ಮಡಿಕೇರಿ : ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಮುರ್ನಾಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಪಿ.ಎಂ.ಶ್ರೀ ಮಾದರಿ ಪ್ರಾಥಮಿಕ ಶಾಲೆ ಮೂರ್ನಾಡು ಇವರ ಸಂಯುಕ್ತ ಆಶ್ರಯದಲ್ಲಿ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ದಿನಾಂಕ 07 ಮಾರ್ಚ್ 2025ರಂದು ಮೂರ್ನಾಡಿನ ಪಿ.ಎಂ.ಶ್ರೀ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿ ಪ್ರದಾನ ಮಾಡಿದ ಮೈಸೂರು ಯುವರಾಜ ಕಾಲೇಜಿನ ಉಪನ್ಯಾಸಕಿ ಎಚ್. ನಿವೇದಿತಾ ಇವರು ಮಾತನಾಡಿ “ಕೇವಲ 27 ವರ್ಷ ಬದುಕಿದ ಕೊಡಗಿನ ಗೌರಮ್ಮ ಸಾಹಿತ್ಯ ವಲಯದಲ್ಲಿ ಮೂಡಿಸಿದ ಸಂಚಲನ ಅತ್ಯಾದ್ಭುತವಾದದ್ದು ಮತ್ತು ಅನನ್ಯವಾದದ್ದು. ತಮ್ಮ ಅತಿ ಸಣ್ಣ ಜೀವಿತಾವಧಿಯಲ್ಲಿ ಅವರು 21 ಕಥೆಗಳನ್ನು ಬರೆದರು. ಅದರಲ್ಲಿ ಮಹಿಳಾ ಸ್ವಾತಂತ್ರ್ಯ, ವಿಧವಾ ವಿವಾಹ, ಬಾಲ್ಯ ವಿವಾಹ, ವಿಧವಾ ಸಮಸ್ಯೆಗಳ ಬಗ್ಗೆ ಬರೆದಿದ್ದಾರೆ. ಅವರು ನೇರವಾಗಿ ಸ್ವಾತಂತ್ರ ಹೋರಾಟಕ್ಕೆ ಇಳಿಯದಿದ್ದರೂ ಗಾಂಧೀಜಿಯವರು 1934ರಲ್ಲಿ ಹರಿಜನೋದ್ಧಾರಕ್ಕಾಗಿ ನಿಧಿ ಸಂಗ್ರಹಿಸಲು ಕರ್ನಾಟಕದಲ್ಲಿ 12 ದಿನಗಳ ಪ್ರವಾಸವನ್ನು ಕೈಗೊಂಡರು. ಫೆಬ್ರವರಿ 22-23, 1934ರಂದು ಗಾಂಧಿಯವರು ಕೊಡಗು ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ತಂಗಿದ್ದ ಗೌರಮ್ಮ ವಾಸಿಸುತ್ತಿದ್ದ ಗುಂಡುಕಟ್ಟೆ ಮಂಜುನಾಥಯ್ಯರವರ ಎಸ್ಟೇಟ್ ನಲ್ಲಿ ತಂಗಿದ್ದರು. ನಿಧಿ ಸಂಗ್ರಹಿಸಲು ಬಂದ ಗಾಂಧೀಜಿಯವರನ್ನು ಭೇಟಿಮಾಡುವ ಉದ್ದೇಶದಿಂದ ಗೌರಮ್ಮ ಗಾಂಧಿಯವರ ಸಹಾಯಕರಲ್ಲಿ ತಮ್ಮ ಎಸ್ಟೇಟ್‌ಗೆ ಬಂದು ಈ ಉದ್ದೇಶಕ್ಕಾಗಿ ನೀಡುತ್ತಿರುವ ದೇಣಿಗೆಯನ್ನು ಸ್ವೀಕರಿಸುವಂತೆ ಬೇಡಿಕೊಂಡರು, ಆದರೆ ಅವರಲ್ಲಿ ಯಾರೂ ಗೌರಮ್ಮ ಅವರ ಬೇಡಿಕೆಗಳನ್ನು