ಕೋಟ : ಕೋಟದ ಸು. ವಿ.ಕಾ. ಸಾಂಸ್ಕೃತಿಕ ಸಂಘಟನೆಯು ಡಾ. ಶಿವರಾಮ ಕಾರಂತ ಹುಟ್ಟೂರ ಪ್ರತಿಷ್ಠಾನದ ಸಹಯೋಗದೊಂದಿಗೆ ಆಯೋಜಿಸಿದ ಉಡುಪಿ ಜಿಲ್ಲಾ ಮಟ್ಟದ ಕಾಲೇಜು ವಿದ್ಯಾರ್ಥಿಗಳ ಕವಿ ಗೋಷ್ಠಿ ಮತ್ತು ಪುಸ್ತಕ ಅನಾವರಣ ಕಾರ್ಯಕ್ರಮವು ದಿನಾಂಕ 09 ಮಾರ್ಚ್ 2025ರ ಆದಿತ್ಯವಾರದಂದು ಕೋಟದ ಕಾರಂತ ಥೀಂ ಪಾರ್ಕ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಮಾತನಾಡಿ “ಅತಿ ಕಡಿಮೆ ಶಬ್ದಗಳ ಮೂಲಕ ಧ್ವನಿ ಪೂರ್ಣವಾಗಿ ಕಟ್ಟುವುದೇ ಕವಿತೆ. ಅನುಕರಣೆಯ ಮಿತಿಯನ್ನು ಮೀರಿ, ಅನುಭವದೊಂದಿಗೆ ಸೃಜನಶೀಲತೆಯನ್ನು ಸಾಧಿಸುವಲ್ಲಿ ಕವಿಯಾದವನು ಪ್ರಯತ್ನಿಸಬೇಕು. ನಮ್ಮ ಹೆಚ್ಚಿನ ಓದು ನಮ್ಮನ್ನು ಒಳ್ಳೆಯ ಬರಹಗಾರರನ್ನಾಗಿಸುತ್ತದೆ. ಕವಿತೆ ವಾಚ್ಯವಾಗದೆ ಓದುಗನಲ್ಲಿ ಹೊಸ ಹೊಳಹನ್ನು ಅರಳಿಸಬೇಕು” ಎಂದರು.
ಇದೇ ಸಂದರ್ಭ ಉಪನ್ಯಾಸಕ ಸುಜಯೀಂದ್ರ ಹಂದೆಯವರ ಸಂಪಾದಿತ ಕಾಲೇಜು ವಿದ್ಯಾರ್ಥಿಗಳ ಕವನ ಸಂಕಲನ ‘ನನೆ ಮೊಗ್ಗು’ ಕೃತಿಯನ್ನು ಅನಾವರಣಗೊಳಿಸಿದ ಕವಯತ್ರಿ ಚಿತ್ರಪಾಡಿ ಸುಮನಾ ಆರ್ ಹೇರ್ಳೆ ಮಾತನಾಡಿ “ಪ್ರತಿಯೊಬ್ಬ ಕವಿಗೆ ತುಡಿಯುವ ಮನಸ್ಸು ಮತ್ತು ಅದನ್ನು ಸೃಜನಾತ್ಮಕವಾಗಿ ಕಟ್ಟುವ ಕಲೆ ತಿಳಿದಿರಬೇಕು. ಜೀವನ ಪ್ರೀತಿ ಹೊಳೆಯಾಗಿ ಹರಿಯಬೇಕು, ತಲೆ ತಗ್ಗಿಸಿ ಓದುವ ನಮ್ಮ ಹವ್ಯಾಸ ಮುಂದೆ ಬದುಕಿನಲ್ಲಿ ತಲೆಯೆತ್ತಿ ನಡೆಯುವಂತೆ ಮಾಡಬಲ್ಲುದು” ಎಂದರು.
ಕೋಟತಟ್ಟು ಪಂಚಾಯತ್ ಅಧ್ಯಕ್ಷರಾದ ಸತೀಶ್ ಕುಂದರ್ ಬಾರಿಕೆರೆ ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಂತರಾಷ್ಟ್ರೀಯ ಫಾರ್ಮಾಸುಟಿಕಲ್ ಸಂಸ್ಥೆಗಳ ಗುಣ ಮಟ್ಟ ನಿಯಂತ್ರಣ ಸಲಹೆಗಾರ ಡಾ. ವೆಂಕಟಕೃಷ್ಣ ಕೆ., ಸಾಹಿತಿ ಜನಾರ್ದನ ಹಂದೆ ಉಪಸ್ಥಿತರಿದ್ದರು. ಉಡುಪಿಯ ನೇತ್ರ ಜ್ಯೋತಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸಯನ್ಸ್ ಕಾಲೇಜಿನ ಅಂತಿಮ ಬಿ. ಎಸ್ಸಿ. ವಿದ್ಯಾರ್ಥಿನಿ ಐಶ್ವರ್ಯ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಉಡುಪಿ ಜಿಲ್ಲೆಯ ವಿವಿಧ ಕಾಲೇಜುಗಳ ಸುಮಾರು ಇಪ್ಪತ್ತಮೂರು ವಿದ್ಯಾರ್ಥಿ ಕವಿಗಳು ಕವಿತಾ ವಾಚನ ಮಾಡಿದರು.
ಉಪನ್ಯಾಸಕ ಸುಜಯೀಂದ್ರ ಹಂದೆ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿ, ಕಾವ್ಯ ಎಚ್. ಕಾರ್ಯಕ್ರಮ ನಿರ್ವಹಿಸಿ, ಸಂಘಟನೆಯ ಕಾರ್ಯದರ್ಶಿ ವಿನಿತ ಎಸ್ ವಂದಿಸಿದರು.