ಸಾಣೇಹಳ್ಳಿ : ಶ್ರೀ ಶಿವಕುಮಾರ ಕಲಾಸಂಘ (ರಿ.) ಮತ್ತು ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆ ಇದರ ವತಿಯಿಂದ ‘ಮಕ್ಕಳ ಹಬ್ಬ ಸಮಾರೋಪ’ ಸಮಾರಂಭವು ದಿನಾಂಕ 29 ಏಪ್ರಿಲ್ 2025ರಂದು ಸಾಣೇಹಳ್ಳಿಯ ಎಸ್.ಎಸ್. ರಂಗಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು “ಬೇರೆ ಬೇರೆ ಸ್ಥಳಗಳಿಂದ, ವಿಭಿನ್ನ ಸಂಸ್ಕೃತಿಯಿಂದ ಮಕ್ಕಳು ಸಾಣೇಹಳ್ಳಿಗೆ ಬಂದು ಇಲ್ಲಿ ಒಂದಾಗಿ ಶಿಬಿರದಲ್ಲಿ ಸಂತೋಷದಿಂದ ಭಾಗವಹಿಸಿದ್ದು ನಮಗೆ ಖುಷಿ ತಂದಿದೆ. ಈ ಶಿಬಿರದಲ್ಲಿ ಭಾಗವಹಿಸುವ ಮಕ್ಕಳಿಗೆ ಕಾಲ, ಕಾಯಕದ ಪ್ರಜ್ಞೆ ಬೆಳೆಯುವುದು. ಮಕ್ಕಳು ಸೃಷ್ಟಿ ಮಾಡಿಕೊಂಡು ಸುಳ್ಳು ಹೇಳಿ ಆತ್ಮವಂಚನೆ ಮಾಡಿಕೊಳ್ಳದೇ ಸತ್ಯವನ್ನು ಹೇಳಿ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವರು. ಆ ಮೂಲಕ ಗಟ್ಟಿತನ ಕಟ್ಟಿಕೊಟ್ಟಿದೆ. ಮಕ್ಕಳ ಮನಸ್ಸು ಹಸಿಗೋಡೆ ಇದ್ದ ಹಾಗೆ. ಅದಕ್ಕೆ ಏನೇ ಅಂಟಿಸಿದರೂ ತಕ್ಷಣ ಹಿಡಿದುಕೊಳ್ಳುತ್ತದೆ. ಹಾಗೆಯೇ ಏನೇ ವಿಷಯಗಳನ್ನು ಹೇಳಿದರು ತಕ್ಷಣ ಕಲಿಯುವರು. ಇಂತಹ ಮಕ್ಕಳಿಗೆ ಒಳ್ಳೆಯ ಸಂಸ್ಕೃತಿ, ಸಂಸ್ಕಾರಗಳನ್ನು ಬಿತ್ತಿದರೆ ಮನೆ ಆಸ್ತಿಯಾಗುವುದಷ್ಟೇ ಅಲ್ಲ; ರಾಷ್ಟ್ರದ ಆಸ್ತಿಯಾಗುವರು. ನಮ್ಮ ಮಕ್ಕಳು ನಮ್ಮ ಮಾತು ಕೇಳೋದಿಲ್ಲ ಎನ್ನುವ ಆಪಾದನೆಗಳು ಅನೇಕ ಪೋಷಕರು ಹೇಳುವುದುಂಟು. ಆದರೆ ಮಾತುಗಳನ್ನು ಕೇಳುವಂತೆ ಪೋಷಕರು ಇದ್ದಾರೆಯೇ ಎಂದು ಪೋಷಕರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಇಂತಹ ಶಿಬಿರಗಳಿಂದ ಮಕ್ಕಳು ತಮ್ಮ ಬದುಕಿನಲ್ಲಿ ಅವಗುಣಗಳನ್ನು ಕಳೆದುಕೊಂಡು ಸದ್ಗುಣಗಳನ್ನು ಬೆಳೆಸಿಕೊಳ್ಳುವರು. ಹಾಗಾಗಿ ಪೋಷಕರು ಕೊನೆಯ ಪಕ್ಷ ತಮ್ಮ ಮಕ್ಕಳ ಬಾಲ ಲೀಲೆಗಳನ್ನು, ಅವರ ಪ್ರತಿಭೆಯನ್ನು ನೋಡುತ್ತ ನಗುವ ಅವಕಾಶಗಳನ್ನು ಹೆಚ್ಚು ಹೆಚ್ಚು ಸೃಷ್ಟಿಸಿಕೊಳ್ಳಬೇಕು. ಮಕ್ಕಳ ಸ್ವಾತಂತ್ರ್ಯವನ್ನು ಬೇಸಿಗೆಯ ರಜೆ ಕಸಿದುಕೊಳ್ಳಬಾರದು, ಅವರಿಗೆ ಮಾನವೀಯ ಮೌಲ್ಯಗಳನ್ನು, ಸಂಸ್ಕೃತಿಯನ್ನು ಕಲಿಸುವ ಉದ್ದೇಶದಿಂದ ಈ ಮಕ್ಕಳ ಹಬ್ಬವನ್ನು ಕಳೆದ 24 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಮಕ್ಕಳು ಸ್ವತಂತ್ರವಾಗಿ ತಮ್ಮ ಕೆಲಸಗಳನ್ನು ತಾವೇ ಮಾಡಿಕೊಳ್ಳುವುದನ್ನ, ಪರಸ್ಪರ ಪ್ರೀತಿ, ಪ್ರೇಮ, ವಿಶ್ವಾಸ, ಸೌಹಾರ್ಧದಿಂದ ಇರುವುದನ್ನ, ಶಿಸ್ತು, ಸಂಯಮ, ಹೊರ ಜಗತ್ತನ್ನು ಅರಿಯುವ, ಪ್ರಕೃತಿಯನ್ನು ತಿಳಿಯುವ, ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರಹಾಕುವ ಅವಕಾಶವನ್ನು ಇಲ್ಲಿ ನಡೆಯುವ ಮಕ್ಕಳ ಹಬ್ಬದಲ್ಲಿ ಕಲ್ಪಿಸಿಕೊಡಲಾಗಿತ್ತು. ಇದರ ಸದುಪಯೋಗವನ್ನು ಮಕ್ಕಳು ಚೆನ್ನಾಗಿಯೇ ಬಳಸಿಕೊಂಡಿದ್ದಾರೆ. ಕಳೆದ 18 ದಿನಗಳಿಂದ ತಮ್ಮ ಪೋಷಕರನ್ನ, ಅನುಕೂಲಗಳನ್ನ ಬಿಟ್ಟು ಬಂದಿದ್ದರೂ ಯಾವೊಬ್ಬ ಮಗುವೂ ನಾನು ಮನೆಗೆ ಹೋಗಬೇಕು ಎಂದು ಹೇಳದಿರುವುದೇ ಈ ಮಕ್ಕಳ ಹಬ್ಬದ ಶಿಬಿರದ ಯಶಸ್ಸಿಗೆ ಸಾಕ್ಷಿಯಾಗಿದೆ” ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಹೊಳಲ್ಕೆರೆ ಶಾಸಕ ಚಂದ್ರಪ್ಪ ಮಾತನಾಡಿ “ಹದಿನೆಂಟು ದಿನಗಳ ಕಾಲ ಸಾಣೇಹಳ್ಳಿಯಲ್ಲಿ ನಡೆದ ಶಿಬಿರದಲ್ಲಿ ಮಕ್ಕಳು ತಲೆ ಎತ್ತಿ ಬಾಳುವಂಥದ್ದನ್ನು ಕಲಿಸುತ್ತದೆ. ಪಂಡಿತಾರಾಧ್ಯ ಶ್ರೀಗಳು ಏನೇ ಮಾಡಿದರೂ ಅದು ವಿಶೇಷವಾಗಿರುತ್ತದೆ. ರಾಷ್ಟ್ರ ಮಟ್ಟದಲ್ಲಿ ಶಿವಸಂಚಾರದ ನಾಟಕಗಳ ಮೂಲಕ ಸಮಾಜದಲ್ಲಿರುವ ಅಂಕುಡೊಂಕುಗಳನ್ನು ತಿದ್ದುವ ಕೆಲಸ ಮಾಡುತ್ತಾ ಬಂದಿದ್ದಾರೆ. ಇಲ್ಲಿ ನಡೆಯುವ ಕಾರ್ಯಕ್ರಮಗಳ ಮೂಲಕ ಸಂಸ್ಕೃತಿ, ಸಂಸ್ಕಾರ ಕೊಡುವ ಕೆಲಸ ಮಾಡುತ್ತದೆ. ಈ ಶಿಬಿರದಲ್ಲಿ ಭಾಗವಹಿಸಿದ ಮಕ್ಕಳು ತುಂಬ ಪುಣ್ಯವಂತರು. ಈ ಶಿಬಿರದ ಮೂಲಕ ಮಕ್ಕಳಲ್ಲಿರುವ ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಪರಮಪೂಜ್ಯರು ಮಾಡುತ್ತಿದ್ದಾರೆ. ಮಕ್ಳಳು ಟಿವಿ, ಮೊಬೈಲ್‌ಗಳಿಂದ ದೂರ ಇಟ್ಟು ಸುಸಂಸ್ಕೃತರನ್ನಾಗಿ ಬೆಳೆಸಬೇಕು” ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚನ್ನಗಿರಿಯ ಕ್ಷೇತ್ರ ಶಿಕ್ಷಣಾಧಿಕಾರಿ ಜಯ್ಯಪ್ಪ ಮಾತನಾಡಿ “ಇಂದು ಅಂಕ ಗಳಿಕೆಯೇ ಮುಖ್ಯ ಗುರಿಯಾಗಿರುವ ಯಾತ್ರಿಕ ಶಿಕ್ಷಣ ಮಾನವೀಯ ಮೌಲ್ಯಗಳನ್ನು ಮರೆತಿದೆ. ಪೋಷಕರೂ ಸಹ ಅಂಕ ಗಳಿಕೆಯ ದೃಷ್ಟಿಯಿಂದಲೇ ತಮ್ಮ ಮಕ್ಕಳನ್ನು ಬೆಳೆಸುತ್ತಿರುವುದು ದುರದೃಷ್ಟಕರ. ಅವರಿಗೆ ಯಾವ ಪರಿಶ್ರಮದ ಕೆಲಸ ಕಾರ್ಯ ಮಾಡಲು ಅವಕಾಶಗಳನ್ನೇ ಕೊಡುತ್ತಿಲ್ಲ. ಪರಿಶ್ರಮವಿಲ್ಲದೆ ಯಾವ ಯಶಸ್ಸೂ ಲಭ್ಯವಾಗುವುದಿಲ್ಲ. ಇದನ್ನು ಅರ್ಥ ಮಾಡಿಕೊಂಡು ಪೋಷಕರು ಮಕ್ಕಳಿಗೆ ಸೂಕ್ತ ಪರಿಶ್ರಮದ ಕೆಲಸ ಕಾರ್ಯಗಳನ್ನು ನೀಡಬೇಕು. ಪಂಡಿತಾರಾಧ್ಯ ಶ್ರೀಗಳ ಮಾರ್ಗದರ್ಶನಲ್ಲಿ ನಡೆಯುತ್ತಿರುವ ಈ ಶಿಬಿರ ಮಕ್ಕಳಲ್ಲಿ ಒಳ್ಳೆಯ ನಡವಳಿಕೆ, ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುತ್ತದೆ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಿಬಿರಾರ್ಥಿ ಯುಕ್ತ ಮಾತನಾಡಿ “ಇಲ್ಲಿ ಕಲಿಯುವಂಥ ಪ್ರತಿಯೊಂದು ಕಲಿಕೆಗೂ ತಾಳ್ಮೆ ಇರಬೇಕು. ತಾಳ್ಮೆಯಿಂದ ಇದ್ದಾಗ ಮಾತ್ರ ಏನನ್ನಾದರೂ ಕಲಿಯಲು ಸಾಧ್ಯ. ಸಾಣೇಹಳ್ಳಿಯಿಂದ ಏಕಾಗ್ರತೆ, ಧೈರ್ಯ, ನಂಬಿಕೆಯನ್ನು, ಸಂಸ್ಕೃತಿ, ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತಿರುವುದು ದೊಡ್ಡ ಖುಷಿ ತಂದಿದೆ” ಎಂದರು.
