ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೈೂಲದ ಸಂಜೀವ ಶೆಟ್ಟಿ ಹಾಗೂ ಶೋಭಾ ಶೆಟ್ಟಿ ಇವರ ಮಗನಾಗಿ 01.03.1998ರಂದು ನಿಖಿಲ್ ಶೆಟ್ಟಿ ಕೈೂಲ ಅವರ ಜನನ. 1 – 7ರವರೆಗೆ ಸರಕಾರಿ ಪ್ರಾಥಮಿಕ ಶಾಲೆ ಕೈೂಲ, 8 – 10ರವರೆಗೆ ಸರಕಾರಿ ಪ್ರೌಢ ಶಾಲೆ ಕೈೂಲ, ಪಿಯುಸಿ ಯನ್ನು ಸರಕಾರಿ ಪದವಿಪೂರ್ವ ಕಾಲೇಜು ಸಿದ್ಧಕಟ್ಟೆ ಹಾಗೂ ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ ಯಲ್ಲಿ ಬಿ.ಎ ಪದವಿ ಪಡೆದಿರುತ್ತಾರೆ. ಪ್ರೇಮ್ ರಾಜ್ ಕೈೂಲ ಇವರ ಯಕ್ಷಗಾನ ಗುರುಗಳು.
ಯಕ್ಷಗಾನ ಕ್ಷೇತ್ರಕ್ಕೆ ಬರಲು ಪ್ರೇರಣೆ:
ಮೊದಲಾಗಿ ಗುರುಗಳು ನನಗೆ ಪ್ರೇರಣೆ. ಕಾಲೇಜು ದಿನಗಳಲ್ಲಿ ಅವರ ಜೊತೆ ಯಕ್ಷಗಾನ ನೋಡಲು ಕಟೀಲು ಮೇಳಕ್ಕೆ ಹೋಗುತ್ತಿದ್ದೆ ಅಲ್ಲಿಂದ ನನಗೆ ಯಕ್ಷಗಾನದಲ್ಲಿ ಆಸಕ್ತಿ ಹೆಚ್ಚಾಯಿತು. ಮೇಳದಲ್ಲಿ ತಿರುಗಾಟ ಮಾಡಿ ಗುರುಗಳಂತೆ ನನಗೂ ವೇಷಧಾರಿ ಆಗಬೇಕು ಎನ್ನುವ ಹಂಬಲ ಹೆಚ್ಚಾಯಿತು ಹಾಗಾಗಿ ಕಟೀಲು 2ನೇ ಮೇಳಕ್ಕೆ ಸೇರಿದೆ ಅಲ್ಲಿ ಪ್ರಸಾದ ಬಲಿಪ ಭಾಗವತರು ಹಾಗೆ ಮುರಾರಿ ಕಡಂಬಳಿತ್ತಾಯ, ದಿನೇಶ್ ಶೆಟ್ಟಿ ಕಾವಳಕಟ್ಟೆ, ರಮೇಶ್ ಭಟ್ ಬಾಯಾರು, ನಾರಾಯಣ ಕುಲಾಲ್, ಶಿವಶಂಕರ್ ಬಲಿಪ, ರಮೇಶ್ ಭಟ್ ಪುತ್ತೂರು ಇವರುಗಳು ಮಾರ್ಗದರ್ಶನದಲ್ಲಿ ಕಟೀಲು 2ನೇ ಮೇಳದಲ್ಲಿ 5 ವರ್ಷ ಹಾಗೆಯೇ ಮೂರನೇ ಮೇಳದಲ್ಲಿ ಭಾಗವತರಾದ ದೇವಿಪ್ರಸಾದ್ ಆಳ್ವ ತಲಪಾಡಿ, ಅಮ್ಮುಂಜೆ ಮೋಹನ್ ಕುಮಾರ್, ಹರಿನಾರಾಯಣ ಭಟ್ ಇವರುಗಳ ಮಾರ್ಗದರ್ಶನ ಮತ್ತಷ್ಟು ಯಕ್ಷಗಾನದಲ್ಲಿ ವೇಷ ಮಾಡಲು ಸ್ಫೂರ್ತಿ ನೀಡಿತು. ಪುರಾಣ ಪ್ರಸಂಗಗಳು ಇವರ ನೆಚ್ಚಿನ ಪ್ರಸಂಗಗಳು.
