Subscribe to Updates

    Get the latest creative news from FooBar about art, design and business.

    What's Hot

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಕಾಸರಗೋಡು ಜಿಲ್ಲೆಯ ಬಳ್ಳಪದವಿನಲ್ಲಿ ‘ನಾದ ಮಾಧುರಿ’ ಸಂಗೀತ ಕಾರ್ಯಾಗಾರ | ಮೇ 09ರಿಂದ 11

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಪುಸ್ತಕ ವಿಮರ್ಶೆ | ಅಪರಿಚಿತರು ಅರಳಿಸಿದ ‘ಮಂದಹಾಸ’
    Literature

    ಪುಸ್ತಕ ವಿಮರ್ಶೆ | ಅಪರಿಚಿತರು ಅರಳಿಸಿದ ‘ಮಂದಹಾಸ’

    March 5, 2025No Comments5 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕನ್ನಡದಲ್ಲಿ ಲಲಿತಪ್ರಬಂಧಗಳು ಮಂಕಾಗಿವೆ ಎನ್ನುವವರು ‘ಮಂದಹಾಸ’ ಕೃತಿಯನ್ನೊಮ್ಮೆ ಓದಬೇಕು. ಇದರಲ್ಲಿ ಇಪ್ಪತ್ತೈದು ಬರಹಗಳಿವೆ. ಲಲಿತ ಪ್ರಬಂಧಗಳನ್ನು ಓದದ, ಗಂಭೀರವಾಗಿ ನೋಡದ ಸಾಹಿತ್ಯಪ್ರಿಯರು ಮತ್ತು ಪ್ರೋತ್ಸಾಹಿಸದ ಪತ್ರಿಕೆಗಳು ಪಶ್ಚಾತ್ತಾಪ ಪಡುವಂತೆ ಪುಸ್ತಕದ ಹಾಸುಬೀಸು ಇದೆ. ವಿಕಾಸ ಹೊಸಮನಿ ಎಂಬ ತರುಣ ಲೇಖಕ ಸಂಪಾದಿಸಿದ ಈ ಕೃತಿ ಮರುಮುದ್ರಣ ಕಾಣುವ ಶಕ್ತಿಯನ್ನು ಹೊಂದಿದೆ. ಬರಹವನ್ನು ಹೇಗೆ ಹೆಣೆಯಬಹುದೆಂದು ಈ ಪುಸ್ತಕದ ಓದಿನ ಮೂಲಕ ಕಲಿಯಬಹುದು. ಇಪ್ಪತ್ತೈದು ಮಂದಿ ಪ್ರಬಂಧಕಾರರನ್ನು ಕುರಿತ ಹೆಚ್ಚಿನ ಮಾಹಿತಿ ಇಲ್ಲವೆಂಬ ಸಣ್ಣ ಲೋಪವನ್ನು ಬಿಟ್ಟರೆ ಈ ಕೃತಿ ಶ್ರೀಮಂತವಾಗಿದೆ.

