಿ ನೋಂದಾಯಿತವಾಗಿದೆ. ಕಲೆ, ಸಂಸ್ಕೃತಿ, ಶಿಕ್ಷಣ ಮತ್ತು ಜಾನಪದಕ್ಕೆ ಸಕ್ರಿಯ ಬೆಂಬಲ ನೀಡುವ ಹಾಗೂ ರಾಜ್ಯದ ಜನರಲ್ಲಿ ಸಾಮರಸ್ಯ ಮತ್ತು ಸರ್ವಾಂಗೀಣ ಗುಣಮಟ್ಟವನ್ನು ಉತ್ತೇಜಿಸುವ ಸೇವೆಗೆ ಬದ್ಧವಾಗಿದೆ. ಇದೀಗ ಬಹುನಿರೀಕ್ಷಿತ 2025ರ ‘ಸಂದೇಶ ಪ್ರಶಸ್ತಿ’ಗಳನ್ನು ಕೊಡಮಾಡುವ ಕೈಂಕರ್ಯದಲ್ಲಿ ತೊಡಗಿದೆ.
ಸಂಗೀತ, ನೃತ್ಯ, ಕಲೆ, ಚಿತ್ರಕಲೆ, ಪತ್ರಿಕೋದ್ಯಮ, ಮಾಧ್ಯಮ ಶಿಕ್ಷಣ, ಸಾರ್ವಜನಿಕ ಭಾಷಣ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ತರಬೇತಿ ನೀಡುವ ಕಾರ್ಯಕ್ರಮಗಳ ಮೂಲಕ ಪ್ರತಿಷ್ಠಾನವು ಜೀವನವನ್ನು ರೂಪಿಸುವ ಕಾಯಕವನ್ನು ನಡೆಸುತ್ತ ಬಂದಿದೆ. ಹೆಚ್ಚುವರಿಯಾಗಿ, ನಾಟಕ, ಕವನ, ಮಾಧ್ಯಮ ಮತ್ತು ಜೀವನದ ವಿವಿಧ ಹಂತದ ವಿಷಯಗಳ ಕುರಿತು ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಕ್ರಿಯಾತ್ಮಕ ವೇದಿಕೆಗಳನ್ನು ರಚಿಸಿದೆ. ಇತ್ತೀಚೆಗೆ, ಸಂದೇಶವು ಕರ್ನಾಟಕ ಗಂಗೂಭಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲಾ ವಿಶ್ವವಿದ್ಯಾಲಯದೊಂದಿಗೆ ಮಾನ್ಯತಾ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ತನ್ನ ಶೈಕ್ಷಣಿಕ ಕೊಡುಗೆಗಳನ್ನು ಮತ್ತಷ್ಟು ಹೆಚ್ಚಿಸುವ ಡಿಪ್ಲೊಮಾ ಕಾರ್ಯಕ್ರಮಗಳಿಗೆ ಅನುವು ಮಾಡಿಕೊಟ್ಟಿದೆ. ದಿನಾಂಕ 22 ಡಿಸೆಂಬರ್ 2024ರಂದು ಮಂಡ್ಯದಲ್ಲಿ ನಡೆದ 87ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ, ಕಲೆ, ಸಂಸ್ಕೃತಿಗಳಿಗೆ ನೀಡಿದ ಕೊಡುಗೆಗಳಿಗಾಗಿ ಸಂದೇಶವನ್ನು ಗುರುತಿಸಿ, ಗೌರವಿಸಿದೆ.
ಸಂದೇಶ ಪ್ರಶಸ್ತಿಗಳ ಬಗ್ಗೆ :
ಸಂದೇಶ ಪ್ರಶಸ್ತಿಗಳು ಪ್ರತಿಷ್ಠಾನದ ಪ್ರಮುಖ ಉಪಕ್ರಮವಾಗಿದ್ದು ಸಾಹಿತ್ಯ, ಪತ್ರಿಕೋದ್ಯಮ, ಕಲೆ, ಶಿಕ್ಷಣ, ಸಂಗೀತ, ಮಾಧ್ಯಮ, ಸಮಾಜ ಸೇವೆ ಮುಂತಾದ ವಲಯಗಳಲ್ಲಿ ಅಸಾಧಾರಣ ಕೊಡುಗೆ ನೀಡಿದವರನ್ನು ಆಯ್ದು ಗೌರವಿಸುತ್ತಿದೆ. ಈ ಪ್ರತಿಷ್ಠಿತ ವಾರ್ಷಿಕ ಕಾರ್ಯಕ್ರಮವು ಅತ್ಯುತ್ತಮ ಸಾಧಕರನ್ನು ಗೌರವಿಸುವುದು ಮಾತ್ರವಲ್ಲದೆ ಮೌಲ್ಯಾಧಾರಿತ ಕೊಡುಗೆಗಳ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತದೆ.
ಸಂದೇಶ ಪ್ರಶಸ್ತಿಗಳು 2025:
ಸಂದೇಶ ಪ್ರಶಸ್ತಿ 2025ರ ಪ್ರದಾನ ಸಮಾರಂಭವು ದಿನಾಂಕ 10 ಫೆಬ್ರವರಿ 10, 2025 ಸೋಮವಾರದಂದು ಸಂಜೆ 5-30ಕ್ಕೆ ಮಂಗಳೂರಿನ ಸಂದೇಶ ಸಂಸ್ಥೆಯ ಆವರಣದಲ್ಲಿ ನಡೆಯಲಿದ್ದು, ಸಮಾರಂಭದ ಅಧ್ಯಕ್ಷತೆಯನ್ನು ಬಳ್ಳಾರಿಯ ಬಿಷಪ್ ಮತ್ತು ಸಂಸ್ಥೆಯ ಅಧ್ಯಕ್ಷರಾದ ಅತಿ ವಂದನೀಯ ಡಾ. ಹೆನ್ರಿ ಡಿ’ಸೋಜಾರವರು ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಶ್ರೀ ದಿನೇಶ್ ಗುಂಡೂರಾವ್, ಶಿವಮೊಗ್ಗ ಬಿಷಪ್ ಅತಿ ವಂದನೀಯ ಡಾ. ಫ್ರಾನ್ಸಿಸ್ ಸೆರಾವೋ, ಬೆಳ್ತಂಗಡಿ ಬಿಷಪ್ ಅತಿ ವಂದನೀಯ ಡಾ. ಲಾರೆನ್ಸ್ ಮುಕ್ಕುಯಿ, ಸಂದೇಶದ ನಿರ್ದೇಶಕರಾದ ರೆ.ಡಾ. ಸುದೀಪ್ ಪಾಲ್, ಸಂಸ್ಥೆಯ ಟ್ರಸ್ಟಿಗಳಾದ ಶ್ರೀ ರಾಯ್ ಕ್ಯಾಸ್ಟಲಿನೊ ಮತ್ತು ರೆ. ಫಾ. ಐವನ್ ಪಿಂಟೋ, ಸಂದೇಶ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾದ ಡಾ. ನಾ. ದಾಮೋದರ ಶೆಟ್ಟಿ, ಭಾಗವಹಿಸಲಿದ್ದಾರೆ.
