‘ನೆನಪು ನೂರೆಂಟು’ ಬೆಂಗಳೂರಿನಲ್ಲಿರುವ ಲಕ್ಷ್ಮಿ ಭಟ್ ಪೂಕಳ ಇವರ ಆತ್ಮಕಥನ. ಚಿಕ್ಕವರಾಗಿದ್ದ ಕಾಲದಲ್ಲಿ ಕತೆ-ಕವಿತೆಗಳನ್ನು ಬರೆಯುವ ಹವ್ಯಾಸವಿದ್ದಿದ್ದರೂ ಮದುವೆಯಾದ ನಂತರ ಪ್ರತಿಕೂಲ ಪರಿಸ್ಥಿತಿಗಳೊಡ್ಡಿದ ಅಡ್ಡಿ-ಆತಂಕಗಳಿಂದಾಗಿ ಏನೂ ಬರೆಯದೆ ಕುಳಿತ ಇವರು ಈಗ ತಮ್ಮ ವೃದ್ಧಾಪ್ಯದಲ್ಲಿ ಬಾಲ್ಯಕಾಲದ ಸವಿ ನೆನಪುಗಳ ಜತೆಗೆ ತಾವು ಬದುಕಿನುದ್ದಕ್ಕೂ ಅನುಭವಿಸಿದ ಕಷ್ಟಗಳನ್ನೂ ಇಲ್ಲಿ ದಾಖಲಿಸಿದ್ದಾರೆ.
ಅಣ್ಣಂದಿರು, ಅಕ್ಕ ತಂಗಿಯರ ಜತೆಗೆ ಕಳೆದ ಬಾಲ್ಯವು ಸಿಹಿಯಾಗಿತ್ತು. ತಾನು ತುಂಬಾ ತಂಟೆ ಮಾಡುವವಳಾಗಿದ್ದೆ. ತುಂಟತನವೂ ಸಾಕಷ್ಟು ಇತ್ತು. ಭೂತ ಪ್ರೇತ ದೆವ್ವಗಳ ಕಥೆಗಳನ್ನು ಓದಿ ಸದಾ ಭಯದಿಂದ ನಡುಗುತ್ತಿದ್ದೆ. ಆಗ ಅಪ್ಪ ದೇವರ ಕೋಣೆಯಿಂದ ವಿಭೂತಿ ತಂದು ಹಣೆಗೆ ಹಚ್ಚುತ್ತಿದ್ದರು. ಯಾವಾಗಲೂ ಬಿಳಿ ಸೀರೆ ಉಡುತ್ತ ಕೆಲಸಗಳಲ್ಲಿ ಮುಳುಗಿರುತ್ತಿದ್ದ ಅಜ್ಜಿಯ ಬಗ್ಗೆ ತನಗೆ ಅಯ್ಯೋ ಎನಿಸುತ್ತಿತ್ತು. ಅಜ್ಜಿ ತುಂಬಾ ಹಾಡುಗಳನ್ನು ಹೇಳಿ ಕೊಡುತ್ತಿದ್ದರು. ಕತೆಗಳನ್ನು ಹೇಳುತ್ತಿದ್ದರು. ಉಚಿತವಾಗಿ ಆಡುವ ಯಕ್ಷಗಾನ ಬಯಲಾಟಗಳಿಗೆ ಕರೆದುಕೊಂಡು ಹೋಗುತ್ತಿದ್ದರು.
ಅಕ್ಕ ಮದುವೆಯಾಗಿ ಹೋದ ನಂತರ ಮನೆಯಲ್ಲಿ ಅಮ್ಮನಿಗೆ ಸಹಾಯ ಮಾಡಲು ಯಾರೂ ಇಲ್ಲವೆಂದು ಒಂಬತ್ತನೇ ತರಗತಿಯಾದ ಕೂಡಲೇ ಶಾಲೆ ಬಿಡಿಸಿದರು. ನಂತರ ಪ್ರೈವೆಟ್ ಆಗಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಮಾಡಿದರು. ನಂತರ ಮದುವೆಯಾಗಿ ತವರು ಮನೆಯ ಹತ್ತಿರವೇ ಇರುವ ಪೂಕಳ ಎಂಬ ದೊಡ್ಡ ಮನೆತನಕ್ಕೆ ಪಾಂಡುರಂಗ ಭಟ್ಟರ ಹೆಂಡತಿಯಾಗಿ ಹೋದರು. ಶಾಂತದುರ್ಗಾ ದೇವಿಯ ದೊಡ್ಡ ಮೂರ್ತಿಗೆ ಮೂರು ಹೊತ್ತು ಪೂಜೆಯಾಗುತ್ತಿದ್ದ ನಂದಾ ದೀಪ ಉರಿಯುತ್ತಿದ್ದ ಪುಟ್ಟ ದೇವಸ್ಥಾನದಂತಿದ್ದ ಮನೆಯದು. ಆದರೆ ಮನೆಯ ಗಂಡು ಮಕ್ಕಳೆಲ್ಲ ಉದ್ಯೋಗ ನಿಮಿತ್ತ ಹೊರಗೆ ಹೋಗಿ ಪೂಜೆ ಸರಿಯಾಗಿ ನಡೆಯದೆ ದೈವಕೋಪದಿಂದ ಮನೆಯವರಿಗೆಲ್ಲ ಒಂದಿಲ್ಲೊಂದು ರೀತಿಯಲ್ಲಿ ಕಷ್ಟಗಳು ಎದುರಾಗುತ್ತಲೇ ಇತ್ತೆಂದು ಲೇಖಕಿ ಹೇಳುತ್ತಾರೆ.
ಲೇಖಕಿಗೆ ಸ್ವತಃ ಎದುರಾದ ಸಮಸ್ಯೆಯೆಂದರೆ ಗಂಡನ ನಿರುದ್ಯೋಗ ಮತ್ತು ಹೆಜ್ಜೆಹೆಜ್ಜೆಗೂ ಬಂದ ಹಣದ ಸಮಸ್ಯೆ. ಗಂಡ ಯಾವ ಉದ್ಯೋಗದಲ್ಲೂ ಸರಿಯಾಗಿ ನಿಲ್ಲದೆ ಆಗಾಗ ಹೆಂಡತಿಯನ್ನು ತಾನು ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಕರೆದುಕೊಂಡು ಹೋಗುವುದು. ಅಲ್ಲಿ ಹೆಂಡತಿ ಮಕ್ಕಳನ್ನು ಅನಾಥರನ್ನಾಗಿ ಬಿಟ್ಟು ಬೇರೆಲ್ಲೋ ಹೋಗುವುದು. ಹೀಗೆ ಹಲವಾರು ಬಾರಿ ಆದ ನಂತರ ಆಕೆ ತವರು ಮನೆಗೆ ಬಂದು ಅಲ್ಲೇ ನೆಲೆಸುತ್ತಾರೆ. ಟ್ಯುಟೋರಿಯಲ್ ಕಾಲೇಜೊಂದರಲ್ಲಿ ಕೆಲಸಕ್ಕೆ ಸೇರಿ ದಿನವು ಮನೆಯಿಂದ ಹೊರಗೆ ಹೊರಟರೆ ಅಲ್ಲೂ ಸಮಾಜದಲ್ಲಿ ಒಂಟಿ ಹೆಣ್ಣು ಅನುಭವಿಸುವ ಎಲ್ಲಾ ಕಷ್ಟಗಳಿಗೆ ಅವರು ಗುರಿಯಾಗುತ್ತಾರೆ. ಮಕ್ಕಳು ದೊಡ್ಡವರಾಗಿ ಉದ್ಯೋಗ ಪಡೆದ ನಂತರ ಕೊನೆಗಾಲದಲ್ಲಿ ಬದುಕಿನಲ್ಲಿ ನೆಲೆಯೂರುತ್ತಾರೆ. ಒಂದಷ್ಟು ಭಕ್ತಿ ಗೀತೆಗಳನ್ನು ರಚಿಸಿ ಸ್ನೇಹಿತರಿಂದ ಹಾಡಿಸಿ ಯೂಟ್ಯೂಬಿಗೆ ಹಾಕುತ್ತಾರೆ. ತಮ್ಮ ಅನುಭವಗಳನ್ನು ದಾಖಲಿಸಬೇಕೆಂಬ ಅಲೋಚನೆ ಬಂದು ಅತ್ಮಕಥನ ಬರೆಯುತ್ತಾರೆ. ಲಕ್ಷ್ಮಿ ಭಟ್ ಅವರ ನಿರೂಪಣಾ ಶೈಲಿ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ಕೃತಿಯ ಕೊನೆಯಲ್ಲಿ ಇರುವ ಭಕ್ತಿಗೀತೆಗಳು ಛಂದೋಬದ್ಧವಾಗಿದ್ದು ಹಾಡಲು ಅನುಕೂಲವಾಗಿವೆ.