ಕೇಳಲಿಲ್ಲ. ಕೊನೆಗೆ, ಗಾಂಧಿಯವರು ತಮ್ಮಿಂದ ಕಾಣಿಕೆ ಸ್ವೀಕರಿಸಬೇಕು ಮತ್ತು ತಮ್ಮ ಮನೆಗೆ ಆಗಮಿಸಬೇಕೆಂದು ಅವರು ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು. ಈ ಸುದ್ದಿ ಗಾಂಧಿಯವರ ಕಿವಿಗೆ ತಲುಪಿತು. ಅವರು ಆಕೆಯನ್ನು ತಾವು ತಂಗಿದ್ದ ಸ್ಥಳಕ್ಕೆ ಕರೆದು, ಗೌರಮ್ಮ ಅವರ ಮನೆಗೆ ಬರುವುದಾಗಿ ಭರವಸೆ ನೀಡಿದರು. ಅದರ ಪ್ರಕಾರ, ಗಾಂಧಿ ಅವರ ಮನೆಗೆ ಭೇಟಿ ನೀಡಿದರು. ಗೌರಮ್ಮ ತಾವು ಧರಿಸಿದ್ದ ಅನೇಕ ಆಭರಣಗಳನ್ನು ತೆಗೆದು ಸ್ವಾತಂತ್ರ್ಯ ಹೋರಾಟದ ನಿಧಿಗಾಗಿ ಗಾಂಧಿಯವರಿಗೆ ನೀಡಿದರು. ಮಹಿಳೆಯರ ಸಂಕೇತಗಳಾದ ಹಿಂದೂ ವಿವಾಹಿತ ಕಿವಿಯೋಲೆ, ಮೂಗುತಿ ಮತ್ತು ಮಂಗಲ ಸೂತ್ರವನ್ನು ಹೊರತುಪಡಿಸಿ ಹೆಚ್ಚಿನ ಆಭರಣಗಳನ್ನು ಗೌರಮ್ಮ ಗಾಂಧಿಯವರಿಗೆ ದಾನ ಮಾಡಿದರು. ಈಗ ಚಿನ್ನವನ್ನು ನೀಡುವ ಪ್ರತಿಜ್ಞೆಯನ್ನು ಗೌರಮ್ಮ ಅವರ ಮೇಲೆ ಒತ್ತಾಯಿಸುವ ಸರದಿ ಬಂದಿದೆ. ಚಿನ್ನದ ಆಭರಣಗಳಿಗಾಗಿ ನೀವು ಮತ್ತೆ ನಿಮ್ಮ ಗಂಡನನ್ನು ಹಿಂಸಿಸುತ್ತೀರಾ ಎಂದು ಗಾಂಧೀಜಿ ಗೌರಮ್ಮ ಅವರನ್ನು ಕೇಳಿದಾಗ, ನಾನು ಭರವಸೆ ನೀಡಿದಂತೆ, ಖಾದಿ ಹೊರತುಪಡಿಸಿ ಯಾವುದೇ ವಸ್ತ್ರ ಚಿನ್ನಾಬರಣ ಧರಿಸುವುದಿಲ್ಲ ಎಂದು ಅವರು ಗಾಂಧೀಜಿಗೆ ಭರವಸೆ ನೀಡಿದರು. ಮಾರ್ಚ್ 2, 1934ರಂದು ಹರಿಜನ ಪತ್ರಿಕೆಯಲ್ಲಿ ಗಾಂಧಿ ಈ ಘಟನೆಯನ್ನು ಉಲ್ಲೇಖಿಸಿದ್ದಾರೆ. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು 21 ವರ್ಷಗಳಿಂದ ಕೊಡಗಿನ ಮಹಿಳಾ ಲೇಖಕಿಯರಿಗೆ ಗೌರವಿಸುವ ಕೊಡಗಿನ ಗೌರಮ್ಮ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಈ ಬಾರಿ ಶ್ರೀಮತಿ ಕೂಡಕಂಡಿ ಓಂ ಶ್ರೀ ದಯಾನಂದ ಅವರ ‘ಪುಟಾಣಿ ರೈಲು’ ಅಂದದ ಕಥೆಗಳ ಲೋಕದಲ್ಲಿ ಒಂದು ಸುಂದರ ಪಯಣ ಮಕ್ಕಳ ಕಥೆ ಪುಸ್ತಕಕ್ಕೆ ಪ್ರಶಸ್ತಿ ದೊರಕಿದೆ” ಎಂದರು.