ಶಿಬಿರದ ನಿರ್ದೇಶಕ ಕೃಷ್ಣಮೂರ್ತಿ ಎನ್. ತಾಳಿಕಟ್ಟೆ ಮಾತನಾಡಿ “ಪೋಷಕರು ದುಡ್ಡನ್ನು ಗಮನಿಸದೇ ಇಂತಹ ಶಿಬಿರಗಳಿಗೆ ತಮ್ಮ ಮಕ್ಕಳನ್ನು ಕಳಿಸಿ ಅವರ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಮಾಡಿಕೊಡಬೇಕು. ಯುವ ಪೀಳಿಗೆಗೆ ಹೊಸ ಹೊಸ ವಿಚಾರಗಳನ್ನು ಬಿತ್ತುವ ಕೆಲಸವನ್ನು ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ಮಾಡುತ್ತಿದ್ದಾರೆ. ಸಮಾಜ ಹಣದ ಹಿಂದೆ ಓಡ್ತಾ ಇದೆ. ಅದರಿಂದ ಮಕ್ಕಳ ಪ್ರೀತಿ ವಾತ್ಸಲ್ಯವನ್ನು ಕಳೆದುಕೊಂಡಿದೆ. ಪ್ರೀತಿ, ವಾತ್ಸಲ್ಯ, ಕರುಣೆಯನ್ನು ಇಂತಹ ಶಿಬಿರದ ಮೂಲಕ ಮಕ್ಕಳಿಗೆ ಕಲಿಸಿಕೊಡುತ್ತದೆ” ಎಂದರು.
ನಿರ್ದೇಶಕ ಜಗದೀಶ್ ಆರ್. ಮಾತನಾಡಿ “ಈ ಶಿಬಿರದಲ್ಲಿ ಸ್ವತಂತ್ರವಾಗಿ ಬಿಡಬೇಕು. ಆಗ ಮಕ್ಕಳು ಹೊಸ ಆಲೋಚನೆ, ಹೊಸ ದಾರಿಯಲ್ಲಿ ನಡೆಯಲು ಸಾಧ್ಯ. ಇಂತಹ ಶಿಬಿರಗಳಿಂದ ಮಕ್ಕಳ ಮಾನಸಿಕ ವಿಕಸನವಾಗುವುದು. ಮಕ್ಕಳಲ್ಲಿ ವೇದಿಕೆಯ ಭಯವನ್ನು ಹೋಗಲಾಡಿಸುವುದು ಸಾಣೇಹಳ್ಳಿಯ ರಂಗಭೂಮಿ ಮಕ್ಕಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿರುವುದು ಹೆಮ್ಮೆಯ ವಿಷಯ” ಎಂದರು.