ಸಂದೇಶ ಪ್ರಶಸ್ತಿ ಪುರಸ್ಕೃತರು 2025
ಈ ವರ್ಷದ ಪ್ರಶಸ್ತಿ ಪುರಸ್ಕೃತರನ್ನು ವಿವಿಧ ಕ್ಷೇತ್ರಗಳಲ್ಲಿ ಅವರು ನೀಡಿದ ಗುಣಮಟ್ಟದ ಕೊಡುಗೆಗಳಿಗಾಗಿ ಆಯ್ಕೆ ಮಾಡಲಾಗಿದೆ:
* ಸಂದೇಶ ಸಾಹಿತ್ಯ ಪ್ರಶಸ್ತಿ (ಕನ್ನಡ) : ಶ್ರೀ ಬಿ.ಆರ್. ಲಕ್ಷ್ಮಣ್ ರಾವ್
* ಸಂದೇಶ ಸಾಹಿತ್ಯ ಪ್ರಶಸ್ತಿ (ಕೊಂಕಣಿ) : ಶ್ರೀಮತಿ ಐರಿನ್ ಪಿಂಟೊ
* ಸಂದೇಶ ಸಾಹಿತ್ಯ ಪ್ರಶಸ್ತಿ (ತುಳು) : ಡಾ. ಗಣೇಶ್ ಅಮೀನ್ ಸಂಕಮಾರ್
* ಸಂದೇಶ ಮಾಧ್ಯಮ ಪ್ರಶಸ್ತಿ : ಶ್ರೀ ಡಿ.ವಿ. ರಾಜಶೇಖರ್
* ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ : ಶ್ರೀ ರೋಷನ್ ಡಿ’ಸೋಜಾ
* ಸಂದೇಶ ಕಲಾ ಪ್ರಶಸ್ತಿ : ಶ್ರೀ ಗಿರೀಶ್ ಕಾಸರವಳ್ಳಿ
* ಸಂದೇಶ ಶಿಕ್ಷಣ ಪ್ರಶಸ್ತಿ : ಡಾ. ಯೆನೆಪೊಯ ಅಬ್ದುಲ್ಲ ಕುಂಞಿ
* ಸಂದೇಶ ವಿಶೇಷ ಪ್ರಶಸ್ತಿ : ಡಾ. ಕೆ.ವಿ. ರಾವ್
ಸಂದೇಶ ವಿಶೇಷ ಗೌರವ ಪ್ರಶಸ್ತಿಗಳು 2025
* ಸಂದೇಶ ಗೌರವ ಪ್ರಶಸ್ತಿ : ಶ್ರೀ ಮೈಕಲ್ ಡಿಸೋಜಾ
* ಸಂದೇಶ ಪ್ರತಿಭಾ ಪ್ರಶಸ್ತಿ : ರೆಮೋನ ಇವೆಟ್ ಪಿರೇರಾ
ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ : ಶ್ರೀ ಬಿ.ಆರ್. ಲಕ್ಷ್ಮಣ್ ರಾವ್
ಪ್ರೇಮಕವಿಯೆಂದೇ ಪ್ರಸಿದ್ಧರಾದ ಬಿ.ಆರ್. ಲಕ್ಷ್ಮಣರಾವ್ 09 ಸೆಪ್ಟೆಂಬರ್ 1946ರಲ್ಲಿ ಬಿ.ಆರ್. ರಾಜಾರಾವ್ ಮತ್ತು ಶ್ರೀಮತಿ ವೆಂಕಟಲಕ್ಷ್ಮಮ್ಮ ಇವರ ಪುತ್ರನಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಚೀಮಂಗಲ ಗ್ರಾಮದಲ್ಲಿ ಜನಿಸಿದರು. ಬಿ.ಎ., ಎಂ.ಎಡ್. ಪದವೀಧರರಾದ ಇವರು ಕೋಲಾರದ ಚಿಂತಾಮಣಿ ನಗರದಲ್ಲಿ ತಮ್ಮದೇ ಸ್ವಂತ ಟ್ಯುಟೋರಿಯಲ್ಸ್ ನಡೆಸುತ್ತಿದ್ದು, ಈಗ ವಿಶ್ರಾಂತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ‘ಗೋಪಿ ಮತ್ತು ಗಾಂಡಲೀನ’ (1971) ಇವರ ಮೊದಲ ಪ್ರಸಿದ್ಧ ಕವನ ಸಂಕಲನ. ಅಲ್ಲಿಂದ ಮೊದಲುಗೊಂಡು ‘ನವೋನ್ಮೇಷ’ ದವರೆಗೆ ಇವರ ಒಂಬತ್ತು ಕವನ ಸಂಕಲನಗಳು ಪ್ರಕಟವಾಗಿವೆ. ಜೊತೆಗೆ ಹನಿಗವನ ಮತ್ತು ಭಾವಗೀತೆಗಳ ಪ್ರತ್ಯೇಕ ಸಂಕಲನಗಳನ್ನೂ ಇವರು ಹೊರತಂದಿದ್ದಾರೆ. ಸಣ್ಣಕಥೆ, ಕಾದಂಬರಿ, ನಾಟಕ, ವಿಮರ್ಶೆ, ಅನುವಾದ, ವ್ಯಕ್ತಿಚಿತ್ರ, ಲಲಿತ ಪ್ರಬಂಧ – ಹೀಗೆ ಸಾಹಿತ್ಯದ ಬಹುತೇಕ ಎಲ್ಲ ಪ್ರಕಾರಗಳಲ್ಲೂ ಇವರು ಕೃತಿ ರಚನೆ ಮಾಡಿದ್ದಾರೆ. ಇಂಗ್ಲೆಂಡ್, ಅಮೇರಿಕಾ, ಸಿಂಗಾಪುರ, ಮಧ್ಯಪ್ರಾಚ್ಯ ದೇಶಗಳ ಕನ್ನಡ ಸಂಘಗಳಿಂದ ಆಹ್ವಾನಿತರಾಗಿ ಹೋಗಿ ಅಲ್ಲೆಲ್ಲ ಕನ್ನಡದ ಕಂಪನ್ನು ಹರಡಿ, ಎಲ್ಲೆಡೆ ಸನ್ಮಾನಗೊಂಡಿದ್ದಾರೆ. ಇವರ ಕವಿತೆಗಳು ಶಾಲೆ ಕಾಲೇಜುಗಳ ಪಠ್ಯಪುಸ್ತಕದಲ್ಲೂ ಸೇರ್ಪಡೆಗೊಂಡಿವೆ. ಹಲವಾರು ಕವನಗಳು ಇಂಗ್ಲೀಷ್ ಹಾಗೂ ಇತರ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ಇವರ ಜನಪ್ರಿಯ ಭಾವಗೀತೆಗಳು : 1) ‘ಅಮ್ಮ, ನಿನ್ನ ಎದೆಯಾಳದಲ್ಲಿ’, 2) ‘ನಿಂಬೆಗಿಡ’, 3) ‘ಜಾಲಿಬಾರಿನಲ್ಲಿ’ 4) ‘ಹೇಳಿಹೋಗು ಕಾರಣ’. ಜನಪ್ರಿಯ ಚಿತ್ರಗೀತೆಗಳು : 1) ‘ಬಾ ಮಳೆಯೇ ಬಾ’ 2) ‘ಬಾರೇ ರಾಜಕುಮಾರಿ’, 3) ‘ದೇವರೇ, ಅಗಾಧ ನಿನ್ನ ಕರುಣೆಯ ಕಡಲು’. ಇವರಿಗೆ ಸಂದ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಕೆಲವು : ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ’, ‘ಡಾ. ಪುತಿನ ಕಾವ್ಯ ಪುರಸ್ಕಾರ’, ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’, ‘ಮಾಸ್ತಿ ಪ್ರಶಸ್ತಿ’, ‘ಚಿತ್ರಗೀತೆಯ ಸಾಹಿತ್ಯಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿ’ ಇತ್ಯಾದಿ. ಸಂದೇಶ ಕಲೆ, ಸಂಸ್ಕೃತಿ ಹಾಗೂ ಶಿಕ್ಷಣ ಪ್ರತಿಷ್ಠಾನವು 2025ರ ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿಯನ್ನು ಶ್ರೀಯುತ ಬಿ.ಆರ್. ಲಕ್ಷ್ಮಣರಾವ್ ಇವರಿಗೆ ನೀಡಿ ಗೌರವಿಸುವುದಕ್ಕೆ ಅತೀವ ಸಂತಸ ಪಡುತ್ತಿದೆ.
ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿ : ಶ್ರೀಮತಿ ಐರಿನ್ ಪಿಂಟೊ
ಪ್ರಸಿದ್ಧ ಹಿರಿಯ ಕೊಂಕಣಿ ಕಾದಂಬರಿಕಾರ್ತಿ ಶ್ರೀಮತಿ ಐರಿನ್ ಪಿಂಟೊ ಅವರು ಮಂಗಳೂರಿನ ಬಿಜೈಯಲ್ಲಿ ನೆಲೆಗೊಂಡವರು. ಎಳವೆಯಿಂದಲೇ ಕೊಂಕಣಿ ಬರವಣಿಗೆಯಲ್ಲಿ ತೊಡಗಿಕೊಂಡ ಇವರು ‘ಶರತ್’ ಎಂಬ ಕಾವ್ಯನಾಮವಿಟ್ಟುಕೊಂಡು ಸಾಹಿತ್ಯ ರಚನೆ ಮಾಡುತ್ತಿದ್ದರು. ಕಾದಂಬರಿ ಅವರ ಪ್ರಮುಖ ಕ್ಷೇತ್ರ. ಅವರ ಮೊದಲ ಕಾದಂಬರಿ ಬಲಿದಾನ್ 1963ರಲ್ಲಿ ಝೆಲೊ ಕೊಂಕಣಿ ಮಾಸಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಬಳಿಕ ಪುಸ್ತಕ ರೂಪದಲ್ಲಿ ಪ್ರಕಾಶನಗೊಂಡಿತು. ಮುಂದೆ ಅವರು ನಿರಂತರವಾಗಿ ಕಾದಂಬರಿಗಳನ್ನು ಬರೆದರು. ‘ಬಲಿದಾನ್’, ‘ಸ್ತ್ರೀ’, ‘ಮೊಜೆ ಅಂತಸ್ಕರ್ಣ ವಿಸೊರ್ಚೆನಂ’, ‘ಪಲ್ಲೆಲಿ ಭಾಸ್’, ‘ಹಾಂವ ಚುಕೋನ್ ಪೊಡೊಂಕ್ ನಾ’, ‘ತುವೆನ್ ನೆಗರ್ ಕೆಲೆನ್’, ‘ಮೊಗ್ ಅನಿ ಭರವಾಸೋ’, ‘ಆಶಾ ಆನಿ ನಿರಾಶಾ’ ಇವಿಷ್ಟು ಇವರು ರಚಿಸಿದ ಕಾದಂಬರಿಗಳಾದರೆ ಸುಮಾರು ಇಪ್ಪತ್ತೈದರಷ್ಟು ಕೊಂಕಣಿ ಸಣ್ಣ ಕತೆಗಳನ್ನೂ ರಚಿಸಿ ಪ್ರಕಟಿಸಿದ್ದಾರೆ. ಐರಿನ್ ಪಿಂಟೊರ ಸಾಹಿತ್ಯ ಸೇವೆಗೆ ಹಲವು ಪುರಸ್ಕಾರಗಳೂ ಲಭಿಸಿವೆ. ಇವರು ರಚಿಸಿದ ‘ಸ್ತ್ರೀ’ ಕಾದಂಬರಿಗೆ 1964ರಲ್ಲಿ ‘ಮಿತ್ರ ಪ್ರಶಸ್ತಿ’, ‘ಮೊಗ್ ಅನಿ ಭರವಾಸೋ’ ಕಾದಂಬರಿಗೆ 1974ರಲ್ಲಿ ಕೊಂಕಣಿ ಭಾಷಾ ಮಂಡಲ್ – ಗೋವಾದಿಂದ ಪುರಸ್ಕಾರ, 2003ರಲ್ಲಿ ‘ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, 2010ರಲ್ಲಿ ಮಂಗಳೂರು ಕೊಂಕಣಿ ಅಧ್ಯಯನ ಸಂಸ್ಥೆಯಿಂದ ‘ಲೂಯಿಸ್ ಐ ಮಸ್ಕರೇನ್ಹಸ್ ಕೊಂಕಣಿ ನಳಂದಾ ಸಾಹಿತ್ಯ ಪುರಸ್ಕಾರ’ ಮುಂತಾದ ಪ್ರಶಸ್ತಿಗಳು ಲಭಿಸಿವೆ. ಶ್ರೀಮತಿ ಐರಿನ್ ಪಿಂಟೊ ಅವರು ಕೊಂಕಣಿ ಸಾಹಿತ್ಯ ಪ್ರಕಾರಕ್ಕೆ ಸಲ್ಲಿಸಿದ ಸೇವೆಯನ್ನು ಮನಗಂಡು ಸಂದೇಶ ಕಲೆ ಸಂಸ್ಕೃತಿ ಹಾಗೂ ಶಿಕ್ಷಣ ಪ್ರತಿಷ್ಠಾನವು 2025ರ ಕೊಂಕಣಿ ಸಾಹಿತ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲು ಹೆಮ್ಮೆ ಪಡುತ್ತಿದೆ.
ಸಂದೇಶ ತುಳು ಸಾಹಿತ್ಯ ಪ್ರಶಸ್ತಿ : ಡಾ. ಗಣೇಶ್ ಅಮೀನ್ ಸಂಕಮಾರ್
ತುಳು ಸಾಹಿತಿ, ಜಾನಪದ ವಿದ್ವಾಂಸ ಡಾ. ಗಣೇಶ್ ಅಮೀನ್ ಸಂಕಮಾರ್ ಅವರು 1960ರಲ್ಲಿ ದ.ಕ. ಜಿಲ್ಲೆಯ ಸಂಕಮಾರ್ ಎಂಬಲ್ಲಿ ಜನಿಸಿದರು. ʻಜಾನಪದ ಶಬ್ದಶಕ್ತಿʼ ಎಂಬ ವಿಷಯದಲ್ಲಿ ಪಿ.ಹೆಚ್.ಡಿ. ಪದವಿ ಪಡೆದಿದ ಇವರು 2 ವರ್ಷ ಸುಂಕದಕಟ್ಟೆಯ ಎಸ್.ಎನ್.ಎಸ್. ಕಾಲೇಜಿನಲ್ಲಿ, 13 ವರ್ಷ ಪ್ರಾಂಶುಪಾಲರಾಗಿ ಕಾಟಿಪಳ್ಳದ ನಾರಾಯಣಗುರು ಕಾಲೇಜಿನಲ್ಲಿ, 20 ವರ್ಷ ಸಂತ ಅಲೋಶಿಯಸ್ ಪಿ.ಯು ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ತುಳು ಜಾನಪದ ಕ್ಷೇತ್ರದಲ್ಲಿ ವಿಶೇಷ ಪರಿಣತಿ ಪಡೆದಿರುವ ಡಾ. ಸಂಕಮಾರ್ ಇವರು ತುಳು-ಕನ್ನಡ ಭಾಷೆಗಳಲ್ಲಿ ಸುಮಾರು ಹದಿನೆಂಟು ಕೃತಿಗಳನ್ನು ರಚಿಸಿದ್ದಾರೆ. ಸುಮಾರು ಐದು ಸಾವಿರದಷ್ಟು ಉಪನ್ಯಾಸಗಳನ್ನು ನೀಡಿದ್ದಾರೆ, ಪ್ರಬಂಧಗಳನ್ನು ಮಂಡಿಸಿದ್ದಾರೆ. ಹಲವಾರು ತುಳು ಕಮ್ಮಟಗಳನ್ನು ನಡೆಸಿಕೊಟ್ಟಿದ್ದಾರೆ. 1996ರಲ್ಲಿ ತಾವು ನೆಲೆಗೊಂಡ ಪಾವಂಜೆಯಲ್ಲಿ ‘ಅಗೋಳಿಮಂಜಣ ಜಾನಪದ ಕೇಂದ್ರ’ವನ್ನು ಸ್ಥಾಪನೆ ಮಾಡಿ ತುಳು ಜಾನಪದದ ಕಾಯಕವನ್ನು ಮಾಡುತ್ತ ಬಂದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿಯ ಸದಸ್ಯರಾಗಿ, ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಕೆಲಸ ನಿರ್ವಹಿಸಿದ್ದಾರೆ. ಮಂಗಳೂರು ಆಕಾಶವಾಣಿಯ ʻಗಾಂಪಣ್ಣನ ತಿರ್ಗಾಟʼ, ರೇಡಿಯೋ ಸಾರಂಗ್‌ನ ʻಗೇನದ ನಡೆʼ ಅವರ ಜನಪ್ರಿಯ ಕಾರ್ಯಕ್ರಮಗಳು. ಬೆಹರಿನ್, ದುಬಾಯಿ, ಮಸ್ಕತ್ ಮುಂತಾದ ಕಡೆ ತುಳು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ನಾರಾಯಣಗುರು ಪೀಠ, ರಾಣಿ ಅಬ್ಬಕ್ಕ ಅಧ್ಯಯನ ಪೀಠಗಳ ನಿರ್ದೇಶಕರಾಗಿಯೂ ಸೇವೆಗೈದಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಪ್ರತಿಷ್ಠಿತ ಸಾಧಕ ಪುರಸ್ಕಾರಕ್ಕೂ ಇವರು ಭಾಜನರಾಗಿದ್ದಾರೆ. ‘ದೋಲು’, ‘ಮಾಯದ ಕಾಯಿ’, ‘ಮಾಯ ಮತ್ತು ಜೋಗ’, ‘ಸಂತೆದುಲಾಯಿ ಒಂತೆ’, ‘ಗೇನದ ನಡೆ’, ‘ಗೇನದ ಬೊಲ್ಪು’ ಮುಂತಾದವು ಕೆಲವು ಪ್ರಮುಖ ಹೊತ್ತಿಗೆಗಳು. ಡಾ. ಗಣೇಶ್ ಅಮೀನ್ ಸಂಕಮಾರ್ ಇವರು ತುಳು ಸಾಹಿತ್ಯ ಹಾಗೂ ಸಂಸ್ಕೃತಿಯ ಏಳಿಗೆಗಾಗಿ ನಡೆಸಿದ ದುಡಿಮೆಯನ್ನು ಪರಿಗಣಿಸಿ ಸಂದೇಶ ಕಲೆ ಸಂಸ್ಕೃತಿ ಹಾಗೂ ಶಿಕ್ಷಣ ಪ್ರತಿಷ್ಠಾನವು 2025ರ ತುಳು ಸಾಹಿತ್ಯ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.