    ಕೃತಿಯ ನೋಟ
    ವಿಠ್ಠಲ ಕಟ್ಟಿ ‘ನಾನೇಕೆ ಬರೆಯುತ್ತಿಲ್ಲ’ ಎಂಬ ಲಲಿತ ಪ್ರಬಂಧದಲ್ಲಿ ಈ ‌ಮಾತಿನ ಮೂಲಕ ಗಮನ ಸೆಳೆಯುತ್ತಾರೆ. “ಮುಖ್ಯ ಕಾರಣ, ನನಗೆ ಓದುಗರ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ಜಾಸ್ತಿ. ಕೆಲವರು ಬರೆದರೇ ಕನ್ನಡ ಸಾಹಿತ್ಯಕ್ಕೆ ಉಪಕಾರ ಕೆಲವರು ಬರೆಯದಿದ್ದರೆ ಉಪಕಾರ” ಎನ್ನುತ್ತಾ ಒಳ್ಳೆಯ ಪ್ರಬಂಧವನ್ನು ಹೆಣೆದು ಬಿಡುತ್ತಾರೆ. ಉತ್ತಮ ಕಥೆಗಾರನಾಗಿದ್ದೂ ಲಲಿತ ಪ್ರಬಂಧವನ್ನು ಬರೆಯ ಹೊರಟು, ಕಥೆಯಂತೆ ಮುಗಿಸುತ್ತಾ ನಾಲ್ಕು ಹನಿ ಸುಖದ ಕಣ್ಣೀರು ಜಿನುಗುವಂತೆ ಮಾಡುವ ಕೊಳ್ಚಪ್ಪೆ ಗೋವಿಂದ ಭಟ್ಟರ ‘ಮನೆ ಕಾಯುವ ಕೆಲಸ’ ಬೇರೆಯೇ ರೀತಿಯಲ್ಲಿ ಗಮನ ಸೆಳೆಯುತ್ತದೆ. ತಾನು ಹೊರಟು ಬಂದ ಸ್ವಂತ ದೇಶದಲ್ಲಿ ತನ್ನ ರಾಯಭಾರಿತ್ವದ ಕರ್ತವ್ಯವಿದೆ ಎಂದು ವಿದೇಶದ ನೆಲದಲ್ಲಿದ್ದುಕೊಂಡು ಚಡಪಡಿಸುವ ಸೀಮಾ ಕುಲಕರ್ಣಿಯವರ ‘ನಾನು ಭಾರತದ ರಾಯಭಾರಿ’ ಎಂಬ ಬರಹ ಎಲ್ಲೋ ಇದ್ದು ತನ್ನ ಮಣ್ಣಿನಲ್ಲಿ ನಡೆಯುವ ಅಂಧಾನುಕರಣೆ ತುಂಬಿದ ಹೀನಾಯ ಸ್ಥಿತಿಯ ಬಗ್ಗೆ ಗಾಬರಿಯಾಗುತ್ತಾ ಸಾಂಸ್ಕೃತಿಕ ಶ್ರೀಮಂತಿಕೆಗೆ ನಿದರ್ಶನವಾಗುತ್ತದೆ. ಜೆ.ವಿ. ಕಾರ್ಲೊ ಅವರ ‘ನಾನು ಸಿಗರೇಟ್ ಬಿಟ್ಟೆ’ ಎಂಬ ಪ್ರಬಂಧದಲ್ಲಿರುವ ಅಂತರಂಗ ಶೋಧ, ಆರೋಗ್ಯದ ಕಾಳಜಿ, ಸುತ್ತಿಕೊಳ್ಳುವ ದುಶ್ಚಟಗಳ ಕಬಂಧ ಬಾಹುಗಳ ಕುರಿತ ವ್ಯಾಖ್ಯೆ ಚಿಂತನೀಯ. ಎತ್ತಿಕೊಂಡ ವಿಷಯದ ಎಲ್ಲ ಮಗ್ಗುಲುಗಳನ್ನೂ ಶೋಧಿಸಿ ಆಧಿಕಾರಿಕವಾಗಿ ವಿಶ್ಲೇಷಿಸುತ್ತಾ ಅವರು ಪ್ರಶ್ನಿಸುತ್ತಾರೆ. “ಸಿಗರೇಟ್ ಸೇದುವ ಗಂಡಸಿಗೆ ಚುಂಬಿಸುವುದು ಒಂದೇ ಸೌದೆ ಒಲೆ ಚುಂಬಿಸುವುದು ಒಂದೇ ಅಂತ ನಿಮಗೆ ಅನ್ನಿಸುವುದಿಲ್ಲವೆ?”

