ರಂಗ ಕರ್ಮಿ ಮ್ಯಾಥ್ಯೂ ಸುರಾನಿ ಅವರ ಸುರಾನಿಯ ನಿವಾಸದ ಆವರಣದಲ್ಲಿ ದಿನಾಂಕ 24 ಜನವರಿ 2025ರ ಸಂಜೆ ಅಡುಗೆಯ ಘಮ ಘಮ ಮತ್ತು ಅಡುಗೆಯದ್ದೇ ಮಾತುಗಳು !! ಇದನ್ನು ಆಸ್ವಾದಿಸಲು ಮತ್ತು ಮಾತುಗಳನ್ನು ಕೇಳಿಸಿಕೊಳ್ಳಲು ರಂಗಾಸಕ್ತರು ಮತ್ತು ಗ್ರಾಮಸ್ಥರು ಕುತೂಹಲದಿಂದ ಬಂದು ಸೇರಿದ್ದರು.
ಇದೇನು ಅಡುಗೆ ಮಾತಿರಬಹುದು ಎಂದು ಆಗಮಿಸಿದ್ದ ರಂಗಾಸಕ್ತರಿಗೆ ನಿರಾಶೆಯಂತೂ ಖಂಡಿತಾ ಆಗಲಿಲ್ಲ. ಏಕೆಂದರೆ ಅಡುಗೆ ಮನೆಯಲ್ಲಿ ಹೆಣ್ಣೊಬ್ಬಳು ಅಡುಗೆ ಮಾಡುವಾಗ ಪಡುವ ಪಡಿಪಾಟಲುಗಳು ಅನಾವರಣಗೊಂಡಿದ್ದು ಮಾತ್ರವಲ್ಲ, ಅಡುಗೆ ಮಾಡಿ ಬಳಸುವುದರಲ್ಲಿಯೇ ಸುಖ ಕಾಣುವ ಅವಳ ಸಹನಾಶೀಲ ಗುಣವೂ ಅಭಿವ್ಯಕ್ತವಾಯಿತು.
ಲಕ್ಷಾಧೀಶ್ವರ, ಕೋಟ್ಯಾಧೀಶರಾದರೂ ಬದುಕಲು ಹಣ ತಿನ್ನಲಾಗುತ್ತದೆಯೇ ?? ಹಸಿವ ನೀಗಿಸಿಕೊಳ್ಳಲು ಅಡುಗೆ ಮಾಡಲೇಬೇಕು. ಈ ಅಡುಗೆ ತಯಾರಿಗೆ ಬೇಕಲ್ಲವೆ ಅಕ್ಕಿ, ಜೋಳ, ರಾಗಿ, ಧಾನ್ಯಗಳು, ತರಕಾರಿಗಳು. ಇದೇನು ಯಾವುದಾದರೂ ಕಾರ್ಖಾನೆಯಲ್ಲಿ ತಯಾರಾಗಿ ಬರುತ್ತವೆಯೇ?! ಅಡುಗೆಗೆ ಪದಾರ್ಥಗಳು ಬರುವುದೇ ರೈತರಿಂದ ತಾನೆ ? ಅಂದ ಹಾಗೆ ಎಲ್ಲರ ಹಸಿವ ನೀಗಿಸುವ ಈ ರೈತ ಸುಖವಾಗಿದ್ದಾನೆಯೇ ??
ಇದೆಲ್ಲವನ್ನೂ ಪ್ರಸಿದ್ದ ರಂಗ ನಟಿ, ನೀನಾಸಂ ಹಾಗೂ ದೆಹಲಿಯ ಎನ್.ಎಸ್.ಡಿ.ಯಲ್ಲಿ ತರಬೇತಿ ಪಡೆದಿರುವ ಹಾಗೂ ಈಗಾಗಲೇ ‘ಲೀಕ್ ಔಟ್’ ನಾಟಕದ ನೂರು ಪ್ರಯೋಗಗಳ ದಾಖಲೆ ಮಾಡಿರುವ ಮತ್ತು ಅನೇಕ ಕಲಾತ್ಮಕ ಚಲನಚಿತ್ರಗಳಲ್ಲಿ ಅದ್ಭುತವಾಗಿ ನಟಿಸಿ ನಾಡಿನುದ್ದಗಲ ಗಮನ ಸೆಳೆದಿರುವ ಅಕ್ಷತಾ ಪಾಂಡವಪುರ ಇವರು ತಮ್ಮ ‘ಅಡುಗೆ ಮಾತು’ ಏಕವ್ಯಕ್ತಿ ನಾಟಕ ಪ್ರದರ್ಶನದಲ್ಲಿ ನೋಡುಗರ ಮನಮುಟ್ಟುವಂತೆ ಅಭಿನಯ ಮತ್ತು ಮಾತುಗಳ ಮೂಲಕ ಕಟ್ಟಿಕೊಡುತ್ತಾರೆಂದರೆ ನಿಮಗೆಲ್ಲ ಆಶ್ಚರ್ಯ ಮತ್ತು ಕುತೂಹಲವಾಗುವುದು ಸಹಜವಲ್ಲವೆ ??
