ಕುಶಾಲನಗರ : ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮತ್ತು ಕದಳಿ ವೇದಿಕೆಯ ವತಿಯಿಂದ ‘ಕೊಡಗು ಜಿಲ್ಲಾ ಶರಣ ಸಾಹಿತ್ಯ ಪ್ರಥಮ ಸಮ್ಮೇಳನ -2026’ವನ್ನು ದಿನಾಂಕ 23 ಜೂನ್ 2026ರಂದು ಕುಶಾಲನಗರ ರೈತ ಸಹಕಾರ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 8-30 ಗಂಟೆಗೆ ಧ್ವಜಾರೋಹಣ ಮತ್ತು 9-00 ಗಂಟೆಗೆ ಗಾಯತ್ರಿ ಕಲ್ಯಾಣ ಮಂಟಪದಿಂದ ಹೊರಡುವ ಭವ್ಯ ಮೆರವಣಿಗೆಯಲ್ಲಿ ಕಲಾತಂಡಗಳು, ಪೂರ್ಣಕುಂಭ ಹೊತ್ತ ಮಹಿಳೆಯರು, ಶರಣರ ವೇಷದ ವಿದ್ಯಾರ್ಥಿಗಳು, ಮಾಜಿ ಯೋಧರು ಭಾಗವಹಿಸಲಿದ್ದು, ಅಪರ ಜಿಲ್ಲಾಧಿಕಾರಿ ಡಾ. ಸಹನಾ ಹಾದಿಮನಿ, ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಸುತ್ತೂರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸಾನಿಧ್ಯದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸಮ್ಮೇಳನ ಉದ್ಘಾಟಿಸಲಿದ್ದು, ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದಾರೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ರಾಷ್ಟ್ರಾಧ್ಯಕ್ಷರಾದ ಡಾ. ಸಿ. ಸೋಮಶೇಖರ್ ಇವರು ಅಧ್ಯಕ್ಷತೆ ವಹಿಸಲಿದ್ದು, ಕಿರಿಕೊಡ್ಲಿ ಮಠದ ಪೀಠಾಧ್ಯಕ್ಷರಾದ ಸದಾಶಿವ ಸ್ವಾಮೀಜಿ ಇವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ. ಮಾನ್ಯ ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಇವರು ಸ್ಮರಣ ಸಂಚಿಕೆ ಹಾಗೂ ಕರ್ನಾಟಕ ಮಿನರಲ್ಸ್ ಕಾರ್ಪೊರೇಷನ್ (ಲಿ.) ಕಾರ್ಯ ನಿರ್ವಾಹಕ ನಿರ್ದೇಶಕರಾದ ವಿಶ್ವನಾಥ ಪಿ. ಹಿರೇಮಠ್ ಬಿಡುಗಡೆಗೊಳಿಸಲಿದ್ದು, ಮಾನ್ಯ ಶಾಸಕರಾದ ಡಾ. ಮಂತರಗೌಡ ಇವರು ಆಶಯ ನುಡಿಗಳನ್ನಾಡಲಿದ್ದಾರೆ.
ಅನುಭವ ಮಂಟಪ ವಿಚಾರ ಗೋಷ್ಠಿ 1ರಲ್ಲಿ ‘ವಚನಗಳಲ್ಲಿ ಕಾಯಕ ಪ್ರಜ್ಞೆ’ ಎಂಬ ವಿಷಯದ ಬಗ್ಗೆ ವಿಶ್ರಾಂತ ಪ್ರಾಂಶುಪಾಲರಾದ ಡಾ. ಜೆ. ಸೋಮಣ್ಣ ಮತ್ತು ವಿಚಾರ ಗೋಷ್ಠಿ 2ರಲ್ಲಿ ‘ವಚನಕಾರರಿಂದ ಮುನ್ನೆಲೆಗೆ ಬಂದ ಗೌಪ್ಯ ವಚನಗಾರ್ತಿಯರು’ ಎಂಬ ವಿಷಯದ ಬಗ್ಗೆ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಎಸ್.ಎಂ. ರಜನಿ ಉಪನ್ಯಾಸ ನೀಡಲಿದ್ದಾರೆ. ಕುಮಾರ್ ಚಂದನ್ ಬೇಲೂರು ಮತ್ತು ತಂಡದವರಿಂದ ವಚನ ಗಾಯನ ನಡೆಯಲಿದೆ. ಸಂಜೆ 4-30 ಗಂಟೆಗೆ ಸಮಾರೋಪ ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ ನಡೆಯಲಿದೆ.