ವಿಮರ್ಶಕಿ : ಪಾರ್ವತಿ ಜಿ. ಐತಾಳ್
ಡಾ. ಪಾರ್ವತಿ ಗಂಗಾಧರ ಐತಾಳರು ಕಾಸರಗೋಡು ಜಿಲ್ಲೆಯ ಧರ್ಮತ್ತಡ್ಕದವರು. ಕಣ್ಣೂರು ವಿಶ್ವವಿದ್ಯಾನಿಲಯದಿಂದ ಪಿಎಚ್.ಡಿ ಪದವಿಯನ್ನು ಪಡೆದ ಇವರು ಮುಲ್ಕಿಯ ವಿಜಯಾ ಕಾಲೇಜು ಹಾಗೂ ಕುಂದಾಪುರದ ಭಂಡಾರ್ಕರ್ಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಮತ್ತು ಇಂಗ್ಲೀಷ್ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಶ್ರೀಮತಿ ಪಾರ್ವತಿ ಜಿ. ಐತಾಳರು ಸಣ್ಣ ಕಥೆ, ಕವನ, ನಾಟಕ ಬರೆದಿರುವುದರೊಂದಿಗೆ ಅನುವಾದ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಿದ್ದಾರೆ. ಉದ್ಯೋಗದೊಂದಿಗೆ ದಿನ ಪತ್ರಿಕೆಗಳಲ್ಲಿ ಲೇಖನ ಬರೆಯಲಾರಂಬಿಸಿದ ಇವರು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂದು ಕನ್ನಡ ಮಾತೃಭಾಷೆಯಾಗಿರುವ ಇವರು ಸ್ನೇಹಿತರಿಂದ ಮಲಯಾಳಂ ಭಾಷೆಯನ್ನು ಕಲಿತು, ಕನ್ನಡ, ಹಿಂದಿ, ಇಂಗ್ಲಿಷ್, ಮಲಯಾಳಂ ಮತ್ತು ತುಳು ಭಾಷೆಗಳನ್ನು ತಿಳಿದ ಪಂಚಭಾಷಾ ಪ್ರವೀಣೆಯಾಗಿದ್ದಾರೆ.
ಡಾ. ಪಾರ್ವತಿಯವರು ಸ್ವತಂತ್ರ ಸಾಹಿತ್ಯದೊಂದಿಗೆ ವಿವಿಧ ಸಾಹಿತಿಗಳ ಹಿಂದಿ, ಮಲಯಾಳಂ, ಇಂಗ್ಲೀಷ್ ಮೂಲದ ನಾಟಕ, ಕಾದಂಬರಿ, ಸಣ್ಣ ಕತೆ ಇತ್ಯಾದಿಗಳನ್ನು ಅನುವಾದ ಮಾಡಿದ ಖ್ಯಾತಿ ಇವರದು. ಮಲ್ಲಿಕಾ ಪ್ರಶಸ್ತಿ, ಗೋವಿಂದರಾವ್ ದತ್ತಿನಿಧಿ ವಿಮರ್ಶಾ ಲೇಖನ ಬಹುಮಾನ ಮತ್ತು ಎಚ್. ಸಾವಿತ್ರಮ್ಮ ದತ್ತಿನಿಧಿ ಪ್ರಶಸ್ತಿ ಇವುಗಳು ಸಾಹಿತ್ಯ ಕ್ಷೇತ್ರದ ಇವರ ಸಾಧನೆಗೆ ಬಂದ ಪ್ರಶಸ್ತಿಗಳು.