ಜಯಂತ ಕಾಯ್ಕಿಣಿ ಬಹಳ ವರ್ಷಗಳ ಹಿಂದೆ ರಂಗಭೂಮಿ ರೂಪ ನೀಡಿದ ಕನ್ನಡದ ‘ಜತೆಗಿರುವವನು ಚಂದಿರ’ ರಷ್ಯ ಮೂಲದ ಜೆವಿಶ್ ಜನಾಂಗ ಎದುರಿಸಿದ ಭೌಗೋಳಿಕ ವಿಭಜನೆಯ ಕಟುಸತ್ಯದ ಒಂದು ballet/musical ರೂಪ, ಮುಂದೆ ಅದು ಭಾರತದ ವಿಭಜನೆಯ ನಿಟ್ಟಿನಲ್ಲಿ ತಯಾರಾಗಿ ಈವರೆಗೆ ಅನೇಕ ಬಾರಿ ಯಶಸ್ಸಿಯಾಗಿ ವಿವಿಧ ತಂಡ / ನಿರ್ದೇಶಕ / ನಟರಿಂದ ಪ್ರಯೋಗಗೊಂಡಿರುವ ಒಂದು ಎವರ್ಗ್ರೀನ್ ನಾಟಕ. ಇಂದು ಅಂದು ಮಂಗಳೂರಿನಲ್ಲಿ, ಮೈಸೂರಿನ ಹುಲುಗಪ್ಪ ಕಟ್ಟಿಮನಿ ಅವರ ನಿರ್ದೇಶಕ/ನಟನೆ/ ತಂಡದ ಮೂಲಕ ಎರಡುವರೆ ಗಂಟೆಗಳ ಕಾಲ ಪ್ರದರ್ಶನಗೊಂಡಾಗ, ತುಂಬಿದ ಸಭಾಂಗಣದ ಎಲ್ಲರೂ ಒಂದೊಮ್ಮೆ 1947ರ ದಿನಗಳಿಗೆ ಸ್ವಯಂ ತೆರಳಿದ ಅನುಭವ ಹೊಂದಿದ್ದು ಮಾತ್ರ ಸುಳ್ಳಲ್ಲ.
ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಸಂಧರ್ಭದಲ್ಲಿ ಇದ್ದ ದೇಶ ವಿಭಜನೆಯ ರಾಜಕೀಯ ಪರಿಣಾಮಗಳು ಹೆಚ್ಚು ಕಾಡಿದ್ದು ಸಾಮಾಜಿಕ ಮತ್ತು ಸಾಂಸಾರಿಕವಾಗಿ. ಅದೇ ಸಂದರ್ಭದ ದಕ್ಷಿಣ ಭಾರತದ ಮುಸ್ಲಿಂ ಬಾಹುಳ್ಯ ಪ್ರದೇಶವೊಂದರ ಬಡ ಮುಸ್ಲಿಂ ಕುಟುಂಬ ಒಂದರ ಮೂರು ಹೆಣ್ಣು ಮಕ್ಕಳ / ಮತ್ತವರ ಮದುವೆಯ ಸುತ್ತ ಮುತ್ತ ಗಿರಕಿ ಹೊಡೆಯುವ ಈ ನಾಟಕದ ಕಥಾನಕ ಒಂದರ್ಥದಲ್ಲಿ ಇಡೀ ಭಾರತ ಅಂದು ಅನುಭವಿಸಿದ ಭಾವನಾತ್ಮಕ ಮತ್ತು ಸಾಂಸ್ಕೃತಿಕ ತಲ್ಲಣಗಳನ್ನು ಬಹಳ ಮಾರ್ಮಿಕವಾಗಿ ನೋಡುಗರೆದುರು ತೆರೆದಿಡುತ್ತದೆ, ಮಾನವ ಸಹಜವಾದ ಕಾಯಕ, ಆಕಾಂಕ್ಷೆ, ಪ್ರೇಮ ಇತ್ಯಾದಿ ಬದುಕಿನ ಅಗತ್ಯದ ಸುತ್ತವೂ ತಿರುಗುತ್ತದೆ.
