Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ರಂಗ ಪ್ರಯೋಗ ವಿಮರ್ಶೆ | ‘ಈ ಪರಗಣ’ವೆಂಬ ಹಾಸ್ಯ ರಸಾಯನ
    Drama

    ರಂಗ ಪ್ರಯೋಗ ವಿಮರ್ಶೆ | ‘ಈ ಪರಗಣ’ವೆಂಬ ಹಾಸ್ಯ ರಸಾಯನ

    March 19, 2025No Comments3 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ವ್ಯಕ್ತಿಯೊಬ್ಬರ ಅಸಹಾಯಕತೆಯನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಶಕ್ತಿಗಳು ಸಾಮಾಜಿಕ ವ್ಯವಸ್ಥೆಯಲ್ಲಿ ಹೇಗೆಲ್ಲಾ ಆಟವಾಡುತ್ತವೆ ಎಂದು ಹೇಳುವ ನಾಟಕ ‘ಈ ಪರಗಣ’. ‘ಸುಸ್ಥಿರ ಫೌಂಡೇಶನ್’ ಆಯೋಜಿಸಿದ್ದ ರಂಗ ತರಬೇತಿ ಶಿಬಿರದ ಭಾಗವಾಗಿ ನಿರ್ಮಿಸಿರುವ ಈ ಹಾಸ್ಯಮಯ ನಾಟಕವನ್ನು ಜೋಸೆಫ್ ಜಾನ್ ರವರು ನಿರ್ದೇಶಿಸಿದ್ದು, ದಿನಾಂಕ 14 ಮಾರ್ಚ್ 2025ರಂದು ಕಲಾಗ್ರಾಮದ ರಂಗಮಂದಿರದಲ್ಲಿ ಪ್ರದರ್ಶನಗೊಂಡು ನೋಡುಗರನ್ನು ವಿನೋದದಲ್ಲಿ ತೇಲಿಸಿ ವಿಷಾದದಲ್ಲಿ ಮುಳುಗಿಸಿತು.

