ನೃತ್ಯಕ್ಕೆ ಹೇಳಿ ಮಾಡಿಸಿದ ತೆಳ್ಳನೆಯ ಮೈಕಟ್ಟು, ಭಾವಸ್ಫುರಣ ಮೊಗ, ಲವಲವಿಕೆಯ ಆಂಗಿಕಾಭಿನಯ ಉದಯೋನ್ಮುಖ ನೃತ್ಯಕಲಾವಿದೆ ಪ್ರೇರಣಾ ಬಾಲಾಜಿಯ ಧನಾತ್ಮಕ ಅಂಶಗಳು. ಹೆಸರಾಂತ ‘ನೃತ್ಯೋದಯ ಅಕಾಡೆಮಿ’ಯ ಪ್ರಾಮಾಣಿಕ- ಉತ್ತಮ ನೃತ್ಯಗುರು ದಿವ್ಯಶ್ರೀ ವಟಿಯವರ ನೆಚ್ಚಿನ ಶಿಷ್ಯೆ ಗುರುಗಳ ಮಾರ್ಗದರ್ಶನದಂತೆ ಬಹು ಸುಂದರವಾಗಿ, ಅಚ್ಚುಕಟ್ಟಾಗಿ ನರ್ತಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದಳು. ಈ ಭರವಸೆಯ ಕಲಾವಿದೆ ದಿನಾಂಕ 23 ಫೆಬ್ರವರಿ 2025ರಂದು ಯಲಹಂಕದ ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕಲಾರಸಿಕರ ಸಮ್ಮುಖದಲ್ಲಿ ವಿದ್ಯುಕ್ತವಾಗಿ ತನ್ನ ರಂಗಪ್ರವೇಶವನ್ನು ನೆರವೇರಿಸಿಕೊಂಡಳು. ‘ಮಾರ್ಗಂ’ ಪದ್ಧತಿಯ ರೀತ್ಯ ನೃತ್ಯ ಕೃತಿಗಳನ್ನು ಪ್ರಸ್ತುತಪಡಿಸಿದ ಪ್ರೇರಣ, ಮೊದಲಿನಿಂದ ಕಡೆಯವರೆಗೂ ಗೆಲುವಿನಿಂದ, ದೈವೀಕ ಆಯಾಮದ ಕೃತಿಗಳನ್ನು ಭಕ್ತಿಪೂರ್ವಕವಾಗಿ ಅರ್ಪಿಸಿದಳು.
ಶುಭಾರಂಭದಲ್ಲಿ – ಪ್ರೇರಣಾ ಅತ್ಯಂತ ವಿನಯದಿಂದ ಗುರು-ಹಿರಿಯರು, ದೇವಾನುದೇವತೆಗಳು, ಸಮಸ್ತರಿಗೂ ಭಕ್ತಿಪೂರ್ವಕವಾಗಿ, ಮೆರುಗಿನ ನೃತ್ತಗಳ ಮೂಲಕ ವಿನೀತ ಪ್ರಾರ್ಥನೆಯನ್ನು ‘ಪುಷ್ಪಾಂಜಲಿ’ಯಾಗಿ ಸಲ್ಲಿಸಿದಳು. ಪ್ರಥಮ ಪೂಜಿತ ಶ್ರೀ ವಿಘ್ನರಾಜನನ್ನು ಭಜಿಸಿ ‘ಪೂಜ್ಯಾಯ ರಾಘವೇಂದ್ರಾಯ’ ಎಂದು ರಾಯರಿಗೆ ನಮಿಸಿ ತನ್ನ ಪ್ರಸ್ತುತಿಯನ್ನು ಆರಂಭಿಸಿದಳು. ಎಲ್ಲಕ್ಕಿಂತ ವಿಶೇಷ ಎನಿಸಿದ್ದು, ಅವಳ ‘ಅಲರಿಪು’ವಿನ ವಿಭಿನ್ನ ಶೋಭೆ. ನೃತ್ತಗಳಲ್ಲಿ ಆಕರ್ಷಕ ಭಂಗಿಗಳನ್ನು ತೋರುತ್ತ, ಮುದವಾದ ಆಂಗಿಕಾಭಿನಯದಲ್ಲಿ ಮಿನುಗಿದ ಸೊಗಸು ಗಮನಾರ್ಹವಾಗಿತ್ತು. ಗುರು ದಿವ್ಯರ ಲಯಾತ್ಮಕ ನಟುವಾಂಗದ ಸ್ಫುಟವಾದ ಜತಿಗಳ ವಾಚಿಕದ ಸ್ಫೂರ್ತಿ ಪಡೆದ ನರ್ತಕಿಯ ಲೀಲಾಜಾಲ ನೃತ್ಯ ಮನಸೆಳೆಯಿತು.
