ಬಂಟ್ವಾಳ : ಮಂಗಳೂರು ಹಾಗೂ ಬಿ.ಸಿ.ರೋಡಿನಲ್ಲಿ ಕಾರ್ಯಾಚರಿಸುತ್ತಿರುವ ಮೈಟ್ ಕಾಲೇಜಿನ ವಿದ್ಯಾರ್ಥಿ ಸಂಘದ ಪ್ರಸ್ತುತಿಯ ಕಲಾವೈಭವವು ಬಿ.ಸಿ.ರೋಡಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ದಿನಾಂಕ 26 ಏಪ್ರಿಲ್ 2025ರಂದು ನಡೆಯಿತು. ಇದೇ ಸಮಾರಂಭದಲ್ಲಿ ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬ, ಯಕ್ಷಗಾನದ ಹಿರಿಯ ಕಲಾವಿದ ಸೂರಿಕುಮೇರು ಗೋವಿಂದ ಭಟ್ ಹಾಗೂ ಪತ್ರಿಕಾ ಛಾಯಾಗ್ರಾಹಕ ಸತೀಶ್ ಇರಾ ಇವರುಗಳಿಗೆ ಗೌರವ ಸಮ್ಮಾನ ನೀಡಲಾಯಿತು.
ರಂಗಕರ್ಮಿ-ನ್ಯಾಯವಾದಿ ಶಶಿರಾಜ್ ರಾವ್ ಕಾವೂರು ಮಾತನಾಡಿ “ಮಕ್ಕಳನ್ನು ಬಾಲ್ಯದಲ್ಲಿಯೇ ಸಾಂಸ್ಕೃತಿಕ, ಸಾಮಾಜಿಕ, ಕ್ರೀಡಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಾಗ ಮುಂದೆ ಅವರ ಆ ಕ್ಷೇತ್ರದಲ್ಲಿ ಸಾಧನೆ ಮಾಡುವ ಜತೆಗೆ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬೆಳೆಯುತ್ತಾರೆ” ಎಂದರು. ಪುತ್ತೂರಿನ ಬಿಲ್ಡರ್ ಅಬ್ದುಲ್ ರೆಹಮಾನ್ ಮಾತನಾಡಿ “ವಿದ್ಯಾರ್ಥಿಗಳು ಒಂದೇ ತಾಯಿಯ ಮಕ್ಕಳ ರೀತಿ ಕಲಿತು ತಮ್ಮ ಸಾಧನೆಯ ಮೂಲಕ ವಿದ್ಯಾ ಸಂಸ್ಥೆ, ಹೆತ್ತವರಿಗೆ ಕೀರ್ತಿ ತರುವ ಜತೆಗೆ ದೇಶದ ಆಸ್ತಿಯಾಗಬೇಕಿದೆ” ಎಂದರು.
ಕಾಲೇಜಿನ ಪ್ರಾಂಶುಪಾಲ ರಾಕೇಶ್ ಕುಮಾರ್ ಮಾತನಾಡಿ “ಮೈಟ್ ಕಾಲೇಜು 2001ರಲ್ಲಿ ಮಂಗಳೂರಿನ ಪಂಪುವೆಲ್‌ನಲ್ಲಿ ಆರಂಭಗೊಂಡಿದ್ದು, ಬಳಿಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲದ ದೃಷ್ಟಿಯಿಂದ 2005ರಲ್ಲಿ ಬಿ.ಸಿ. ರೋಡಿಗೂ ಕಾಲೇಜು ವಿಸ್ತರಣೆಗೊಂಡಿದೆ. ವೃತ್ತಿಪರ ಕೋರ್ಸ್ ಗಳನ್ನು ಬೋಧಿಸುತ್ತಿರುವ ಕಾಲೇಜು ಮುಂಬಯಿನ ಐ.ಟಿ.ಎ.ಸಿ. ಹಾಗೂ ತಿರುವನಂತಪುರದ ಬಿ.ಎಸ್.ಎಸ್. ಬೋರ್ಡ್ ಅಧೀನಕ್ಕೆ ಒಳಪಟ್ಟು ಕಾರ್ಯಾಚರಿಸುತ್ತಿದೆ. ಮುಂದೆ ಬಿ.ಸಿ.ರೋಡಿನಲ್ಲಿ ಸ್ವಂತ ಕಟ್ಟಡ ನಿರ್ಮಾಣಗೊಳ್ಳಲಿದೆ” ಎಂದು ಹೇಳಿದರು.
ವೇದಿಕೆಯಲ್ಲಿ ರಂಗನಟ ಪ್ರಿತೇಶ್ ಕುಮಾರ್, ಉಪಪ್ರಾಂಶುಪಾಲೆ ನಿಶ್ಮಿತಾ ರಾಕೇಶ್, ವಿಭಾಗ ಮುಖ್ಯಸ್ಥರಾದ ಮೊಮ್ಮಹದ್ ಆಶ್ರಫ್, ಐಶ್ವರ್ಯ ಪ್ರಸಾದ್, ವಿದ್ಯಾರ್ಥಿ ನಾಯಕರಾದ ಮಿಥುನ್, ಸಾಂಸ್ಕೃತಿಕ ಕಾರ್ಯದರ್ಶಿ ಬಾಯಿಝ್ ಉಪಸ್ಥಿತರಿದ್ದರು. ಉಪನ್ಯಾಸಕಿಯರಾದ ನಿಶ್ಮಿತಾ ಸ್ವಾಗತಿಸಿ, ಗೀತಾ ವಂದಿಸಿ, ಚೇತನ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.