    ಕಲ್ಲೂರಿನ ರಾಜಪ್ಪ ಎನ್ನುವ ವ್ಯಕ್ತಿ ಬದುಕಿನಲ್ಲಿ ಹತಾಶೆಗೊಳಗಾಗಿ ಮರವೊಂದನ್ನು ಹತ್ತಿದ್ದರ ಸುತ್ತ ಇಡೀ ನಾಟಕ ಸುತ್ತುತ್ತದೆ. ಈ ಸಂಗತಿ ಸುದ್ದಿ ಮಾಧ್ಯಮದಲ್ಲಿ ಪ್ರಚಾರ ಪಡೆದು ಜನಜಂಗುಳಿ ಸೇರಿದ ಸನ್ನಿವೇಶವನ್ನು ಪಂಚಾಯಿತಿ ಅಧ್ಯಕ್ಷ ಕಣ್ಣಪ್ಪನಂತವರು ಹೇಗೆ ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಾರೆ ಎಂಬುದನ್ನು ವಿಡಂಬನಾತ್ಮಕವಾಗಿ ನಾಟಕದಾದ್ಯಂತ ತೋರಿಸಲಾಗಿದೆ. ಮರವೇರಿ ಸಾಯುತ್ತೇನೆ ಎನ್ನುವಾತನನ್ನು ನೋಡಲು ಜನಜಾತ್ರೆ ಸೇರಿದ್ದನ್ನೇ ನೆಪವಾಗಿಸಿಕೊಂಡು ವ್ಯಾಪಾರಸ್ಥರು ಲಾಭ ಮಾಡಿಕೊಳ್ಳಲು ಹಾತೊರೆದರೆ, ಲೋಕಲ್ ಪುಡಾರಿಗಳು ವಾಹನಗಳ ಪಾರ್ಕಿಂಗ್ ಫೀಸ್‌ ವಸೂಲಿ ದಂಧೆ ಹಾಗೂ ರಿಯಲ್ ಎಸ್ಟೇಟ್ ವ್ಯವಹಾರಕ್ಕಿಳಿಯುತ್ತಾರೆ. ರಾಜಕಾರಣಿಗಳು ಪಾರ್ಟಿ ಫಂಡ್ ಬರುವುದಾದರೆ ಮರವೇರಿದಾತ ಮರದಲ್ಲೇ ಇರಲಿ ಎಂದು ಬಯಸುತ್ತಾರೆ. ಸುದ್ದಿ ಮಾಧ್ಯಮಗಳು ಈ ಪರಗಣವನ್ನೇ ತಮ್ಮ ಟಿಆರ್ಪಿ ಏರಿಕೆಗೆ ಬಳಸಿಕೊಳ್ಳುತ್ತವೆ. ಸ್ವತಃ ರಾಜಪ್ಪನ ಹೆಂಡತಿಯೇ ದುರಾಸೆಗೆ ಬಿದ್ದು ಗಂಡ ಮರದ ಮೇಲೆಯೇ ಇರಲಿ ಎಂದು ಆಶಿಸುತ್ತಾಳೆ. ರಾಜಪ್ಪನನ್ನು ಮರದಿಂದ ಕೆಳಗೆ ಇಳಿಸುವ ಪ್ರಯತ್ನದಲ್ಲಿ ಅಗ್ನಿಶಾಮಕದವರು ವಿಫಲರಾಗುತ್ತಾರೆ. ಪೊಲೀಸ್ ಪೇದೆ ಒಡ್ಡಿದ ಹಣದಾಸೆಗೆ ಪ್ರೀತಿಯ ನಾಟಕವಾಡುವ ರಾಜಪ್ಪನ ಹೆಂಡತಿಯು ಆತನನ್ನು ಮರದಿಂದ ಕೆಳಗಿಳಿಸಿ ಪೊಲೀಸ್ ವಶಕ್ಕೆ ಒಪ್ಪಿಸಿದರೂ ತಪ್ಪಿಸಿಕೊಳ್ಳುವ ರಾಜಪ್ಪ ಮತ್ತೆ ಮರವೇರುತ್ತಾನೆ. ಕೊನೆಗೆ ಮಗಳ ಒತ್ತಾಸೆಗೆ ಕಟ್ಟು ಬಿದ್ದ ರಾಜಪ್ಪ ಮರದಿಂದ ಇಳಿಯಬೇಕೆನ್ನುವಾಗ ಕೊಂಬೆ ಮುರಿದು ಕೆಳಗೆ ಬಿದ್ದು ಸಾಯುತ್ತಾನೆ.

    ರಾಜಪ್ಪನ ಸಾವಿನೊಂದಿಗೆ ತಮ್ಮ ಲಾಭಕ್ಕೆ ಕುತ್ತು ಬಂತು ಎಂದು ಲಾಭಕೋರರೆಲ್ಲಾ ಬೇಸರಗೊಂಡರೆ ರಾಜಪ್ಪನ ಮಗಳು ಮರವೇರಿ ಸಾಯುತ್ತೇನೆಂದು ಘೋಷಿಸುತ್ತಾಳೆ. ಮತ್ತೆ ಈ ಸಾಯೋ ಆಟ ಹಾಗೂ ಅದರ ಸುತ್ತಲೂ ಆರಂಭಗೊಂಡ ಸ್ವಾರ್ಥದ ನೋಟ ಮುಂದುವರೆಯುತ್ತಾ ನಾಟಕ ಮುಕ್ತಾಯವಾಗುತ್ತದೆ. ವಿನೋದದ ಮೂಲಕ ವಿಷಾದವನ್ನು ಕಟ್ಟಿಕೊಡುತ್ತದೆ. ನಿರ್ದೇಶಕ ಜೊಸೆಫ್ ಜಾನ್ ರವರು ತಮ್ಮ ಅಕಾಡೆಮಿಕ್ ಶಿಸ್ತು ಹಾಗೂ ಶೈಲಿಗಳಿಂದಾಚೆ ನಾನ್ ಅಕಾಡೆಮಿಕ್ ಜನಪ್ರಿಯ ಮಾದರಿಯಲ್ಲಿ ಈ ಪರಗಣವನ್ನು ಕಟ್ಟಿದ್ದಾರೆ. ಸಿದ್ಧ ಕಥಾನಕದ ಹಂಗಿಲ್ಲದೇ ಒಂದು ಘಟನೆಯ ಸುತ್ತ ಹಲವಾರು ಬಿಡಿ ಪ್ರಸಂಗಗಳನ್ನು ಪೋಣಿಸಲಾಗಿದೆ. ರಂಗ ತರಬೇತಿಯ ಭಾಗವಾದ ಇಂಪ್ರೂವೈಜೇಶನ್ (Improvisation) ತಂತ್ರವನ್ನು ಬಳಸಿಕೊಂಡು ಪೂರ್ಣ ಪ್ರಮಾಣದ ನಗೆ ನಾಟಕವನ್ನು ನಿರ್ಮಿಸಿದ್ದು ಸೋಜಿಗದ ಸಂಗತಿ.

