ದೆಹಲಿಯ ರಾಷ್ಟ್ರೀಯ ರಂಗಶಾಲೆಯು (ಎನ್.ಎಸ್.ಡಿ.) ಫೆಬ್ರವರಿ 1ರಿಂದ ಎಂಟು ದಿನಗಳ ಕಾಲ ಬೆಂಗಳೂರಿನ ಕಲಾಗ್ರಾಮದಲ್ಲಿ ಆಯೋಜಿಸಿದ್ದ ‘ಭಾರತ ರಂಗ ಮಹೋತ್ಸವ ಅಂತರಾಷ್ಟ್ರೀಯ ನಾಟಕೋತ್ಸವ’ದ ಕೊನೆಯ ದಿನವಾದ ಫೆಬ್ರವರಿ 8ರಂದು ಬೆಂಗಳೂರಿನ ಎನ್.ಎಸ್.ಡಿ. ಕೇಂದ್ರದ ವಿದ್ಯಾರ್ಥಿಗಳು ಬಿ. ಜಯಶ್ರೀಯವರ ನಿರ್ದೇಶನದಲ್ಲಿ ‘ಜಸ್ಮಾ ಓಡನ್’ ನಾಟಕವನ್ನು ಅಭಿನಯಿಸಿ ಗಮನ ಸೆಳೆದರು.
ಗುಜರಾತಿನ ಜನಪ್ರಿಯ ಜಾನಪದ ಕಥೆಯಾಧರಿಸಿ ಶಾಂತಾ ಗಾಂಧಿಯವರು ಬರೆದ ‘ಜಸ್ಮಾ ಓಡನ್’ ನಾಟಕವು ಬಿ. ಜಯಶ್ರೀಯವರ ಪರಿಕಲ್ಪನೆಯಲ್ಲಿ ದೃಶ್ಯಕಾವ್ಯವಾಗಿ ಅರಳಿದೆ. ಹಾಡು ಸಂಗೀತ ನೃತ್ಯ ಕಲಾಪ್ರಕಾರಗಳ ಸಂಯೋಜನೆಯಿಂದಾಗಿ ಇಡೀ ನಾಟಕ ನೋಡುಗರ ಕಣ್ಮನ ಸೆಳೆಯುವಂತೆ ಮೂಡಿ ಬಂದಿದೆ.
ಈ ಜಾನಪದ ಪ್ಯಾಂಟಸಿ ಕಥೆ ಹೀಗಿದೆ. ಮುನಿಯೊಬ್ಬನ ತಪಸ್ಸಿನ ಪ್ರಭಾವಕ್ಕೆ ಇಂದ್ರನ ಸಿಂಹಾಸನವೇ ಕಂಪಿಸುತ್ತದೆ. ಮುನಿಯ ತಪಸ್ಸು ಭಂಗಕ್ಕೆ ಇಂದ್ರ ಅಪ್ಸರೆಯರನ್ನು ಕಳುಹಿಸುತ್ತಾನೆ. ತಪೋಭಂಗಗೊಂಡ ಮುನಿ ಅಪ್ಸರೆ ಕಾಮಕುಂಡಲಿಯ ಮೇಲೆ ಅನುರಕ್ತನಾಗುತ್ತಾನೆ. ಮುನಿಯ ಬಯಕೆಯನ್ನು ಆ ಅಪ್ಸರೆ ತಿರಸ್ಕರಿಸಿ ಆತನನ್ನು ಅವಮಾನಿಸಿದಾಗ ಸಿಟ್ಟಿಗೆದ್ದ ಋಷಿ ‘ಭೂಲೋಕದಲ್ಲಿ ವಡ್ಡರ ಕುಲದ ಕುರೂಪಿ ಕುಂಟ ಗಂಡನ ಹೆಂಡತಿಯಾಗಿ ಬದುಕು’ ಎಂದು ಶಾಪ ಕೊಡುತ್ತಾನೆ. ಅದೇ ರೀತಿ ‘ಅಂತಹ ಗಂಡ ನೀವೇ ಆಗಿರಬೇಕೆಂದು’ ಅಪ್ಸರೆ ಪ್ರತಿಶಾಪ ಕೊಡುತ್ತಾಳೆ. ಹೀಗೆ ಶಾಪಗ್ರಸ್ತರಾದ ಇಬ್ಬರೂ ಭೂಲೋಕದಲ್ಲಿ ಎರಡು ವಡ್ಡರ ಕುಟುಂಬದಲ್ಲಿ ಹುಟ್ಟಿ ಬೆಳೆದು ಪ್ರಾಯಕ್ಕೆ ಬಂದು ಹೆತ್ತವರ ಪರ ವಿರೋಧಗಳ ನಡುವೆ ಜಸ್ಮಾಳ ಒತ್ತಾಸೆಯಂತೆ ಕುರೂಪಿಯ ಜೊತೆಗೆ ಮದುವೆಯಾಗುತ್ತದೆ. ಅಪರೂಪದ ಸುಂದರಿ ಜಸ್ಮಾಳ ಬಗ್ಗೆ ತಿಳಿದ ಪಟನಾದ ರಾಜನು ಆಕೆಯ ಸೌಂದರ್ಯಕ್ಕೆ ಮಾರುಹೋಗಿ ಜೊತೆಗೂಡಲು ಒತ್ತಾಯಿಸುತ್ತಾನೆ. ಇದನ್ನು ಜಸ್ಮಾ ವಿರೋಧಿಸಿದಾಗ ಆಕೆಯ ಗಂಡನ ಜೊತೆಗೆ ಎಲ್ಲಾ ವಡ್ಡರನ್ನೂ ಹಿಂಸಿಸಿ ಸಾಯಿಸಲಾಗುತ್ತದೆ. ಇದರಿಂದ ಸಿಟ್ಟಿಗೆದ್ದ ಜಸ್ಮಾ “ರಾಜನ ಸಾಮ್ರಾಜ್ಯ ಸರ್ವನಾಶವಾಗಲಿ” ಎಂದು ಶಾಪ ಕೊಡುತ್ತಾಳೆ. ಶಾಪದಿಂದ ತಲ್ಲಣಗೊಂಡ ರಾಜ ಆಕೆಯ ಬಳಿ ಕ್ಷಮೆ ಕೇಳುತ್ತಾನೆ. ದೇವಲೋಕದಿಂದ ಬಂದವರು ಸತ್ತವರನ್ನು ಬದುಕಿಸುತ್ತಾರೆ. ಜಸ್ಮಾಳನ್ನು ದೇವಲೋಕಕ್ಕೆ ಆಹ್ವಾನಿಸುತ್ತಾರೆ. ಆದರೆ ಆ ಆಹ್ವಾನವನ್ನು ನಿರಾಕರಿಸುವ ಜಸ್ಮಾ ವಡ್ಡರ ಜೊತೆಗೆ ಬದುಕಲು ನಿರ್ಧರಿಸುತ್ತಾಳೆ. ಇಡೀ ನಾಟಕ ಸುಖಾಂತ್ಯವಾಗುತ್ತದೆ.