ಸಂದೇಶ ಮಾಧ್ಯಮ ಪ್ರಶಸ್ತಿ – ಶ್ರೀ ಡಿ.ವಿ. ರಾಜಶೇಖರ್
ಡಿ.ವಿ. ರಾಜಶೇಖರ ಇವರು ಬೆಂಗಳೂರು ನಗರ ಜಿಲ್ಲೆಯ ಮಂಚಪ್ಪನ ಹಳ್ಳಿಯಲ್ಲಿ 1951ರಲ್ಲಿ ಜನಿಸಿದರು. ತಂದೆ ಸಿ.ಎಚ್. ವೀರ ನಂಜಾಚಾರ್, ತಾಯಿ-ಕಾಳಮ್ಮ. ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ. (ಆನರ್ಸ್) ಹಾಗೂ ಎಂ.ಎ. ಪದವಿ ಪಡೆದ ಡಿ.ವಿ. ರಾಜಶೇಖರ್ ನಾಲ್ಕು ವರ್ಷಗಳ ಕಾಲ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಪ್ರತಿಷ್ಠಿತ ದಿನಪತ್ರಿಕೆಯಾದ ಪ್ರಜಾವಾಣಿಯಲ್ಲಿ ವಿವಿಧ ಸ್ತರಗಳಲ್ಲಿ ಸೇವೆಗೈದಿದ್ದಾರೆ. ಖ್ಯಾತ ಚಲನಚಿತ್ರ ನಿರ್ದೇಶಕ ಸತ್ಯಜಿತ್ ರೇ, ಮಹಾಭಾರತ ಖ್ಯಾತಿಯ ನಿರ್ದೇಶಕ ಪೀಟರ್ ಬ್ರೂಕ್, ಖ್ಯಾತ ಹಿಂದೂಸ್ತಾನಿ ಗಾಯಕಿ ಗಂಗೂಬಾಯಿ ಹಾನಗಲ್, ಚಂದ್ರಲೋಕ ಯಾನಗೈದ ಚಾರ್ಲ್ಸ್ ಕಾನ್ರಾಡ್ ಮೊದಲಾದವರ ಸಂದರ್ಶನಗಳನ್ನು ಮಾಡಿದವರು ಡಿ.ವಿ. ರಾಜಶೇಖರ್. ಈಗಲೂ ಇವರು ಮೈಸೂರಿನ ಆಂದೋಲನ ಪತ್ರಿಕೆಗೆ ‘ವಿದೇಶ ವಿಹಾರ’ ಎಂಬ ಅಂಕಣ ಬರೆಯುತ್ತಿದ್ದಾರೆ. ಭಾರತದ ಪತ್ರಕರ್ತರ ನಿಯೋಗದ ಸದಸ್ಯರಾಗಿ ಇಸ್ರೇಲ್, ಪ್ಯಾಲೆಸ್ತೀನ್‌ಗಳಿಗೆ ಭೇಟಿ ನೀಡಿದ ರಾಜಶೇಖರ್, ಲಕ್ಸಮ್ ಬರ್ಗ್ನಲ್ಲಿ ನಡೆದ ಯುರೋಪ್ ಒಕ್ಕೂಟದ ಶೃಂಗಸಭೆಯ ಪ್ರತ್ಯಕ್ಷ ವರದಿಗಾರರೂ ಆಗಿದ್ದರು. ಸ್ವತಂತ್ರ ಚಿಂತನೆಯ ಶ್ರೀಯುತರು ಅಂಕಣಕಾರರಾಗಿ ಪ್ರಸಿದ್ಧರು. ನಿವೃತ್ತಿಯ ಬಳಿಕ ವಿಜಯ ಕರ್ನಾಟಕ, ಕನ್ನಡ ಪ್ರಭ ಪ್ರತ್ರಿಕೆಗಳಲ್ಲಿ ಅಂಕಣಕಾರರಾಗಿ, ಕನ್ನಡದ ಮೊದಲ ಮಲ್ಟಿ ಮೀಡಿಯ ವೆಬ್ ಸೈಟ್ ʻದಿ ಸ್ಟೇಟ್ʼನ ಸಂಪಾದಕೀಯ ಸಲಹೆಗಾರರಾಗಿ ಸೇವೆಗೈದಿದ್ದರು. ರಾಜಶೇಖರ್ ಇವರು ‘ಶಬ್ದದೊಳಗಣ ನಿಶ್ಶಬ್ದ’, ‘ಹತ್ತು ದಿಕ್ಕು’, ‘ಸುದ್ದಿಯ ಹಿಂದೆ’ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ’, ‘ಪತ್ರಿಕಾ ಅಕಾಡೆಮಿ ಪ್ರಶಸ್ತಿ’, ‘ಪ್ರೆಸ್ ಕ್ಲಬ್ ಮಾಧ್ಯಮ ಪ್ರಶಸ್ತಿ’ ಮುಂತಾದ ಹಲವಾರು ಪ್ರಶಸ್ತಿಗಳು ಇವರಿಗೆ ಸಂದಿವೆ. ಪತ್ರಿಕಾ ರಂಗದ ಸಾಧನೆಗಳನ್ನು ಪರಿಗಣಿಸಿ ಸಂದೇಶ ಕಲೆ ಸಂಸ್ಕೃತಿ ಹಾಗೂ ಶಿಕ್ಷಣ ಪ್ರತಿಷ್ಠಾನವು 2025ರ ಸಾಲಿನ ಸಂದೇಶ ಮಾಧ್ಯಮ ಪ್ರಶಸ್ತಿಯನ್ನು ಶ್ರೀಯುತ ಡಿ.ವಿ. ರಾಜಶೇಖರರವರಿಗಿತ್ತು ಗೌರವಿಸುವುದಕ್ಕೆ ಹೆಮ್ಮೆ ಪಡುತ್ತಿದೆ.
