ಮಂಗಳೂರು : ಕಳೆದ ನಾಲ್ಕೂವರೆ ದಶಕಗಳಿಂದ ತುಳು ಕೂಟದ ಮೂಲಕ ನೀಡಲಾಗುತ್ತಿರುವ ‘ರತ್ನವರ್ಮ ಹೆಗ್ಗಡೆ ಪ್ರಶಸ್ತಿ’ ವಿಜೇತರ ಪಟ್ಟಿಯನ್ನು ಘೋಷಿಸಲಾಗಿದೆ. ಡಾ. ವೀರೇಂದ್ರ ಹೆಗ್ಗಡೆಯವರು ಈ ಪ್ರಶಸ್ತಿಗಳನ್ನು ಪ್ರಾಯೋಜಿಸುತ್ತಾ ಬರುತಿದ್ದು, ವಿಜೇತರಿಗೆ ಪ್ರಶಸ್ತಿಯನ್ನು ದಿನಾಂಕ 14 ಎಪ್ರಿಲ್ 2025ರಂದು ‘ಬಿಸು ಪರ್ಬ’ ಆಚರಣೆಯ ಸಂದರ್ಭ ಶ್ರೀಮಾತೆ ಮಂಗಳಾದೇವಿ ಅಮ್ಮನವರ ಸಾನಿಧ್ಯದಲ್ಲಿ ಪ್ರದಾನಿಸಲಾಗುವುದು.
ನಗದು ಸಹಿತ ಪ್ರಥಮ ಬಹುಮಾನವನ್ನು ಶ್ರೀ ಶಶಿರಾಜ್ ಕಾವೂರು ಇವರ ‘ಕರುಣೆದ ಕಣ್ಣ್’, ದ್ವಿತೀಯ ಬಹುಮಾನವನ್ನು ಅಕ್ಷತಾ ರಾಜ್, ಪೆರ್ಲ ಇವರ ‘ಯಜ್ಞ ಪುತ್ತೊಲಿ, ಹಾಗೂ ತೃತೀಯ ಬಹುಮಾನವನ್ನು ಗೀತಾ ನವೀನ್ ಇವರ ‘ಅಪ್ಪೆ ಮಹಾಮಾಯಿ’ ನಾಟಕ ಕೃತಿಗಳು ಪಡೆದಿರುತ್ತವೆ. ಅಲ್ಲದೇ, ಈ ಬಾರಿ ‘ಬಂಗಾರ್ ಪರ್ಬಾಚರಣೆ’ಯ ಪ್ರಯುಕ್ತ ಇನ್ನೆರೆಡು ನಗದು ರಹಿತ ಪ್ರೋತ್ಸಾಹಕ ಬಹುಮಾನ ನೀಡಲು ತುಳುಕೂಟ ನಿರ್ಧರಿಸಿದ್ದು, ಪ್ರಕಾಶ್ ಬಂಗೇರ ಬಗಂಬಿಲ ಇವರ ‘ಕರಿಮಣದ ಪಿರವು’ ಮತ್ತು ವಿಲಾಸ್ ಕುಮಾರ್ ನಿಟ್ಟೆ ಇವರ ‘ಗಗ್ಗರ’ ನಾಟಕ ಕೃತಿಗಳಿಗೆ ನೀಡಿರುತ್ತಾರೆ. ಎಲ್ಲಾ ಅಪ್ರಕಟಿತ ಹಸ್ತಪ್ರತಿ ನಾಟಕ ಕೃತಿಕಾರರಿಗೆ ಇದೊಂದು ಉತ್ತಮ ವ್ಯವಸ್ಥೆಯಾಗಿದೆ. ಈ ಹಸ್ತ ಪ್ರತಿಗಳ ನಿರ್ಣಾಯಕರಾಗಿ ಖ್ಯಾತ ಸಾಹಿತಿ; ಆಕಾಶವಾಣಿಯ ನಿವೃತ್ತ ಅಧಿಕಾರಿಗಳಾಗಿರುವ ಮುದ್ದು ಮೂಡುಬೆಳ್ಳೆಯವರ ಸಹಿತ ಇನ್ನಿತರ ಖ್ಯಾತನಾಮರು ಈ ನಾಟಕಗಳ ಬಗೆಯಲ್ಲಿ ತೀರ್ಪು ನೀಡಿರುತ್ತಾರೆ ಎಂದು ತುಳುಕೂಟ (ರಿ) ಕುಡ್ಲ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಹೇಮಾ ದಾಮೋದರ ನಿಸರ್ಗ ಮತ್ತು ಪ್ರಧಾನ ಕಾರ್ಯದರ್ಶಿ ವರ್ಕಾಡಿ ಶ್ರೀ ರವಿ ಅಲೆವೂರಾಯರು ತಿಳಿಸಿದ್ದಾರೆ.