    ಪಿ.ಎನ್. ಮೂಡಿತ್ತಾಯರು ಮೊಬೈಲ್ ಗೀಳಿನಿಂದ ಬಿಡಿಸಿಕೊಳ್ಳುವ ಕುರಿತು ಬರೆಯುತ್ತಾ ಆ ಪ್ರಯತ್ನ ನಿರರ್ಥಕ ಎಂಬ ನಿರ್ಧಾರಕ್ಕೆ ಬಂದು, ಅದನ್ನು ಇನ್ನಷ್ಟು ಬಳಸಿಕೊಳ್ಳಿ ಎಂದು ಧೈರ್ಯ ತುಂಬುವ ರೀತಿ, ಕೊನೆಗೆ ಅದಕ್ಕೇ ಬಲಿಯಾಗಬೇಕಾದ ಆಧುನಿಕ ಮಾನವನ ಮುಂದೆ ಮೊಬೈಲೇ ನಾಯಕನೆನಿಸುವ ಸನ್ನಿವೇಶ ದುರದೃಷ್ಟಕರ. ನಯನ ಭಟ್ ಅವರ ‘ಮೊಬೈಲ್ ಆಖ್ಯಾನ’ದಲ್ಲಿ ವಿಭಿನ್ನ ನೋಟವಿದೆ. ಮೊಬೈಲಿನಿಂದ ಲಾಭ ನಷ್ಟಗಳನ್ನು ಅವರು ಪ್ರಾಮಾಣಿಕವಾಗಿ ವಿಶ್ಲೇಷಿಸುತ್ತಾರೆ. ಮಗುವಿನಿಂದ ತೊಡಗಿ ಅದು ಮಾನವ ರಾಶಿಯನ್ನು ಆಕರ್ಷಿಸಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡದ್ದರ ಬಗ್ಗೆ ಅಚ್ಚರಿಯನ್ನು ವ್ಯಕ್ತಪಡಿಸುತ್ತಾರೆ. ಬೇಕಾದದ್ದನ್ನು ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಈ ಲೇಖನದ ಧಾಟಿ ಸ್ತುತ್ಯರ್ಹವಾಗಿದೆ. ಆಳವಾದ ಅಧ್ಯಯನವಾಗಿದ್ದೂ ಅಶ್ವತ್ಥ ಮರದ ಕುರಿತು ರೇಷ್ಮಾ ಭಟ್ ಬರೆದ ‘ಅರಳೀಕಟ್ಟೆಯ ಹರಟೆ’ಯಲ್ಲಿ ಹೆಸರಾಂತ ಹಿರಿಯ ಲೇಖಕರ ಕೃತಿಗಳಂತೆ ಸಮಗ್ರತೆ, ಅನುಭವ, ಪೂರ್ವಾಪರ ಚಿಂತನೆಗಳಿವೆ. ಸರಳ ಶೈಲಿಯೊಳಗೆ ಗಂಭೀರ ಪ್ರಸಂಗಗಳು, ಮಾಹಿತಿಗಳನ್ನು ಜೋಡಿಸಿಡುವ ರೀತಿ ಅನನ್ಯವಾಗಿದೆ. ಪ್ರೌಢ ಪ್ರಬಂಧಕ್ಕೆ ಹಾಳಿತವಾದ ವಿಷಯದ ಹರಹನ್ನು ಲಾಲಿತ್ಯದಿಂದ ಹಿಡಿದಿಟ್ಟುರುವುದು ಉಲ್ಲೇಖನೀಯ. ಧರ್ಮಾನಂದ ಶಿರ್ವ ಅವರ ‘ಆಹಾ ಚಹಾ’ ಎಂಬ ಸುದೀರ್ಘ ರಚನೆಯು ಚಹಾದ ಹುಟ್ಟಿನಿಂದ ಆರಂಭಿಸಿ, ಅದರ ವ್ಯಾಪ್ತಿಯನ್ನು ಕಂಡರಿಸಿ ಪ್ರಭಾವಗಳನ್ನು ಗುರುತಿಸುವ ರೀತಿ ಮೆಲ್ಲ ಮೆಲ್ಲನೆ ನಮ್ಮನ್ನು ಚಹಾದಲ್ಲಿ ಅದ್ದಿಬಿಡುವಂತೆ ಆವರಿಸಿ, ಆ ಪೇಯದ ವಿಶ್ವರೂಪವನ್ನು ಕಡೆಯುತ್ತದೆ.

    ಕಲ್ಪನಾ‌ ಹೆಗಡೆಯವರ ‘ಎಮ್ಮಾಯಣ’ದಲ್ಲಿ ಕಾಲಹತಿಯಿಂದ ಅಳಿಯುತ್ತಿರುವ ಹೈನುಗಾರಿಕೆಯ ವಿಷಾದ ಚಿತ್ರವಿದ್ದರೂ ಕಳೆದುಹೋದ ಎಮ್ಮೆಗಳ ಹಿಂಡು ಇದ್ದಕ್ಕಿದ್ದಂತೆ ಮರಳಿ ಬಂದು ತಮ್ಮ ಆಗಮನವನ್ನು ಕೂಗಿ ಹೇಳುವ ಪ್ರಸಂಗ ಲಲಿತಪ್ರಬಂಧ ಸುಖಾಂತವಾಗಿದ್ದರೇ ಚೆನ್ನ ಎಂಬ ರೂಢಿಯನ್ನು ಗೌರವಿಸುತ್ತದೆ.