2024-25ನೇ ಸಾಲಿನ ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತ ಶ್ರೀಮತಿ ಕುಡಕಂಡಿ ಓಂ ಶ್ರೀ ದಯಾನಂದರವರನ್ನು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿದ ಓಂ ಶ್ರೀಯವರು ಕೊಡಗಿನ ಗೌರಮ್ಮ ಪ್ರಶಸ್ತಿ ನನ್ನ ಮೊದಲ ಪುಸ್ತಕಕ್ಕೆ ಬಂದದ್ದು ಖುಷಿ ಕೊಟ್ಟಿದೆ. ಇಂದು ಇಂಟರ್ನೆಟ್ ಯುಗದಲ್ಲಿ ಮಕ್ಕಳಿಗೆ ನಾವು ಕಥೆಗಳನ್ನು ಹೇಳಿಕೊಡುತ್ತಿಲ್ಲ, ಮಕ್ಕಳಿಗೆ ಅದರ ಅವಶ್ಯಕತೆ ಇದೆ. ಆದರೆ ನಮಗೆ ಪುರುಸೊತ್ತಿಲ್ಲ. ಹಿಂದಿನ ಕಾಲದಲ್ಲಿ ಮನೆಯ ಹಿರಿಯರು ಮಕ್ಕಳಿಗೆ ಕಥೆಗಳನ್ನು ಹೇಳುವ ಮೂಲಕ ನೀತಿ ಪಾಠ ಹೇಳಿಕೊಡುತ್ತಿದ್ದರು. ಪಂಚತಂತ್ರ, ರಾಮಾಯಣ, ಮಹಾಭಾರತದ ಕಥೆಗಳನ್ನು ಮಕ್ಕಳಿಗೆ ಹೇಳುವ ಮೂಲಕ ಅವರಲ್ಲಿ ಸಾಮಾಜಿಕ ಬದ್ಧತೆ, ಸೃಜನಶೀಲತೆ, ಸಾಮಾಜಿಕ ಕಳಕಳಿ ಬೆಳೆಸುತಿದ್ದರು. ಆ ಕಾರಣಕ್ಕಾಗಿ ತಾವು ಮಕ್ಕಳ ಕಥೆಗಳನ್ನು ರಚಿಸಿರುವುದಾಗಿ ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಕಾಂತೂರು ಮುರುನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿ.ಎಸ್. ಕುಶನ್ ರೈಯವರು ಮಾತನಾಡುತ್ತಾ “ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯಿಕವಾಗಿ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೆ. ಮೂರ್ನಾಡಿನಲ್ಲಿ ಈ ಕಾರ್ಯಕ್ರಮ ನಡೆಸಿದ್ದು ನಿಜಕ್ಕೂ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಯಾವುದೇ ಕಾರ್ಯಕ್ರಮ ನಮ್ಮೂರಿನಲ್ಲಿ ಹಮ್ಮಿಕೊಂಡರೆ ಅದನ್ನು ಯಶಸ್ವಿಗೊಳಿಸಿಕೊಡುವುದಾಗಿ” ಹೇಳಿದರು.
ದತ್ತಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಶ್ರೀಮತಿ ನಿವೇದಿತರವರನ್ನು ಸನ್ಮಾನಿಸಲಾಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ “ಕೊಡಗಿನ ಗೌರಮ್ಮ ಬಹುಮುಖ ಪ್ರತಿಭೆಯ ವ್ಯಕ್ತಿತ್ವ, ಕೇವಲ ಕತೆ ಬರೆಯುವುದು ಮಾತ್ರವಲ್ಲದೆ ಅಂದಿನ ಸಮಾಜ ಸುಧಾರಕರಲ್ಲಿ ಒಬ್ಬರು ಕೂಡ. ಬಾಲ್ಯ ವಿವಾಹ, ವಿಧವಾ ವಿವಾಹ, ಮಹಿಳೆಯರ ಸಮಸ್ಯೆಗಳ ಕುರಿತು ಶತಮಾನದ ಹಿಂದೆಯೇ ಪ್ರಸ್ತಾಪ ಮಾಡಿದ್ದೂ ಅಲ್ಲದೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಮ್ಮ ಮೈ ಮೇಲಿನ ಚಿನ್ನ ನೀಡುವ ಮೂಲಕ ಅಂದಿನ ಜನರಿಗೆ ಮಾದರಿಯಾಗಿದ್ದರು. ಅವರ ಹೆಸರಿನಲ್ಲಿ ಅವರ ಪುತ್ರ ವಸಂತ್ ರವರು ಅಂದಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಟಿ.ಪಿ. ರಮೇಶ್ ಇವರ ನೇತೃತ್ವದಲ್ಲಿ ದತ್ತಿ ಪ್ರಶಸ್ತಿಯನ್ನು ಸ್ಥಾಪಿಸಿದರು. ಇಂದು 22 ಮಹಿಳಾ ಲೇಖಕರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ” ಎಂದರು.
ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಟಿ.ಪಿ. ರಮೇಶ್ ರವರು ಮಾತನಾಡುತ್ತಾ “ಗೌರಮ್ಮ ದತ್ತಿ ಪ್ರಶಸ್ತಿ ಸ್ಥಾಪಿಸಿದ ದಿನಗಳಲ್ಲಿ ಪ್ರಶಸ್ತಿ ನೀಡಲು ಲೇಖಕರನ್ನು ಹುಡುಕಬೇಕಿತ್ತು, ಆದರೆ ಇಂದು ಪ್ರಶಸ್ತಿಗೆ ಆಹ್ವಾನ ಮಾಡಿದಾಗ 16 ಲೇಖಕರು ತಮ್ಮ ಪುಸ್ತಕಗಳನ್ನು ಕಳುಹಿಸಿಕೊಟ್ಟಿದ್ದರು. ಅವನ್ನು ಜಿಲ್ಲೆಯ ಹಿರಿಯ ಮೂರು ಸಾಹಿತಿಗಳು ಸಂಪೂರ್ಣವಾಗಿ ಓದಿ ನೀಡಿದ ಅಭಿಪ್ರಾಯದಂತೆ ಪ್ರಶಸ್ತಿ ನೀಡಲಾಗಿದೆ. ಶತಮಾನ ಕಳೆದರೂ ಗೌರಮ್ಮನವರ ಕೃತಿಗಳು ಇಂದಿಗೂ ಪ್ರಸ್ತುತವಾಗಿವೆ. ಅಂದು ಅವರು ಪ್ರಸ್ತಾಪಿಸಿದ ಸಮಸ್ಯೆಗಳು ಇಂದಿಗೂ ಸಮಸ್ಯೆಗಳಾಗಿಯೇ ಉಳಿದಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಮಕ್ಕಳಿಗೆ ಸಾಹಿತ್ಯ ಅಭಿರುಚಿ ಮೂಡಿಸಬೇಕು ಎನ್ನುವ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ನನ್ನ ಕಾರ್ಯಕ್ರಮಗಳನ್ನು ಶಾಲಾ ಕಾಲೇಜುಗಳಲ್ಲಿಯೇ ಮಾಡಿಕೊಂಡು ಬರುತ್ತಿದ್ದು ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲೂ ಸಾಹಿತ್ಯಾಸಕ್ತಿ ಮೂಡುತಿದೆ” ಎಂದರು.
ಇನ್ನೋರ್ವ ಮುಖ್ಯ ಅತಿಥಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡುತ್ತಾ “ಕೊಡಗಿನ ಗೌರಮ್ಮ ಕೇವಲ ಲೇಖಕಿ ಮಾತ್ರವಾಗಿರಲಿಲ್ಲ. ಅಂದಿನ ದಿನಗಳ ಮೌಲ್ಯದ ಕುರಿತು ಹೋರಾಟ ಮಾಡಿದಂತಹ ವ್ಯಕ್ತಿಯಾಗಿರುತ್ತಾರೆ. ಶತಮಾನದ ಹಿಂದೆಯೇ ಆಂಗ್ಲ ವಿದ್ಯಾಭ್ಯಾಸ ಪಡೆದು ಈಜುಡುಗೆಯಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಅಂದಿನ ಕಾಲಕ್ಕೆ ಮಾಡ್ರನ್ ಆಗಿದ್ದರು” ಎಂದರು.
ಕೊಡಗು ಜಿಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಣ್ಣ ಕಥೆಗಳ ಗೌರಮ್ಮ ಪ್ರತಿನಿಧಿ ಕಥಾಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, 40 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಮಡಿಕೇರಿಯ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ಕು. ಮಾನ್ವಿ ಮುತ್ತಣ್ಣ ಪ್ರಥಮ ಬಹುಮಾನ, ಸರಕಾರಿ ಶಾಲೆ ಕಡಗದಾಳುವಿನ ಕು. ಪಾನುಪ್ರಿಯ ದ್ವಿತೀಯ ಬಹುಮಾನ ಹಾಗೂ ಮಡಿಕೇರಿಯ ಸಂತ ಜೋಸೆಫರ ಕಾನ್ವೆಂಟಿನ ಕು. ಲಿಷ್ಮ ಡಿಸೋಜಾ ತೃತೀಯ ಬಹುಮಾನ ಪಡೆದರು. ವೇದಿಕೆಯಲ್ಲಿದ್ದ ಗಣ್ಯರು ಪ್ರಶಂಸನಾ ಪತ್ರ ಮತ್ತು ನಗದು ಬಹುಮಾನವನ್ನು ವಿತರಣೆ ಮಾಡಿದರು.
