ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಆಕಾಡೆಮಿ ಮತ್ತು ನಾಗರಿಕ ಸಲಹಾ ಸಮಿತಿ ಸಹಯೋಗದಲ್ಲಿ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಸುರತ್ಕಲ್ ಮೇಲುಸೇತುವೆಯ ತಳಭಾಗದಲ್ಲಿ ಎಂ.ಸಿ.ಎಫ್. – ನಾಗರಿಕ ಸಲಹಾ ಸಮಿತಿ ಸಾಂಸ್ಕತಿಕ ವೇದಿಕೆಯಲ್ಲಿ ನಡೆಯುತ್ತಿರುವ ಸಂಗೀತ ಕಛೇರಿ ಸರಣಿ ಕಾರ್ಯಕ್ರಮದ ಏಳನೇ ವರ್ಷದ ಸಂಭ್ರಮ ‘ಉದಯರಾಗ 60’ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯು ದಿನಾಂಕ 09 ಮಾರ್ಚ್ 2025ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು “ಯುವ ಜನತೆಯಲ್ಲಿ ಪುರಾಣ ಪಜ್ಞೆ ಬೆಳೆಸುವಲ್ಲಿ ಭಕ್ತಿ ಸಂಗೀತ ಪೂರಕವಾಗಿದೆ. ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವ ಹಂತದಲ್ಲಿದ್ದು ಜನತೆ ಜಾಗೃತರಾಗಬೇಕಾಗಿದೆ” ಎಂದು ನುಡಿದರು.
ಹಿರಿಯ ಗಮಕಿ ಎಚ್. ಯಜ್ಞೇಶ ಆಚಾರ್ಯ ಹೊಸಬೆಟ್ಟು ಇವರು ಭಕ್ತಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಸಹ ಗಾಯನದಲ್ಲಿ ಪವಿತ್ರಾ ಮಯ್ಯ ಸುರತ್ಕಲ್, ವಯಲಿನ್ ನಲ್ಲಿ ಪ್ರಸನ್ನ ಕುಮಾರ್ ಸುರತ್ಕಲ್, ಹಾರ್ಮೋನಿಯಂ ನಲ್ಲಿ ಸತೀಶ್ ಸುರತ್ಕಲ್ ಹಾಗೂ ತಬ್ಲಾದಲ್ಲಿ ಪ್ರಥಮ್ ಕುಮಾರ್ ಸುರತ್ಕಲ್ ಸಹಕರಿಸಿದರು. ಗಮಕ ಪ್ರಶಸ್ತಿ ಪುರಸ್ಕೃತ ಗಮಕಿ ಯಜ್ಞೇಶ್ ಆಚಾರ್ಯರನ್ನು ಸನ್ಮಾನಿಸಲಾಯಿತು. ಕೃಷ್ಣಮೂರ್ತಿ ಚಿತ್ರಾಪುರ ಮಾತನಾಡಿ “ಗಮಕ ಕಲೆ ಸಾಹಿತ್ಯ ಸಂಸ್ಕೃತಿ ಪ್ರಸರಣದ ಮಾಧ್ಯಮವಾಗಿದ್ದು, ಗಮಕ ಕಲೆಗೆ ಬೆಂಬಲ ನೀಡಬೇಕು” ಎಂದರು.
ನಾಗರಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಕೆ. ರಾಜಮೋಹನ ರಾವ್ ಶುಭ ಹಾರೈಸಿದರು. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ನಿತ್ಯಾನಂದ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು. ನಾಗರಿಕ ಸಲಹಾ ಸಮಿತಿಯ ಸಂಯೋಜಕ ಸತೀಶ್ ಸದಾನಂದ ಉಪಸ್ಥಿತರಿದ್ದರು.