ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ದಕ್ಷಿಣ ಕನ್ನಡ ಸಮಿತಿಯ ವತಿಯಿಂದ ಸಾಹಿತಿಗಳ ಮನೆಗೆ ಅಭಿಯಾನ ಕಾರ್ಯಕ್ರಮದಡಿಯಲ್ಲಿಯಲ್ಲಿ ಹೆಸರಾಂತ ಸಾಹಿತಿ, ಮಂಗಳ ಗಂಗೋತ್ರಿಯ ವಿಶ್ರಾಂತ ಉಪ ಕುಲಪತಿ ಪ್ರೊ ಡಾ. ಚಿನ್ನಪ್ಪ ಗೌಡರ ನಿವಾಸದಲ್ಲಿ ಕಾರ್ಯಕ್ರಮವು ದಿನಾಂಕ 13 ಮಾರ್ಚ್ 2025ರಂದು ನಡೆಯಿತು. ಸಮಾರಂಭದಲ್ಲಿ ಶ್ರೀಯುತರಿಗೆ ಶಾಲು ಹಾರ ಫಲಸಹಿತವಾಗಿ ಗೌರವಿಸಲಾಯಿತು.
ಮೂಲತಃ ವಿಟ್ಲ ಸಮೀಪದ ಕೂಡೂರಿನವರಾದ ಶ್ರೀಯುತರು ಪ್ರಸ್ತುತ ಅಸೈಗೋಳಿಯ ತಮ್ಮ ನಿವಾಸದಲ್ಲಿ ಪತ್ನಿ ಡಾ. ಶಾಂತಿಯವರ ಜೊತೆಗೆ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ತುಳು ಹಾಗೂ ಕನ್ನಡ ಸಾಹಿತ್ಯದ ವಿದ್ವಾಂಸರಾಗಿದ್ದಾರೆ.
ಸನ್ಮಾನ ಸ್ವೀಕರಿಸಿದ ಮಾತನಾಡಿದ ಡಾ. ಚಿನ್ನಪ್ಪ ಗೌಡ ಮಾತನಾಡಿ “ದೇಶದ ಬಹು ಭಾಷೆಗಳಲ್ಲಿ ನಮ್ಮ ಸಂಸ್ಕೃತಿ ಅಡಕವಾಗಿದ್ದು, ಭಾರತೀಯ ಸಾಹಿತ್ಯದ ವ್ಯಾಪ್ತಿ, ವೈವಿಧ್ಯತೆ ಆಗಾಧವಾಗಿದೆ. ಸ್ವತಂತ್ರ ಕೃತಿ ರಚನೆಯ ಜೊತೆಗೆ ಇತರ ಭಾಷೆಯ ಪ್ರಮುಖ ಕೃತಿಗಳನ್ನು ಅನುವಾದ ಮಾಡುವ ಮೂಲಕ ನಮ್ಮ ಸಾಹಿತ್ಯಿಕ ಪರಂಪರೆಯನ್ನು ಎಲ್ಲೆಡೆ ಪಸರಿಸಲು ಸಾಹಿತಿಗಳು ಪ್ರಯತ್ನಿಸಬೇಕು. ಸಾಹಿತ್ಯ ಕ್ಷೇತ್ರದಲ್ಲಿ ಅನುವಾದ ಕೃತಿಗಳೂ ಸ್ವಾತಂತ್ರ ಕೃತಿಯಷ್ಟೇ ಮಹತ್ವ ಪಡೆದಿದೆ. ಸಾಹಿತ್ಯ ಸಮ್ಮೇಳನಗಳಲ್ಲಿ ಹಿಂದಿನ ಸಾಹಿತ್ಯ, ಸಮಕಾಲೀನ ಸಾಹಿತ್ಯದ ಬಗ್ಗೆ ಚಿಂತನ ಮಂಥನ ನಡೆಯಬೇಕು. ಆದರೆ ಇತ್ತೀಚಿನ ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕೀಯವೂ ಸೇರಿದಂತೆ ಇತರ ವಿಷಯಗಳ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ. ಇದು ಒಳ್ಳೆ ಬೆಳವಣಿಗೆಯಲ್ಲ. ಸಾಹಿತ್ಯ ಸಮ್ಮೇಳನ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿರಬೇಕು. ಶಿಕ್ಷಣ ವ್ಯವಸ್ಥೆ ಸಾಹಿತ್ಯಕ್ಕೆ ಹೆಚ್ಚಿನ ಶಕ್ತಿ ನೀಡಬಲ್ಲದು. ವಿಶ್ವವಿದ್ಯಾಲಯಗಳಲ್ಲಿ ಸಾಹಿತ್ಯದ ಚಟುವಟಿಕೆ ನಿರಂತರವಾಗಿ ನಡೆಯಬೇಕು” ಎಂದರು.
ಪರಿಷತ್ತಿನ ದ.ಕ. ಜಿಲ್ಲಾದ್ಯಕ್ಷ ಶ್ರೀ ಹರೀಶ್ ಪಿ. ಬಿ. ಇವರು ಪ್ರಾಸ್ತಾವಿಕವಾಗಿ ಮಾತನಾಡಿ, ಪರಿಷತ್ತಿನ ಮೂಲ ಧ್ಯೇಯ ಹಾಗೂ ಕಾರ್ಯ ವೈಖರಿಗಳ ಪಕ್ಷಿನೋಟ ಬೀರಿದರು.ಬಳಿಕ ನಡೆದ ಸಂವಾದದಲ್ಲಿ ಬಂಟ್ವಾಳ ತಾಲೂಕಿನ ಹಿಂದಿನ ಅಧ್ಯಕ್ಷ , ಹಾಲಿ ಜಿಲ್ಲಾ ಸಮಿತಿಯ ಸದಸ್ಯ, ಕಣಚೂರು ಹಾಗೂ ಮಂಗಳ ಆಸ್ಪತ್ರೆಯ ಕ್ಷಾರ ಚಿಕಿತ್ಸಕ ( ಮೂಲವ್ಯಾಧಿ ಚರ್ಮರೋಗ) ಡಾ ಸುರೇಶ ನೆಗಳಗುಳಿ, ಕೂಟದ ಪ್ರಮುಖ್ ಆದ ತುಳು ಭಾಷಾತಜ್ಞೆ ಗೀತಾ ಲಕ್ಷ್ಮೀಶ್, ಪತ್ರಿಕೋದ್ಯಮಿ ಭಾಸ್ಕರ್, ಉದಯವಾಣಿಯ ವಸಂತ ಕೊಣಾಜೆ ಹಾಗೂ ಸಮಿತಿಯ ಕಾರ್ಯದರ್ಶಿ ವಿದುಷಿ ಸುಮಂಗಲಾ ರತ್ನಾಕರ್ ಭಾಗವಹಿಸಿದ್ದರು.