ಇತ್ತೀಚಿಗೆ ಗಂಗೊಳ್ಳಿಯ ಶ್ರೀ ಸೀತಾರಾಮಚಂದ್ರ ಸಭಾಭವನದಲ್ಲಿ ವೀರ ಸಾವರ್ಕರ್ ದೇಶಪ್ರೇಮಿಗಳ ಬಳಗದ ಪ್ರಾಯೋಜಕತ್ವದಲ್ಲಿ ನಡೆದ ರಂಗಭೂಮಿ ಟ್ರಸ್ಟ್ ಕೊಡಗು ಇವರ ಸಂಯೋಜನೆಯ ನಾಟಕ ‘ಸತ್ಯವನ್ನೇ ಹೇಳುತ್ತೇನೆ’ ಪರಿಣಾಮಕಾರಿಯಾಗಿ ಮೂಡಿಬಂದು ಜನರ ಮನಸ್ಸನ್ನು ಮುಟ್ಟುವಲ್ಲಿ ಯಶಸ್ವಿಯಾಯಿತು.
ಕಾಲ್ಪನಿಕ ನ್ಯಾಯಾಲಯದಲ್ಲಿ ಸಾಮಾನ್ಯ ರೈತನೊಬ್ಬನು ನ್ಯಾಯಾಧೀಶನಾಗಿ ಕುಳಿತುಕೊಂಡು ಭಾರತದ ಇತಿಹಾಸದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದಂತಹ ಭಾರತದ ಸ್ವಾತಂತ್ರ್ಯ ಕಾಲಘಟ್ಟದ ಐತಿಹಾಸಿಕ ವ್ಯಕ್ತಿಗಳಾದ
ಮಹಾತ್ಮ ಗಾಂಧೀಜಿ, ಜವಾಹರ್ ಲಾಲ್ ನೆಹರು, ಸರ್ದಾರ್ ವಲ್ಲಭಬಾಯಿ ಪಟೇಲ್, ಸುಭಾಷ್ ಚಂದ್ರ ಬೋಸ್, ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ವೀರ ಸಾವರ್ಕರ್ ಇವರನ್ನು ವಿಚಾರಣೆಗೆ ಒಳಪಡಿಸುವ ಆ ಮೂಲಕ ಐತಿಹಾಸಿಕ ಸತ್ಯಗಳನ್ನು ದರ್ಶಿಸುವ ವಿಶಿಷ್ಟವಾದ ಕಥಾನಕವುಳ್ಳ ಈ ನಾಟಕ ಪ್ರೇಕ್ಷಕರನ್ನು ಕೊನೆಯ ತನಕ ಗಂಭೀರವಾಗಿ ಹಿಡಿದಿಟ್ಟಿತು.
ಗಾಂಧಿಯಲ್ಲಿದ್ದ ಇಬ್ಬಂದಿತನ, ನೆಹರು ಅವಕಾಶವಾದಿತ್ವ, ಪಟೇಲರ ಬಲಹೀನತೆ, ನೇತಾಜಿ ಅವರ ಮರಣದ ಗೊಂದಲಗಳು, ದೇಶ ವಿಭಜನೆ, ಹಿಂದುತ್ವ ಕುರಿತಂತೆ ಅಂಬೇಡ್ಕರ್ ಮತ್ತು ಸಾವರ್ಕರ್ ಅವರ ಪ್ರಖರ ವಿಚಾರಗಳು ಹೀಗೆ ಹಲವು ಅಂಶಗಳನ್ನು ವಿಚಾರಣೆಯ ರೂಪದಲ್ಲಿ ಪ್ರೇಕ್ಷಕರೆದುರು ನಾಟಕ ತೆರೆದಿಡುತ್ತದೆ. ಮೂರು ಗಂಟೆ ಅವಧಿಯ ಈ ನಾಟಕ ಪ್ರೇಕ್ಷಕರಿಂದಲೂ ಪ್ರಬುದ್ಧತೆಯನ್ನು ಕೇಳುತ್ತದೆ.
ಆರು ಐತಿಹಾಸಿಕ ಪಾತ್ರಗಳನ್ನು ಮಾಡಿದ ಪಾತ್ರಧಾರಿಗಳು ಸೇರಿದಂತೆ ನ್ಯಾಯಾಧೀಶ, ವಕೀಲೆ ಮತ್ತು ಗುಮಾಸ್ತ ಪಾತ್ರಧಾರಿಗಳು ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ಅಭಿನಯಿಸಿದರು. ನ್ಯಾಯಾಧೀಶರ ಪಾತ್ರ ನಿರ್ವಹಿಸಿದ್ದ ಕಾರ್ಯಪ್ಪ ನವರು ನಾಟಕದ ಮಧ್ಯದಲ್ಲಿ ಆಗಾಗ್ಗೆ ಸಮಕಾಲೀನ ಘಟನೆಗಳನ್ನು ಪೂರಕವಾಗಿ ಮಂಡಿಸಿಕೊಂಡು ಚುರುಕು ಮುಟ್ಟಿಸುತ್ತಾ ಮಾತನಾಡಿದ್ದು ಪ್ರೇಕ್ಷಕರಲ್ಲಿ ಅಲ್ಲಲ್ಲಿ ನಗುವಿನ ಜೊತೆಗೆ ಚಿಂತನೆಯನ್ನು ತೆರೆದಿಟ್ಟಿತು.