    ಈ ಪರಗಣದಾದ್ಯಂತ ಅಮಿರ್ ಖಾನ್ ರವರು ಹಿಂದಿಯಲ್ಲಿ ನಿರ್ಮಿಸಿದ್ದ ‘ಪೀಪ್ಲಿ ಲೈವ್’ ಎನ್ನುವ ಸಿನೆಮಾದ ದಟ್ಟ ಛಾಯೆಯೂ ಆವರಿಸಿದೆ. ಆ ಸಿನೆಮಾದಲ್ಲಿ ರೈತರ ಸಂಕಟಗಳನ್ನೇ ಕೇಂದ್ರವಾಗಿಟ್ಟುಕೊಳ್ಳಲಾಗಿತ್ತು. ಹಾಗೂ ಆ ಸಿನೆಮಾಕ್ಕೆ ಒಂದು ಪ್ರಬಲವಾದ ಆಶಯವೂ ಇತ್ತು. ಆದರೆ ಅಂತಹುದೇ ಮಾದರಿಯ ಈ ನಾಟಕ ಅರಾಜಕ ವ್ಯಕ್ತಿಯ ವಿಕ್ಷಿಪ್ತತೆಯನ್ನೇ ಕೇಂದ್ರವಾಗಿಟ್ಟುಕೊಂಡಿದೆ. ಇಲ್ಲಿ ಮರವೇರಿದ ವ್ಯಕ್ತಿಗೆ ಗೊತ್ತಿಲ್ಲ ತಾನ್ಯಾಕೆ ಮರವೇರಿದ್ದೇನೆಂದು. ನಿಖರವಾದ ಕಾರಣವನ್ನು ನಾಟಕವೂ ಹೇಳುವುದಿಲ್ಲ. ಇಲ್ಲಿ ಕಾರಣಕ್ಕಿಂತಲೂ ಅದರಿಂದ ಉಂಟಾಗುವ ಪರಿಣಾಮಗಳತ್ತ ನಿರ್ದೇಶಕರು ಹೆಚ್ಚು ಗಮನ ಹರಿಸಿದ್ದಾರೆ. ಹಾಸ್ಯ ಸನ್ನಿವೇಶಗಳನ್ನು ಉತ್ಪಾದಿಸಿದ್ದಾರೆ.

