08 ಏಪ್ರಿಲ್ 2023, ಸುರತ್ಕಲ್: ಸುರತ್ಕಲ್ ಗೋವಿಂದ ದಾಸ ಕಾಲೇಜಿನ ಆಶ್ರಯದಲ್ಲಿ ನಡೆಯುತ್ತಿರುವ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ನಾಲ್ಕು ದಿವಸಗಳ ಅಂತರ ಕಾಲೇಜು ತೆಂಕುತಿಟ್ಟು ಮತ್ತು ಬಡಗುತಿಟ್ಟು ಯಕ್ಷಗಾನ ಸ್ಪರ್ಧೆ ‘ಯಕ್ಷಯಾನ -2023’ನ್ನು ದಿನಾಂಕ 07-04-2023ರಂದು ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನುವಂಶಿಕ ಮೊಕ್ತೇಸರ ವೇದಮೂರ್ತಿ ಐ. ರಮಾನಂದ ಭಟ್ ಉದ್ಘಾಟಿಸಿ, “ದೈವೀ ಕಲೆಯಾದ ಯಕ್ಷಗಾನದ ಮೂಲಕ ಮಾನವೀಯ ಮೌಲ್ಯಗಳ ಪ್ರಸಾರವಾಗುತ್ತಿದೆ. ವಿದ್ಯಾರ್ಥಿಗಳು ಯಕ್ಷಗಾನ ಕಲೆಯ ಕುರಿತು ಆಸಕ್ತರಾಗುತ್ತಿರುವುದು ಶ್ಲಾಘನೀಯ” ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿಂದು ವಿದ್ಯಾದಾಯಿನೀ ಸಂಘದ ಅಧ್ಯಕ್ಷ ಜಯಚಂದ್ರ ಹತ್ವಾರ್ ಎಚ್. ಮಾತನಾಡಿ “ವಿದ್ಯಾದಾಯಿನೀ ಶಿಕ್ಷಣ ಸಂಸ್ಥೆ ಯಕ್ಷಗಾನದ ಶ್ರೇಷ್ಠ ಪರಂಪರೆ ಹೊಂದಿದ್ದು ಮೌಲ್ಯಾಧಾರಿತ ಶಿಕ್ಷಣವನ್ನು ಸದಾ ಪ್ರೋತ್ಸಾಹಿಸುತ್ತದೆ” ಎಂದರು. ಅಗರಿ ಎಂಟರ್ ಪ್ರೈಸಸ್‌ನ ಮಾಲಕ ಅಗರಿ ರಾಘವೇಂದ್ರ ರಾವ್ ಮಾತನಾಡಿ “ಪರಿಪೂರ್ಣ ಕಲೆಯಾದ ಯಕ್ಷಗಾನವನ್ನು ಯುವ ತಲೆಮಾರಿಗೆ ಪರಿಚಯಿಸುವಲ್ಲಿ ಶಿಕ್ಷಣ ಸಂಸ್ಥೆಗಳ ಪಾತ್ರ ಹಿರಿದಾಗಿದೆ” ಎಂದರು.
ಗೋವಿಂದ ದಾಸ ಪದವಿಪೂರ್ವ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ವೈ.ವಿ.ರತ್ನಾಕರ ರಾವ್, ಗೋವಿಂದ ದಾಸ ಕಾಲೇಜಿನ ಆಡಳಿತಾತ್ಮಕ ನಿರ್ದೇಶಕ ಪ್ರೊ. ರಮೇಶ್ ಕುಳಾಯಿ, ಹಳೆಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಲೀಲಾಧರ ಶೆಟ್ಟಿ, ಪ್ರಾಂಶುಪಾಲ ಪ್ರೊ.ಪಿ.ಕೃಷ್ಣಮೂರ್ತಿ ಶುಭ ಹಾರೈಸಿದರು.
“ಯಕ್ಷಯಾನ” – ಯಕ್ಷಗಾನ ಸ್ಪರ್ಧೆಯ ಸಂಚಾಲಕ ಕಾಲೇಜಿನ ಉಪ ಪ್ರಾಚಾರ್ಯ ಪ್ರೊ. ರಮೇಶ್ ಭಟ್ ಎಸ್.ಜಿ. ಸ್ವಾಗತಿಸಿ, ಉಪನ್ಯಾಸಕಿ ಶರ್ಮಿತಾ ಯು.ವಂದಿಸಿದರು. ಕ್ಯಾಪ್ಟನ್ ಸುಧಾ ಯು. ಮತ್ತು ಸುಶ್ಮಿತಾ ಬಿ.ಪಿ. ನಿರೂಪಿಸಿದರು. ನಾಲ್ಕು ದಿವಸಗಳ ಬಡಗುತಿಟ್ಟು – ತೆಂಕುತಿಟ್ಟು ಯಕ್ಷಗಾನ ಸ್ಪರ್ಧೆಯಲ್ಲಿ 18 ಕಾಲೇಜುಗಳ ತಂಡಗಳು ಪಾಲ್ಗೊಳ್ಳುತ್ತಿವೆ.
ಮೊದಲ ದಿನದಲ್ಲಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜು, ಉಡುಪಿಯ ತಂಡ “ಸುದರ್ಶನ ವಿಜಯ”, ಕುಂದಾಪುರದ ಭಂಡಾರ್‌ಕಾರ್ಸ್ ಕಾಲೇಜು ತಂಡವು “ರತ್ನಾವತಿ ಕಲ್ಯಾಣ”, ಎಸ್.ಎಮ್.ಎಸ್. ಕಾಲೇಜು ಬ್ರಹ್ಮಾವರ ತಂಡವು “ಮೀನಾಕ್ಷಿ ಕಲ್ಯಾಣ”, ಡಾ. ಬಿ.ಬಿ. ಹೆಗ್ಡೆ ಕಾಲೇಜು ಕುಂದಾಪುರ ತಂಡವು “ಶಶಿಪ್ರಭಾ ಪರಿಣಯ” ಹಾಗೂ ಎಮ್.ಜಿ.ಎಮ್ ಕಾಲೇಜು, ಉಡುಪಿ ತಂಡವು “ಬಬ್ರುವಾಹನ ಕಾಳಗ” ಪ್ರಸಂಗಗಳನ್ನು ಪ್ರದರ್ಶಿಸಿತು.