ವಸ್ತ್ರವಿನ್ಯಾಸದ ಮೆರುಗು, ಕುಣಿತದ ಶ್ರೀಮಂತಿಕೆ, ಮಾತುಗಾರಿಕೆಯ ಅಬ್ಬರದಲ್ಲಿ ಪ್ರೇಕ್ಷಕರನ್ನು ರಂಜಿಸುವ ಕಲೆಯ ಮತ್ತೊಂದು ಹೆಸರೇ ಯಕ್ಷಗಾನ. ಕಳೆದ 21 ವರ್ಷಗಳಿಂದ ಯಕ್ಷಗಾನವನ್ನೇ ವೃತ್ತಿಯಾಗಿಸಿಕೊಂಡು ತಮ್ಮದೇ ವಿಶೇಷ ಶೈಲಿಯ ಮೂಲಕ ಜನಪ್ರಿಯತೆ ಗಳಿಸಿದ ಕಲಾವಿದ ರಾಜೇಶ್ ಭಂಡಾರಿ ಗುಣವಂತೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಗುಣವಂತೆಯ ಮಂಜುನಾಥ ಭಂಡಾರಿ ಹಾಗೂ ರಾಧಾ ಭಂಡಾರಿ ಇವರ ಮಗನಾಗಿ 28.02.1985ರಲ್ಲಿ ಜನನ. ವಿನಂತಿ ರಾಜೇಶ್ ಇವರ ಪತ್ನಿ. ಧಾತ್ರಿ ಹಾಗೂ ದಿಯಾ ಇವರ ಇಬ್ಬರು ಮಕ್ಕಳು. ಹೆರಂಜಾಲು ವೆಂಕಟರಮಣ ಗಾಣಿಗರು ಹಾಗೂ ಕೃಷ್ಣ ಭಂಡಾರಿ ಗುಣವಂತೆ ಇವರ ಯಕ್ಷಗಾನ ಗುರುಗಳು.
ಯಕ್ಷಗಾನ ಕ್ಷೇತ್ರಕ್ಕೆ ಬರಲು ಕಾರಣ ತಂದೆಯವರು. ಸಣ್ಣವನಿರುವಾಗ ಒಂದು ವೃಷಸೇನನ ಪಾತ್ರ ಮಾಡಿದ್ದೆ. ಅಲ್ಲಿ ಕೆರೆಮನೆ ಮಹಾಬಲ ಹೆಗಡೆಯವರು ನನ್ನ ತಂದೆಯ ಬಳಿ ಬಂದು, “ನಿಮ್ಮ ಜಾತಿಯಲ್ಲಿ ಎಲ್ಲಾ ಹಿಮ್ಮೇಳಕ್ಕೆ ಹೆಚ್ಚು ಬರೋದು. ಇವನಿಗೆ ಭವಿಷ್ಯ ಇದೆ, ಮುಮ್ಮೇಳ ಕಲಿಸಿ” ಎಂದರು. ಆ ಮೇಲೆ ಆ ಕಡೆ ಹೆಚ್ಚಿನ ಗಮನ ಹರಿಸುವ ಹಾಗೇ ಆಯಿತು.
ನೆಚ್ಚಿನ ಪ್ರಸಂಗಗಳು:
ಅಭಿಮನ್ಯು ಕಾಳಗ, ವೃಷಸೇನ ಕಾಳಗ, ಚಂದ್ರಾವಳಿ ವಿಲಾಸ, ಜಾಂಬವತಿ ಕಲ್ಯಾಣ, ಚಕ್ರ ಚಂಡಿಕೆ, ಗದಾಯುದ್ಧ, ನರಕಾಸುರ ವಧೆ.
ನೆಚ್ಚಿನ ವೇಷಗಳು:
ಅಭಿಮನ್ಯು, ಕೃಷ್ಣ, ಲವ, ಕುಶ, ಬರ್ಬರೀಕ, ನರಕಾಸುರ, ಸುಧನ್ವ, ರಾವಣ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:
ಮಾಡುವ ಪಾತ್ರಗಳ ಬಗ್ಗೆ ಪೂರ್ವಜ್ಞಾನ, ಪ್ರಸಂಗ ನಡೆ, ಹಿರಿಯ ಕಲಾವಿದರ, ಎದುರು ಕಲಾವಿದರೊಂದಿಗೆ, ಭಾಗವತರೊಂದಿಗೆ ಮುಕ್ತವಾಗಿ ಮಾತನಾಡಿಕೊಂಡು ತಯಾರಿ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ರಾಜೇಶ್.
