ಕರ್ನಾಟಕ ಲೇಖಕಿಯರ ಸಂಘವು ದಿನಾಂಕ 22 ಮತ್ತು 23 ಮಾರ್ಚ್ 2025ರಂದು ಬೆಂಗಳೂರಿನಲ್ಲಿ ಆಯೋಜಿಸಿದ 8ನೆಯ ಅಖಿಲ ಕರ್ನಾಟಕ ಲೇಖಕಿಯರ ಸಮ್ಮೇಳನದ ಎರಡನೆಯ ದಿನ ಸಂಘದ ಸದಸ್ಯೆಯರು ಆಡಿದ ‘ಕಲ್ಲರಳಿ ಹೆಣ್ಣಾಗಿ’ ಕಾವ್ಯ ರೂಪಕ ಮಹಿಳೆಯರು ಆದಿಯಿಂದ ಇಂದಿನ ತನಕ ನಡೆದು ಬಂದ ಕಲ್ಲುಮುಳ್ಳುಗಳ ಹಾದಿ ಮತ್ತು ಅವರ ಇಂದಿನ ಅಸಹಾಯಕ ಸ್ಥಿತಿಗತಿಗಳನ್ನು ಬಹಳ ಮಾರ್ಮಿಕವಾಗಿ ಮತ್ತು ಹೃದಯಸ್ಪರ್ಶಿಯಾಗಿ ರಂಗದ ಮೇಲೆ ಕಟ್ಟಿಕೊಟ್ಟ ನಾಟಕವಿದು. (ರಚನೆ : ಸಂಧ್ಯಾರಾಣಿ ನಿರ್ದೇಶನ : ಜಯಲಕ್ಷ್ಮಿ ಪಾಟೀಲ್).
ನಾಟಕದಲ್ಲಿ ಎರಡೇ ಎರಡು ಹೆಣ್ಣು ಪಾತ್ರಗಳು – ಒಬ್ಬಳು ಸಣ್ಣ ವಯಸ್ಸಿನ ಆಧುನಿಕ ತಲೆಮಾರಿನವಳು ಮತ್ತು ಇನ್ನೊಬ್ಬಳು ಮಧ್ಯ ವಯಸ್ಸಿನ ಹಿಂದಿನ ತಲೆಮಾರಿನವಳು. ಮಧ್ಯ ವಯಸ್ಸಿನಾಕೆ ಸಂಪ್ರದಾಯವು ವಿಧಿಸಿದ ಕಟ್ಟುಪಾಡುಗಳನ್ನು ಮತ್ತು ಬದುಕಿನುದ್ದಕ್ಕೂ ಒಡ್ಡಿದ ಅಡೆತಡೆಗಳನ್ನು ಪ್ರಶ್ನಿಸದೇ ಎಲ್ಲವನ್ನೂ ಮುಸುಕಿನೊಳಗೆ ಗುದ್ದಾಡುತ್ತಲೇ ಸಹಿಸಿಕೊಂಡವಳು. ಎಳೆಯ ವಯಸ್ಸಿನವಳು ಹೊಸ ಚಿಂತನೆಗಳನ್ನು ರೂಪಿಸಿಕೊಂಡವಳು. ಎಲ್ಲವನ್ನೂ ಪ್ರಶ್ನಿಸಿ ತಾನು ಶೋಷಣೆಗೊಳಗಾಗಬಾರದು ಎಂಬ ಎಚ್ಚರವನ್ನು ಸದಾ ತನ್ನೊಳಗೆ ಕಾಪಿಟ್ಟುಕೊಂಡವಳು. ಆದ್ದರಿಂದಲೇ ಅವಳು ಮಧ್ಯ ವಯಸ್ಸಿನ ಹೆಣ್ಣಿನ ಜತೆಗೆ ಮಾತನಾಡಿ ಅವಳಲ್ಲಿ ಅರಿವು ಮೂಡಿಸಲು ಪ್ರಯತ್ನಿಸುತ್ತಾಳೆ. ‘ನಮ್ಮ ಸುತ್ತ ನಿಜವಾದ ಸಂಕೋಲೆಗಳಿದ್ದರೆ ಬಿಡಿಸಿಕೊಳ್ಳುವುದು ಕಷ್ಟವಲ್ಲ. ಆದರೆ ಸಂಕೋಲೆಗಳಿವೆ ಎಂಬ ಭ್ರಮೆಯನ್ನು ಬೆಳೆಸಿಕೊಂಡರೆ ಬಿಡಿಸಿಕೊಳ್ಳುವುದು ತುಂಬಾ ಕಷ್ಟ’ ಎನ್ನುತ್ತಾಳೆ. ಕೊನೆಯಲ್ಲಿ ಮಧ್ಯ ವಯಸ್ಸಿನವಳಲ್ಲಿ ಅರಿವು ಮೂಡುತ್ತದೆ. ಪಿತೃಪ್ರಧಾನ ಸಮಾಜವು ತನ್ನನ್ನು ನಡೆಸಿಕೊಳ್ಳುವ ಪರಿ ಅವಳನ್ನು ಸಿಟ್ಟಿಗೆಬ್ಬಿಸುತ್ತದೆ.