    ಪತ್ರಗಳು: ನಿಗೂಢ ಸಂವಹನ ಜಗತ್ತಿನ ಅನಾವರಣ
    ಮತ್ತೆ ಮತ್ತೆ ಓದಿಸಿಕೊಂಡು ಹೋಗುವ ಪ್ರಬಂಧಗಳು ಈ ಪುಸ್ತಕದ ಗುಣಮಟ್ಟವನ್ನು ಹಿಗ್ಗಿಸಿವೆ. ವಿಕಾಸ ಹೊಸಮನಿಯವರ ‘ಪತ್ರಗಳು’ ಹಿರಿಯರ ಪರಸ್ಪರ ಒಡನಾಟ, ಕಿರಿಯರು ಆ ಮೂಲಕ ಮಾಡುವ ಅವಾಂತರ ಹೀಗೆ ವಿವಿಧ ಸನ್ನಿವೇಶಗಳನ್ನು ಕಟ್ಟಿಕೊಡುತ್ತದೆ. ಜಗಳ, ಪ್ರೇಮ ವ್ಯವಹಾರ, ಪತ್ರ ರೂಪದ ಯಶಸ್ವೀ ಪ್ರವಾಸೀ ಲೇಖನಗಳು, ಅನಾಮಧೇಯ ಭೂಗತ ಪತ್ರಗಳ ಕಾರುಬಾರು, ಪತ್ರದ ಮೂಲಕ ಸನ್ಮಾನ ಘೋಷಿಸಿ ಮೋಸ, ಕೃತಿ ಪ್ರಶಸ್ತಿ ಘೋಷಣೆಗೆ ಸಂಬಂಧಿಸಿ ನಡೆವ ಬೈಗುಳ ಹಾಗೂ ಟೀಕಾಪತ್ರಗಳಿಗೆ ಸಂಬಂಧಿಸಿದ ಸ್ವಾರಸ್ಯಕರ ವಿಚಾರಗಳು ತುಳುಕುತ್ತವೆ. ವಿದ್ಯಾವಂತರೊಂದಿಗೆ ಕೆಪ್ಪ ಎಂಬ ಹುಂಬ ಪ್ರಾಮಾಣಿಕ ವ್ಯಕ್ತಿಯನ್ನು ಹೋಲಿಸಿ ಬರೆಯುವ ಅಂಜನಾ ಹೆಗಡೆ ಬದುಕಿನ ನಿಗೂಢತೆಯನ್ನೂ ವಿಮರ್ಶಿಸುತ್ತಾರೆ. ನಿರ್ಲಿಪ್ತ ಭಾವ ಸಾಲದ್ದಕ್ಕೆ ಮಾತು ಬಾರದ ಊನತೆ ಇದ್ದೂ ಇತರರಿಂದ ಪ್ರತ್ಯೇಕ ನಿಲ್ಲುವ ಸರಳತೆ, ಸಿಗದೇ ಇರುವುದಕ್ಕಾಗಿ ಸಂಕಟಪಡದ ರೀತಿ ಮಾತಿನಂತೆ ಕ್ಷಣಿಕವಾಗದೆ ಮೌನ, ಪ್ರೀತಿಗಳು ಗೆಲ್ಲುತ್ತವೆ ಎಂಬುದನ್ನು ಮಾರ್ಮಿಕವಾಗಿ ಸಮರ್ಥಿಸುತ್ತಾರೆ. ಶೌಚಗೃಹದ ಪರಿಕಲ್ಪನೆ ನನಸಾಗುವ ಹಿಂದಿನ ರೂಢಿಯನ್ನು ನೆನಪಿಸಿಕೊಳ್ಳುತ್ತಾ, ಅದರ ವ್ಯವಸ್ಥೆಯ ಚರಿತ್ರೆಯನ್ನು ಬಗೆದು ನೋಡುವ ಗಣೇಶ ಯಾಜಿ ಅವರು ‘ಬಯಲು ಶೌಚಮುಕ್ತ ಭಾರತ’ ಎಂಬ ಸಂಕಲ್ಪದ ಬಗ್ಗೆ ಚರ್ಚಿಸುತ್ತಾರೆ. ಪೂರ್ಣ ಶೌಚಮುಕ್ತಿಗೆ ಹೆದ್ದಾರಿಯ ಅಲ್ಲಲ್ಲಿ ಶೌಚಗೃಹ ನಿರ್ಮಿಸಿಕೊಡಬೇಕು ಎಂಬ ಅವರ ಸಲಹೆಗಳು ಪ್ರಬಂಧವನ್ನು ಸಾರ್ವಜನಿಕ ಚರ್ಚೆಯ ವಸ್ತುವಾಗಿಸುತ್ತವೆ.