ಪ್ರದರ್ಶನ ಕಲೆಗಳ ಸಾಧ್ಯತೆಗಳೆಲ್ಲವನ್ನೂ ಬಳಸಿಕೊಂಡಿದ್ದರಿಂದ ಇಡೀ ನಾಟಕ ಆರಂಭದಿಂದ ಅಂತ್ಯದವರೆಗೂ ಪ್ರೇಕ್ಷಕರನ್ನು ಹಿಡಿದಿಡುತ್ತದೆ. ಕೆಳ ಸಮುದಾಯದ ಬಡ ಕಾರ್ಮಿಕ ವರ್ಗದವರಿಗೆಲ್ಲಾ ಮೇಲ್ವರ್ಗದ ಉಳ್ಳವರು ಧರಿಸುವ ಬಟ್ಟೆಗಳನ್ನು ಹಾಕಿಸಿರುವುದು ಅವಾಸ್ತವ ಎನ್ನಿಸಿದರೂ ಆ ಗುಜರಾತಿ ವಸ್ತ್ರ ವಿನ್ಯಾಸ ಕಣ್ಮನ ಸೆಳೆಯುವಂತಿವೆ. ಶ್ರಮಿಕ ವರ್ಗದ ದಂಪತಿಗಳ ನಡುವೆ ನಡೆಯುವ ಜಗಳ ಕಿತ್ತಾಟ ಮೇಲಾಟಗಳು ಅತಿರೇಕ ಎನ್ನಿಸಿದರೂ ಹಾಸ್ಯದ ಹೊನಲನ್ನು ಹರಿಸಿವೆ. ಬಹುತೇಕ ಕನ್ನಡೇತರ ಕಲಾವಿದರ ಬಾಯಲ್ಲಿ ಕನ್ನಡದ ಶಬ್ದಗಳ ಕೊಲೆಯಾದರೂ, ಉಚ್ಚಾರಣೆಯಲ್ಲಿ ತಪ್ಪುಗಳಾದರೂ, ಸಹ ಕಲಾವಿದರ ಪಾದರಸದ ಅಭಿನಯವು ವಾಚಿಕದ ಸ್ಪಷ್ಟತೆಯ ಕೊರತೆಯನ್ನು ಮರೆಸಿದೆ. ಹಾಡುಗಳ ಸಾಹಿತ್ಯದಲ್ಲಿ ವಾಚ್ಯವೇ ಹೆಚ್ಚಿದ್ದರೂ ಲಯಬದ್ಧ ಹಾಡುಗಾರಿಕೆ ಹಾಗೂ ಅಬ್ಬರದ ಸಂಗೀತ ನಾಟಕದ ಆಕರ್ಷಣೆಯನ್ನು ಹೆಚ್ಚಿಸಿದೆ. ಒಟ್ಟಾರೆಯಾಗಿ ಮಿತಿಗಳನ್ನು ಮೀರಿದ ಎಲ್ಲ ಅತಿಗಳೇ ಈ ನಾಟಕವನ್ನು ವರ್ಣರಂಜಿತಗೊಳಿಸಿವೆ. ಒಂದೂ ಮುಕ್ಕಾಲು ಗಂಟೆಗಳ ಕಾಲ ನೋಡುಗರ ಗಮನವನ್ನು ಹಿಡಿದಿಟ್ಟಿವೆ.
ಈ ನಾಟಕದ ಕೇಂದ್ರ ಪಾತ್ರ ಜಸ್ಮಾ. ಆಕೆಯ ಸುತ್ತ ನಾಟಕ ಕಟ್ಟಲ್ಪಟ್ಟಿದೆ. “ಹೆಣ್ಣಿಗೆ ಸ್ವಾಭಿಮಾನ ಮುಖ್ಯ, ಕಟ್ಟಿಕೊಂಡ ಗಂಡ ಹುಚ್ಚನಿರಲಿ, ಹೆಳವನಿರಲಿ, ಕುರೂಪಿಯಾಗಿರಲಿ ಹೆಂಡತಿಯಾದವಳು ನಿಷ್ಟೆಯಿಂದ ಇರಬೇಕು, ಯಾವುದೇ ಪ್ರಚೋದನೆ ಪ್ರಬೋಧನೆಗೆ ಒಳಗಾಗಿ ಬದ್ಧತೆಯನ್ನು ಬದಲಿಸಬಾರದು” ಎನ್ನುವ ಪಿತೃಪ್ರಧಾನ ಸಮಾಜದ ಪ್ರಧಾನ ಆಶಯಕ್ಕೆ ಈ ನಾಟಕ ಬದ್ಧವಾಗಿದೆ ಹಾಗೂ ಜಸ್ಮಾ ಅಂತಹ ಆಶಯದ ಅನುಷ್ಠಾನಕ್ಕೆ ಮಾದರಿಯಾಗಿದ್ದಾಳೆ; ನಮ್ಮ ಹೇಮರೆಡ್ಡಿ ಮಲ್ಲಮ್ಮಳ ಹಾಗೆ. ಈ ನಾಟಕದ ಜಸ್ಮಾಗೆ ಸದಾರಮೆ ನಾಟಕದ ಸದಾರಮೆಯಂತೆ ಕಾಮುಕರಿಂದ ಪಾರಾಗುವ ಚಾಣಾಕ್ಷತನವಿರಲಿಲ್ಲ. ಆದ್ದರಿಂದ ರಾಜನ ಆಹ್ವಾನವನ್ನು ಪ್ರತಿರೋಧಿಸಿ ತಮ್ಮವರ ಸರ್ವನಾಶಕ್ಕೆ ಕಾರಣವಾಗುತ್ತಾಳೆ. ದೇವಲೋಕದ ತೀರ್ಥಪ್ರೋಕ್ಷಣೆ ಇದ್ದಿದ್ದರಿಂದ ಸತ್ತವರೇನೋ ಬದುಕಿದರು, ವಾಸ್ತವವಾಗಿದ್ದರೆ ? ಶಾಪಾಸ್ತ್ರಗಳ ಸಾಧ್ಯತೆ ಇಲ್ಲದೇ ಇದ್ದಿದ್ದರೆ ? ಶ್.. ಫ್ಯಾಂಟಸಿ ಕಥೆಗಳನ್ನು ಪ್ರಶ್ನಿಸಬಾರದು. ನೋಡಿ ಖುಷಿ ಪಡಬೇಕಷ್ಟೇ. ಇದೇ ಈ ನಾಟಕದ ಉದ್ದೇಶವೂ ಆಗಿದೆ ಹಾಗೂ ಆ ಉದ್ದೇಶದಲ್ಲಿ ನಿರ್ದೇಶಕಿ ಸಫಲರಾಗಿದ್ದಾರೆ.
ಜಾನಪದ ಕಥೆಗಳಲ್ಲೂ ವೈದಿಕ ಪುರಾಣಗಳಲ್ಲಿರುವಂತೆ ‘ಶಾಪ ವರ’ಗಳ ಕಲ್ಪನೆಗಳನ್ನು ಆಧರಿಸಿದ ಕಥಾನಕಗಳೂ ಬೇಕಾದಷ್ಟಿವೆ. ಈ ನಾಟಕವೂ ಸಹ ಅದೇ ಮಾದರಿಯದ್ದಾಗಿದೆ. ಪುರುಷಾಧಿಪತ್ಯ ಪ್ರಭುತ್ವದ ದುರಹಂಕಾರದ ವಿರುದ್ಧ ಹೆಣ್ಣೊಬ್ಬಳು ಪ್ರತಿಭಟಿಸಿ ಗೆಲ್ಲುವುದೇ ಈ ನಾಟಕದ ಆಶಯವಾಗಿದೆ. ಉಳಿದದ್ದೆಲ್ಲಾ ಆ ಆಶಯದ ಸುತ್ತ ಕಟ್ಟಲ್ಪಟ್ಟ ರೂಪಕಗಳಾಗಿವೆ. ಹೀಗಾಗಿ ಈ ನಾಟಕವನ್ನು ಯಾವುದೇ ತರ್ಕಗಳ ಮಾನದಂಡಕ್ಕೆ ಅಳವಡಿಸಿ ನೋಡುವುದು ಅಸಾಧ್ಯವಾಗಿದೆ. ಅದು ಹೇಗೆಂದರೆ.. ಮುನಿಯೊಬ್ಬ ಮೋಕ್ಷ ಸಾಧನೆಗಾಗಿ ತಪಸ್ಸು ಮಾಡಿದರೆ ಇಂದ್ರನ ಸಿಂಹಾಸನ ಯಾಕೆ ನಡುಗಬೇಕು ? ಇಂದ್ರನಿಂದ ನಿಯೋಜಿತಗೊಂಡ ಅಪ್ಸರೆ ಬಂದಿರುವುದೇ ತನ್ನ ಸೌಂದರ್ಯದಿಂದ ಮುನಿಯ ತಪೋಭಂಗ ಮಾಡಲು. ಆದರೆ ಅನುರಕ್ತನಾದ ಋಷಿಯನ್ನು ಅವಮಾನಿಸಿ ಕೆರಳಿಸಲು ಬಲವಾದ ಕಾರಣ ಏನಿತ್ತು ? ಋಷಿಗಾದರೋ ತಪೋಬಲ ಇರುವುದರಿಂದ ಶಾಪಕೊಡುವ ಸಾಮರ್ಥ್ಯ ಇದ್ದರೂ ಇದ್ದೀತೆನ್ನಬಹುದು. ಆದರೆ ಇಂದ್ರನನ್ನೇ ನಡುಗಿಸಿದ ಮುನಿಗೆ ದೇವಲೋಕದ ನರ್ತಕಿ ಪ್ರತಿಶಾಪ ಕೊಡುವಷ್ಟು ಬಲ ಬಂದಿದ್ದಾದರೂ ಹೇಗೆ ? ಶಾಪಗ್ರಸ್ತಳಾದ ಸುಂದರಿ ಜಸ್ಮಾ ಭೂಲೋಕದಲ್ಲಿ ಬೆಳೆದು ಹೆತ್ತವರ ಪ್ರತಿರೋಧವನ್ನು ವಿರೋಧಿಸಿ ಕುರೂಪಿ ಕುಂಟ ವ್ಯಕ್ತಿಯನ್ನು ಪಟ್ಟು ಹಿಡಿದು ಮದುವೆಯಾಗಿದ್ದಕ್ಕೆ ಬಲವಾದ ಕಾರಣ ಯಾವುದು ? ಹೋಗಲಿ ರಾಜನ ದೌರ್ಜನ್ಯವನ್ನು ವಿರೋಧಿಸಿ ರಾಜನ ರಾಜ್ಯವೇ ನಾಶವಾಗಲಿ ಎಂದು ಜಸ್ಮಾ ಶಾಪ ಕೊಟ್ಟ ಮರುಕ್ಷಣ ಹೆದರಿದ ರಾಜ ಪರಿವರ್ತನೆಗೊಂಡು ಕ್ಷಮಾಭಿಕ್ಷೆ ಕೇಳಿದ್ದಾದರೂ ಯಾಕೆ ? ಹೀಗೆ ಹತ್ತು ಹಲವು ತರ್ಕಾತೀತ ಅವಾಸ್ತವ ಘಟನೆಗಳು ಈ ನಾಟಕದಲ್ಲಿ ಹಾಸುಹೊಕ್ಕಾಗಿವೆ. ಆದರೆ ಯಾವುದನ್ನೂ ಯಾರೂ ಪ್ರಶ್ನಿಸುವಂತಿಲ್ಲ. ಯಾಕೆಂದರೆ ಇದು ಜಾನಪದ ಕಥೆ. ಫ್ಯಾಂಟಸಿ ಕತೆಗಳಲ್ಲಿ ತರ್ಕಗಳಿಗೆ ಅವಕಾಶವಿಲ್ಲ. ಆದರೂ ಕಲಾವಿದರಾಡುವ ಮಾತಿನಲ್ಲಾದರೂ ಒಂದಿಷ್ಟು ಉತ್ತರ ನೀಡಬಹುದಾಗಿತ್ತು. ಈ ಕಾಲ್ಪನಿಕ ಕಥೆಗಳಿಗೆ ಇನ್ನೊಂದಿಷ್ಟು ಕಲ್ಪನೆಗಳನ್ನು ಸೇರಿಸಿಯಾದರೂ ಸಮರ್ಥನೆ ಕೊಡಬಹುದಾಗಿತ್ತು. ಮೋಕ್ಷದ ಬದಲು ಇಂದ್ರಪಟ್ಟಕ್ಕಾಗಿಯೇ ಋಷಿ ತಪಸ್ಸು ಮಾಡಬಹುದಾಗಿತ್ತು. ನರ್ತಕಿಗೆ ಶಾಪಕೊಡುವ ಸಾಮರ್ಥ್ಯ ಬಂದ ಬಗ್ಗೆ ಇನ್ಯಾವುದೋ ಸ್ಪಷ್ಟೀಕರಣ ಕೊಡಬಹುದಾಗಿತ್ತು. ಕುರೂಪಿ ಗಂಡನನ್ನು ಆಕೆ ಒಪ್ಪಿಕೊಳ್ಳಲು ಜಸ್ಮಾಗೆ ಪೂರ್ವಜನ್ಮದ ನೆನಪು ಮರುಕಳಿಸುವ ಹಾಗೆ ಕನಸಿನ ಕಥೆ ಕಟ್ಟಬಹುದಾಗಿತ್ತು.
