ಕಟೀಲು : ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮೂಲ್ಕಿ ತಾಲೂಕು ಘಟಕ ಇದರ ವತಿಯಿಂದ ಕಟೀಲು ದೇಗುಲದ ನಂದಿನಿ ನದಿ ಮಧ್ಯದ ಕುದ್ರುವಿನಲ್ಲಿ ದಿನಾಂಕ 01 ಮಾರ್ಚ್ 2026ರಂದು ಮೂಲ್ಕಿ ತಾಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನ ಮೂರು ವೇದಿಕೆಗಳಲ್ಲಿ ನಡೆಯಲಿದೆ.
ಖ್ಯಾತ ರಂಗಕರ್ಮಿ ಕೃಷ್ಣಮೂರ್ತಿ ಕವತ್ತಾರು ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಸಮ್ಮೇಳನ ಬೆಳಿಗ್ಗೆ 8-45ಕ್ಕೆ ಕಟೀಲು ರಥಬೀದಿಯಿಂದ ಕನ್ನಡ ಭುವನೇಶ್ವರಿಯ ಮೆರವಣಿಗೆಯೊಂದಿಗೆ ಆರಂಭವಾಗಲಿದ್ದು, ವಾಸುದೇವ ಆಸ್ರಣ್ಣ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಧ್ವಜಾರೋಹಣದ ಬಳಿಕ ಶಾಸಕರಾದ ಉಮಾನಾಥ ಕೋಟ್ಯಾನ್ ಸಮ್ಮೇಳನ ಉದ್ಘಾಟಿಸಲಿದ್ದಾರೆ. 40ಕ್ಕೂ ಹೆಚ್ಚು ಖ್ಯಾತ ಹಾಗೂ ಯುವ ಚಿತ್ರ ಕಲಾವಿದರು ನಂದಿನಿ ನದಿ ಹಾಗೂ ಕಟೀಲು ಕ್ಷೇತ್ರದ ಕುರಿತಾಗಿ ಚಿತ್ರಗಳನ್ನು ರಚಿಸಲಿದ್ದು, ಈ ಚಿತ್ರಕೂಟಕ್ಕೆ ಪರಿಸರ ಪ್ರವಾಸೋದ್ಯಮ ಮಂಡಳಿಯ ಶಾಲೆಟ್ ಪಿಂಟೋ ಚಾಲನೆ ನೀಡಲಿದ್ದಾರೆ. ಸಮಾನಾಂತರ ವೇದಿಕೆಯಲ್ಲಿ ಮೂಲ್ಕಿ ತಾಲೂಕಿನ ಕವಿಗಳಿಂದ ಕವಿಗೋಷ್ಟಿ ಕಥಾ ಗೋಷ್ಟಿ ಮಕ್ಕಳ ಕಥೆಗಳ ಓದು ನಡೆಯಲಿದ್ದು, ಕ.ಸಾ.ಪ. ಮಾಜಿ ರಾಜ್ಯಾಧ್ಯಕ್ಷ ಡಾ. ಹರಿಕೃಷ್ಣ ಪುನರೂರು ಉದ್ಘಾಟಿಸಲಿದ್ದು, ಚರ್ಚೆ, ಸಂವಾದಗಳ ಪಟ್ಟಾಂಗಕಟ್ಟೆಯನ್ನು ದಯಾನಂದ ಕಟೀಲ್ ಉದ್ಘಾಟಿಸಲಿದ್ದಾರೆ. ಕ.ಸಾ.ಪ. ಜಿಲ್ಲಾಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ನಿ.ಪೂ. ಸಮ್ಮೇಳಾನಾಧ್ಯಕ್ಷ ಶ್ರೀಧರ ಡಿ.ಎಸ್., ಕಥೆಗಾರ ಹಂಝ ಮಲಾರ್, ತಹಶೀಲ್ದಾರ್ ಶ್ರೀಧರ ಮುಂದಲಮನಿ ಭಾಗವಹಿಸಲಿದ್ದಾರೆ ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಶ್ರೀ ಹರಿನಾರಾಯಣದಾಸ ಆಸ್ರಣ್ಣ ತಿಳಿಸಿದ್ದಾರೆ.
