ಮೂಲ್ಕಿ : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮೂಲ್ಕಿ ತಾಲೂಕು ಘಟಕವು ದಿನಾಂಕ 08 ಫೆಬ್ರವರಿ 2025ರಂದು ಐಕಳ ಪೊಂಪೈ ಕಾಲೇಜಿನಲ್ಲಿ ಮೂಲ್ಕಿ ತಾಲೂಕು ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದೆ. ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಸಾಹಿತಿ ಶ್ರೀಧರ ಡಿ.ಎಸ್. ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮ್ಮೇಳನವನ್ನು ಶಾಸಕ ಉಮಾನಾಥ ಕೋಟ್ಯಾನ್ ಉದ್ಘಾಟಿಸಲಿದ್ದಾರೆ.
ಬೆಳಿಗ್ಗೆ ಮೂರುಕಾವೇರಿಯಿಂದ ಪೊಂಪೈ ಕಾಲೇಜುವರೆಗೆ ನಡೆಯಲಿರುವ ಕನ್ನಡ ಭುವನೇಶ್ವರಿ ಮೆರವಣಿಗೆಯನ್ನು ಉದ್ಯಮಿ ಶ್ರೀನಿವಾಸ ಆಚಾರ್ಯ ಉದ್ಘಾಟಿಸಲಿದ್ದಾರೆ. ಕಾಲೇಜಿನ ಸಂಚಾಲಕ ರೆ. ಫಾ. ಓಸ್ವಾಲ್ಡ್ ಮೊಂತೆರೋ ವಸ್ತುಪ್ರದರ್ಶನವನ್ನು ಉದ್ಘಾಟಿಸಲಿದ್ದು, ಕ.ಸಾ.ಪ. ದ.ಕ. ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಆಶಯನುಡಿಗಳನ್ನಾಡಲಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತ ಕಥೆಗಾರ ಅಬ್ದುಲ್ ರಶೀದ್ ಸಮ್ಮೇಳನಕ್ಕೆ ನುಡಿಸೇಸೆಗೈಯಲಿದ್ದು, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಗಣೇಶ್ ಅಮೀನ್ ಸಂಕಮಾರ್, ಹಾಲು ಉತ್ಪಾದಕರ ಒಕ್ಕೂಟದ ಕೆ.ಪಿ. ಸುಚರಿತ ಶೆಟ್ಟಿ, ಮೂಲ್ಕಿ ತಹಶೀಲ್ದಾರ್ ಪ್ರದೀಪ್ ಕುರ್ಡೇಕರ್, ರೋಟರಿಯ ಧನಂಜಯ ಶೆಟ್ಟಿಗಾರ್ ಭಾಗವಹಿಸಲಿದ್ದಾರೆ ಎಂದು ಸಮ್ಮೇಳನ ಸಮಿತಿಯ ಅಧ್ಯಕ್ಷ ಪೃಥ್ವೀರಾಜ ಆಚಾರ್ಯ ತಿಳಿಸಿದ್ದಾರೆ.
ಮೂಲ್ಕಿ ತಾಲೂಕಿನಲ್ಲಿ ಯಕ್ಷಗಾನ ವೈಭವ ವಿಚಾರಗೋಷ್ಟಿಯಲ್ಲಿ ಕಟೀಲು ದೇವಿ ಪ್ರಕಾಶ ರಾವ್, ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿ ವಿಚಾರಗೋಷ್ಟಿಯಲ್ಲಿ ನಡುಗೋಡು ಶಾಲೆಯ ಯಕ್ಷ, ಮೂಲ್ಕಿ ಸರಕಾರಿ ಕಾಲೇಜಿನ ಲಕ್ಷ್ಮೀ, ಐಕಳ ಪೊಂಪೈ ಕಾಲೇಜಿನ ಸನ್ನಿಧಿ, ಓದುವ ಸೊಬಗು, ಕೇಳುವ ಸೊಗಸು ವಿಚಾರಗೋಷ್ಟಿಯಲ್ಲಿ ಪಾಂಡುರಂಗ ಭಟ್, ದೇವದಾಸ ಮಲ್ಯ, ವಿಶ್ವನಾಥ ಕೆ. ಕವತ್ತಾರು, ಡಾ. ರುಡಾಲ್ಫ್ ನೊರೊನ್ಹ ಮಾತನಾಡಲಿದ್ದು, ಡಾ. ಸೋಂದಾ ಭಾಸ್ಕರ ಭಟ್ ಸಮನ್ವಯಗೊಳಿಸಲಿದ್ದಾರೆ. ಚಿತ್ರ ಮತ್ತು ಸಾಹಿತ್ಯ ಗೋಷ್ಟಿಯಲ್ಲಿ ಡಾ. ಇ. ವಿಕ್ಟರ್ ವಾಸ್ ಮಾತನಾಡಲಿದ್ದಾರೆ. ಕವಿ ಸಮಯದಲ್ಲಿ ಶ್ರೀಮತಿ ಕಸ್ತೂರಿ ಪಂಜ, ಮನ್ಸೂರ್ ಮೂಲ್ಕಿ ಹಾಗೂ ಶ್ರೀಮತಿ ಸೌಧಾಮಿನಿ ಶೆಟ್ಟಿ ಎಳತ್ತೂರು ಇವರ ಕವನಗಳನ್ನು ದಿನೇಶ್ ಆಚಾರ್ ಕೊಡೆತ್ತೂರು, ಆಶ್ವೀಜಾ ಉಡುಪ ಹಾಡಲಿದ್ದಾರೆ.
