ಬೈಂದೂರು : ಲಾವಣ್ಯ ಬೈಂದೂರು ಅಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲೆ, ಬೈಂದೂರು ತಾಲೂಕು ಘಟಕ ಹಾಗೂ ಅಶೋಕ ಜುವೆಲ್ಲರ್ಸ್ ಉಪ್ಪುಂದ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ನಾಟಕ ಪ್ರದರ್ಶನ ಸಮಾರಂಭವು ದಿನಾಂಕ 04 ಫೆಬ್ರವರಿ 2025ರಂದು ಯಡ್ತರೆ-ಬೈಂದೂರು ಜೆ.ಎನ್.ಆರ್. ಹೊರಾಂಗಣ ವೇದಿಕೆಯಲ್ಲಿ ನಡೆಯಿತು.
ಈ ಸಮಾರಂಭದಲ್ಲಿ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ರಂಗ ಅಧ್ಯಯನ ಕೇಂದ್ರ ನಿರ್ದೇಶಕ ಡಾ. ಜೀವನರಾಂ ಸುಳ್ಯ ಮಾತನಾಡುತ್ತಾ “ಚಿಂತನೆಗಳಿಲ್ಲದ ಮನುಷ್ಯ, ಮನಸ್ಸಿಲ್ಲದ ದೇಹ ಯಾವಾಗಲೂ ನಿರ್ಜಿವ ಸ್ಥಿತಿಯಲ್ಲಿರುತ್ತದೆ. ಶ್ರೀಮಂತಿಕೆ ಉದ್ದೇಶಕ್ಕಿಂತ ಧೀಮಂತ ಮನುಷ್ಯರಾಗುವ ಕನಸು ಕಾಣುವಂತಾಗಬೇಕು” ಎಂದು ಹೇಳಿದರು.
“ಸಾಹಿತ್ಯ ಮೌಲ್ಯಭರಿತವಾಗಲು ಆಧ್ಯಾತ್ಮಿಕ ಜ್ಞಾನ, ಅಭ್ಯಾಸ, ಸಂಸ್ಕಾರ, ಮೌಲ್ಯಗಳು ಬರಹಗಾರರಲ್ಲಿ ಸಮ್ಮಿಳಿತವಾಗಿರಬೇಕು. ಜನಪದ ಮತ್ತು ಶಿಷ್ಟಮಹಾಕಾವ್ಯಗಳ ತಿರುಳು ಆಧ್ಯಾತ್ಮಿಕ ಬದುಕಿನ ದರ್ಶನ. ಇಂತಹ ಸಾಹಿತ್ಯವನ್ನು ಇಂದಿನ ಸಾಹಿತಿಗಳು ನಿಷ್ಠೆಯಿಂದ ಅಧ್ಯಯನ ಮಾಡುವ ಮೂಲಕ ಗಟ್ಟಿ ಸಾಹಿತ್ಯ ಹಾಗೂ ಶ್ರೇಷ್ಠ ಸಾಹಿತ್ಯ ಸೃಷ್ಟಿ ಮಾಡುವಂತಾಗಬೇಕು” ಎಂದು ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದರು.
ರಂಗ ನಿರ್ದೇಶಕ ಡಾ. ಜೀವನರಾಂ ಸುಳ್ಯ ಇವರನ್ನು ಕ.ಸಾ.ಪ. ವತಿಯಿಂದ ಗೌರವಿಸಲಾಯಿತು. ಬೈಂದೂರು ತಾಲೂಕು ಕ.ಸಾ.ಪ. ಘಟಕ ಅಧ್ಯಕ್ಷರಾಗಿ ನೇಮಕಗೊಂಡ ಅರುಣ್ ಕುಮಾರ್ ಶಿರೂರು ಇವರಿಗೆ ನಿರ್ಗಮನ ಅಧ್ಯಕ್ಷ ಡಾ. ರಘು ನಾಯ್ಕ ಅಧಿಕಾರ ಹಸ್ತಾಂತರಿಸಿದರು. ಜಿಲ್ಲಾ ಕ.ಸಾ.ಪ. ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಸುರಭಿ ಅಧ್ಯಕ್ಷ ಆನಂದ ಮದ್ದೋಡಿ ಉಪಸ್ಥಿತರಿದ್ದರು. ಲಾವಣ್ಯ ಸಂಸ್ಥೆ ಅಧ್ಯಕ್ಷ ನರಸಿಂಹ ಬಿ. ನಾಯಕ್ ಸ್ವಾಗತಿಸಿ, ಕಾರ್ಯದರ್ಶಿ ವಿಶ್ವನಾಥ ಆಚಾರ್ಯ ವಂದಿಸಿ, ಸದಸ್ಯ ಸುಬ್ರಹ್ಮಣ್ಯ ಜಿ. ಉಪ್ಪುಂದ ನಿರೂಪಿಸಿದರು. ಜೆ.ಎನ್.ಆರ್. ಕಲಾಮಂದಿರದ ಹೊರಾಂಗಣದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ನಾಡೋಜ ಹಂಪನಾ ವಿರಚಿತ ‘ಚಾರುವಸಂತ’ ದೇಸೀ ಕಾವ್ಯದ ರಂಗರೂಪ ಪ್ರದರ್ಶನಗೊಂಡಿತು.