ವೇದಿಕೆಯಲ್ಲಿ ಪಿ.ಎಂ.ಶ್ರೀ ಮಾದರಿ ಪ್ರಾಥಮಿಕ ಶಾಲೆಯ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕೆ.ಸಿ. ವೆಂಕಪ್ಪ, ಮುಖ್ಯೋಪಾಧ್ಯಾಯರಾದ ಬಿ.ಎನ್. ಪುಷ್ಪಾವತಿ, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್, ಮೂರ್ನಾಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರೂ, 20ನೇ ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತರೂ ಆದ ಈರಮಂಡ ಹರಿಣಿ ವಿಜಯ್, ಸಮಾಜ ಸೇವಕರಾದ ವಿ.ಎಮ್. ಧನಂಜಯ, ಸಿ.ಎಸ್. ಸೂರಜ್ ತಮ್ಮಯ್ಯ ಮತ್ತು ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರೂ, ದತ್ತಿ ಪ್ರಶಸ್ತಿ ಪುರಸ್ಕೃತರ ಪತಿ ಪ್ರೊ. ಕೂಡಕಂಡಿ ದಯಾನಂದ ಉಪಸ್ಥಿತರಿದ್ದರು.
ಸಭೆಯಲ್ಲಿ ಗೌರಮ್ಮ ದತ್ತಿ ಪ್ರಶಸ್ತಿ ವಿಜೇತರಾದ ಡಾ. ಕೋರನ ಸರಸ್ವತಿ, ಶ್ರೀಮತಿ ಸಹನಾ ಕಾಂತಬೈಲು, ಕೊಡಗು ಜಿಲ್ಲಾ ಜಾನಪದ ಪರಿಷತ್ತಿನ ಅಧ್ಯಕ್ಷರಾದ ಬಿ.ಜಿ. ಅನಂತಶಯನ, ಸರ್ವೋದಯ ಸಮಿತಿಯ ಅಧ್ಯಕ್ಷರಾದ ಅಂಬೆಕಲ್ ಕುಶಾಲಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರು ಸಾಹಿತಿಗಳು ಆದ ಕಿಗ್ಗಾಲು ಗಿರೀಶ್, ಸದಸ್ಯರುಗಳಾದ ದಂಬೆಕೋಡಿ ಸುಶೀಲ, ಈರಮಂಡ ಸೋಮಣ್ಣ, ಎಂ.ಯು. ಮಹಮದ್, ಕೊಂಪುಳಿರ ಮಮತಾ, ಅಪ್ಪಚಂಡ ಸುಚಿತಾ ಡೈಜಿ, ಗ್ರೆಸಿ, ಮುಂಡಂಡ ವಿಜು, ಮೀನಾಕ್ಷಿ ಕೇಶವ, ಪ್ರಿಯಾ, ಕಲ್ಪನಾ ಸಾಮ್ರಾಟ್, ತಿರಚಿಕ್ರ ಸುಮಿತ್ರಾ, ಭವಾನಿ, ಅಮ್ಮಟಂಡ ವಿಂಧ್ಯ, ರಾಜೇಶ್, ಗಂಗಮ್ಮ ಪಿ.ಎಂ.ಶ್ರೀ ಶಾಲಾ ಆಧ್ಯಾಪಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಪಿ.ಎಂ.ಶ್ರೀ ಶಾಲಾ ವಿದ್ಯಾರ್ಥಿಗಳು ನಾಡಗೀತೆ ಮತ್ತು ಕನ್ನಡ ಗೀತೆಗಳನ್ನು ಪ್ರಸ್ತುತಪಡಿಸಿದರು.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಶ್ರೀಮತಿ ರೇವತಿ ರಮೇಶ್ ನಿರೂಪಿಸಿ, ಶ್ರೀಮತಿ ಈರಮಂಡ ಹರಿಣಿ ವಿಜಯ್ ಸ್ವಾಗತಿಸಿ, ಶ್ರೀಮತಿ ಕಡ್ಲೇರ ತುಳಸಿ ಮೋಹನ್ ಮತ್ತು ಮುರ್ನಾಡು ಕ.ಸಾ.ಪ. ಗೌರವ ಕಾರ್ಯದರ್ಶಿ ಶ್ರೀಮತಿ ಕಟ್ಟೆಮನೆ ಮಹಾಲಕ್ಷ್ಮಿ ಅತಿಥಿಗಳ ಪರಿಚಯ ಮಾಡಿದರು.