ಮಕ್ಕಳ ಹಬ್ಬ ಶಿಬಿರದ ಶಿಬಿರಾರ್ಥಿ ಸಿದ್ಧಾರ್ಥ, ಬನ್ನಿ, ತನೀಶ್‌ಗೌಡ, ರೋಹನ್, ವಚನ್ ಸಾತ್ವಿಕ್, ಚಾರ್ವಿ ಕುಮಾರ್, ದೃವ ಅಭಿಪ್ರಾಯವನ್ನು ಹಂಚಿಕೊಂಡರು. ವೇದಿಕೆಯ ಮೇಲೆ ನಿರ್ದೇಶಕರಾದ ನಂದಿನಿ ಯಾದವ್, ಜಗದೀಶ್ ನೆಗಳೂರು, ರುಚಿತ್ ಕುಮಾರ್, ಚಂದ್ರಮ್ಮ ಆರ್. ಉಪಸ್ಥಿತರಿದ್ದರು. ರಾಜು ಬಿ. ಸ್ವಾಗತಿಸಿ, ಅಣ್ಣಿಗೆರೆಯ ವಿರೂಪಾಕ್ಷಪ್ಪ ನಿರೂಪಿಸಿದರು.
ಬೆಳಗ್ಗೆ ಆರಂಭವಾದ ಮಕ್ಕಳ ಹಬ್ಬದ ಸಮಾರೋಪ ಸಮಾರಂಭದಲ್ಲಿ ಮಕ್ಕಳು ಮೊದಲಿಗೆ ತಾವು ಕಲಿತ 15-20 ವಚನಗಳಲ್ಲಿ 3-4 ವಚನಗಳನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡಿದರು. ಜೊತೆಗೆ ಭಾವಗೀತೆಗಳ ರಾಗಲಹರಿ ನೆರೆದಿದ್ದ ನೂರಾರು ಪ್ರೇಕ್ಷಕರ ಮನಗೆದ್ದಿತು. ನಂತರ ಮಕ್ಕಳು ತಾವು ಕಲಿತ ಯೋಗವನ್ನು ಪ್ರದರ್ಶಿಸಲು ದೇವೇಂದ್ರಪ್ಪ ಇವರ ನಿರ್ದೇಶನದಲ್ಲಿ ಆಕರ್ಷಕ ಯೋಗನೃತ್ಯ ಮಾಡಿದರು. ನಂದಿನಿ ಯಾದವ್ ಎನ್. ಇವರ ನಿರ್ದೇಶನದ ‘ನಮ್ಮ ನಡೆ ಸರ್ವೋದಯದೆಡೆಗೆ’ ವಚನ ನೃತ್ಯ ಪ್ರದರ್ಶನ ಮಾಡಿದರು. ನಂತರ ರುಚಿತ್‌ಕುಮಾರ ನಿರ್ದೇಶನದ ‘ರತ್ನಪಕ್ಷಿ’ ನಾಟಕ ಪ್ರದರ್ಶಿಸಿದರು. ಆಮೇಲೆ ಕೃಷ್ಣಮೂರ್ತಿ ನಿರ್ದೇಶನದ ‘ಕಳ್ಳರ ಸಂತೆ’ ನಾಟಕ ಪ್ರದರ್ಶಿಸಿ ಪ್ರೇಕ್ಷಕರ ಮನ ಗೆದ್ದರು. ಮೂರನೆಯದಾಗಿ ಜಗದೀಶ್ ನಿರ್ದೇಶನದ ‘ರಿಂಗಿನಾಟ’ ಹಾಗೂ ನಾಲ್ಕನೆಯದಾಗಿ ‘ಕೋಳೂರು ಕೊಡಗೂಸು’ ನಾಟಕವನ್ನು ಪ್ರದರ್ಶಿಸಿದರು. ಒಟ್ಟಾರೆ ಬೆಳಗ್ಗೆಯಿಂದ ಸಂಜೆಯವರೆಗೂ ಮಕ್ಕಳ ಹಾಡು, ನೃತ್ಯ, ನಾಟಕ, ಮಾತು, ಕೇಕೆ, ನಗು, ಅಳು ಕೇಳಿ ಬರುತ್ತಿತ್ತು. ಏಪ್ರಿಲ್ 12ರಿಂದ ಆರಂಭವಾದ ಮಕ್ಕಳ ಹಬ್ಬದ ರಾಜ್ಯ ದೂರದೂರದ ಊರುಗಳಿಂದ 87ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.