ಯಕ್ಷಗಾನದ ಇಂದಿನ ಸ್ಥಿತಿ ಗತಿ:
ಯಕ್ಷಗಾನ ಕಲೆ ನಿರಂತರ. ಅದಕ್ಕೆ ಅಳಿವು ಇಲ್ಲ, ಆದರೆ ಕಾಲ ಬದಲಾದ ಹಾಗೆ ಯಕ್ಷಗಾನದ ಸ್ವರೂಪವು ಕೂಡ ಗಣನೀಯವಾಗಿ ಬದಲಾಗುತ್ತಾ ಸಾಗುತ್ತಿದೆ. ಕೆಲವೊಂದು ಬದಲಾವಣೆ ಅಗತ್ಯ ಹಾಗೂ ಸ್ವಾಗತಾರ್ಹ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:
ಪ್ರಜ್ಞಾವಂತ ಪ್ರೇಕ್ಷಕರ ಕೊರತೆ ಕಾಣುತ್ತಿದೆ. ಕಲಾ ಆರಾಧನೆ ಬಿಟ್ಟು ಕಲಾವಿದರ ಆರಾಧನೆ ಮಾಡುತ್ತಿರುವುದು ಕಂಡು ಬರುತ್ತ ಇದೆ. ಯಕ್ಷಗಾನ ಸಮಷ್ಟಿ ಕಲೆ. ಎಲ್ಲವನ್ನೂ ಸಮಾನ ದೃಷ್ಟಿಯಿಂದ ನೋಡಬೇಕು. ಕೇವಲ ಒಂದು ವಿಭಾಗವನ್ನು ಮಾತ್ರ ಪೋಷಿಸುವುದು ಸೂಕ್ತವಲ್ಲ.
ಹೈದ್ರಾಬಾದ್ ಯಕ್ಷೋತ್ಸವ ಸನ್ಮಾನ, ಬೆಂಗಳೂರು ಸನ್ಮಾನ ಹಾಗೂ ಹಲವು ಸನ್ಮಾನ ಪ್ರಶಸ್ತಿಗಳು ದೊರೆತಿರುತ್ತದೆ.
ಗುಂಡಬಾಳ ಮೇಳದಲ್ಲಿ ಪುಂಡು ವೇಷಧಾರಿಯಾಗಿ ಯಕ್ಷಗಾನ ರಂಗ ಪ್ರವೇಶಿಸಿ 3 ವರ್ಷ ದುಡಿದು, ಕಮಲಶಿಲೆ ಮೇಳದಲ್ಲಿ 3 ವರ್ಷ ಕಾಲ ಸೇವೆ ಸಲ್ಲಿಸಿ, ಬಡಗುತಿಟ್ಟು ಯಕ್ಷಗಾನ ರಂಗದ ಪ್ರಸಿದ್ಧ ಡೇರೆ ಮೇಳವಾದ ಸಾಲಿಗ್ರಾಮ ಮೇಳದಲ್ಲಿ ಸುಧೀರ್ಘ 14 ವರ್ಷಗಳ ಕಾಲ ಕಲಾ ಸೇವೆಯನ್ನು ಮಾಡಿ ಪ್ರಸ್ತುತ ಮೆಕ್ಕೆಕಟ್ಟು ಮೇಳದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ ರಾಜೇಶ್.
ಪುಸ್ತಕ ಓದುವುದು, ಚಂಡೆ ಮದ್ದಳೆ ನುಡಿಸುವುದು, ಅಪ್ಪ ಮತ್ತು ಅಣ್ಣ ಚಂಡೆ ಮದ್ದಳೆ ರೆಡಿ ಮಾಡ್ತಾರೆ. ಅದರ ಕೆಲಸ ಸ್ವಲ್ಪ ಕೆಲಸ ಮಾಡುತ್ತೇನೆ. ಶಹನಾಯಿ ನುಡಿಸುವುದು, ಕ್ರಿಕೆಟ್ ಆಡುವುದು ಇವರ ಹವ್ಯಾಸಗಳು.
ತಂದೆ, ತಾಯಿ, ಪತ್ನಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ರಾಜೇಶ್ ಭಂಡಾರಿ ಗುಣವಂತೆ.
ಶ್ರವಣ್ ಕಾರಂತ್ ಕೆ.
ಶಕ್ತಿನಗರ ಮಂಗಳೂರು.