ನಾಟಕದುದ್ದಕ್ಕೂ ಅಲ್ಲಲ್ಲಿ ಬಳಸಿಕೊಂಡ ಡಿವಿಜಿಯವರ ಕಗ್ಗದ ಸಾಲುಗಳು ಮತ್ತು ಸಂಘ ಗೀತೆಗಳು ನಾಟಕದ ಓಘಕ್ಕೆ ಪೂರಕವಾಗಿತ್ತು. ರಂಗ ವಿನ್ಯಾಸ ಸಂಗೀತ ಬೆಳಕು ಪ್ರಸಾದನ ಎಲ್ಲವೂ ಅಚ್ಚುಕಟ್ಟಾಗಿ ಮೂಡಿ ಬಂತು.
ನಮ್ಮ ಭಾರತೀಯ ಇತಿಹಾಸದ ಒಂದಷ್ಟು ತಿಳಿದಿರಲೇಬೇಕಾದ ಸತ್ಯಗಳನ್ನು ಇಂದಿನ ತಲೆಮಾರಿನವರಿಗೆ ಸ್ಪಷ್ಟವಾಗಿ ನಾಟಕದ ಮೂಲಕ ಆಧಾರ ಸಹಿತವಾಗಿ ತೋರಿಸುವಲ್ಲಿ ದೊಡ್ಡಮಟ್ಟದ ಪರಿಶ್ರಮವನ್ನು ಹಾಕುತ್ತಿರುವ ನಾಟಕದ ರಚನಾಕಾರ ಮತ್ತು ನಿರ್ದೇಶಕರಾದ ಅಡ್ಡಂಡ ಸಿ. ಕಾರ್ಯಪ್ಪ ಮತ್ತು ಅವರ ಇಡೀ ಬಳಗದ ಕಾರ್ಯ ಅತ್ಯಂತ ಮಹತ್ತರವಾದದ್ದು ಮತ್ತು ಅಭಿನಂದನೀಯವಾದದ್ದು. ಅವರೇ ಹೇಳಿದಂತೆ ಇದು ನಿಜಕ್ಕೂ ರಂಗ ಯಜ್ಞವೇ ಸರಿ. ಸತ್ಯವನ್ನು ಧೈರ್ಯದಿಂದ ಹೇಳುವಂತಹ ಈ ತಂಡದ ಕಾರ್ಯಕ್ಕೆ ವಿಶೇಷ ಗೌರವಗಳನ್ನು ಸಲ್ಲಿಸಬೇಕಿದೆ. ಇಂಥದ್ದೊಂದು ನಾಟಕವನ್ನು ಗಂಗೊಳ್ಳಿ ಮತ್ತು ಸುತ್ತಮುತ್ತಲಿನ ಜನರಿಗೆ ತೋರಿಸುವಲ್ಲಿ ಮುತುವರ್ಜಿ ವಹಿಸಿದ ಗಂಗೊಳ್ಳಿಯ ವೀರ ಸಾವರ್ಕರ್ ದೇಶಪ್ರೇಮಿಗಳ ಬಳಗಕ್ಕೆ ಆತ್ಮೀಯ ವಂದನೆಗಳು. ಇಂತಹ ನಾಟಕಗಳು ಹೆಚ್ಚು ಹೆಚ್ಚು ಪ್ರದರ್ಶನಗಳನ್ನು ಕಾಣುವಂತಾಗಲಿ ಆ ಮೂಲಕ ಜನರಿಗೆ ನೈಜ ಇತಿಹಾಸದ ದರ್ಶನವಾಗಿ ರಾಷ್ಟ್ರ ಪ್ರೇಮದ ಹೊನಲು ಸದಾ ಹರಿಯುತ್ತಿರಲಿ ಎನ್ನುವುದು ಆಶಯ.
ನರೇಂದ್ರ ಎಸ್. ಗಂಗೊಳ್ಳಿ
ಲೇಖಕರು /ಉಪನ್ಯಾಸಕರು.
ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜು.
ಗಂಗೊಳ್ಳಿ.- 576216
ಮೊಬೈಲ್ : 9242127307