ನಾಟಕ ನೋಡಲು ಬಂದವರನ್ನೇ ತಮ್ಮ ನಾಟಕದ ಪಾತ್ರಗಳನ್ನಾಗಿ ಪರಿವರ್ತಿಸಿ ಎಲ್ಲರನ್ನೂ ಚಿಂತನೆಗೆ ಹಚ್ಚುವ ಅಕ್ಷತಾರ ರಂಗ ಪ್ರತಿಭೆಯೇ ಅನನ್ಯವಾದುದು. ಈ ನಾಟಕದಲ್ಲಿ ತನ್ಮಯರಾಗಿ ಬಿಡುವ ಅಕ್ಷತಾ ತಾನು ಹೇಳುವ ವಿಷಯ ಮತ್ತು ಸಾಮಾಜಿಕ ಸಂದೇಶಗಳು ನೋಡುಗರನ್ನು ಮುಟ್ಟಿ ಅವರ ಮನಸ್ಸಿನಲ್ಲಿ ಅದು ಅಚ್ಚೊತ್ತಬೇಕು ಎಂದು ಪ್ರಯಾಸ ಪಡುವುದನ್ನು ನೋಡುವಾಗ ಯಾರಿಗಾದರೂ ಇವರ ಅಗಾಧವಾದ ಮಾನಸಿಕ ಪೂರ್ವ ತಯಾರಿ ಮತ್ತು ಪರಿಶ್ರಮದ ಪರಿಚಯವಾಗದಿರದು.
ಇಷ್ಟಾಗಿಯೂ ತಾನು ತನ್ಮಯವಾಗಿ ನಾಟಕವನ್ನು ಮುನ್ನಡೆಸುತ್ತಿರುವಾಗ ಒಂದು ಸಣ್ಣ ಕರ್ಕಶ ಸದ್ದು, ಅಮ್ಮಂದಿರ ಸಂಗಡ ಬಂದಿರುವ ಪುಟಾಣಿಗಳ ಛೇಷ್ಟೆ ಅಥವಾ ಯಾರೋ ಒಬ್ಬ ಪ್ರೇಕ್ಷಕನ ಎಡಬಿಡಂಗಿತನವೋ ತಲೆಹರಟೆಯೋ ಅಕ್ಷತಾರ ಏಕಾಗ್ರತೆಗೆ ಭಂಗ ತಂದು ತಾಳ ತಪ್ಪುವಂತೆ ಮಾಡಿಬಿಡಬಹುದು.
ಆದರೂ ದಿನಕ್ಕೊಂದು ತಾಣ, ದಿನಕ್ಕೊಂದು ಭಿನ್ನ ಪ್ರೇಕ್ಷಕ ಗಣ – ಇವೆಲ್ಲವನ್ನೂ ಸರಿದೂಗಿಸಿಕೊಂಡು ಹೋಗುವ ಚಾಕಚಕ್ಯತೆ, ಸಂಯಮ ಅಕ್ಷತಾರಿಗಿದೆ. ನಿಜಕ್ಕೂ ಇದು ಅಕ್ಷತಾರಲ್ಲಿರುವ ದೊಡ್ಡ ಶಕ್ತಿ ಮತ್ತು ಪ್ರತಿಭೆ. ಇವೆಲ್ಲದರ ಪರಿಚಯ ಮತ್ತು ದರ್ಶನ ಪಡೆಯಲು ನೀವೂ ಅಕ್ಷತಾರ ‘ಅಡುಗೆ ಮಾತು’ ಮತ್ತು ‘ಲೀಕ್ ಔಟ್’ ನಾಟಕಗಳನ್ನು ನೋಡಿ.
– ಟಿ.ಕೆ. ರಮೇಶ್ ಶೆಟ್ಟಿ ತೀರ್ಥಹಳ್ಳಿ