    ಲಲಿತ ಪ್ರಬಂಧದಲ್ಲಿ ವಿದ್ಯಾವಂತರ ಡಾಂಭಿಕತೆಯನ್ನು ಗಂಭೀರ ಟೀಕೆಗೆ ಎತ್ತಿಕೊಳ್ಳುವಾಗ ತಾನೂ ಅಂಥವರಲ್ಲಿ ಒಬ್ಬ ಎಂಬಂತೆ ಅಂತರಂಗವನ್ನು ಶೋಧಿಸುವ ಧಾಟಿ ಸಹಜ. ಇದು ಆತ್ಮರಕ್ಷಣೆಯ ರೀತಿಯೂ ಆಗಬಹುದೇನೋ. ಸುಧಾಕರ ದೇವಾಡಿಗ ಬರೆದ ‘ದಯೆಯೆಂಬ ಧರ್ಮದ ಮೂಲ’ ಈ ವರಸೆಯದ್ದು. ಶಾಲೆ, ಮನೆ, ಹಿತ್ತಿಲುಗಳಲ್ಲಿ ಕೃಷಿಯ ಸಾಹಸವನ್ನು ತೋರಿದ ಉಪನ್ಯಾಸಕ ಒಂದಕ್ಕೊಂದು ಆಹಾರವಾಗುವ ಜೀವ ಜಾಲದ ಬದುಕನ್ನು ಹತ್ತಿರದಲ್ಲೆ ಕಾಣುತ್ತ ದಯಾ ಧರ್ಮದ ಪ್ರಾಯೋಗಿಕ ಹಂತದಲ್ಲಿ ಎದುರಾಗುವ ಸಮಸ್ಯೆಗಳನ್ನು ಮುಂದಿಡುತ್ತಾರೆ. ಹೇಮಾ ಖುರ್ಸಾಪುರ ಅವರ ‘ಕಳಚಿದ ಕೊಂಡಿ’ಯಲ್ಲಿ ಬಸ್ಸಿನ ಪಯಣದ ಸುಖದುಃಖ, ಅವಾಂತರ, ಹುರಿಗೊಳ್ಳುವ ಮಾನವೀಯ ಸಂಬಂಧಗಳು, ಸಿಬ್ಬಂದಿಗಳ ವರ್ತನೆ ಮುಂತಾಗಿ ಸರಳ ವಿಚಾರಗಳನ್ನು ಕಲಾತ್ಮಕವಾಗಿ ಸಂಕಲಿಸುತ್ತಾರೆ. ಸಮಗ್ರತೆಯ ನೋಟ ಅನಾವರಣಗೊಳ್ಳುತ್ತದೆ.

