ಮಂಗಳೂರು: . ಎಸ್. ವಿ. ಪರಮೇಶ್ವರ ಭಟ್ಟ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಪ್ರೊ. ಎಸ್. ವಿ. ಪರಮೇಶ್ವರ ಭಟ್ಟ ಸಂಸ್ಮರಣ ಪ್ರಶಸ್ತಿ ಪ್ರದಾನ ಸಮಾರಂಭವು ದಿನಾಂಕ 21 ಫೆಬ್ರವರಿ 2025ರ ಶುಕ್ರವಾರದಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜು ಇದರ ಸಭಾಂಗಣದಲ್ಲಿ ನಡೆಯಿತು. ಸಮಾರಂಭದಲ್ಲಿ ಸಾಹಿತಿ ಚಂದ್ರಕಲಾ ನಂದಾವರ ಹಾಗೂ ನಿವೃತ್ತ ಪ್ರಾಧ್ಯಾಪಕ ಕಾಸರಗೋಡಿನ ಪಿ. ಕೃಷ್ಣ ಭಟ್ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದ ಎಸ್. ವಿ. ಪಿ. ಪ್ರತಿಷ್ಠಾನದ ಅಧ್ಯಕ್ಷರಾದ ಬಿ. ಎ. ವಿವೇಕ ರೈ ಮಾತನಾಡಿ “ಕನ್ನಡ ಭಾಷಾ ಲೋಕಕ್ಕೆ ಎಸ್. ವಿ. ಪಿ. ಅವರ ಕೊಡುಗೆ ಮಹತ್ತರವಾದುದು. ಜಿಲ್ಲೆಯಲ್ಲಿ ಇಂದಿಗೂ ಕನ್ನಡದ ವಾತಾವರಣ ಉಳಿಯಲು ಪರಮೇಶ್ವರ ಭಟ್ಟರ ಕೊಡುಗೆ ಬಹಳಷ್ಟಿದೆ. 1986ರಲ್ಲಿ ಮೈಸೂರ್ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ ಸ್ಥಾಪನೆ ಆದಾಗ ಮಂಗಳೂರು ಬಂದವರು ಪ್ರೊ. ಪರಮೇಶ್ವರ ಭಟ್ಟರು. ಮಂಗಳೂರಿನ ಎಲ್ಲಾ ಕಾಲೇಜುಗಳಲ್ಲಿ ಕನ್ನಡ ಐಚ್ಛಿಕ ವಿಷಯವಾಗಿ ಬರಬೇಕೆಂದು ಪ್ರಾಯತ್ನಿಸಿದವರು ಎಸ್. ವಿ. ಪಿ. ಯವರು. ಬದುಕಿನಲ್ಲಿ ನೋವುಂಡು ನಗೆಚೆಲ್ಲುವ ಅಜಾತಶತ್ರುವಾಗಿದ್ದ ಇವರು ಕಾವ್ಯ ಜೀವಿಸುವ ಹಾಗೂ ಕಾವ್ಯದ ಪ್ರೀತಿ ಹಂಚುವ ಕೆಲಸ ಮಾಡಿದ್ದರು” ಎಂದರು. ಈ ಪ್ರಶಸ್ತಿಯು ಸ್ಮರಣಿಕೆ ಹಾಗೂ ರೂಪಾಯಿ 25 ಸಾವಿರ ನಗದನ್ನು ಒಳಗೊಂಡಿತ್ತು.
ಪ್ರೊ. ಎಸ್. ವಿ. ಪಿ. ಅವರ ಪುತ್ರ ಎಸ್. ಪಿ. ರಾಮಚಂದ್ರ, ಸೈಂಟ್ ಅಲೋಶಿಯಸ್ ಸ್ವಾಯತ್ತ ಕಾಲೇಜಿನ ಕುಲಸಚಿವ ಆಲ್ವಿನ್ ಡೇಸಾ ಉಪಸ್ಥಿತರಿದ್ದರು. ಪ್ರಶಸ್ತಿ ಪುರಸ್ಕೃ ತರ ಕುರಿತು ನಿಟ್ಟೆ ವಿಶ್ವವಿದ್ಯಾಲಯದ ಮಾನವಿಕ ವಿಭಾಗದ ಸಾಯಿಗೀತಾ ಹಾಗೂ ನಿವೃತ್ತ ಪ್ರಾಧ್ಯಾಪಕಿ ಮೀನಾಕ್ಷಿ ರಾಮಚಂದ್ರ ಮಾತನಾಡಿದರು.
ಪ್ರೊ. ವಿಶ್ವನಾಥ ಬದಿಕಾನ ಸ್ವಾಗತಿಸಿ, ಪ್ರೊ. ನರಸಿಂಹಮೂರ್ತಿ ಕಾರ್ಯಕ್ರಮ ನಿರೂಪಿಸಿದರು.