ಕೊಂಕಣಿ ಸಂಗೀತ ಪ್ರಶಸ್ತಿ : ರೋಷನ್ ಜಾನ್ ಡಿʼಸೋಜ
ಮಂಗಳೂರಿನ ಬೊಂದೇಲ್‌ನವರಾದ ರೋಷನ್ ಜಾನ್ ಡಿʼಸೋಜ 1977ರ ಮಾರ್ಚ್ 04ರಂದು ಜನಿಸಿದರು. ಕಳೆದ ಸುಮಾರು ಮೂವತ್ತು ವರ್ಷಗಳಿಂದ ಕೊಂಕಣಿ ಸಂಗೀತ ಸಂಯೋಜಕರಾಗಿಯೂ ಸಂಗೀತದ ಅಪಾರ ತುಡಿತವುಳ್ಳವರಾಗಿಯೂ ರಂಗದಲ್ಲಿದ್ದಾರೆ. ಪ್ರಸಿದ್ಧ ಕೊಂಕಣಿ ಸಂಗೀತದ ತಜ್ಞರಾದ ಶ್ರೀಯುತ ಜೋಯೆಲ್ ಪಿರೇರಾ ಇವರ ಕೈಕೆಳಗೆ ಸಂಗೀತದ ವಿದ್ಯಾನುಭವ ಪಡೆದು ಅದೇ ದಾರಿಯಲ್ಲಿ ಮುಂದುವರಿದ ರೋಷನ್ ಸಂಗೀತವನ್ನು ಗಾಢವಾಗಿ ಅರಿತುಕೊಳ್ಳಲು ಸಂದೇಶ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಕೆಲಕಾಲ ಸೌಂಡ್ ಇಂಜಿನಿಯರ್ ಆಗಿ ದುಡಿದರು. ಅದಾದ ಬಳಿಕ ತಮ್ಮದೇ ಆದ ಆರ್.ಡಿ. ಸ್ಟುಡಿಯೋ ಹಾಗೂ ಸ್ಟ್ರಮ್ಮರ್ಸ್ ಮ್ಯೂಸಿಕ್ ಸ್ಕೂಲನ್ನೂ ಸ್ಥಾಪಿಸಿದರು. ಕೊಂಕಣಿ ಸಂಗೀತದಲ್ಲಿ ವಿವಿಧ ಪ್ರಯೋಗಗಳನ್ನು ಮಾಡುತ್ತ ಅದನ್ನು ಯುವಜನರಿಗೆ ಇಷ್ಟವಾಗುವ ಹಾಗೆ ಸಮಕಾಲೀನ ತಂತ್ರಗಾರಿಕೆಯನ್ನೂ ಆಧುನಿಕತೆಯನ್ನೂ ಮಿಳಿತಗೊಳಿಸಿದರು. ಕೊಂಕಣಿ, ಇಂಗ್ಲೀಷ್, ಕನ್ನಡ ಹಾಗೂ ತಮಿಳು ಭಾಷೆಗಳ ಸುಮಾರು ಇನ್ನೂರಕ್ಕೂ ಹೆಚ್ಚು ಆಲ್ಬಮ್‌ಗಳಿಗೆ ಇವರು ಸಂಗೀತ ನೀಡಿದ್ದಾರೆ. ಸಹ-ನಿರ್ಮಾಪಕರಾಗಿ ಹಲವು ಆಲ್ಬಮ್‌ಗಳನ್ನು ಸಿದ್ಧಪಡಿಸಿದ್ದಾರೆ. ಕೋವಿಡ್ ಕಾಲಘಟ್ಟದಲ್ಲಿ ಇವರು ಸಿದ್ಧಪಡಿಸಿದ ‘ದ ಅರ್ಥ್ ಸಾಂಗ್’ ಎಂಬ ವೈವಿಧ್ಯಮಯ ಗಾಯನಗುಚ್ಛದಲ್ಲಿ 17 ಹಾಡುಗಾರರು, 9 ಭಾಷೆಗಳು, 6 ಕವಿಗಳು, 5 ಸಂಗೀತಗಾರರು ಮೇಳೈಸಿದ್ದೊಂದು ವಿಶೇಷವೆ. ʻಪಯಣ್ʼ ಹಾಗೂ ʻನೋಕ್ಸಿಬಾಚೊ ಖೇಲ್ʼ ಎಂಬ ಚಲನಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡುವ ಮೂಲಕ ಕೊಂಕಣಿ ಸಿನಿಮಾ ಕ್ಷೇತ್ರಕ್ಕೂ ರೋಷನ್ ಡಿʼಸೋಜ ಇವರು ಲಗ್ಗೆಯಿಟ್ಟಿದ್ದಾರೆ. ಸಂಗೀತಗಾರರಾಗಿ ರೋಷನ್ ಜಾನ್ ಡಿʼಸೋಜ ಇವರನ್ನು ಕೊಂಕಣಿ ಸಮಾಜ ಗುರುತಿಸಿದೆ ಎಂಬುದಕ್ಕೆ ಸಾಕ್ಷಿಯಾಗಿ ಇವರಿಗೆ ಮಾಂಡ್ ಸೋಬಾಣ್ ನೀಡುವ ʻಕಲಾಕಾರ್ ಪುರಸ್ಕಾರ್ʼ, ʻಗ್ಲೋಬಲ್ ಕೊಂಕಣಿ ಮ್ಯೂಸಿಕ್ ಅವಾರ್ಡ್ʼ, ʻಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ʼನಲ್ಲಿ ಸೇರ್ಪಡೆ -ಮುಂತಾದವುಗಳು ಸಾಕ್ಷಿ. ಇವರು ಕೊಂಕಣಿ ಸಂಗೀತ ಪ್ರಸರಣಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಸಂದೇಶ ಕಲೆ ಸಂಸ್ಕೃತಿ ಹಾಗೂ ಶಿಕ್ಷಣ ಪ್ರತಿಷ್ಠಾನವು 2025ರ ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿಯನ್ನು ನೀಡಿ ಅಭಿಮಾನಪೂರ್ವಕ ಗೌರವಿಸುತ್ತಿದೆ.
ಸಂದೇಶ ಕಲಾ ಪ್ರಶಸ್ತಿ : ಗಿರೀಶ್ ಕಾಸರವಳ್ಳಿ
ಅಂತಾರಾಷ್ಟ್ರೀಯ ಖ್ಯಾತಿಯ ಕನ್ನಡ ಚಲನಚಿತ್ರ ನಿರ್ದೇಶಕ ಪದ್ಮಶ್ರೀ ಪುರಸ್ಕೃತ ಗಿರೀಶ್ ಕಾಸರವಳ್ಳಿಯವರು 1950 ದಶಂಬರ 03ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಕೆಸಲೂರಿನಲ್ಲಿ ಗಣೇಶ್ ರಾವ್ ಹಾಗೂ ಲಕ್ಷ್ಮೀದೇವಿಯವರ ಪುತ್ರರಾಗಿ ಜನಿಸಿದರು. ಪುಣೆಯ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ ಚಿನ್ನದ ಪದಕದೊಂದಿಗೆ ಹೊರಬಂದು, ಚಲನಚಿತ್ರ ನಿರ್ದೇಶಕರಾಗಿ ಕಾರ್ಯಕ್ಷೇತ್ರಕ್ಕಿಳಿದ ಕಾಸರವಳ್ಳಿಯವರು ಒಂದರ ಹಿಂದೆ ಒಂದರಂತೆ ರಾಷ್ಟ್ರ ಮಟ್ಟದ ಗಮನಸೆಳೆಯುವ ಚಿತ್ರಗಳನ್ನೇ ಕೊಡುತ್ತ ಬಂದರು. ಸಮಾನಾಂತರ ಚಿತ್ರಗಳ ನಿರ್ದೇಶಕರಾಗಿ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ಕಾಸರವಳ್ಳಿಯವರು ಸತ್ಯಜಿತ್ ರೇ, ಅಡೂರು ಗೋಪಾಲಕೃಷ್ಣನ್, ಅರವಿಂದನ್ ಮೊದಲಾದವರು ತುಳಿದ ಹಾದಿಯನ್ನು ಇನ್ನಷ್ಟು ವಿಸ್ತಾರಗೊಳಿಸಿದರು. ಕಾಸರವಳ್ಳಿಯವರ ಮೊದಲ ಸ್ವತಂತ್ರ ಚಿತ್ರವಾದ ʻಘಟಶ್ರಾದ್ಧʼದಲ್ಲೇ ಇವರು ಸಾಗುವ ಮೌಲ್ಯಾಧಾರಿತ ಚಿತ್ರಗಳ ದಾರಿ ಸ್ಪಷ್ಟವಾಯಿತು. ಎಷ್ಟೇ ಬೇಡಿಕೆ ಬಂದರೂ ಇವರು ತಮ್ಮ ಕಲಾತ್ಮಕ ದಾರಿಯಿಂದ ವಿಚಲಿತರಾಗಲಿಲ್ಲ. ಸುಮಾರು ಎರಡು ವರ್ಷಕ್ಕೆ ಒಂದರಂತೆ ಹದಿನಾಲ್ಕು ಚಿತ್ರಗಳನ್ನು ನೀಡಿದ ಗಿರೀಶ್ ಕಾಸರವಳ್ಳಿಯವರು ಪ್ರತಿಯೊಂದು ಚಿತ್ರವನ್ನೂ ಅಂತಾರಾಷ್ಟ್ರೀಯ, ರಾಷ್ಟ್ರೀಯ ಅಥವಾ ರಾಜ್ಯ ಚಲನಚಿತ್ರ ಪ್ರಶಸ್ತಿಯ ಕಡೆಗೆ ತಲುಪಿಸಿದ್ದಾರೆ. ಕ್ರಿಯಾಶೀಲತೆ ಇವರನ್ನು ಮುಂದಿನ ಚಿತ್ರ ನಿರ್ದೇಶನದತ್ತ ಒಯ್ಯುತ್ತಿದೆ. ಸಿನಿಮಾ ನಿರ್ದೇಶಕ, ನಿರ್ಮಾಪಕ ಹಾಗೂ ಸಂಭಾಷಣೆಕಾರರಾಗಿ, ಜಾಗತಿಕ ಸಿನಿಮಾಗಳ ಬಗ್ಗೆ ನಿಖರ ಅನುಭವವುಳ್ಳವರಾಗಿ, ಚಲನಚಿತ್ರ ಸಹೃದಯತಾ ಕಮ್ಮಟಗಳಿಗೆ ಅನಿವಾರ್ಯ ಸಂಪನ್ಮೂಲ ವ್ಯಕ್ತಿಯಾಗಿ ಕಾಸರವಳ್ಳಿಯವರು ನಮ್ಮ ನಡುವೆ ಇದ್ದಾರೆ. ಕಾಸರವಳ್ಳಿಯವರು ಭಾರತ ಸರಕಾರದಿಂದ ಪದ್ಮಶ್ರೀ ಪುರಸ್ಕೃತರು. ಇವರು ನಿರ್ದೇಶಿಸಿದ ‘ಘಟಶ್ರಾದ್ಧ’, ‘ತಬರನ ಕಥೆ’, ‘ತಾಯಿಸಾಹೇಬ’ ಹಾಗೂ ‘ದ್ವೀಪ’ ಚಿತ್ರಗಳು ರಾಷ್ಟ್ರಮಟ್ಟದ ಸ್ವರ್ಣ ಕಮಲ ಪ್ರಶಸ್ತಿಗೆ ಭಾಜನವಾದರೆ ಮಿಕ್ಕೆಲ್ಲ ಚಿತ್ರಗಳು ಒಂದಲ್ಲಾ ಒಂದು ಬಗೆಯ ಗೌರವಾನ್ವಿತ ಪ್ರಶಸ್ತಿಗೆ ಭಾಜನವಾಗಿವೆ ಎಂಬುದು ಕಾಸರವಳ್ಳಿಯವರ ಕಲಾಪ್ರತಿಭೆಗೆ ಸಾಕ್ಷಿ. ಇಂತಹ ಗೌರವಕ್ಕೆ ಪಾತ್ರರಾದ ಶ್ರೀ ಗಿರೀಶ್ ಕಾಸರವಳ್ಳಿಯವರನ್ನು ಸಂದೇಶ ಕಲೆ ಸಂಸ್ಕೃತಿ ಹಾಗೂ ಶಿಕ್ಷಣ ಪ್ರತಿಷ್ಠಾನವು 2025ರ ಸಂದೇಶ ಕಲಾ ಪ್ರಶಸ್ತಿಯನ್ನಿತ್ತು ಗೌರವಿಸಿ ಹೆಮ್ಮೆ ಪಟ್ಟುಕೊಳ್ಳುತ್ತಿದೆ.
ಸಂದೇಶ ಶಿಕ್ಷಣ ಪ್ರಶಸ್ತಿ : ಡಾ. ಯೇನೆಪೋಯ ಅಬ್ದುಲ್ಲ ಕುಂಞಿ
ಕಾಸರಗೋಡಿನಲ್ಲಿ 1947ರಲ್ಲಿ ಜನಿಸಿದ ಡಾ. ಯೇನೆಪೋಯ ಅಬ್ದುಲ್ಲ ಕುಂಞಿಯವರು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಸಾಮಾನ್ಯವಾದದ್ದು. ಮೈಸೂರು ವಿಶ್ವವಿದ್ಯಾನಿಲಯದಿಂದ ಕಲಾ ಪದವಿ ಪಡೆದ ಇವರು ಸಾರಿಗೆ, ಕೈಗಾರಿಕೆ, ವೈದ್ಯಕೀಯ, ಕ್ರೀಡೆ, ಸಮಾಜಸೇವೆ ಇತ್ಯಾದಿ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೂ ಶಿಕ್ಷಣ ಕ್ಷೇತ್ರಕ್ಕೆ ಇವರು ಸಲ್ಲಿಸಿದ ಸೇವೆಯನ್ನು ನಾವು ವಿಶಿಷ್ಟ ಎಂಬುದಾಗಿ ಪರಿಗಣಿಸಿ ಇವರಿಗೆ ಗೌರವ ಸಲ್ಲಿಸುತ್ತಿದ್ದೇವೆ. ಡಾ. ಅಬ್ದುಲ್ಲ ಕುಂಞಿಯವರು ಟ್ರಸ್ಟಿಗಳಾಗಿರುವ ಇಸ್ಲಾಮಿಕ್ ಅಕಾಡೆಮಿ ಆಫ್ ಎಜುಕೇಶನ್ ಸಂಸ್ಥೆಯ ಮೂಲಕ ಯೇನೆಪೋಯ ನರ್ಸಿಂಗ್ ಕಾಲೇಜು, ಯೇನೆಪೋಯ ಇಂಜಿನಿಯರಿಂಗ್ ಕಾಲೇಜು, ಯೇನೆಪೋಯ ಸಿವಿಲ್ ಸರ್ವಿಸ್ ಅಕಾಡೆಮಿಗಳು ಸೇವೆ ಸಲ್ಲಿಸುತ್ತಿರುವುದು ಒಂದೆಡೆಯಾದರೆ ಅವರೇ ಕುಲಪತಿಗಳಾಗಿರುವ ಯೇನೆಪೋಯ ಯುನಿವರ್ಸಿಟಿ (ಪರಿಗಣಿತ)ಯಲ್ಲಿ ಮೆಡಿಕಲ್ ಕಾಲೇಜು, ದಂತ ವೈದ್ಯಕೀಯ ಕಾಲೇಜು, ನರ್ಸಿಂಗ್ ಕಾಲೇಜು, ಫಿಸಿಯೋಥೆರಪಿ ಕಾಲೇಜು, ಫಾರ್ಮಸಿ ಕಾಲೇಜು, ಕಲಾ – ವಿಜ್ಞಾನ-ಕಾಮರ್ಸ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜು ಮುಂತಾದ ಹಲವಾರು ಶಿಕ್ಷಣ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಯೇನೆಪೋಯ ಸೆಂಟರ್ ಫಾರ್ ಡೆವೆಲಪ್‌ಮೆಂಟ್ ಸ್ಟಡೀಸ್ ಸಂಸ್ಥೆಯ ಪ್ರಾಯೋಜಕರಾಗಿರುವ ಶ್ರೀಯುತರು ತಮ್ಮದೇ ಹೆಸರಿನ ಚಾರಿಟೇಬಲ್ ಟ್ರಸ್ಟಿನ ಆಶ್ರಯದಲ್ಲಿ ಯೇನೆಪೋಯ ಸ್ಕೂಲ್ ಹಾಗೂ ಯೇನೆಪೋಯ ಪಿಯು ಕಾಲೇಜುಗಳನ್ನು ಮುನ್ನಡೆಸುತ್ತಿದ್ದಾರೆ. ಮಲ್ಜಾ-ಉಲ್-ಇಸ್ಲಾಮ್ ಎಂಬ ಹೆಸರಿನ ಇಂಗ್ಲೀಷ್ ಮೀಡಿಯಮ್ ಶಾಲೆ, ಬದ್ರಿಯಾ ಶಿಕ್ಷಣ ಸಂಸ್ಥೆ, ಥಕ್ವಾ ಮುಕ್ತ ವಿಶ್ವವಿದ್ಯಾಲಯ, ಪಿ.ಎ. ಎಜ್ಯುಕೇಶನ್ ಟ್ರಸ್ಟ್ ಮುಂತಾದ ಶಿಕ್ಷಣ ಸಂಸ್ಥೆಗಳನ್ನು ಡಾ. ಅಬ್ದುಲ್ಲ ಕುಂಞಿಯವರು ನಡೆಸಿಕೊಂಡು ಬರುತ್ತಿದ್ದಾರೆ. ಇತರ ಹಲವಾರು ಸಂಸ್ಥೆಗಳನ್ನು ಏಕಕಾಲಕ್ಕೆ ನಡೆಸುತ್ತಿರುವ ಡಾ. ಯೇನೆಪೋಯ ಅಬ್ದುಲ್ಲ ಕುಂಞಿಯವರು ಶಿಕ್ಷಣ ಕ್ಷೇತ್ರಕ್ಕೆ ಕೊಟ್ಟಿರುವ ಆದ್ಯತೆಯನ್ನು ಸಂದೇಶ ಕಲೆ ಸಂಸ್ಕೃತಿ ಹಾಗೂ ಶಿಕ್ಷಣ ಪ್ರತಿಷ್ಠಾನವು ಗಂಭೀರವಾಗಿ ಪರಿಗಣಿಸಿ ಇವರಿಗೆ 2025ರ ಸಂದೇಶ ಶಿಕ್ಷಣ ಪ್ರಶಸ್ತಿಯನ್ನು ನೀಡಿ ಗೌರವಿಸುವುದಕ್ಕೆ ಅಭಿಮಾನ ಪಡುತ್ತೇವೆ.