ಭಾರತದ ವಿಭಜನೆ ಬಹುಶಃ ನಮ್ಮೆದುರು ಆಗಲೂ ಈಗಲೂ ತಂದಿಟ್ಟ ಅತೀ ದೊಡ್ಡ ದುರಂತವೆಂದರೆ ಧಾರ್ಮಿಕ ಅಸಹಿಷ್ಣುತೆಯನ್ನು ಜನಮಾನಸದಲ್ಲಿ ದುರಾದೃಷ್ಟವಶಾತ್ ಹುಟ್ಟಿಹಾಕಿದ್ದು. ಈ ಹಿನ್ನೆಲೆಯಲ್ಲಿ ಮತ್ತು ಆಗೀನ ಬ್ರಿಟಿಷ್ ವ್ಯವಸ್ಥೆ ತಂದಿಟ್ಟ ಆನಿವಾರ್ಯತೆಯೆದುರು ಹುಟ್ಟಿ ಬೆಳೆದ ನೆಲವ ಬಿಟ್ಟು ಪರಾವಲಂಬಿಯಾಗಬೇಕಾದ ಚಿತ್ರಣ, ಜಾಗತಿಕ ಮಾನವರಾಗ ಬಯಸುವ ಬಹುಶಃ ನಮಗೆ ಯಾರಿಗೂ ಇಂದಿನ ದಿನಗಳಲ್ಲಿ ಸುಲಭವಾಗಿ ಅರ್ಥ ಆಗಲಿಕ್ಕಿಲ್ಲ, ಈ ನಾಟಕ ತೋರ್ಪಡಿಸಿದ ರೀತಿಯ ಹೊರತಾಗಿ.
ಸಂಪೂರ್ಣ ಮುಸ್ಲಿಂ ಜನಾಂಗದ ಹಿನ್ನೆಲೆಯಲ್ಲಿರುವ ಈ ನಾಟಕದವರ ಮುಖ್ಯ ಪಾತ್ರಧಾರಿ ‘ಬಡೇ ಮಿಯಾ’ ಅಂದರೆ ಹುಲುಗಪ್ಪ ಕಟ್ಟಿಮನಿ ತನ್ನ ಅಧ್ಭುತ ಸಾಮರ್ಥ್ಯದಿಂದ ಇಡೀ ನಾಟಕದುದ್ದಕ್ಕೂ ಆವರಿಸಿ, ಹೈಜಾಕ್ ಮಾಡಿದ್ದರು… ಎಂದರೆ ಇದು ಖಂಡಿತ ಅವರಿಗೊಂದು ಪ್ರಶಂಸೆ ನಿಜ ಉಳಿದವರಿಗೆಲ್ಲ ಒಂದು ರೀತಿಯ ಛಾಂಲೇಂಜ್ ನೀಡಿ! ಇದನ್ನು ಸಹ ಬಹುತೇಕ ಯಶಸ್ವಿಯಾಗಿ ನಿಭಾಯಿಸಿದ ನಾಟಕದ ಎಲ್ಲಾ ನಟಿಯರೆದುರು, ಒಂದಿಬ್ಬರು ಹೊರತು ಪಡಿಸಿ ಪುರುಷ ಪಾತ್ರಧಾರಿಗಳು ಸ್ವಲ ಸಪ್ಪೆ ಅನಿಸಿದ್ದು ಹೌದು. ಅದರಲ್ಲೂ ಬ್ರಿಟಿಷ್ ಯುಗದ ಪೋಲಿಸರಂತೂ ಇಲ್ಲಿ ನಿಸ್ತೇಜವಾದ ರೂಪ ತಾಳಿದ್ದು ವಿಪರ್ಯಾಸ. ಇಡೀ ನಾಟಕದ ಉದ್ದಕ್ಕೂ ಬಳಕೆಯಾದ ಹಳೇ ಹಿಂದಿ ಚಿತ್ರಗೀತೆಗಳು, ಧ್ವನಿ, ಬೆಳಕು, ಸಂಗೀತ, ಪ್ರಸಾಧನ, ರಂಗಸಜ್ಜಿಕೆ ಎಲ್ಲವೂ ಹಿತಮಿತವಾಗಿ, ಸ್ವಲ್ಪ ದೀರ್ಘ ಅನಿಸಿದರೂ ಒಂದು ಉತ್ತಮ ಪ್ರಯೋಗ ಎನ್ನಲಡ್ಡಿಯಿಲ್ಲದ ರೀತಿಯಲ್ಲಿ ಪರಸ್ಪರ ಹೊಂದಾಣಿಕೆ ಆದದ್ದು ನೋಡುಗರ ಮನದಲ್ಲಿ ಬಹಳ ಕಾಲ ಉಳಿಯಬಹುದು.
ಕಲ್ಲಚ್ಚು ಮಹೇಶ ಆರ್. ನಾಯಕ್ ಮಂಗಳೂರು