    ವಸ್ತು ವೈವಿಧ್ಯದ ಸುಂದರ ನೋಟಗಳು
    ಸ್ವಾರಸ್ಯಗಳನ್ನು ಹರವಿಡುತ್ತ ಹಾಸಕ್ಕೆ ನಂತರದ ಸ್ಥಾನ ಕೊಟ್ಟು ಯಶಸ್ವಿಯಾದ ಹಲವು ಬರಹಗಳು ಈ ಸಂಕಲನದಲ್ಲಿವೆ. ನಿದ್ರೆಯ ಭೀಕರತೆಯಿಂದ ಮುಗ್ಧ ಭಾವದ ತನಕ ವಿವಿಧ ವರ್ತುಲಗಳಲ್ಲಿ ಮಾನವನ ನಡತೆಗಳನ್ನು ಸೌಮ್ಯಾ ಗುರು ಕಾರ್ಲೆಯ ‘ನಿದ್ರಾಯಣ’ ಕಂಡರಿಸುತ್ತದೆ. ವಿಜಯಲಕ್ಷ್ಮೀ ಶಾನುಭೋಗರ ‘ಮಂಗಮಾಯ’ ಎಂಬ ಲಲಿತ ಪ್ರಬಂಧ ಪದದ ಅರ್ಥ, ಭಾವ, ಪರಿಣಾಮ, ಸಂದೇಶ, ಒಳಾರ್ಥಗಳನ್ನು ಭಾಷಾವಿಜ್ಞಾನದ ಹಿನ್ನೆಲೆಯಲ್ಲೂ ಚರ್ಚಿಸುವ ಇದು ಅಧ್ಯಯನ ಸ್ವಾರಸ್ಯಕರ ವರ್ಣನೆಗಳಿಂದ ಶ್ರೀಮಂತವಾಗಿದೆ. ‘ಅತ್ತೆ ಮತ್ತವರ ಮೂರು ಉಗ್ಗಗಳು’ ಎಂಬ ಶಿರೋನಾಮೆಯೇ ಒಂದು ಅಮೂರ್ತ ಕಲ್ಪನೆ. ಹರಟೆಗೆ ಯೋಗ್ಯವಾದ ಈ ಶಿರೋನಾಮೆಯ ಸತ್ವ ಸಾರ ಸಾಂಸಾರಿಕ ಸನ್ನಿವೇಶಗಳನ್ನು ಒಳಗೊಂಡಿದೆ. ಇಡೀ ಕೈಗೆ ಪ್ಲಾಸ್ಟರ್ ಸುತ್ತಿದ ದಯನೀಯ ಸ್ಥಿತಿಯಲ್ಲೂ ತನ್ನ ಪ್ರೀತಿಯ ಉಗ್ಗಗಳಿಗೇನಾಯಿತೋ ಎಂದು ಹಲುಬುವ ಅತ್ತೆಯ ಕುರಿತು ಸೊಸೆಯ ಪ್ರತಿಕ್ರಿಯೆ ಹೇಗೋ ಎಂದು ಚಿಂತಿಸುವ ಓದುಗ ಆಕೆಯ ಆರೋಗ್ಯ ಕೊನೆಗೂ ಸುಧಾರಿಸಿದಾಗ ಸೊಸೆ ಖುಷಿ ಪಡುವುದನ್ನು ನೋಡಿ ಧನ್ಯತೆಯ ನಿಟ್ಟುಸಿರು ಬಿಡುವಂತಾಗುತ್ತದೆ. ಸುರೇಶ್ ಹೆಗಡೆಯವರ ‘ಹಂಪೆಗೊಜ್ಜು’ ಹಳ್ಳಿಯ ಚಿತ್ರಣವನ್ನು ದೇಸೀ ಭಾಷೆ ಹಾಗೂ ಅಲ್ಲಲ್ಲಿ ಸಂಭಾಷಣೆಯ ರೂಪದಲ್ಲಿ ವಿವರಿಸಿದ ಕೃತಿ. ಆದ್ದರಿಂದ ಚಿತ್ರಣ ಹೆಚ್ಚು ಹತ್ತಿರವಾಗಿ ಓದುಗನನ್ನು ತಣಿಸುತ್ತದೆ.