ನೆಚ್ಚಿನ ವೇಷಗಳು:
ವಸುಶೇಣ, ಹನುಮಂತ (ಹನುಮೋದ್ಬವ), ಪ್ರಹ್ಲಾದ, ಅಭಿಮನ್ಯು, ಚಂಡಮುಂಡರು, ಕೃಷ್ಣ (ಲೀಲೆ, ಜಾಂಬವತಿ), ವಿಷ್ಣು, ಮದಿರಾಕ್ಷ ಇತ್ಯಾದಿ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ:
ರಂಗಕ್ಕೆ ಹೋಗುವ ಮೊದಲು ಪಾತ್ರಗಳ ಭಾಗವತರ ಜೊತೆ ಕೇಳಿ ಕೊಳ್ಳುತ್ತೇನೆ ಹಾಗೆ ಮೇಳದ ಹಿರಿಯ ಕಲಾವಿದರ ಬಳಿ ವೇಷದ ಕ್ರಮಗಳನ್ನು ಮೇಳದ ಮದ್ದಲೆಗಾರರಲ್ಲಿ ಕೇಳಿ ಮತ್ತು ಜೊತೆಯಲ್ಲಿ ರಂಗ ಹಂಚಿಕೊಳ್ಳುವ ವೇಷಧಾರಿ ಬಳಿ ಮಾಹಿತಿ ಪಡೆಯುತ್ತೇನೆ ಮತ್ತು ಕೆಲವು ಪುಸ್ತಕಗಲ್ಲಿ ಪಾತ್ರಕ್ಕೆ ಬೇಕಾದ ವಿಷಯಗಳನ್ನು ಸಂಗ್ರಹಿಸಿ ಹೋಗುತ್ತೇನೆ.
ಯಕ್ಷಗಾನದ ಇಂದಿನ ಸ್ಥಿತಿ ಗತಿ:
ಯಕ್ಷಗಾನಕ್ಕೆ ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಪ್ರೋತ್ಸಾಹ ದೊರೆಯುತ್ತಿದೆ, ಅಲ್ಲದೆ ಹಲವಾರು ವೇದಿಕೆಗಳನ್ನು ಕಲ್ಪಿಸಲಾಗಿದೆ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಹೊಣೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:
ಪ್ರೇಕ್ಷಕರು ಕಲಾವಿದರಿಗೆ ನಿಜವಾದ ಸ್ಪೂರ್ತಿ ತುಂಬುವವರು ಬಹಳಷ್ಟು ಅಭಿಮಾನದಿಂದ ಯಕ್ಷಗಾನವನ್ನು ನೋಡುತ್ತಾರೆ. ಹಾಗೆಯೇ ಯಕ್ಷಗಾನ ಪ್ರಸಂಗಗಳನ್ನು ವೀಕ್ಷಿಸಿ ಪ್ರಸಂಗದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ ಹಾಗಾಗಿ ಅವರ ಮುಂದೆ ಪ್ರದರ್ಶನ ನೀಡುವಾಗ ಹೆಚ್ಚಿನ ತಯಾರಿಯಿಂದ ಪ್ರದರ್ಶನ ನೀಡಬೇಕಾಗುತ್ತದೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:
ನಾಟ್ಯ ಹಾಗೂ ಅರ್ಥಗಾರಿಕೆಗೆ ಹೆಚ್ಚಿನ ಮಹತ್ವವನ್ನು ನೀಡಿ ಹೆಚ್ಚಿನ ಅಭ್ಯಾಸಗಳನ್ನು ಮಾಡಿ ವೇಷಗಳನ್ನು ಇನ್ನಷ್ಟು ಉತ್ತಮಗೊಳಿಸುವ ಯೋಜನೆ ಹೊಂದಿದ್ದೇನೆ.
ಸನ್ಮಾನ ಹಾಗೂ ಪ್ರಶಸ್ತಿ:
ಶುಭವರ್ಣ ಯಕ್ಷ ಸಂಪದ ಮರಕಡ ಪ್ರತಿಭಾ ಪುರಸ್ಕಾರ- 2021.
ಬಂಟರ ಸಂಘ (ರಿ) ಅರಳ ಇವರಿಂದ ಸನ್ಮಾನ (2023)
ಹಳೆ ಕಾಲದ ವಸ್ತುಗಳ ಸಂಗ್ರಹಣೆ, ಎಲ್ಲಾ ದೇಶಗಳ ಕರೆನ್ಸಿಗಳ ಸಂಗ್ರಹಣೆ, ಇತಿಹಾಸ ತಾಣಗಳಿಗೆ ಭೇಟಿ ನೀಡುವುದು ಇವರ ಹವ್ಯಾಸ.
ತಂದೆ, ತಾಯಿ, ತಂಗಿ ನಿಖಿತಾ ಶೆಟ್ಟಿ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ನಿಖಿಲ್.
ಶ್ರವಣ್ ಕಾರಂತ್ ಕೆ.
ಶಕ್ತಿನಗರ ಮಂಗಳೂರು