    ಮರವೇರಿದವನ ನಿರಾಸೆ ಬಹುಜನರ ಹತಾಶೆಯನ್ನು ಬಿಂಬಿಸಿದ್ದರೆ, ಸಾಯಬೇಕೆನ್ನುವಾತನ ಸಂಕಟಗಳು ಗ್ರಾಮಜೀವಿಗಳ ಕಂಟಕಗಳ ಪ್ರಾತಿನಿಧ್ಯತೆಯನ್ನು ಹೊಂದಿದ್ದರೆ ಈ ಪರಗಣ ಇನ್ನೊಂದು ಎತ್ತರಕ್ಕೆ ಏರಬಹುದಾಗಿತ್ತು. ಪ್ರಸ್ತುತ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಹರಡಿರುವ ಸಾಲದ ಬಲೆಗೆ ಸಿಕ್ಕು ಸಾವಿಗೆ ಶರಣಾಗುತ್ತಿರುವ ಶ್ರಮಿಕರ ಪ್ರತಿನಿಧಿಯನ್ನಾಗಿ ರಾಜಪ್ಪ ಪಾತ್ರವನ್ನು ಕಟ್ಟಿಕೊಡಬಹುದಾಗಿತ್ತು. ಆದರೆ ನಿರ್ದೇಶಕರಿಗೆ ವಿಡಂಬನೆಯೇ ಪ್ರಧಾನವಾದಂತಿದ್ದು ಆಶಯ ಗೌಣವಾಗಿದೆ.

    ಹೀಗಾಗಿ ಹಾಸ್ಯೋತ್ಪಾದನೆಯ ಉತ್ಸಾಹದಲ್ಲಿ ಹಲವಾರು ಅತಿರೇಕಗಳನ್ನೂ ಸೇರಿಸಲಾಗಿದೆ. ಮರವೇರಿದವನ ಹೆಂಡತಿಗೆ ಸಹಕಾರಿ ಬ್ಯಾಂಕೊಂದು ಹತ್ತು ಲಕ್ಷ ಹಣ ಕೊಡುವುದಕ್ಕೆ ಬಲವಾದ ಕಾರಣಗಳಿಲ್ಲ. ಹಳ್ಳಿಯೊಂದರ ಘಟನೆಗೆ ಸ್ಪಂದಿಸಿ ವಿದೇಶದಿಂದ ಸುಂದರಿಯೊಬ್ಬಳು ಸಾಂತ್ವನ ಹೇಳಿ ಸಹಾಯ ಮಾಡಲು ಬಂದಿದ್ದರೆ ತಕರಾರು ಇರುತ್ತಿರಲಿಲ್ಲ. ಆದರೆ ಕುಗ್ರಾಮದಲ್ಲಿ ಬಿಸಿನೆಸ್ ಕಾಂಪ್ಲೆಕ್ಸ್ ಕಟ್ಟಿಸಲು ಬಂಡವಾಳ ಹೂಡುವ ಯೋಜನೆಯೇ ಅಪ್ರಸ್ತುತ. ವಿಡಂಬನೆಗೂ ಒಂದು ತರ್ಕ ಅಂತಾ ಇದ್ದರೆ ನಾಟಕದ ಮೌಲ್ಯ ಹೆಚ್ಚುತ್ತದೆ. ಲಾಜಿಕ್ ಇಲ್ಲದೇ ಕೇವಲ ಹಾಸ್ಯದ ಮ್ಯಾಜಿಕ್ ಮಾಡುವ ಪ್ರಯತ್ನ ನಾಟಕದ ಮೂಲ ಆಶಯವನ್ನೇ ಡೈಲ್ಯೂಟ್ ಮಾಡುತ್ತದೆ. ಆಶಯಕ್ಕೆ ಅನುಗುಣವಾಗಿಯೇ ನಾಟಕದ ಆಕೃತಿಯನ್ನು ಕಟ್ಟಿ ಕೊಟ್ಟಿದ್ದರೆ ನಗೆ ನಾಟಕವು ನೋಡುಗರಲ್ಲಿ ವಿಚಾರ ಪ್ರಚೋದಕವೂ ಆಗಬಹುದಾಗಿತ್ತು.