    ಶಿಕ್ಷಕ ಮತ್ತು ವಿದ್ಯಾರ್ಥಿಯ ಸಂಬಂಧ ವಿವಿಧ ರೀತಿಯಲ್ಲಿರುತ್ತದೆ. ಪರಸ್ಪರ ಗೌರವ ಭಾವವೂ ಇಲ್ಲಿ ಸಾಧ್ಯ. ಉತ್ತಮ ಕಥೆಗಾರನಾದ ಡಾ. ಸುಭಾಷ್ ಪಟ್ಟಾಜೆ ಅವರ ‘ಕಾಸಗಲದ ಬೊಟ್ಟು’ ಪ್ರಬುದ್ಧ ವಿದ್ಯಾರ್ಥಿ ತನ್ನ ಅಂದಿನ ಶಿಕ್ಷಕಿಯನ್ನು ಕಂಡಾಗ ಸ್ಮೃತಿಗಟ್ಟುವ ಬಾಲ್ಯದ ಸ್ಮರಣೆಯೊಂದಿಗೆ ವಿವಿಧ ಆಯಾಮಗಳಲ್ಲಿದ್ದರೂ ಕಥೆಯೆನಿಸದೆ ಪೂರ್ಣ ಪ್ರಮಾಣದ ಲಲಿತ ಪ್ರಬಂಧವಾಗಿ ಓದಿಸಿಕೊಂಡು ಹೋಗುತ್ತದೆ. ಆತ್ಮೀಯ ಧಾಟಿ, ಸ್ವಾಂತತೆಗಳು ಇದರ ಅಂತಃ ಶ್ರೋತಗಳು. ಕೊಚ್ಚಿಕೊಂಡು ನಗರಕ್ಕೆ ಬರುವ ಮರಿಮೊಸಳೆಯ ಒಂಟಿತನ, ಅಭದ್ರತೆ, ಹತಾಶೆಗಳ ಒಳಗುದಿ ಸ್ವಗತದ ರೂಪದಲ್ಲಿ ಅನಾವರಣಗೊಳ್ಳುವ ‘ಮಳೆ ಬಂತು ಮಳೆ’ ರಾಘವೇಂದ್ರ ಅವರು ನಡೆಸಿದ ಅವೈಜ್ಞಾನಿಕ ನಗರೀಕರಣದ ಸ್ಥಿತಿಗತಿಯ ವಿಡಂಬನೆ ಎಂಬಂತಿದೆ. ಆಧುನಿಕ ಉದ್ಯೋಗ, ಜೀವನ ಶೈಲಿಗಳಿಂದ ಬರುವ ಯಕೃತ್ ಅಸಮತೋಲವನ್ನು ಪ್ರಸ್ತಾಪಿಸಿ, ವೈದ್ಯಶಾಸ್ತ್ರ ಅದರ ನಿವಾರಣೆಗೆ ಸೂಚಿಸುವ ಪಥ್ಯದ ನಿರ್ವಹಣೆಯ ಸುತ್ತ ಮಮತಾ ಶೆಟ್ಟಿಗಾರ್ ಕಟ್ಟಿದ ‘ನಾಳೆಯಿಂದ ಡಯಟ್’ ಎಂಬ ಪ್ರಬಂಧದಲ್ಲಿರುವ ಸಂಭಾಷಣೆ, ಸನ್ನಿವೇಶ ನಿರ್ಮಾಣದ ರೀತಿಗಳು ಅನನ್ಯ. ‘ನಾಳೆ ಮಾಡೋಣ’ ಎಂದು ಯಾವುದೇ ಕೆಲಸವನ್ನು ಮುಂದೆ ಹಾಕುವ ನಾಗರಿಕ ಬದುಕಿನ ಸೋಂಬೇರಿತನವನ್ನು ಪ್ರಶ್ನಿಸುವ ಧ್ವನಿಯೂ ಗಮನಾರ್ಹ. ಇಂದಿರಾ ಮೋಟೆಬೆನ್ನೂರ ಬರೆದ ‘ಅವ್ವನ ಉಪ್ಪಿನಕಾಯಿ’ ಕುತೂಹಲಕಾರಿ ಬರಹವಾಗಿದ್ದು ಪ್ರಾದೇಶಿಕ ಭಾಷೆಯ ಸೊಗಡು, ಸಂಭಾಷಣೆಯ ರೂಪದಲ್ಲಿ ಮೈತುಂಬಿ ಆಕರ್ಷಿಸುತ್ತದೆ. ಕಳೆದ ವೈಭವದ ಜೊತೆ ಜೊತೆ ಕಾಡುವ ಅಮ್ಮನ ನೆನಪು ಇಲ್ಲಿ ಉಲ್ಲೇಖನೀಯ. “ಸದ್ಯಕ್ಕ ಇಷ್ಟು ಸಾಕು ಬಿಡ್ರಿ. ಮತ್ತಿನ್ನೊಮ್ಮೆ ಯಾವಾಗರ ಪುರಸೊತ್ತಾದಾಗ ಮತ್ತ ಉಳದದ್ದು, ಬಳದದ್ದು ಹೇಳ್ತೇನಂತ” ಇಂಥ ಹರಟೆಯ ಶೈಲಿ ಗಮನ ಸೆಳೆಯುತ್ತದೆ. ಬಸ್ಸು ಪ್ರಯಾಣಕ್ಕೂ, ಬದುಕಿನ ಗತಿಗೂ ಹೋಲಿಕೆ ಕೊಟ್ಟು ಸರಳವಾಗಿದ್ದೂ ಗಂಭೀರವಾಗಿ ಪರಿಣಮಿಸಿ ‘ಉರುಳುವ ಗಾಲಿಗಳ ಮೇಲೊಂದು ಸುತ್ತು’ (ಶ್ರೀಕಲಾ) ತಾತ್ವಿಕವಾಗಿಯೂ ಆರಂಭ ಮತ್ತು ಮುಕ್ತಾಯದ ಅಂದದಿಂದಲೂ ಮೈ ತುಂಬಿದೆ. ‘ಪಲ್ಲೂನ ಹೇರ್ ಡೈ’ ಪ್ರಹಸನ (ಪುಷ್ಪಾ ಹಾಲಬಾವಿ) ಆಧುನಿಕ ಶೃಂಗಾರ ಪ್ರಸಾಧನಗಳಲ್ಲಿ ಒಂದಾದ ಹೇರ್ ಡೈ ಪರಿಕರದ ಹಿಂದೆ ಬಿದ್ದು ಆದ ಅವಾಂತರಗಳನ್ನು ಚೆನ್ನಾಗಿ ಹೇಳುತ್ತದೆ. ಕೊನೆಗೂ ಇಂತಹ ಪ್ರಯತ್ನಗಳನ್ನು ಕೈಬಿಟ್ಟು ನಿರಾಳವಾಗುವಲ್ಲಿ ಲೇಖಕಿ ಒಂದು ನೀತಿಯನ್ನು ಸಾರುತ್ತದೆ. ಅಂಬಿಕಾ ರಾವ್ ಎಂಬವರು ಮನೆದಾದಿ ವ್ಯವಸ್ಥೆಯಿಂದಾಗುವ ಗೊಂದಲ, ಹಿಂಸೆ, ಮೋಸಗಳ ಕುರಿತು ಬರೆದಿದ್ದಾರೆ. ಸಹಾಯಕಿಯರಿಂದಾದ ಅಸಹಾಯಕತೆ. ಆಧುನಿಕ ವ್ಯವಸ್ಥೆ, ಅದಕ್ಕೊಂದ ಏಜೆನ್ಸಿ, ಸೇವೆಗಾಗಿ ಬರುವವರ ಉದಾಸೀನ, ವಿಚಿತ್ರ ಬೇಡಿಕೆಗಳನ್ನು ಪರಿಚಯಿಸುವ ಈ ಬರಹ ಬಹುಮಟ್ಟಿಗೆ ಅನುಭವ ಕಥನದಂತಿದ್ದರೂ ಎಷ್ಟೋ ಜನರಿಗೆ ಇಂತಹ ಅನುಭವ ಆಗಿರುವುದರಿಂದ ಚಿಂತನೀಯ ಅನಿಸುತ್ತದೆ.

