ಕೋಟ : ಐವತ್ತರ ಸಂಭ್ರಮವನ್ನು ಆಚರಿಸುತ್ತಿರುವ ಸಾಲಿಗ್ರಾಮ ಮಕ್ಕಳ ಮೇಳದ ಸುವರ್ಣ ಪರ್ವ-6 ಕಾರ್ಯಕ್ರಮದ ಅಂಗವಾಗಿ ‘ಕಾರ್ಕಡ ಶ್ರೀನಿವಾಸ ಉಡುಪ ಸಂಸ್ಮರಣೆ’, ‘ಹಂದೆ ಉಡುಪ ಪ್ರಶಸ್ತಿ ಪ್ರದಾನ’ ಸಮಾರಂಭವು ದಿನಾಂಕ 31 ಜನವರಿ 2025 ರಂದು ಕೋಟ ಪಟೇಲರ ಮನೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾ ಕುಮಾರಿ ಮಾತನಾಡಿ “ಇಂದಿನ ಕಾಲ ಘಟ್ಟದಲ್ಲಿ ಯುವ ಜನತೆ ಕಲೆ ಸಾಹಿತ್ಯದತ್ತ ಆಸಕ್ತಿವಹಿಸಬೇಕಾದ ಅಗತ್ಯವಿದೆ. ಮಕ್ಕಳಲ್ಲಿ ಬಿತ್ತಿದ ಬೀಜ ಮುಂದೆ ಒಳ್ಳೆಯ ಬೆಳೆಯಾಗಿ ಬೆಳೆಯಲಿದೆ. ಸಾಲಿಗ್ರಾಮ ಮಕ್ಕಳ ಮೇಳ ಸುಮಾರು ಐವತ್ತು ವರ್ಷಗಳಿಂದ ಕೋಟ ಪರಿಸರದ ಮಕ್ಕಳಿಗೆ ಒಳ್ಳೆಯ ವೇದಿಕೆಯನ್ನು ಒದಗಿಸಿಕೊಟ್ಟಿರುವುದು ಅಭಿನಂದನೀಯ. ಈ ಎರಡು ದಿನಗಳ ಕಲೋತ್ಸವ ಯಶಸ್ವಿಯಾಗಲಿ” ಎಂದು ಶುಭಯಹಾರೈಸಿದರು. ರಾಷ್ಟ್ರೀಯ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ ಅವರಿಗೆ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕರಲ್ಲೋರ್ವರಾದ ಎಚ್. ಶ್ರೀಧರ ಹಂದೆಯವರ ಹೆಸರಿನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಮಕ್ಕಳ ಮೇಳದ ಅಧ್ಯಕ್ಷರಾದ ಬಲರಾಮ ಕಲ್ಕೂರ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಯಕ್ಷ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ, ಉದ್ಯಮಿಗಳಾದ ಬೆಳ್ವೆ ಗಣೇಶ್ ಕಿಣಿ, ಕಲ್ಕೂರ ಪ್ರತಿಷ್ಠಾನದ ಪ್ರದೀಪ ಕುಮಾರ ಕಲ್ಕೂರ, ಹಂಗಾರಕಟ್ಟೆಯ ಸಾಮಾಜಿಕ ಶೈಕ್ಷಣಿಕ ಚಿಂತಕ ಇಬ್ರಾಹಿಂ ಸಾಹೇಬ್, ಗೀತಾನಂದ ಫೌಂಡೇಶನ್ ಇದರ ಪ್ರವರ್ತಕರಾದ ಆನಂದ ಸಿ. ಕುಂದರ್, ಕೋಟ ವಿದ್ಯಾ ಸಂಘದ ಕಾರ್ಯದರ್ಶಿಗಳಾದ ಎಂ. ರಾಮದೇವ ಐತಾಳ, ಬುರಾಕೋ ಗ್ಯಾಸಸ್ ಇದರ ನಿವೃತ್ತ ಮ್ಯಾನೆಜರ್ ಬೆಂಗಳೂರಿನ ಶಂಕರನಾರಾಯಣ ಹೆಬ್ಬಾರ್, ಮಕ್ಕಳ ಮೇಳದ ಕಾರ್ಯಾಧ್ಯಕ್ಷ ಮಹೇಶ ಉಡುಪ, ಎಚ್. ಶ್ರೀಧರ ಹಂದೆ, ಉಪಾಧ್ಯಕ್ಷ ಜನಾರ್ದನ ಹಂದೆ, ಶಿಕ್ಷಕಿ ವಿನಿತ ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಸುಜಯಿಂದ್ರ ಹಂದೆ ಸ್ವಾಗತಿಸಿ, ಅಭಿಲಾಷ ಅಭಿನಂದನೆಯ ಮಾತುಗಳನ್ನಾಡಿ, ಕುಮಾರಿ ಕಾವ್ಯ ಕಾರ್ಯಕ್ರಮ ನಿರ್ವಹಿಸಿ, ಪೂರ್ಣಿಮಾ ವಂದಿಸಿದರು. ಸಭಾಕಾರ್ಯಕ್ರಮದ ಬಳಿಕ ಯಶಸ್ವೀ ಕಲಾವೃಂದ ಕೊಮೆ ತೆಕ್ಕಟ್ಟೆ ಇಲ್ಲಿನ ಕಲಾವಿದರಿಂದ ‘ಯಕ್ಷ ಗಾನ ವೈವಿಧ್ಯ’ ಹಾಗೂ ಹಂದೆ ಕುಟುಂಬದ ಸದಸ್ಯರಿಂದ ಕಲಾ ಸಾಹಿತ್ಯ ಸಡಗರ ಕಾರ್ಯಕ್ರಮ ನಡೆಯಿತು.