ಮಂಗಳೂರು : ಮಾಂಡ್ ಸೊಭಾಣ್ ಸಂಸ್ಥೆ ಆಯೋಜಿಸಿದ ಸುರ್ ಸೊಭಾಣ್ ಗಾಯನ ಮತ್ತು ಬಾಯ್ಲಾ – ಹೊಪ್ ನೃತ್ಯ ತರಬೇತಿ ಪಡೆದ ಮಕ್ಕಳಿಗೆ ಪ್ರಮಾಣ ಪತ್ರ ವಿತರಣಾ ಸಮಾರಂಭವು ದಿನಾಂಕ 27 ಏಪ್ರಿಲ್ 2025ರಂದು ಶಕ್ತಿನಗರದ ಕಲಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿದ ‘ಉಜ್ವಾಡ್’ ಪಾಕ್ಷಿಕದ ಸಂಪಾದಕರಾದ ವಂ. ಆಲ್ವಿನ್ ಸಿಕ್ವೇರಾ ಮಾತನಾಡಿ “ಬೈಬಲಿನ ನೋಹನ ನೌಕೆಯು ಪ್ರವಾಹದ ಪರಿಸ್ಥಿತಿಯಲ್ಲಿ ಉತ್ತಮವಾದುದನ್ನು ಭವಿಷ್ಯಕ್ಕಾಗಿ ಉಳಿಸಿತು. ಅದೇ ರೀತಿ ಕಲಾಂಗಣ್ ಕೊಂಕಣಿಯ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೊಂಕಣಿಯ ನೋಹನ ನೌಕೆ. ಇಲ್ಲಿಗೆ ಬರುವುದೇ ಒಂದು ಸಂಭ್ರಮ. ಇಲ್ಲಿಯ ಕಾರ್ಯಕ್ರಮಗಳು ಕೊಂಕಣಿ ಉಳಿವಿಗೆ ನಿರಂತರತೆಯನ್ನು ನೀಡಿವೆ. ಇಂದು ನೃತ್ಯ ಹಾಗೂ ಗಾಯನ ತರಬೇತಿ ಪಡೆದ ವಿದ್ಯಾರ್ಥಿಗಳು ಪ್ರಮಾಣ ಪತ್ರ ಪಡೆಯಲಿದ್ದಾರೆ. ಅವರು ಭವಿಷ್ಯದ ಸಾಂಸ್ಕೃತಿಕ ರಾಯಭಾರಿಗಳು. ಈ ಪರಂಪರೆಯನ್ನು ಮುನ್ನಡೆಸಿ’’ ಎಂದು ಹೇಳಿದರು.
ಸುರ್ ಸೊಭಾಣ್ 60 ಗಂಟೆಗಳ ಹಿಂದೂಸ್ತಾನಿ ಸಂಗೀತ ಮತ್ತು ಕೊಂಕಣಿ ಹಾಡುಗಾರಿಕೆ ಬಗ್ಗೆ ತರಬೇತಿಯಾದರೆ, ಬಾಯ್ಲಾ –ಹೊಪ್ ಕೊಂಕಣಿಯ ಬಾಯ್ಲಾ ನೃತ್ಯ ಪ್ರಕಾರ ಮತ್ತು ಪಾಶ್ಚಿಮಾತ್ಯ ಹಿಪ್ ಹೊಪ್ ನೃತ್ಯದ 40 ಗಂಟೆಗಳ ತರಬೇತಿಯಾಗಿತ್ತು. ಸುರ್ ಸೊಭಾಣ್ ವಿದ್ಯಾರ್ಥಿಗಳು ಮೌಖಿಕ್ ಹಾಗೂ ಲಿಖಿತ ಪರೀಕ್ಷೆಯನ್ನು ಎದುರಿಸಿದ್ದರು. ಸುರ್ ಸೊಭಾಣ್ ಗೆ 70 ವಿದ್ಯಾರ್ಥಿಗಳು ಹಾಗೂ ಬಾಯ್ಲಾ ಹೊಪ್ ಗೆ 27 ಯುವಜನರು ಹೆಸರು ನೋಂದಾಯಿಸಿದ್ದರು.
ತರಬೇತುದಾರರಾದ ಶಿಲ್ಪಾ ಕುಟಿನ್ಹಾ ಗಾಯನದ ಬಗ್ಗೆ ಮತ್ತು ರಾಹುಲ್ ಪಿಂಟೊ ನೃತ್ಯದ ತರಬೇತಿ ನಡೆದು ಬಂದ ಬಗೆ ವಿವರಿಸಿದರು. ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ಮಾತನಾಡಿ “ವಿದ್ಯಾರ್ಥಿಗಳು ತಮ್ಮ ಕ್ಷೇತ್ರಗಳಲ್ಲಿ ಇನ್ನೂ ಹೆಚ್ಚಿನ ಕಲಿಕೆಯನ್ನು ಮುಂದುವರಿಸಬೇಕು. ಹಾಗೂ ಶ್ರೇಷ್ಠತೆಯತ್ತ ನಡೆಯಬೇಕು’’ ಎಂದು ಶುಭ ಹಾರೈಸಿದರು. ತಾವು ಕಲಿತ ಒಂದು ಹಾಡು ಹಾಗೂ ಒಂದು ನೃತ್ಯವನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು.
ವಿತೊರಿ ಕಾರ್ಕಳ ಪ್ರಮಾಣ ಪತ್ರ ಪಡೆಯುವ ಮಕ್ಕಳ ಹೆಸರು ವಾಚಿಸಿದರು. ಹಾಗೂ ಜೂನ್ ಮೊದಲ ಭಾನುವಾರದಿಂದ ಆರಂಭವಾಗುವ ಸುರ್ ಸೊಭಾಣ್ ಸಂಗೀತ ತರಬೇತಿಯ ಗ್ರೇಡ್ 1 ಮತ್ತು ಗ್ರೇಡ್ 2 ರ ಬಗ್ಗೆ ಮಾಹಿತಿ ನೀಡಿದರು. ಸಹ ತರಬೇತುದಾರರಾದ ಡಿಯೆಲ್ ಡಿಸೋಜ, ಆಶ್ವಿಲ್ ಕುಲಾಸೊ ಮತ್ತು ಡೆಲಿಶಿಯಾ ಪಿರೇರಾ ಇವರನ್ನು ಗೌರವಿಸಲಾಯಿತು.
ವೇದಿಕೆಯಲ್ಲಿ ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ ಪಿಂಟೊ ಹಾಗೂ ಸುಮೇಳ್ ಸಮನ್ವಯಿ ರೈನಾ ಸಿಕ್ವೇರಾ ಉಪಸ್ಥಿತರಿದ್ದರು. ವಿಕಾಸ್ ಕಲಾಕುಲ್ ನಿರೂಪಿಸಿದರು.
Subscribe to Updates
Get the latest creative news from FooBar about art, design and business.