    ‘ಮಂದಹಾಸ’ ಅಬ್ಬರವಿಲ್ಲದ, ಸರಳ ನಿರೂಪಣೆಯ, ಹೊಸ ಬರಹಗಾರರಿಗೆ ಸ್ಫೂರ್ತಿ ನೀಡುವ ರೀತಿಯಲ್ಲಿದ್ದು ಸಂಪಾದಕರಾದ ವಿಕಾಸ ಹೊಸಮನಿಯವರ ಸಾಹಸಗಾಥೆಯಂತಿದೆ ಎಂದರೂ ತಪ್ಪಿಲ್ಲ.

     

    ● ಪ್ರೊ. ಪಿ.ಎನ್. ಮೂಡಿತ್ತಾಯ

    Literature review
    Share. Facebook Twitter Pinterest LinkedIn Tumblr WhatsApp Email
    Previous Articleಶ್ರೀ ಬಲಮುರಿ ವಿದ್ಯಾಗಣಪತಿ ದೇವಸ್ಥಾನದ ವಾರ್ಷಿಕ ಪ್ರತಿಷ್ಠಾವರ್ಧಂತಿ ಉತ್ಸವದಲ್ಲಿ ತಾಳಮದ್ದಳೆ
    Next Article ಲೇಖಕಿಯರ ಸಮ್ಮೇಳನಕ್ಕೆ ಅಧ್ಯಕ್ಷ್ಯೆಯಾಗಿ ಲೇಖಕಿ ಎಚ್.ಎಸ್. ಶ್ರೀಮತಿ ಆಯ್ಕೆ 
    roovari

    Add Comment Cancel Reply


    Related Posts

    ಡಾ. ಮಾಲತಿ ಶೆಟ್ಟಿ ಮಾಣೂರು ಇವರು ‘ಕರುನಾಡ ಕಾಯಕ ಯೋಗಿ ಸದ್ಭಾವನ’ ರಾಜ್ಯಪ್ರಶಸ್ತಿಗೆ ಆಯ್ಕೆ

    May 8, 2025

    ಯಶಸ್ವಿಯಾಗಿ ಸಂಪನ್ನಗೊಂಡ ಕುಂದಾಪ್ರ ಕನ್ನಡ ಐದನೆಯ ಸಾಹಿತ್ಯ ಸಮ್ಮೇಳನ ‘ಕಾಂಬ’

    May 8, 2025

    ಖ್ಯಾತ ಸಾಹಿತಿ ಪ್ರೊ. ಜಿ.ಎಸ್. ಸಿದ್ಧಲಿಂಗಯ್ಯ ನಿಧನ

    May 8, 2025

    ಆಳ್ವಾಸ್‌ನ ಶಿವರಾಮ ಕಾರಂತ ಸಭಾಂಗಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ

    May 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.