‘ಹೊತ್ತಗೆಯ ಹೊತ್ತು : ಪುಸ್ತಕದ ಮನೆಯ ಕಷ್ಟ ಸುಖ’ ವಿಚಾರಗೋಷ್ಟಿಯಲ್ಲಿ ಡಾ. ಪ್ರಕಾಶ್ ಕಾಮತ್, ಸುಮಿತ್ರಾ ಪಕ್ಷಿಕೆರೆ ಹಾಗೂ ತಾಲೂಕಿನ ವಿವಿಧ ಗ್ರಂಥಾಲಯಗಳ ಗ್ರಂಥಪಾಲಕರು, ಓದುಗರು ಮಾತನಾಡಲಿದ್ದು, ಅವರಿಗೆ ಗೌರವಾರ್ಪಣೆಯನ್ನು ಡಾ. ಹರಿಕೃಷ್ಣ ಪುನರೂರು, ವಂ. ಜೊಕಿಂ ಫೆರ್ನಾಂಡಿಸ್ ನೆರವೇರಿಸಲಿದ್ದಾರೆ. ಸಮಾಪನ ಸಮಾರಂಭದಲ್ಲಿ ಕಟೀಲು ಶ್ರೀಹರಿನಾರಾಯಣದಾಸ ಆಸ್ರಣ್ಣ ಸಮಾಪನದ ಮಾತುಗಳನ್ನಾಡಲಿದ್ದು, ತಾಲೂಕಿನ ವಿವಿಧ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ನೃತ್ಯವೈವಿಧ್ಯಗಳು, ತಾಲೂಕಿನ ಗಾಯಕರಿಂದ ಕನ್ನಡ ಹಾಡುಗಳ ಗಾಯನ ನಡೆಯಲಿದೆ. ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲರಿಗೂ ಕನ್ನಡ ಶಾಲು, ಬಟ್ಟೆ ಚೀಲ, ಸಾಹಿತ್ಯ ಪುಸ್ತಕ, ತರಕಾರಿ ಸಸಿ, ಬೀಜಗಳನ್ನು ವಿತರಿಸಲಾಗುತ್ತದೆ. ಸಮ್ಮೇಳನದಲ್ಲಿ ಪುಸ್ತಕ, ಸಾವಯವ ವಸ್ತುಗಳ ಪ್ರದರ್ಶನ, ಮಾರಾಟ ನಡೆಯಲಿದೆ ಎಂದು ಸಮ್ಮೇಳನ ಸಮಿತಿಯ ಕಾರ್ಯದರ್ಶಿ ಶ್ರೀಮತಿ ಹಿಲ್ಡಾ ಡಿಸೋಜ ತಿಳಿಸಿದ್ದಾರೆ.
ಮೂಲ್ಕಿ ತಾಲೂಕು ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ಅನುಕೂಲವಾಗುವಂತೆ ತಾಲೂಕಿನ ಮಂಗಳೂರು ಉತ್ತರ ವಲಯದ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಅನ್ಯಕಾರ್ಯ ನಿಮಿತ್ತ ರಜೆಯ ಸೌಲಭ್ಯವನ್ನು ಪಡೆಯುವ ಅವಕಾಶವನ್ನು ಶಿಕ್ಷಣ ಇಲಾಖೆ ನೀಡಿದೆ. ವಿದ್ಯಾರ್ಥಿಗಳೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕಾಗಿ ಸಮ್ಮೇಳನ ಸಂಚಾಲಕ, ಪೊಂಪೈ ಕಾಲೇಜಿನ ಪ್ರಾಚಾರ್ಯ ಡಾ. ಪುರುಷೋತ್ತಮ ಕೆ.ವಿ. ವಿನಂತಿಸಿದ್ದಾರೆ.