ಡಾಕ್ಟರ್ ಮಹೇಶ್ವರಿಯವರು ಶ್ರೀಯುತ ಗಂಗಾಧರ ಭಟ್ಟ ಮತ್ತು ಶ್ರೀಮತಿ ಸರಸ್ವತಿ ಅಮ್ಮ ಇವರ ಸುಪುತ್ರಿ. ಕಾಸರಗೋಡಿನ ಬೇಳ ಗ್ರಾಮದ ಉಳ್ಳೋಡಿ ಎಂಬಲ್ಲಿ 18 ಮಾರ್ಚ್ 1958ರಂದು ಜನಿಸಿದ ಅವಳಿ ಮಕ್ಕಳಲ್ಲಿ ಒಂದು ಮಗುವೇ ಮುಂದೆ ಸಾಹಿತ್ಯ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡ ಡಾ. ಯು. ಮಹೇಶ್ವರಿಯವರು. ಐದು ಮಂದಿ ಸಹೋದರಿಯರು ಮತ್ತು ಮೂರು ಮಂದಿ ಸಹೋದರರಿರುವ ತುಂಬು ಸಂಸಾರದಲ್ಲಿ ಬೆಳೆದ ಇವರು ನವಚೇತನ ಪ್ರೌಢಶಾಲೆ ಪೆರಡಾಲದಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿದರು. ಓದಿನಲ್ಲಿ ಬಹಳ ಆಸಕ್ತಿ ಹೊಂದಿದ್ದು, ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲಿ ಪ್ರಥಮ ಸ್ಥಾನ ಪಡೆದ ಹಿರಿಮೆ ಇವರದ್ದು. ಕಾಸರಗೋಡಿನ ಸರಕಾರಿ ಕಾಲೇಜಿನಲ್ಲಿ ಆಂಗ್ಲ ಭಾಷೆಯಲ್ಲಿ ಪದವಿಯನ್ನು ಪಡೆದ ಬಳಿಕ ಮೈಸೂರು ವಿಶ್ವವಿದ್ಯಾಲಯದಿಂದ ಆಂಗ್ಲಭಾಷಾ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಕಲ್ಲಿಕೋಟೆ ವಿಶ್ವವಿದ್ಯಾಲಯದಿಂದ ಕನ್ನಡ ಭಾಷಾ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಮುಂದೆ ಅದೇ ವಿಶ್ವವಿದ್ಯಾಲಯದಿಂದ “ಕನ್ನಡದ ಮೊದಲ ಕಾದಂಬರಿಗಳು – ಒಂದು ಸ್ತ್ರೀವಾದಿ ಅಧ್ಯಯನ” ಎಂಬ ವಿಷಯದ ಮೇಲೆ ಮಂಡಿಸಿದ ಪ್ರೌಢ ಪ್ರಬಂಧಕ್ಕೆ ಪಿ. ಎಚ್. ಡಿ. ಪದವಿ ಪಡೆದಿರುವುದು ಅವರ ಆಳವಾದ ಜ್ಞಾನಕ್ಕೆ ಸಾಕ್ಷಿಯಾಗಿದೆ.
ಉದ್ಯೋಗದ ಹುಡುಕಾಟದಲ್ಲಿದ್ದ ಇವರಿಗೆ ಉಡುಪಿಯ ಎಂ. ಜಿ. ಎಂ. ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸ್ವಲ್ಪಕಾಲ ಸೇವೆ ಸಲ್ಲಿಸುವ ಅವಕಾಶ ಒದಗಿತು. ಆ ಬಳಿಕ ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಕನ್ನಡ ಸಂಶೋಧನಾ ವಿಭಾಗ ಮತ್ತು ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ನಂತರ ಕಣ್ಣೂರು ವಿಶ್ವವಿದ್ಯಾನಿಲಯದಲ್ಲಿ ಭಾಷಾ ಅಧ್ಯಯನಾಂಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದು. ಎಂ. ಫಿಲ್. ಮತ್ತು ಪಿ. ಎಚ್. ಡಿ. ಗೆ ಮಾರ್ಗದರ್ಶಕರಾಗಿ ದುಡಿದ ಅನುಭವಿ.
ತನ್ನ ಗುರು ಕಯ್ಯಾರ ಕಿಞ್ಞಣ್ಣ ರೈಯವರ ಬಗ್ಗೆ ಆದರಾಭಿಮಾನ ಹೊಂದಿರುವ ಇವರು ತಾನು ಕಯ್ಯಾರರ ಶಿಷ್ಯೆ ಎಂದು ಗೌರವದಿಂದ ಹೇಳಿಕೊಳ್ಳುತ್ತಾರೆ, ಗುರುವಿನಿಂದ ಪ್ರಭಾವಿತರಾಗಿದ್ದಾರೆ. ಬಾಲ್ಯದಲ್ಲಿ ಡಾ. ಮಹೇಶ್ವರಿಯವರಲ್ಲಿ ಸಾಹಿತ್ಯಾಸಕ್ತಿಯ ಬೀಜ ಬಿತ್ತಿ ಮೊಳೆಯುವಂತೆ ಮಾಡಿದವರು ಗುರು ಕಯ್ಯಾರ ಕಿಞ್ಞಣ್ಣ ರೈಯವರು. ಅದೇ ಈಗ ಚಿಗುರಿ ಆರೋಗ್ಯವಂತ ಸಸಿಯಾಗಿ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದೆ.
