ತೆಕ್ಕಟ್ಟೆ: ಶ್ರೀ ಕೈಲಾಸ ಕಲಾಕ್ಷೇತ್ರ ಟ್ರಸ್ಟ್ ತೆಕ್ಕಟ್ಟೆ ಹಾಗೂ ಅರೆಹೊಳೆ ಪ್ರತಿಷ್ಠಾನದ ಸಹಕಾರದೊಂದಿಗೆ ಧಮನಿ (ರಿ.) ತೆಕ್ಕಟ್ಟೆ ಸಂಸ್ಥೆಯ ಪ್ರಥಮ ವಾರ್ಷಿಕೋತ್ಸವವು ದಿನಾಂಕ 23 ಮಾರ್ಚ್ 2025ರಂದು ತೆಕ್ಕಟ್ಟೆ ಹಯಗ್ರೀವದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಅರೆಹೊಳೆ ಪ್ರತಿಷ್ಠಾನದ ಸದಾಶಿವ ರಾವ್ ಅರೆಹೊಳೆ ಮಾತನಾಡಿ “ಕೇವಲ ಮಕ್ಕಳ ರಂಗಭೂಮಿಯ ಬಗೆಗೆ ಧ್ವನಿ ಎತ್ತಿದ ಸಂಸ್ಥೆ ಧಮನಿ (ರಿ.) ತೆಕ್ಕಟ್ಟೆ. ಭವಿಷ್ಯವನ್ನು ಆಳುವ ಮಕ್ಕಳನ್ನು ರಂಗಭೂಮಿಯ ಚಟುವಟಿಕೆಗಳಿಂದ ಶ್ರೀಮಂತಗೊಳಿಸಿದರೆ ಉಜ್ವಲ ಭವಿಷ್ಯ ಸಾಧ್ಯ. ಆಗಾಗ ಮಕ್ಕಳನ್ನು ಒಂದುಗೂಡಿಸುತ್ತ ಕೆಲಸ ಮಾಡುತ್ತಿರುವುದು ಸಣ್ಣ ವಿಚಾರವಲ್ಲ. ಸಾಹಸದ ಕೆಲಸಕ್ಕೆ ಸದಾ ಸಿದ್ಧವಾಗುತ್ತಿರುವ ಈ ಸಂಸ್ಥೆಯು ಉತ್ತರೋತ್ತರ ಶ್ರೇಯಸ್ಸು ಹೊಂದಲಿ” ಎಂದು ಹಾರೈಸಿದರು.
ರಂಗ ನಿರ್ದೇಶಕ ಸದಾನಂದ ಬೈಂದೂರು ಮಾತನಾಡಿ ನಿರಂತರ ರಂಗ ಚಟುವಟಿಕೆಯಿಂದ ತೆಕ್ಕಟ್ಟೆ ಪರಿಸರವನ್ನು ಸಾಂಸ್ಕೃತಿಕವಾಗಿ ಬೆಳಗಿಸುತ್ತಿರುವ ಸಂಸ್ಥೆಯೊಂದಿಗೆ ಧಮನಿ ಟ್ರಸ್ಟ್ ಹೊಸ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಂಗಭೂಮಿ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡಿ ಜನ್ಮ ತಾಳಿದೆ. ಪ್ರತೀ ದಿನವೂ ಮಕ್ಕಳ ರಂಗ ಕಲೆಯ ಬಗೆಗೆ ನಿರ್ದೇಶನವನ್ನು ನೀಡುತ್ತಾ ಹೊಸ ಹೊಸ ಸಾಧ್ಯತೆಗಳನ್ನು ರಂಗದ ಮೂಲಕ ಬಿತ್ತರಿಸುವ ಪ್ರಯತ್ನ ನಿಜಕ್ಕೂ ಶ್ಲಾಘನೀಯ” ಎಂದು ಅಭಿಪ್ರಾಯ ಪಟ್ಟರು.
ರಂಗಭೂಮಿ ಕಲಾವಿದೆ ನಾಗರತ್ನ ಮಾತನಾಡಿ “ಈ ಭಾಗದಲ್ಲಿ ಮಕ್ಕಳ ಬಗೆಗೆ ವಿಶೇಷ ಕಾಳಜಿಯಿಂದ ತಂಡ ಕಟ್ಟಿ ಸಾಹಸಕ್ಕೆ ಮನಮಾಡಿದ್ದು ಸಾಹಸದ ಕಾರ್ಯ” ಎಂದರು.
ತೆಕ್ಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷರಾದ ಗಣಪತಿ ಟಿ. ಶ್ರೀಯಾನ್ ಶುಭ ಹಾರೈಸಿದರು. ಧಮನಿಯ ಕಾರ್ಯದರ್ಶಿ ಶ್ರೀಷ ಉಪಸ್ಥಿತರಿದ್ದರು. ಹೆರಿಯ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು. ಬಳಿಕ ‘ಕಲಾಭಿ ಥಿಯೇಟರ್’ ಮಂಗಳೂರು ಇವರಿಂದ ‘ರಂಗಗೀತೆ’ ಹಾಗೂ ಶ್ರವಣ ಹೆಗ್ಗೋಡು ನಿರ್ದೇಶನದ ಜಪಾನಿ ಬುನ್ರಾಕು ಗೊಂಬೆ ಆಟ ‘ಪುರ್ಸನ ಪುಗ್ಗೆ’ ಪ್ರಸ್ತುತಿಗೊಂಡಿತು.
Subscribe to Updates
Get the latest creative news from FooBar about art, design and business.