ಸಮ್ಮೇಳನದಲ್ಲಿ ಹಿರಿಯ ಸಾಹಿತಿಗಳ ನೆನಪು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಹರಿದಾಸ ಪಾವಂಜೆ ಲಕ್ಷ್ಮೀನಾರಾಯಣಪ್ಪಯ್ಯರ ಕುರಿತು ಪ್ರಸಿದ್ಧ ಸಾಹಿತಿ ಡಾ. ಬಿ. ಜನಾರ್ದನ ಭಟ್, ಖ್ಯಾತ ಕಥೆಗಾರ ಬಾಗಲೋಡಿ ದೇವರಾಯರ ಬಗ್ಗೆ ನಿವೃತ್ತ ಉಪನ್ಯಾಸಕರಾದ ಪ್ರೊ. ಅರವಿಂದ ಹೆಬ್ಬಾರ್, ಖ್ಯಾತ ಸಾಹಿತಿ ಎಂ.ಎನ್. ಕಾಮತ್‌ರ ಕುರಿತು ಖ್ಯಾತ ಬರಹಗಾರರಾದ ದೇವು ಹನೇಹಳ್ಳಿ, ಕಥೆಗಾರ ಎಂ. ವ್ಯಾಸ ಇವರ ಬಗ್ಗೆ ನಿವೃತ್ತ ಪ್ರಾಂಶುಪಾಲರಾದ ವರದರಾಜ ಚಂದ್ರಗಿರಿ, ಸೇಡಿಯಾಪು ಕೃಷ್ಣ ಭಟ್ಟರ ಕುರಿತು ವಿದ್ವಾಂಸರಾದ ಪಾದೇಕಲ್ಲು ವಿಷ್ಣು ಭಟ್ ಮಾತನಾಡಲಿದ್ದಾರೆ. ಹಿರಿಯ ಸಾಹಿತಿಗಳ ಕಾವ್ಯಗಾಯನ, ಕಥಾವಾಚನ ನಡೆಯಲಿದೆ. ಸಾಹಿತಿ ಡಾ. ವಾಸುದೇವ ಬೆಳ್ಳೆ, ಸಮ್ಮೇಳನಾಧ್ಯಕ್ಷ ಕೃಷ್ಣಮೂರ್ತಿಯವರ ಜೊತೆ ಸಂವಾದ ನಡೆಸಲಿದ್ದಾರೆ.
ಕಮಲಾದೇವಿಪ್ರಸಾದ ಆಸ್ರಣ್ಣ ಅವರ ಲೇಖನಗಳ ಸಂಗ್ರಹ ‘ಯಕ್ಷಾಕೃತಿ’, ಉದಯಕುಮಾರ ಹಬ್ಬು ಇವರ ‘ನೆರೂದಾನ ಇಪ್ಪತ್ತು ಪ್ರೇಮಗೀತೆಗಳು’ ಹಾಗೂ ‘ಛತ್ರಪತಿ ಶಿವಾಜಿ ಮಹಾರಾಜ್’, ಡಾ. ಸೋಂದಾ ಭಾಸ್ಕರ ಭಟ್ಟರ ಅಂಕಣ ಬರಹಗಳ ಸಂಗ್ರಹ ‘ಶ್ಲೋಕಸಾಗರ ಭಾಗ ಮೂರು’, ಎಕ್ಕಾರು ಗ್ರಂಥಾಲಯದ ಸಂಚಿಕೆ ‘ಪುಸ್ತಕಮನೆ’ ಹೀಗೆ ಐದು ಕೃತಿಗಳ ಬಿಡುಗಡೆ ಸಮ್ಮೇಳನದಲ್ಲಿ ನಡೆಯಲಿದೆ. ಸಮಾರೋಪ ಸಮಾರಂಭದಲ್ಲಿ ಸಾಹಿತಿ ಬಾಬು ಕೊರಗ ಸಮಾಪನದ ನುಡಿಗಳನ್ನಾಡಲಿದ್ದು, ಖ್ಯಾತ ಕವಿ ವಿಲ್ಸನ್ ಕಟೀಲ್ ಸಮ್ಮೇಳನದ ಸಲುವಾಗಿ ಆಯೋಜಿಸಲಾದ ಸಾಹಿತ್ಯ ಸ್ಪರ್ಧೆಗಳ ಬಹುಮಾನ ವಿತರಿಸಲಿದ್ದಾರೆ. ಬರಹಗಾರ ಪ್ರಥ್ವಿರಾಜ ಕವತ್ತಾರು, ಅಜಾರು ನಾಗರಾಜ ರಾಯ ಭಾಗವಹಿಸಲಿದ್ದಾರೆ.