ಆದರೆ ಮನರಂಜನೆಯೊಂದೇ ಗುರಿಯಾಗಿರುವ ಈ ನಾಟಕಕ್ಕೆ ಕನಿಷ್ಠ ನಂಬಲರ್ಹ ತರ್ಕದ ದಾರಿ ದೂರದ ಮಾತು. ಆದ್ದರಿಂದ ತರ್ಕದ ಹಂಗು ಹರಿದೇ ಈ ನಾಟಕವನ್ನು ನೋಡಿ ಆನಂದಿಸುವುದು ಒಳಿತು. ತಾರ್ಕಿಕತೆಯನ್ನು ನಿರ್ಲಕ್ಷಿಸಿದರೂ ಕೆಲವು ತಾತ್ವಿಕ ಪ್ರಶ್ನೆಗಳು ಕಾಡುತ್ತವೆ. ಉದಾಹರಣೆಗೆ, ಈ ನಾಟಕದಲ್ಲಿ ಜಾತಿ ಕುರಿತ ಒಂದು ಮಾತು ಅಪಾಯಕಾರಿಯಾಗಿದೆ. “ನಿನ್ನ ಜಾತಿ ಬುದ್ಧಿ ಬಿಟ್ಟಿಲ್ಲ” ಎಂದು ವಡ್ಡನನ್ನು ಇನ್ನೊಬ್ಬ ವಡ್ಡನೇ ಹಂಗಿಸುತ್ತಾನೆ. ಹಾಗಾದರೆ ಈ ಜಾತಿ ಬುದ್ಧಿ ಅಂದರೇನು ? ಕೆಳ ಜಾತಿಯನ್ನು ಅವಮಾನಿಸುವಂತಹ ಈ ಲೇವಡಿ ಬೇಕಾಗಿತ್ತಾ. ಅಥವಾ ಇದು ಮೇಲ್ವರ್ಗದ ನಿರ್ದೇಶಕರ ಅಂತರಂಗದ ಅನಿಸಿಕೆಯಾ ? ಈ ನಾಟಕದಲ್ಲಿ ಮುನಿ ಕೊಡುವ ಶಾಪವೂ ಸಹ ಕೆಳವರ್ಗದ ವಡ್ಡರನ್ನು ಅವಮಾನಿಸುವಂತಹುದೇ ಆಗಿದೆ. ‘ವಡ್ಡರ ಮನೆಯಲ್ಲಿ ಹುಟ್ಟು’ ಎನ್ನುವ ಶಾಪದ ಹಿಂದೆ ವಡ್ಡರನ್ನು ತುಚ್ಚವಾಗಿ ಕಾಣುವ ಹಾಗೂ ಆ ಜಾತಿಯಲ್ಲಿ ಹುಟ್ಟುವುದೇ ಒಂದು ಶಾಪ ಎನ್ನುವುದನ್ನು ಬಿಂಬಿಸುವ ಪ್ರಯತ್ನವಾಗಿದೆ. ಗುಜರಾತಿನ ಜಾತಿ ವ್ಯವಸ್ಥೆ ಹೇಗೋ ಏನೋ, ಆದರೆ ಈ ನೆಲದ ವಡ್ಡರನ್ನು ಅವಮಾನಿಸಿದ್ದು ಅನಪೇಕ್ಷಿತ.