‘ಮುಗಿಲ ಹಕ್ಕಿ’ ಮತ್ತು ‘ಧರೆಯುಗರ್ವದಿ ಮೆರೆಯಲಿ’, ಇವರ ಕವನ ಸಂಕಲನವಾದರೆ, ‘ಮಧುರವೇ ಕಾರಣ’ ಇದು ಲೇಖನಗಳ ಸಂಕಲನ. ‘ಮಾನುಶಿಯ ಓದು’ ಇದು ವಿಮರ್ಶಾ ಕೃತಿ. ‘ಅಟ್ಟುಂಬೊಳದ ಪಟ್ಟಾಂಗ’ ಮತ್ತು ‘ಶಬ್ದ ಸೂರೆ’ ಇವರ ಪ್ರಮುಖ ಕೃತಿಗಳು. ‘ಕಯ್ಯಾರ ಕಿಞ್ಞಣ್ಣ ರೈ- ಬದುಕು – ಬರಹ’ ಇದು ಪ್ರಕಟಣೆಗೆ ಸಿದ್ಧವಾದ ಕೃತಿ.
ವಿದ್ಯಾರ್ಥಿ ದೆಸೆಯಲ್ಲಿರುವಾಗಲೇ ಸಾಹಿತ್ಯ ಮತ್ತು ಸುಗಮ ಸಂಗೀತದತ್ತ ಒಲವಿದ್ದ ಇವರು ಅಂತರ್ ಕಾಲೇಜು ಮಟ್ಟದಲ್ಲಿಯೂ ಅನೇಕ ಬಹುಮಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಆಕಾಶವಾಣಿಯ ಕವಿಗೋಷ್ಠಿ, ಯುಗಾದಿ ಕವಿ ಗೋಷ್ಠಿ, ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿ, ಆಳ್ವಾಸ್ ನುಡಿಸಿರಿಯ ‘ಕವಿ ಸಮಯ’, ಕುವೆಂಪು ಶತಮಾನೋತ್ಸವದ ಕವಿಗೋಷ್ಠಿ, ಪುತ್ತೂರಿನ ಸೇಡಿಯಾಪು ಶತಮಾನೋತ್ಸವ ಕಾರ್ಯಕ್ರಮ, ಮೂಡಬಿದರೆ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಇತ್ಯಾದಿಗಳಲ್ಲಿ ಭಾಗವಹಿಸಿದ ಕ್ರಿಯಾಶೀಲ ವ್ಯಕ್ತಿತ್ವದ ಮಹೇಶ್ವರಿಯವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳುಸಂದಿವೆ. ‘ಮುಗಿಲ ಹಕ್ಕಿ’ ಕವನ ಸಂಕಲನಕ್ಕೆ ‘ವಾರಂಬಳ್ಳಿ ಪ್ರತಿಷ್ಠಾನ ಪ್ರಶಸ್ತಿ’, ‘ಇದು ಮಾನುಷಿಯ ಓದು’ ವಿಮರ್ಶಾ ಕೃತಿಗೆ ‘ವಿ. ಎಂ. ಇನಾಂದಾರ್ ಪ್ರಶಸ್ತಿ’, ‘ಸುಶೀಲ ಶೆಟ್ಟಿ ಸ್ಮಾರಕ ಪ್ರಶಸ್ತಿ’, ‘ಅಣ್ಣಯ್ಯ ಮಾಸ್ತರ್ ಪ್ರಶಸ್ತಿ’ ಇತ್ಯಾದಿ ಇವರ ಸಾಹಿತ್ಯ ಸೇವೆಗೆ ಸಂದ ಗೌರವ.
ಹಮ್ಮುಬಿಮ್ಮಿಲ್ಲದ, ಸರಳತನಕ್ಕೆ ಮಾದರಿಯಾಗಿರುವ ಡಾ. ಯು. ಮಹೇಶ್ವರಿಯವರ ಲೇಖನಿಯಿಂದ ಇನ್ನಷ್ಟು ಕೃತಿಗಳು ಮೂಡಿ ಬರಲಿ ಎಂಬ ಶುಭ ಹಾರೈಕೆಯೊಂದಿಗೆ, ಹುಟ್ಟು ಹಬ್ಬದ ಶುಭಾಶಯಗಳು.
-ಅಕ್ಷರೀ