ಸಂದೇಶ ವಿಶೇಷ ಪ್ರಶಸ್ತಿ : ಡಾ. ಕೆ.ವಿ. ರಾವ್
ಡಾ. ಕೋಟೆ ವೆಂಕಟಾಚಲ ರಾವ್ (ಕೆ.ವಿ. ರಾವ್) ಇವರು ಉಡುಪಿ ಜಿಲ್ಲೆಯ ಕಟಪಾಡಿಯ ಹತ್ತಿರದ ಕೋಟೆ ಗ್ರಾಮದಲ್ಲಿ 1944ರಲ್ಲಿ ಜನಿಸಿದರು. ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಪದವಿ ಪಡೆದ ಬಳಿಕ ಮೈಸೂರು ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು. ಮುಂದುವರಿದು, ಬೆಂಗಳೂರಿನ ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ಪಿಹೆಚ್.ಡಿ. ಪದವಿ ಪಡೆದರು. ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮೂರು ದಶಕಕ್ಕೂ ಹೆಚ್ಚುಕಾಲ ಪ್ರಾಧ್ಯಾಪಕರಾಗಿ ದುಡಿದರು. ಅತ್ಯುತ್ತಮ ಭೌತಶಾಸ್ತ್ರ ಪ್ರಾಧ್ಯಾಪಕರೆಂಬ ನೆಲೆಯಲ್ಲಿ ‘ಅಯಾಚೆಯ ಥಿಯೋ ಮಥಾಯಸ್ ಪ್ರಶಸ್ತಿ’ಗೆ ಭಾಜನರಾದರು. ಪ್ರಾಧ್ಯಾಪಕ ವೃತ್ತಿ ಮಾತ್ರವಲ್ಲದೆ ಮಂಗಳೂರು ವಿಶ್ವ ವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕರಾಗಿ, ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕರಾಗಿ ಸೇವೆಗೈದರು. ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಅಧ್ಯಾಪಕ ಸಂಘದ ಅಧ್ಯಕ್ಷರಾಗಿ, ಸೆನೆಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್‌ಗಳ ಸದಸ್ಯರಾಗಿ, ಭೌತಶಾಸ್ತ್ರ ಸಂಘದ ಸ್ಥಾಪಕ ಕಾರ್ಯದರ್ಶಿಯಾಗಿ, ದ.ಕ. ಜಿಲ್ಲಾ ವಿಜ್ಞಾನ-ತಂತ್ರಜ್ಞಾನ ಸಮಿತಿಯ ಗೌರವ ಕಾರ್ಯದರ್ಶಿಯಾಗಿ, ರಾಜ್ಯ ಅಧ್ಯಾಪಕರ ಫೆಡರೇಶನ್ ಉಪಾಧ್ಯಕ್ಷರಾಗಿ – ಹೀಗೆ ವಿವಿಧ ಸಂಘ ಸಂಸ್ಥೆಗಳ ಜವಾಬ್ದಾರಿಯುತ ಸ್ಥಾನಗಳಲ್ಲಿ ಡಾ. ಕೆ.ವಿ. ರಾವ್ ಸೇವೆಗೈದದ್ದು ಮಾತ್ರವಲ್ಲದೆ ಅವುಗಳನ್ನು ದಡ ಹತ್ತಿಸುವಲ್ಲಿ ಅಪಾರವಾಗಿ ಶ್ರಮಿಸಿದ್ದಾರೆ. ತಮ್ಮ ನಿವೃತ್ತಿಯ ಬಳಿಕ ಶ್ರೀಯುತರು ಪಿಲಿಕುಳದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸ್ಥಾಪನೆ, ಭಾರತದ ಪ್ರಥಮ 3D ತಾರಾಲಯದ ನಿರ್ಮಾಣ ಮುಂತಾದ ಅಸಾಮಾನ್ಯ ಕೆಲಸಗಳನ್ನು ತಾವೇ ಖುದ್ದಾಗಿ ಮಾಡಿ ಮುಗಿಸಿ ಪಿಲಿಕುಳವನ್ನು ಪ್ರಮುಖ ಪ್ರವಾಸೀ ಕೇಂದ್ರವನ್ನಾಗಿಸಿದ್ದಾರೆ. ಜಿಲ್ಲೆಯ ಹಾಗೂ ರಾಜ್ಯದ ಕೀರ್ತಿಯನ್ನು ರಾಷ್ಟ್ರಮಟ್ಟಕ್ಕೆ ಒಯ್ದಿದ್ದಾರೆ. ಹಲವಾರು ಪ್ರಶಸ್ತಿಗಳಿಗೂ ಭಾಜನರಾಗಿದ್ದಾರೆ. ಡಾ. ಕೆ.ವಿ. ರಾವ್ ಇವರು ವಿಜ್ಞಾನ ಕ್ಷೇತ್ರಕ್ಕೆ ಸಲ್ಲಿಸಿದ ಅಸಾಧಾರಣ ಕೊಡುಗೆಯನ್ನು ಗುರುತಿಸಿ ಸಂದೇಶ ಕಲೆ ಸಂಸ್ಕೃತಿ ಹಾಗೂ ಶಿಕ್ಷಣ ಪ್ರತಿಷ್ಠಾನವು 2025ರ ಸಂದೇಶ ವಿಶೇಷ ಪ್ರಶಸ್ತಿಯನ್ನು ನೀಡಿ ಗೌರವಿಸುವುದಕ್ಕೆ ಅತೀವ ಸಂತೋಷ ಪಡುತ್ತಿದೆ.
ಸಂದೇಶ ವಿಶೇಷ ಗೌರವ ಪ್ರಶಸ್ತಿಗಳು 2025 : ಮೈಕಲ್ ಡಿಸೋಜಾ
ಪುಟ್ಟೂರು ಮೂಲದ ಖ್ಯಾತ ದಾನಶೂರರಾಗಿರುವ ಮೈಕಲ್ ಡಿಸೋಜಾ ಇವರು ಸಮಾಜದ ಉನ್ನತಿಗಾಗಿ ಸಲ್ಲಿಸಿರುವ ಅಪ್ರತಿಮ ಸೇವೆಗೆ ವ್ಯಾಪಕವಾಗಿ ಮೆಚ್ಚುಗೆ ಗಳಿಸಿದ್ದಾರೆ. ಇವರ ಜೀವನೋದ್ದೇಶದಲ್ಲಿ ಬಹುಮುಖ್ಯವಾದದ್ದು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಆರೋಗ್ಯದ ಮೂಲಕ ಶಕ್ತಿ ನೀಡುವುದು, ನಿರ್ಗತಿಕರು ಹಾಗೂ ಅಲಕ್ಷಿತರಿಗೆ ಸಹಾಯ ಮಾಡುವುದು. ಪ್ರಸ್ತುತ ದುಬೈನಲ್ಲಿ ಐವರಿ ಗ್ರಾಂಡ್ ಗುಂಪಿನ ಹೋಟೆಲ್‌ಗಳ ವ್ಯವಸ್ಥಾಪಕ ನಿರ್ದೇಶಕರಾಗಿರುವ ಮೈಕಲ್ ಡಿ’ಸೋಜಾರು ಮಂಗಳೂರಿನ ತನ್ನ ಜನ್ಮಭೂಮಿಗೆ ಅಚಲವಾದ ಕೊಡುಗೆಯನ್ನು ನೀಡುತ್ತಿದ್ದಾರೆ. ಎಜುಕೇರ್ ಟ್ರಸ್ಟಿನ ಸ್ಥಾಪನೆಯ ಮೂಲಕ ಇವರು ವಿದ್ಯಾರ್ಥಿಗಳ ಜೀವನದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದಾರೆ. ಪ್ರಾರಂಭದಲ್ಲಿ 25 ಕೋಟಿ ರೂಪಾಯಿಗಳ ಹೂಡಿಕೆಯಿಂದ ಆರಂಭವಾದ ಈ ಟ್ರಸ್ಟ್ ವಿವಿಧ ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಯ ಸಾವಿರಾರು ವಿದ್ಯಾರ್ಥಿಗಳಿಗೆ ಆಶಾಕಿರಣವಾಗಿದೆ. ಪ್ರತೀ ವರ್ಷ ಈ ಟ್ರಸ್ಟ್ ನೂರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮತ್ತು ಆರ್ಥಿಕ ನೆರವನ್ನು ಒದಗಿಸಿ, ಅವರ ಉನ್ನತ ಶಿಕ್ಷಣದ ಕನಸುಗಳನ್ನು ನನಸಾಗಿಸಲು ನೆರವಾಗುತ್ತಿದೆ. ಮೈಕಲ್ ಇವರ ದಾನಶೀಲ ಸೇವೆಗಳು ಶಿಕ್ಷಣದ ಹೊರತಾಗಿ ಕನ್ನಡ, ತುಳು ಮತ್ತು ಕೊಂಕಣಿ ಭಾಷೆಗಳ ಪುರೋಗತಿಯ ಕಡೆಗೂ ಕೈಚಾಚಿದೆ. ಗಲ್ಪ್ ಪ್ರದೇಶ, ಕರ್ನಾಟಕ, ಒಟ್ಟಾರೆಯಾಗಿ ಭಾರತ ಮತ್ತು ಇತರ ದೇಶಗಳಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಶ್ರೀಯುತರು ನೆರವು ನೀಡುತ್ತ ಬಂದಿದ್ದಾರೆ. ದೂರದರ್ಶಿತ್ವವುಳ್ಳ ನಾಯಕರಾಗಿ ಮೈಕಲ್ ಅನೇಕ ಯುವ ಉದ್ಯಮಿಗಳಿಗೆ ಪ್ರೇರಣೆ ನೀಡುತ್ತಿದ್ದು, ಹೊಸ ಯೋಜನೆಗಳನ್ನು ಪ್ರಾರಂಭಿಸಲು ಮಾರ್ಗದರ್ಶನ ನೀಡುತ್ತಿದ್ದಾರೆ. ಸಮುದಾಯದಲ್ಲಿ ಸ್ನೇಹಪರ ವಾತಾವರಣವನ್ನು ಬೆಳೆಸಲು, ಸಮಾಜ ಸೇವಾ ಸಂಸ್ಥೆಗಳಿಗೆ ಮತ್ತು ಸಮುದಾಯದ ನಾಯಕರಿಗೆ ಬೆಂಬಲವನ್ನು ನೀಡುತ್ತಾ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಮೈಕಲ್ ಡಿಸೋಜಾ ತಮ್ಮ ಪತ್ನಿ ಫ್ಲಾವಿಯಾ ಡಿಸೋಜಾ ಮತ್ತು ಇಬ್ಬರು ಪುತ್ರಿಯರು ಹಾಗೂ ಒಬ್ಬ ಪುತ್ರನೊಂದಿಗೆ ದುಬೈನಲ್ಲಿ ವಾಸಿಸುತ್ತಿದ್ದಾರೆ. ಶಿಕ್ಷಣ, ಸಂಸ್ಕೃತಿ ಮತ್ತು ಸಮುದಾಯ ಅಭಿವೃದ್ಧಿಗೆ ಸಲ್ಲಿಸಿರುವ ಮೈಕಲ್ ಡಿಸೋಜಾರ ಅಪ್ರತಿಮ ಕೊಡುಗೆಗಳನ್ನು ಗುರುತಿಸಿ, ಸಂದೇಶ ಕಲೆ ಸಂಸ್ಕೃತಿ ಹಾಗೂ ಶಿಕ್ಷಣ ಪ್ರತಿಷ್ಠಾನವು 2025ರ ಸಂದೇಶ ವಿಶೇಷ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಿದೆ.