ಮುಂದೆ- ಪ್ರಸಿದ್ಧ ಸಂಗೀತ ನಿರ್ದೇಶಕರಾದ ‘ಪದ್ಮಚರಣ’ ವಿರಚಿತ ‘ಶೃಂಗಪುರಾಧೀಶ್ವರಿ ಶಾರದೆ’ಯನ್ನು ಕಲಾವಿದೆ ತನ್ನ ಭಾವಪೂರ್ಣ ಅಭಿನಯದಿಂದ ಸಾಕ್ಷಾತ್ಕರಿಸಿದಳು. ಪ್ರಶಾಂತ್ ರುದ್ರಪಟ್ಟಣರವರ ಹೃದಯಸ್ಪರ್ಶಿ ವೀಣಾನಿನಾದ, ನರಸಿಂಹಮೂರ್ತಿಯವರ ಮುರಳೀಗಾನದ ಅಲೆಯಲೆಯಲ್ಲಿ ಒಡಮೂಡಿದ, ದೀಪ್ತಿ ಶೀನಾಥರ ಭಾವಬಂಧುರದ ಗಾಯನದಲ್ಲಿ ಅರಳಿದ ಪ್ರೇರಣಳ ಸಾತ್ವಿಕ ನರ್ತನದ ಪ್ರಭೆ ನಯನ ಮನೋಹರವಾಗಿ ಸಕಲಕಲಾ ಶಾರದೆಯ ಸುಂದರ ಚಿತ್ರಣವನ್ನು ಅನಾವರಣಗೊಳಿಸಿತು. ದೇವಿಯ ಸೌಂದರ್ಯ ಮತ್ತು ಮಹಿಮೆಯ ದೈವೀಕತೆ ನರ್ತಕಿಯ ವಿವಿಧ ನಾಟ್ಯ ಭಂಗಿಗಳಿಂದ- ವರ್ಚಸ್ವೀ ಅಭಿನಯದಿಂದ ಕಮನೀಯವಾಗಿ ಅಭಿವ್ಯಕ್ತವಾಯಿತು.
ಪ್ರಸ್ತುತಿಯ ಪ್ರಮುಖಭಾಗ- ‘ವರ್ಣ’. ನೃತ್ತ ಮತ್ತು ಅಭಿನಯ ಎರಡರಲ್ಲೂ ಕಲಾವಿದರು ಸಮಾನ ಪರಿಣತಿಯನ್ನು ಹೊಂದಿರಬೇಕಾಗುತ್ತದೆ. ಜೊತೆಗೆ ತಾಳ ಮತ್ತು ಲಯಜ್ಞಾನ ಕೂಡ. ಅಗಾಧ ನೆನಪಿನಶಕ್ತಿ ಅತ್ಯಗತ್ಯ. ಈ ನಿಟ್ಟಿನಲ್ಲಿ ಪ್ರೇರಣ ಸಶಕ್ತಳಾಗಿದ್ದಳು. ‘ಬಾ ಬಾರಯ್ಯ ರಘುವಂಶ ಚಂದ್ರನೇ’ -ರಾಮಾಯಣದ ಕಥಾಸಾರವನ್ನು ಒಳಗೊಂಡ ಆಪ್ಯಾಯಮಾನವಾದ ಕಣ್ಮನಗಳಿಗೆ ತಂಪೆರೆದ ಕನ್ನಡದ ‘ಪದವರ್ಣ’- (ರಾಮಪ್ರಿಯ ರಾಗ ಮತ್ತು ಆದಿತಾಳ)ವನ್ನು ಸಾತ್ವಿಕಾಭಿನಯದಿಂದ ಅಚ್ಚುಕಟ್ಟಾಗಿ ಒಪ್ಪಿಸಿದಳು ಪ್ರೇರಣ. ನಡುನಡುವೆ ಶೋಭಿಸುತ್ತಿದ್ದ ನೃತ್ತಾವಳಿ ಮನಮೋಹಕವಾಗಿದ್ದರೆ, ಗುರು ದಿವ್ಯ ಅವರ ಸ್ಪಷ್ಟ- ನಿಖರ ನಟುವಾಂಗದ ಬನಿ ಸುವ್ಯಕ್ತವಾಗಿತ್ತು. ದಶರಥನ ಪುತ್ರಕಾಮೇಷ್ಟಿ ಯಾಗ, ಪಾಯಸ ಪ್ರಾಪ್ತಿ, ವಿಶ್ವಾಮಿತ್ರನೊಡನೆ ರಾಮ-ಲಕ್ಷ್ಮಣರು ಯಾಗರಕ್ಷಣೆಗೆ ತೆರಳುವುದು ಮತ್ತು ಸೀತಾಸ್ವಯಂವರ, ಶೂರ್ಪನಖಿ ಪ್ರಸಂಗ, ಮಾಯಾಜಿಂಕೆ- ಜಟಾಯು ಪ್ರಕರಣ, ಸೀತಾಪಹರಣ -ಅಶೋಕವನದಲ್ಲಿ ಸೀತೆಯ ದರ್ಶನ ಮುಂತಾದ ಪ್ರಮುಖ ಘಟನೆಗಳ ಸಂಚಾರಿ ಕಥಾನಕ ನಾಟಕೀಯ ಆಯಾಮದಲ್ಲಿ ಸಂಕ್ಷಿಪ್ತವಾಗಿ ಅಷ್ಟೇ ಹದವಾಗಿ ಮೂಡಿಬಂತು. ಕಲಾವಿದೆಯ ನೃತ್ಯದ ಪರಿಣಾಮವನ್ನು ಹೆಚ್ಚಿಸಿದ ವಯೊಲಿನ್ (ಮತ್ತೂರು ಶ್ರೀನಿಧಿ), ಮೃದಂಗದ ಸಬಲ ಸಾತತ್ಯ (ಜಿ.ಎಸ್. ನಾಗರಾಜ್) ಮತ್ತು ಕಾರ್ತೀಕ್ ದಾತಾರರ ರಿದಂ ಪ್ಯಾಡ್ ನ ವಿವಿಧ ಪರಿಣಾಮಕಾರಿ ಧ್ವನಿಗಳು ಔನ್ನತ್ಯಕ್ಕೇರಿಸಿದ್ದವು.
ಮುಂದಿನ ‘ಕಂಡೆ ನಾ ನಟರಾಜ ಕರುಣಾಕರ ಶಿವನ’ –ಎಂಬ ಸ್ತುತಿಯ ‘ನಟೇಶ ಕೌತ್ವಂ’ -ಅತ್ಯಂತ ಸಂವೇದನಾಪೂರ್ಣವಾಗಿತ್ತು. ನಾಟ್ಯಾಧಿಪತಿ ನಟರಾಜನ ವಿವಿಧ ಯೋಗದ ಭಂಗಿಗಳು -ಸುಂದರ ಆಂಗಿಕಾಭಿನಯ ಚೈತನ್ಯಪೂರ್ಣವಾಗಿತ್ತು. ನಟುವಾಂಗದ ಝೇಂಕಾರ ನೃತ್ಯಕ್ಕೆ ಪೂರಕವಾಗಿತ್ತು. ಅನಾಯಾಸವಾಗಿ ನರ್ತಿಸಿದ ಪ್ರೇರಣಳ ಮಂಡಿ ಅಡವು, ಆಕಾಶಚಾರಿಗಳಿಂದ ಕೂಡಿದ್ದ ಕವಿತ್ವಂ ರಮಣೀಯ ನೋಟ ನೀಡಿತ್ತು. ಅನಂತರ ಪುರಂದರದಾಸರು ರಚಿಸಿದ ಪೂರ್ವೀಕಲ್ಯಾಣಿ ರಾಗ- ಆದಿತಾಳದ ‘ಹನುಮಂತ ದೇವ ನಮೋ’ – ವೀರಾಂಜನೇಯನ ಬಲ-ಸಾಮರ್ಥ್ಯಗಳಿಗೆ ಕನ್ನಡಿ ಹಿಡಿದ ಸುಮನೋಹರ ಕೃತಿಯಲ್ಲಿ ಕಲಾವಿದೆ ಹನುಮನ ಸಮುದ್ರ ಲಂಘನ- ಚೂಡಾಮಣಿ ದರ್ಶನ, ಲಂಕಾದಹನ ಮುಂತಾದ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಅಭಿನಯಿಸಿದಳು. ರಂಗಾಕ್ರಮಣದಲ್ಲಿ ತೋರಿದ ಮಂಡಿ ಅಡವು ಮತ್ತು ಕಡೆಯಲ್ಲಿ ಹನುಮ ತನ್ನ ಎದೆಯನ್ನು ಬಗೆದು ಪ್ರದರ್ಶಿಸಿದ ಹೃದ್ಯ ದೃಶ್ಯ ವಿಶೇಷವಾಗಿ ಸೆಳೆಯಿತು. ಅಂತ್ಯದ ವಲಚಿ ರಾಗದ ದ್ವಾರಕಿ ಕೃಷ್ಣಸ್ವಾಮಿ ರಚನೆಯ ‘ತಿಲ್ಲಾನ’ದಲ್ಲಿ ಮಿಂಚಿನ ಸಂಚಾರದ ನೃತ್ತಗಳೊಂದಿಗೆ, ಕಲಾವಿದೆ, ಮೃದಂಗದ ಮೋಹಕ ಜತಿ (ಜಿ.ಎಸ್. ನಾಗರಾಜ್)ಗಳಿಗೆ ನಟುವಾಂಗದ ಕುಣಿಸುವಂತಿದ್ದ ಕೊನ್ನಕೊಲುಗಳಿಗೆ ತಕ್ಕ ಹಾಗೆ ಹೆಜ್ಜೆ ಹಾಕಿದ ಶಕ್ತಿಶಾಲಿ ‘ಗೆತ್ತುಗಳ’ ಲಯಾತ್ಮಕ ಝೇಂಕಾರ ಕಲಾವಿದೆಯ ಗೆಲುವನ್ನು ಸಾಬೀತುಪಡಿಸಿತ್ತು.
ವೈ.ಕೆ. ಸಂಧ್ಯಾ ಶರ್ಮ
ಕನ್ನಡದ ಖ್ಯಾತ-ಜನಪ್ರಿಯ ಲೇಖಕಿ, ಕವಯಿತ್ರಿ, ಪತ್ರಕರ್ತೆ, ರಂಗಕರ್ಮಿ, ಸಂಧ್ಯಾ ಪತ್ರಿಕೆಯ ಪ್ರಧಾನ ಸಂಪಾದಕಿ, ‘ಅಭಿನವ ಪ್ರಕಾಶನ’ದ ಸ್ಥಾಪಕಿ – ಪುಸ್ತಕ ಪ್ರಕಾಶಕಿ, ಅಂಕಣಕಾರ್ತಿ ಮತ್ತು ನೃತ್ಯ-ನಾಟಕಗಳ ವಿಮರ್ಶಕಿ. ಪತಿ ನಾಟಕಕಾರ-ನಿರ್ದೇಶಕ-ನಟ ಎಸ್.ವಿ.ಕೃಷ್ಣ ಶರ್ಮರ ಜೊತೆಯಾಗಿ ಸ್ಥಾಪಿಸಿದ ಸಂಧ್ಯಾ ಕಲಾವಿದರು ಹವ್ಯಾಸೀ ನಾಟಕ ತಂಡದ ಅಧ್ಯಕ್ಷೆ.