ಉಡುಪಿ : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಇದರ ಸಹಯೋಗದೊಂದಿಗೆ ಯಕ್ಷಗಾನ ಕೇಂದ್ರ ಇಂದ್ರಳಿ ಇದರ 52ನೇ ವಾರ್ಷಿಕೋತ್ಸವ ಹಾಗೂ ದಿ. ಎಂ. ಎಂ. ಹೆಗ್ಡೆ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 08 ಫೆಬ್ರವರಿ 2025 ರಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಮಾಹೆಯ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಮಾತನಾಡಿ “ಯಕ್ಷಗಾನ ಕಲೆ ಬಹಳ ಪ್ರಾಚೀನವಾದ ರಂಗಕಲೆ. ಯಕ್ಷಗಾನದಲ್ಲಿ ವಿದ್ಯಾರ್ಥಿಗಳು ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಕನ್ನಡ ಭಾಷೆಯ ಮೇಲೆ ಹಿಡಿತ ಬರುತ್ತದೆ. ವಿದ್ಯಾರ್ಥಿಗಳು ಶಾಲಾಶಿಕ್ಷಣದ ಜೊತೆಗೆ ಯಕ್ಷಗಾನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಇಂದ್ರಾಳಿ ಯಕ್ಷಗಾನ ಕೇಂದ್ರದ ಮೂಲಕ ವಿಶೇಷ ಪ್ರಯತ್ನ ನಡೆಯುತ್ತಾ ಬರುತ್ತಿರುವುದು ಶ್ಲಾಘನೀಯ. ಮಾಹೆ ವಿ. ವಿ. ಈ ಕಾರ್ಯಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಲಿದೆ” ಎಂದು ಹೇಳಿದರು.
ಮಾಹೆಯ ಸಹಕುಲಪತಿ ಡಾ. ನಾರಾಯಣ ಸಭಾಹಿತ್ ಮಾತನಾಡಿ “ಶಿಕ್ಷಣದ ಜೊತೆಗೆ ಯಕ್ಷಗಾನವೂ ವಿದ್ಯಾರ್ಥಿ ಜೀವನದಲ್ಲಿ ಸಿಕ್ಕರೆ ಪ್ರತಿಭೆಯ ಅನಾವರಣಕ್ಕೆ ಹೆಚ್ಚು ಪೂರಕವಾಗಲಿದೆ. ಇಂದ್ರಾಳಿ ಯಕ್ಷಗಾನ ಕೇಂದ್ರ ಈ ನಿಟ್ಟಿನಲ್ಲಿ ಉತ್ತಮ ಕಾರ್ಯ ನಡೆಸುತ್ತಿದೆ. ಮುಂದಿನ ದಿನಗಳಲ್ಲಿ ಯಕ್ಷಗಾನದಲ್ಲಿ ಸರ್ಟಿಫಿಕೇಟ್ ಕೋರ್ಸ್ ಆರಂಭಿಸುವವರಿದ್ದೇವೆ.” ಎಂದರು.
ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷರಾದ ಪಳ್ಳಿ ಕಿಶನ್ ಹೆಗ್ಡೆ ಮಾತನಾಡಿ “ಯಕ್ಷಗಾನ ಕೇವಲ ಸಾಂಸ್ಕೃತಿಕ ಕಲೆಯಲ್ಲ ಅದು ದೈವಾರಾಧನೆಯ ಕಲೆಯೂ ಹೌದು. ಹೀಗಾಗಿ ಶ್ರದ್ಧೆಯಿಂದ ಮಕ್ಕಳು ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು” ಎಂದು ಪೋಷಕರಿಗೆ ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಎಂ. ಜಿ. ಎಂ. ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀ ನಾರಾಯಣ ಕಾರಂತ ಯಕ್ಷಗಾನ ಕೇಂದ್ರ ನಡೆದುಬಂದ ದಾರಿಯ ಬಗ್ಗೆ ವಿವರಿಸಿದರು. ಎಂ. ಎಂ. ಹೆಗ್ಡೆ ಪ್ರತಿಷ್ಠಾನ ಕುಂದಾಪುರ ಇದರ ಅಧ್ಯಕ್ಷರಾದ ವೈ. ಸೀತಾರಾಮ ಶೆಟ್ಟಿ, ಎಂ. ಐ. ಟಿ. ಇದರ ಪ್ರಾಧ್ಯಾಪಕ ಪ್ರೊ. ಉದಯಕುಮಾರ್ ಶೆಟ್ಟಿ, ಸಲಹಾ ಸಮಿತಿಯ ಸದಸ್ಯರಾದ ಮಂಜುನಾಥ ಮಯ್ಯ, ವಿಶ್ವನಾಥ ಶೆಣೈ, ಶ್ರೀ ಭುವನಪ್ರಸಾದ್ ಹೆಗ್ಡೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾವಿದ ಶ್ರೀನಿವಾಸ ದೇವಾಡಿಗ ನಾಗೂರು ಇವರಿಗೆ ಎಂ. ಎಂ. ಹೆಗ್ಡೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಕೇಂದ್ರದ ವಿದ್ಯಾರ್ಥಿಯಾಗಿದ್ದ ಪ್ರವೀಣ್ ಕೊಪ್ಪಲ್ ಇವರನ್ನು ಗೌರವಿಸಲಾಯಿತು.
ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಎಂ. ಜಿ. ಎಂ. ಕಾಲೇಜಿನ ಕನ್ನಡ ಉಪನ್ಯಾಸಕ ರಾಘವೇಂದ್ರ ತುಂಗ ನಿರೂಪಿಸಿ, ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಕೇಂದ್ರದಲ್ಲಿ ತರಬೇತಿಗೊಂಡ ವಿವಿಧ ಹಂತಗಳ ಯಕ್ಷಗಾನದ ವಿದ್ಯಾರ್ಥಿಗಳಿಂದ ಭೀಷ್ಮವಿಜಯ’ ಯಕ್ಷಗಾನ, ಕೇಂದ್ರದ ವಿದ್ಯಾರ್ಥಿಗಳಿಂದ ಹಿಮ್ಮೇಳ ವೈಭವ ನಡೆಯಿತು. ಕಾರ್ಯಕ್ರಮದಲ್ಲಿ ವಾರಾಂತ್ಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರು, ಹೆತ್ತವರು, ಹಿರಿಯರು ಎಲ್ಲರೂ ಕೈಜೋಡಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಕೇಂದ್ರದ ಸಲಹಾಸಮಿತಿಯ ಸಹಕಾರ, ಕೇಂದ್ರದ ಆಡಳಿತಾಧಿಕಾರಿ ಡಾ. ಬಿ ಜಗದೀಶ್ ಶೆಟ್ಟಿ ಅವರ ಮುಂದಾಳತ್ವ, ಮಾರ್ಗದರ್ಶನ ಹಾಗೂ ಕೇಂದ್ರದ ಸರ್ವಗುರುವೃಂದದ ಪಾಲ್ಗೊಳ್ಳುವಿಕೆಯಿಂದ ಕಾರ್ಯಕ್ರಮವು ಯಶಸ್ವಿಯಾಯಿತು.