‘ನನಗೆ ಅಡುಗೆ ಮಾಡುವುದೆಂದರೆ ಇಷ್ಟ. ತರಕಾರಿ ತೊಳೆದು ಗಸಗಸನೆ ಕತ್ತರಿಸಿ, ಒಲೆಯೊಳಗೆ ಬೆಂಕಿಯನ್ನು ಧಗಧಗನೆ ಉರಿಸಿ, ಕಾಯಿಯನ್ನು ಕರಕರನೆ ಹೆರೆದು ಮಿಕ್ಸಿಗೆ ಹಾಕಿ ಗರಗರನೆ ತಿರುಗಿಸಿ ಒಲೆಯ ಮೇಲಿಟ್ಟು ಕೊತಕೊತನೆ ಕುದಿಸಿ ಇಳಿಸಿ ಮನೆಯವರ ತಟ್ಟೆಗೆ ಬಿಸಿ ಬಿಸಿ ಸುಡುವಂತೆ ಬಡಿಸಿದಾಗ ನನಗೆ ತೃಪ್ತಿ’ ಎಂದು ತನ್ನ ಅಕ್ರೋಶವನ್ನು ಧ್ವನಿಪೂರ್ಣವಾಗಿ ವ್ಯಕ್ತ ಪಡಿಸುತ್ತಾಳೆ. ಕಲ್ಲಾಗಿದ್ದ ಅವಳ ಮನಸ್ಸು ನಿಧಾನವಾಗಿ ತನ್ನ ಅಸ್ಮಿತೆಯೊಂದಿಗೆ ಅರಳಿ ಹೂವಾಗುವುದನ್ನು ಪ್ರೇಕ್ಷಕ ಸಂಭ್ರಮದಿಂದ ನೋಡುತ್ತಾನೆ.
ಸಂಜ್ಯೋತಿ ವಿ.ಕೆ. ಮತ್ತು ಪೂರ್ವಿ ಕಲ್ಯಾಣಿ ಈ ಎರಡು ಪಾತ್ರಗಳಿಗೆ ಹೇಳಿ ಮಾಡಿಸಿದಂತಿದ್ದರು. ಅವರಿಬ್ಬರ ಅಭಿನಯ, ರಂಗವನ್ನು ತುಂಬಿದ ಅವರ ಚಲನವಲನ, ಭಾವಪೂರ್ಣ ಹಾಡುಗಳು, ಅವರ ಸಂಭಾಷಣೆಗಳ ಸಮರ್ಥ ನಿರ್ವಹಣೆಗಳು, ನಾಟಕದ ಯಶಸ್ಸಿಗೆ ಕಾರಣವಾದವು. ಹೆಣ್ಣಿನ ಮೇಲೆ ಇಂದು ದಿನೇ ದಿನೇ ಅಗುತ್ತಿರುವ ದೌರ್ಜನ್ಯ-ಅತ್ಯಾಚಾರಗಳ ಕ್ರೌರ್ಯಗಳನ್ನು ಬಿಂಬಿಸುವ ಪೋಸ್ಟರುಗಳು ನಾಟಕವು ಸೃಷ್ಟಿಸಿದ ವಾತಾವರಣಕ್ಕೆ ಪೂರಕವಾಗಿದ್ದು ಮೊದಲ ಪ್ರದರ್ಶನವಾದರೂ ನಾಟಕವು ಪ್ರೇಕ್ಷಕರನ್ನು ಮಂತ್ರಮುಗ್ಧರಾಗಿ ವೀಕ್ಷಿಸುವಂತೆ ಮಾಡಿದವು. ವೇಷಭೂಷಣಗಳು ಮತ್ತು ರಂಗಪರಿಕರಗಳು ಸರಳವಾಗಿದ್ದು ಅಭಿನಯಕ್ಕೇ ಹೆಚ್ಚು ಒತ್ತು ಕೊಡುವ ನಾಟಕವಾದ್ದರಿಂದ ಹೆಚ್ಚಿಗೆ ಪೂರ್ವತಯಾರಿ ಇಲ್ಲದೆಯೇ ಇದನ್ನು ಇನ್ನು ಮುಂದಿನ ಅವಕಾಶಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಆಡಬಹುದು.
– ಡಾ. ಪಾರ್ವತಿ ಜಿ. ಐತಾಳ್