“ನಿನ್ನ ಕೈ ನನ್ನ ಕೈಯ್ಯಂತೆ ಏಕಿಲ್ಲ? ಸುಕ್ಕು ಸುಕ್ಕಾಗಿದೆ. ನೀಲಿ ಗೆರೆಗಳಿವೆ”
“ನನ್ನ ಕೈಯೂ ಹಿಂದೆ ನಿನ್ನ ಕೈಯಂತೆಯೇ ಇತ್ತು”
“ಎಲ್ಲ ಸೈನಿಕರೂ ಕೆಟ್ಟವರಲ್ಲ. ನನ್ನಪ್ಪ ತುಂಬ ಒಳ್ಳೆಯವನು”
“ಇಲ್ಲ. ಒಳ್ಳೆ ಸೈನಿಕರು ಇರೋದೇ ಇಲ್ಲ”
“ನಿನಗೆ ನೋವಾಗುವದಿಲ್ಲವಾ?”
“ನನಗೆ ನೋವೇನೆಂದರೇ ಮರೆತುಹೋಗಿದೆ”
ನಾಝಿ ಕಮಾಂಡಂಟ್ ವ್ಯಾಗ್ನೆಟ್ ನ ಮಗ ಅಲೆಕ್ಸ್ ಮತ್ತು ನಿರಾಶ್ರಿತರ ಕ್ಯಾಂಪ್ ನ ಹುಡುಗ ಈತನ್ ಹೀಗೆ ಮಾತಾಡುತ್ತಿದ್ದರೆ ಪ್ರೇಕ್ಷಕರ ಕಣ್ಣುಗಳು ಹನಿಗೂಡುತ್ತಿದ್ದವು.
ದಿನಾಂಕ 01 ಫೆಬ್ರವರಿ 2025ರಂದು ಬೆಂಗಳೂರು ‘ಭಾರತ ರಂಗ ಮಹೋತ್ಸವ’ದಲ್ಲಿ ಪ್ರದರ್ಶಿತವಾದ ‘ಎ ಫ್ರೆಂಡ್ ಬಿಯಾಂಡ್ ದ ಫೆನ್ಸ್’ನ ಪ್ರದರ್ಶನವಿದು. ಎರಡನೆಯ ಮಹಾಯುದ್ಧದ ಕರಾಳ ಮುಖಗಳನ್ನು, ನಾಝಿಗಳ ಕ್ರೌರ್ಯವನ್ನು ಮಕ್ಕಳ ಬದುಕಿನ ಮೂಲಕ ಕಾಣುವ ಪ್ರಯತ್ನವಿದು. ಕನ್ನಡದ ಮಕ್ಕಳ ರಂಗಭೂಮಿಯಲ್ಲಿ ಇಂಥ ಪ್ರಯತ್ನಗಳು ಅಲ್ಲಲ್ಲಿ ನಡೆದಿವೆ. ಬಿ ಸುರೇಶ್ ರ ‘ರೆಕ್ಕೆ ಕಟ್ಟುವಿರಾ’ ನಾಟಕದಲ್ಲಿ ಮೊದಲ ಅಣುಬಾಂಬು ಮಾಡಿದ ವಿನಾಶವನ್ನು ‘ಕಿನ್ಲೆ’ ಎಂಬ ಹುಡುಗಿಯ ನೆನಪುಗಳ ಕಿಂಡಿಯಲ್ಲಿ ನೋಡುವ ಪ್ರಯತ್ನವಿದೆ. ಸುಧಾ ಆಡುಕಳರ ‘ಮಕ್ಕಳ ರವೀಂದ್ರರು’ ನಾಟಕದ ‘ವಿನಾಶ’ ಎನ್ನುವ ಅಜ್ಜ ಮೊಮ್ಮಗಳ ಕತೆಯಲ್ಲಿ ಯುದ್ಧದ ಅನಾಹುತದಲ್ಲಿ ಪುಟ್ಟ ಹುಡುಗಿ ನೆಟ್ಟ ಬಿಳಿಯ ದಾಸವಾಳದ ಹೂ ಕೆಂಪಾಗಿಬಿಡುವ ರೂಪಕವಿದೆ.