ಸಮಾನಾಂತರ ವೇದಿಕೆ ಹಾಗೂ ಪಟ್ಟಾಂಗಕಟ್ಟೆಯಲ್ಲಿ ತಾಲೂಕಿನ ಸಾಹಿತ್ಯಾಸಕ್ತರಿಗೆ, ಯುವ ಸಾಹಿತಿಗಳಿಗೆ, ವಿದ್ಯಾರ್ಥಿಗಳಿಗೆ ಭಾಗವಹಿಸಲು ಮುಕ್ತ ಅವಕಾಶ ನೀಡಲಾಗಿದೆ. ತಮ್ಮ ಸ್ವರಚಿತ ಕವನ, ಕಥೆಗಳನ್ನು ಓದಬಹುದಾಗಿದೆ. ಸಮ್ಮೇಳನಕ್ಕೆ ಬಂದವರಿಗೆಲ್ಲರಿಗೂ ಕನ್ನಡದ ಶಾಲು, ತರಕಾರಿ ಗಿಡ, ಪುಸ್ತಕ ನೀಡಲಾಗುತ್ತದೆ. ಪರಿಸರ ಪೂರಕ ವಸ್ತುಗಳು, ಖಾದಿ ಬಟ್ಟೆ ಪುಸ್ತಕಗಳ ಮಾರಾಟ ವ್ಯವಸ್ಥೆರುತ್ತದೆ. ಕಟೀಲು ದೇಗುಲ ನಂದಿನೀ ನದಿಯ ದ್ವೀಪದಲ್ಲಿರುವುದು ಜನಜನಿತ. ಇದರ ಪಕ್ಕದ ಮತ್ತೊಂದು ಪುಟ್ಟ ದ್ವೀಪವಾಗಿರುವ ಕುದ್ರು ಕಿಂಡಿ ಅಣೆಕಟ್ಟುಗಳಿಂದಾಗಿ ಅರ್ಧ ಭಾಗ ನೀರಿನಿಂದ ತುಂಬಿ ಆಕರ್ಷಕವಾಗಿದೆ. ಯಾಜ್ಜಿಕ ವೃಕ್ಷಗಳು, ಉದ್ಯಾನವನಗಳಿಂದ ಈ ಕುದ್ರು, ಕಂಗೊಳಿಸುತ್ತಿದ್ದು, ಈ ಪ್ರಕೃತಿ ಸೌಂದರ್ಯದ ಮಧ್ಯೆ ತೆರೆದ ಸಭಾಂಗಣಗಳಲ್ಲಿ ಸಮ್ಮೇಳನ ಆಯೋಜಿಸಲಾಗಿದೆ. ಊಟ ಉಪಾಹಾರ ಸೇರಿದಂತೆ ಎಲ್ಲ ಸಹಕಾರವನ್ನು ಕಟೀಲು ದೇಗುಲ ನೀಡುತ್ತಿದೆ.