ಅದೇ ರೀತಿ ಈ ನಾಟಕದಲ್ಲಿ ಕೆಲವು ಬ್ರಾಹ್ಮಣ್ಯದ ಅಂಶಗಳನ್ನೂ ಅಳವಡಿಸಲಾಗಿದೆ. ಕೆಳ ಸಮುದಾಯದ ಅಸ್ಪೃಶ್ಯ ಜಾತಿಯ ವಡ್ಡ ಜಾತಿಯವರ ಮದುವೆಯನ್ನು ಮಾಡಿಸಲು ಬ್ರಾಹ್ಮಣ ಪುರೋಹಿತನನ್ನು ಕರೆಸಿದ್ದು ಹಾಗೂ ಆತ ವೈದಿಕರು ಸೃಷ್ಟಿಸಿದ ವಿವಾಹ ಸಂದರ್ಭದ ಮಂತ್ರವಾದ ‘ಮಾಂಗಲ್ಯಂ ತಂತುನಾನೇನ’ ಹೇಳಿದ್ದು ಬ್ರಾಹ್ಮಣ್ಯವನ್ನು ನಾಟಕದ ಮೂಲಕ ಹೇರುವ ಉದ್ದೇಶವೇ ಇದ್ದಂತಿದೆ. ಹೋಗಲಿ ನಾಟಕದ ಕೊನೆಗೆ ಕಲಾವಿದರೆಲ್ಲರ ಬಾಯಲ್ಲಿ “ರಾಮ್ ನಾಮ್ ಜೈ ಶ್ರೀರಾಂ” ಹೇಳಿಸಿದ್ದು ನಿರ್ದೇಶಕರ ಆಲೋಚನೆಯ ದಿಕ್ಕನ್ನು ಸಾರುವಂತಿದೆ. ಯಾಕೆಂದರೆ ಜೈ ಶ್ರೀರಾಂ ಹೇಳಿಸುವ ಅಗತ್ಯವೇ ಈ ನಾಟಕಕ್ಕೆ ಹೊಂದಿಕೊಳ್ಳುವುದಿಲ್ಲ. ಜೈ ಶ್ರೀರಾಂಗೂ ಈ ನಾಟಕದ ವಸ್ತು ವಿಷಯಕ್ಕೂ ಸಂಬಂಧವೇ ಇಲ್ಲ. ಆದರೂ ಹಾಗೆ ಹೇಳಿಸಿದ್ದರ ಹಿಂದೆ ಯಾರನ್ನು ಸಂಪ್ರೀತಗೊಳಿಸುವ ಆಶಯ ಇರಬಹುದು ಎಂಬುದನ್ನು ಊಹಿಸಬಹುದಾಗಿದೆ.
ತಾರ್ಕಿಕತೆ ಇಲ್ಲದ್ದನ್ನು ಫ್ಯಾಂಟಸಿ ನಾಟಕದಲ್ಲಿ ಒಪ್ಪಿಕೊಳ್ಳಬಹುದಾದರೂ, ಉದ್ದೇಶ ಪೂರ್ವಕವಾಗಿ ಬ್ರಾಹ್ಮಣ್ಯವನ್ನು ತೋರಿದ್ದು, ಸಂಘ ಪರಿವಾರದವರ ವೇದವಾಕ್ಯವಾದ ಜೈ ಶ್ರೀರಾಂ ಹೇಳಿಸಿದ್ದು ಖಂಡಿತಾ ಒಪ್ಪತಕ್ಕದ್ದಲ್ಲ. ನಾಟಕ ಕಥಾನಕದ ಪ್ರದರ್ಶನವಾಗಬೇಕೇ ಹೊರತು ನಿರ್ದೇಶಕರ ಒಲವು ನಿಲುವುಗಳ ಪ್ರಚಾರ ಆಗಬಾರದು. ಈ ನಿಟ್ಟಿನಲ್ಲಿ ನಿರ್ದೇಶಕರು ಯೋಚಿಸುವುದು ಉತ್ತಮ.
ಶಶಿಕಾಂತ ಯಡಹಳ್ಳಿ, ರಂಗಕರ್ಮಿ