A friend….ನಾಟಕ ಹುಡುಗರಿಬ್ಬರ ಗೆಳೆತನದ ಬಂಧದ ಎಳೆ ಹಿಡಿದು ಯುದ್ಧ ವಿನಾಶದ ಕತೆ ಹೇಳುವ ಪ್ರಯತ್ನ ಮಾಡುತ್ತದೆ. ನಾಝಿಗಳ ಕುಪ್ರಸಿದ್ಧ ಕಾನ್ಸಂಟ್ರೇಶನ್ ಕ್ಯಾಂಪ್ ಒಂದರ ಕಮಾಂಡೆಂಟ್ ನ ಮಗ ಅಲೆಕ್ಸ ಮತ್ತು ಜ್ಯೂ ಸೆಟಲ್ಮೆಂಟ್ ನ ಹುಡುಗ ಈತನ್ ರ ಗೆಳೆತನದ ಕತೆಯಿದು.
ಸದಾ ಹೊಸತನಕ್ಕೆ ತುಡಿಯುವ ಹುಡುಗ ಅಲೆಕ್ಸ್ ಬೇಲಿಯಾಚೆಯ ಪಟ್ಟೆ ಪಟ್ಟೆ ಬಟ್ಟೆ ತೊಟ್ಟ ಬಾಲ ಕೈದಿ ಈತನ್ ನನ್ನು ಅಚಾನಕ್ಕಾಗಿ ಕಂಡುಬಿಡುತ್ತಾನೆ. ಒಂದೇ ಓರಗೆಯ ಇಬ್ಬರಲ್ಲಿ ಗೆಳೆತನ ಮೂಡುತ್ತದೆ. ಈ ಗೆಳೆತನಕ್ಕೆ ಮಾಧ್ಯಮವಾಗಿರೋದು ಒಂದು ಪುಟಾಣಿ ಆನೆ ಮರಿ ‘ಟಿಂಬೋ’. ಈ ಟಿಂಬೋ ವಾರ್ಸಾವ್ ಝೂನಲ್ಲಿ ತಾಯಿಯೊಂದಿಗೆ ನೆಮ್ಮದಿಯಿಂದಿದ್ದ ಪುಟಾಣಿ. ಈತನ್ ನ ಝೂ ಗೆಳೆಯ. ಯುದ್ಧದ ಗಡಿಬಿಡಿಯಲ್ಲಿ ತಾಯಿಯನ್ನು ಕಳೆದುಕೊಂಡು ಈಗ ನಾಝಿಗಳ ಆವಾರ ಸೇರಿಕೊಂಡುಬಿಟ್ಟಿದೆ. ಬೇಲಿಯಾಚೆಯ ಹುಡುಗನಿಗೀಗ ಅದು ದೂರದ ಗೆಳೆಯ.
ನಂತರದ ಘಟನೆಗಳಲ್ಲಿ, ಅಚಾನಕ್ಕಾಗಿ ನಡೆದ ತಳ್ಳಾಟದಲ್ಲಿ ನಾಝಿ ಅಧಿಕಾರಿಯೊಬ್ಬ ಆ ಪುಟ್ಟ ಆನೆಮರಿಯನ್ನು ಕೊಂದುಬಿಡುತ್ತಾನೆ. ಅಲೆಕ್ಸ್ ಮನೆಗೆ ಕೆಲಸಕ್ಕೆ ಹೋದ ಈತನ್ ಗೆ ಕೇಕ್ ತಿಂದ ನೆಪದಲ್ಲಿ ಶಿಕ್ಷೆಯಾಗುತ್ತದೆ..ಹೀಗೆ ಕತೆ ಸಾಗುತ್ತದೆ. ಸರಳವಾದ, ಭಾವನಾತ್ಮಕ ಸಂಭಾಷಣೆಗಳ ಮೂಲಕ ಜೊತೆಗೆ ಸಂಯಮದ ಅಭಿನಯದ ಮೂಲಕ ವಿಷಾದದ ಧ್ವನಿಯನ್ನು ಪ್ರೇಕ್ಷಕರಿಗೆ ಮುಟ್ಟಿಸುತ್ತಾರೆ.