    ‘ಈ ಪರಗಣ’ದ ರಂಗ ವಿನ್ಯಾಸವು ಅತ್ಯಂತ ಸರಳ ಹಾಗೂ ಸಾಂಕೇತಿಕವಾಗಿದ್ದು, ಮರವೊಂದರ ಸಂಕ್ಷಿಪ್ತ ಮಾದರಿಯನ್ನು ನಾಟಕದಾದ್ಯಂತ ವೇದಿಕೆಯಲ್ಲಿ ಪ್ರತಿಷ್ಠಾಪಿಸಲಾಗಿದೆ. ಅತ್ಯಂತ ಕಡಿಮೆ ಪ್ರಾಪರ್ಟಿಗಳ ಮೂಲಕ ಪಾತ್ರಧಾರಿಗಳನ್ನು ಹೆಚ್ಚಾಗಿ ಬಳಸಿ ಇಡೀ ನಾಟಕವನ್ನು ನಿರ್ಮಿಸಲಾಗಿದೆ. ಹಾಡು ಆಲಾಪ ಸಂಗೀತ ಹಾಗೂ ಬೆಳಕಿನ ವಿನ್ಯಾಸ ಈ ನಾಟಕಕ್ಕೆ ಪೂರಕವಾಗಿ ಕೊಡುಗೆ ಕೊಟ್ಟಿವೆ. ಹತ್ತು ಹನ್ನೆರಡು ದಿನಗಳಲ್ಲಿ ನಿರ್ಮಿತಿ ಪಡೆದ ಈ ನಾಟಕ ಇನ್ನೂ ಗಟ್ಟಿಗೊಳ್ಳಬೇಕಿದೆ. ಲೋಪಗಳನ್ನು ಸರಿಪಡಿಸಿಕೊಳ್ಳಬೇಕಿದೆ. ಕಲಾವಿದರು ಇನ್ನಷ್ಟು ಪಳಗಬೇಕಿದೆ. ಏನೇ ಆಗಲಿ ಈ ನಾಟಕದಲ್ಲಿ ಭಾಗವಹಿಸಿದ ಯುವ ನಟ ನಟಿಯರ ಉತ್ಸಾಹ ಮೆಚ್ಚಬೇಕಾದದ್ದಾಗಿದೆ. ಕೇವಲ ಉತ್ಸಾಹವೊಂದೇ ಸಾಲದು ಅದರ ಜೊತೆಗೆ ಜೋಸೆಫ್ ಜಾನ್ ರವರಂತಹ ಪ್ರತಿಭಾನ್ವಿತ ನಿರ್ದೇಶಕರ ಮಾರ್ಗದರ್ಶನವನ್ನು ಬಳಸಿಕೊಂಡು ಕಲಾವಿದರಾಗಿ ಬೆಳೆಯಬೇಕಿದೆ.

    ಏನೇ ಇರಲಿ, ‘ಸುಸ್ಥಿರ ಫೌಂಡೇಶನ್’ ರಂಗಾಸಕ್ತ ಯುವಕರಿಗೆ ಅಭಿನಯ ತರಬೇತಿಯನ್ನು ಆಯೋಜಿಸುತ್ತಿರುವುದು ಹಾಗೂ ನಾಟಕ ನಿರ್ಮಿತಿಯ ಮೂಲಕ ಅನೇಕ ಯುವಕರಿಗೆ ವೇದಿಕೆಯನ್ನು ಒದಗಿಸಿ ಕೊಟ್ಟಿರುವುದು ಅಭಿನಂದನೀಯ.

    ಶಶಿಕಾಂತ ಯಡಹಳ್ಳಿ
    ರಂಗಕರ್ಮಿ

    baikady drama review roovari
    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ‘ಅಲ್ಲಮನ ಬಯಲಾಟ’ ನಾಟಕ ಪ್ರದರ್ಶನ | ಮಾರ್ಚ್ 22
    Next Article ಜಾನಪದ ವಿದ್ವಾಂಸ ಸಾಹಿತಿ ಡಾ. ಗಣೇಶ್ ಅಮೀನ್ ಸಂಕಮಾರ್ ಇವರಿಗೆ ಸನ್ಮಾನ 
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025

    ಕಲಾಕುಲ್ ಕೊಂಕಣಿ ನಾಟಕ ರೆಪರ್ಟರಿಗೆ ಅರ್ಜಿ ಆಹ್ವಾನ

    May 10, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.