ಸಂದೇಶ ಯುವಪ್ರತಿಭಾ ಪ್ರಶಸ್ತಿ : ರೆಮೋನ ಇವೆಟ್ ಪಿರೇರಾ
ಮಂಗಳೂರು ನಗರದಿಂದ ಬಂದ ರೆಮೋನ ಇವೆಟ್ ಪಿರೇರಾ, ಗ್ಲ್ಯಾಡಿಸ್ ಪೆರೇರಾ ಇವರ ಪುತ್ರಿ. ಉತ್ಕೃಷ್ಟ ನೃತ್ಯ ಕಲಾವಿದೆಯಾಗಿ ಪರಿಚಯಗೊಳ್ಳುತ್ತಾರೆ. ಪ್ರಸ್ತುತ ಇವರು ಸಂತ ಅಲೋಸಿಯಸ್ ಪರಿಗಣಿತ ವಿಶ್ವ ವಿದ್ಯಾಲಯದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಮೂರನೆಯ ವಯಸ್ಸಿನಿಂದ ನೃತ್ಯಾಭ್ಯಾಸವನ್ನು ಪ್ರಾರಂಭಿಸಿದ ರೆಮೋನಾ ಕಳೆದ 17 ವರ್ಷಗಳಿಂದ ಡಾ. ಶ್ರೀವಿದ್ಯಾ ಮುರಳೀಧರ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ಕಲಿಯುತ್ತಿದ್ದಾರೆ. 2019ರಲ್ಲಿ ತಮ್ಮ ರಂಗಪ್ರವೇಶ ಪೂರ್ಣಗೊಳಿಸಿದ್ದು, ಭರತನಾಟ್ಯದ ಮೂಲಕ, ಜಾನಪದ, ಸಮಕಾಲೀನ ಹಾಗೂ ಫ್ಯೂಶನ್ ಕೌಶಲ್ಯವನ್ನು ಪಡಿಮೂಡಿಸಿ ವಿಶಿಷ್ಟ ಕಲಾವಿದೆಯಾಗಿ ಪ್ರಸಿದ್ಧಿ ಪಡೆದಿದ್ದಾರೆ. ಭರತನಾಟ್ಯ ತರಬೇತಿಯನ್ನು ಬಳಸಿಕೊಂಡು, ರೆಮೋನಾ ತಮ್ಮ ನೃತ್ಯ ಪ್ರದರ್ಶನಗಳಲ್ಲಿ ಹಲಬಗೆಯ ಸಲಕರಣೆಗಳನ್ನು ಬಳಸಿ ಜನರಿಗೆ ಆಶ್ಚರ್ಯವನ್ನು ಉಂಟುಮಾಡುತ್ತಾರೆ. ಅಗ್ನಿ, ಗಾಜು, ಮಣ್ಣಿನ ಪಾತ್ರೆ, ಕಂಬಗಳು, ಬಿದಿರು ಮುಂತಾದ ಸಲಕರಣೆಗಳನ್ನು ಬಳಸಿ ತಮ್ಮ ಪ್ರದರ್ಶನಗಳಿಗೆ ವಿಶಿಷ್ಟವಾದ ಶೋಭೆಯನ್ನು ನೀಡುತ್ತಿದ್ದಾರೆ. ಇವರು ಈಗಾಗಲೇ ಭಾರತದ 17 ರಾಜ್ಯಗಳಲ್ಲಿ ತಮ್ಮ ಕಲಾಪ್ರದರ್ಶನಗಳನ್ನು ನೀಡಿದ್ದಾರೆ ಮತ್ತು ಎಲ್ಲಾ ಸ್ಥಳಗಳಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರಚಾರ ಮಾಡುತ್ತಿದ್ದಾರೆ. ರೆಮೋನಾಗೆ ಬಂದಿರುವ ಪ್ರಶಸ್ತಿಗಳು ಮತ್ತು ಗೌರವಗಳು ಅನೇಕ. ಬಹುಮುಖ್ಯವಾಗಿ ಇವರು 2022ರಲ್ಲಿ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಂದ ‘ರಾಷ್ಟ್ರೀಯ ಬಾಲ ಪ್ರಶಸ್ತಿ’ಯನ್ನು ಖುದ್ದಾಗಿ ಪಡೆದುಕೊಂಡಿದ್ದಾರೆ. ಇದಲ್ಲದೆ ಇವರು ‘ಬಾಲ ಗೌರವ ಪ್ರಶಸ್ತಿ’, ‘ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವ’, ‘ಭಾರತ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಗೌರವ’ ಮತ್ತು ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ – ಲಂಡನ್ ಗೌರವ’ ಸೇರಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸಾಮಾಜಿಕ ಮತ್ತು ಸಾಮುದಾಯಿಕ ಹೊಣೆಗಾರಿಕೆಯನ್ನು ಅರಿತುಕೊಂಡವರಾಗಿ ಇವರು ನೃತ್ಯವನ್ನು ಬಾಲವಿಕಲ, ಅನಾಥ ಮತ್ತು ಟ್ರಾನ್ಸ್ ಜೆಂಡರ್ ಸಮುದಾಯಗಳಿಗೆ ಕಲಿಸುವ ಗುರಿಯನ್ನು ಹೊಂದಿದ್ದಾರೆ. ಸಂದೇಶ ಕಲೆ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನವು 2025ರ ಪ್ರತಿಭಾ ಪ್ರಶಸ್ತಿಯನ್ನು ಕುಮಾರಿ ರೆಮೋನ ಇವೆಟ್ ಪಿರೇರಾರಿಗೆ ನೀಡುವ ಮೂಲಕ ಇವರ ನೃತ್ಯ ಶಕ್ತಿಯನ್ನು ಗುರುತಿಸಿ ಗೌರವಿಸುತ್ತಿದ್ದೇವೆ.
ಹೆಚ್ಚಿನ ವಿವರಗಳಿಗಾಗಿ, ದಯವಿಟ್ಟು ಸಂಪರ್ಕಿಸಿ : ಫಾ. ಸುದೀಪ್ ಪಾಲ್, MSFS
ನಿರ್ದೇಶಕ, ಸಂದೇಶ ಫೌಂಡೇಶನ್ ಫಾರ್ ಕಲ್ಚರ್ ಅಂಡ್ ಎಜುಕೇಶನ್. +91 9113646986