ನಾಟಕದ ರಚನೆಗಾರ, ನಿರ್ದೇಶಕ ಶ್ರವಣ ಹೆಗ್ಗೋಡು. ಎಲ್ಲ ಘಟನೆಗಳಿಗೂ ಸಾಕ್ಷಿಯಾಗಿ ನಿಂತ ಮುಳ್ಳು ಬೇಲಿಯನ್ನು ಸಾಂಕೇತಿಕವಾಗಿಯೂ ಒಂದು ಪ್ರಭಾವಶಾಲಿಯಾದ ರಂಗಸಜ್ಜಿಕೆಯಾಗಿಯೂ ಉಪಯೋಗಿಸಿಕೊಳ್ಳುತ್ತಾರೆ. ಸರಳವಾದ ರಂಗಪರಿಕರಗಳು ಪೂರಕವಾಗಿವೆ. ನಾಟಕದಲ್ಲಿ ಬರುವ ಡಾಕ್ಟರ್ ಜ್ಯಾಕಬ್ ನ ಘಟನೆಯಾಗಲೀ, ಊಟದ ಟೇಬಲ್ ಮೇಲೆ ಕಮಾಂಡಂಟ್ ನ ವಿಚಾರಣೆಯಾಗಲೀ ನಾಝಿಗಳ ಕ್ರೌರ್ಯದ ತೀವ್ರತೆಯನ್ನು ಬಿಂಬಿಸುತ್ತ, ನಾಟಕದ ಉತ್ತುಂಗದಲ್ಲಿ ಪರಾಕಾಷ್ಠೆಗೆ ತಂದು ಬಿಡುವಲ್ಲಿ ಸಹಕಾರಿಯಾಗುತ್ತವೆ. ಈ ನಾಟಕದಲ್ಲಿ ಬೆಳಕಿನದೇ ಒಂದು ಪಾತ್ರವೇನೋ ಎನಿಸುವಷ್ಟು ಪ್ರಭಾವಶಾಲಿಯಾಗಿದೆ.
ನಾಟಕದ ಹೈಲೈಟ್ ದೈತ್ಯಗಾತ್ರದ ಆನೆ ಬೊಂಬೆ. ಜಪಾನಿನ ಬುನ್ರಾಕು ಬೊಂಬೆಗಳನ್ನು ಮೂಲವಾಗಿಟ್ಟುಕೊಂಡು ರಚಿತವಾದ ಹೂಬೇಹೂಬು ಆನೆಯನ್ನು ಹೋಲುವ ಬೊಂಬೆಯಿದು. ಅದು ರಂಗಕ್ಕೆ ಬಂದಾಕ್ಷಣ ಥಟ್ಟನೆ ಸೆಳೆದುಬಿಡುವಂಥದ್ದು. ಮೂರು ಜನ ಕಲಾವಿದರು ಆಡಿಸುವ ಕಲಾತ್ಮಕತೆ ನಿಜಕ್ಕೂ ಬೆರಗುಗೊಳಿಸುವಂತದ್ದು. ಜೊತೆಗೊಂದು ಮರಿಯಾನೆಯೂ ಇದೆ. ಚಟಪಟನೆ ಓಡುತ್ತ ಚೆಂಡಾಡುವ ಮರಿಯಿದು. ಒಳಗಿರುವ ಕಲಾವಿದನಿಗೂ ಹ್ಯಾಟ್ಸಾಫ್. ಜೊತೆ ಜೊತೆಯಲ್ಲೇ ನೀಲಿ ಬೆಳಕಿಗೆ ಹೊಳೆವ ಬೊಂಬೆಗಳು ಕನಸಿನ ವಾತಾವರಣವನ್ನೂ ಉತ್ತುಂಗದ ಗ್ಯಾಸ್ ಚೇಂಬರ್ ನ ಚಿಮಣಿಗಳ ಕ್ರೌರ್ಯವನ್ನೂ ಅಷ್ಟೇ ತೀಕ್ಣವಾಗಿ ಕಟ್ಟಿಕೊಡುತ್ತವೆ. ನಾಟಕದ ಕೊನೆಯನ್ನು ತುಂಬ ಜಾಣತನದಿಂದ ಕಟ್ಟಿದ್ದಾರೆ ಶ್ರವಣ್.
ನಾಟಕದ ಕೊನೆ. ಮಗುವನ್ನು ಕಳೆದುಕೊಂಡ ತಾಯಿ, ಮರಿಯನ್ನು ಕಳೆದುಕೊಂಡ ತಾಯಿ ಮುಖಾಮುಖಿಯಾಗಿದ್ದಾರೆ. ಒಬ್ಬರಿಗೊಬ್ಬರು ಸಾಂತ್ವನ ಹೇಳುತ್ತಿದ್ದಾರೆ. ಕೊನೆಗೂ ಯುದ್ಧದಲ್ಲಿ ಎಲ್ಲ ಕಳೆದುಕೊಳ್ಳುವವಳು ಹೆಣ್ಣೇ. ಇನ್ನೊಮ್ಮೆ ನೋಡಬೇಕೆನಿಸುವ ನಾಟಕವಿದು.
ಪ್ರದರ್ಶನ : ಭಾರತ ರಂಗ ಮಹೋತ್ಸವ, ಬೆಂಗಳೂರು
ತಂಡ : ಕಲಾಭಿ ಥಿಯೇಟರ್, ಮಂಗಳೂರು.
ನಾಟಕ ವಿಮರ್ಶಕರು : ಕಿರಣ ಭಟ್, ಹೊನ್ನಾವರ