ಮಲೆನಾಡಿನ ಹೊಸನಗರ ಭಾಗದಲ್ಲಿ “ಯಕ್ಷಗಾನ” ಎಂಬ ವಿಷಯ ಬಂದಾಗ ವಿಶೇಷವಾಗಿ ಗುರುತಿಸಲ್ಪಡುವ ಊರು ನಾಗರಕೊಡಿಗೆ. ಯಕ್ಷಗಾನದ ಜೊತೆಗಿನ ನಾಗರಕೊಡಿಗೆಯ ಈ ಪರಂಪರೆಯ ಮುಂದುವರೆದ ಭಾಗವಾಗಿ ಕಾಣಿಸಿಕೊಳ್ಳುವ ಉದಯೋನ್ಮುಖ ಯುವ ಕಲಾವಿದ ಸಚಿನ್ ಶೆಟ್ಟಿ ನಾಗರಕೊಡಿಗೆ.
ಸಂತೋಷ ಶೆಟ್ಟಿ ಹಾಗೂ ರತ್ನ ದಂಪತಿಗಳ ಸುಪುತ್ರನಾಗಿ 08.09.1998ರಂದು ನಾಗರಕೊಡಿಗೆಯಲ್ಲಿ ಸಚಿನ್ ಶೆಟ್ಟಿಯವರ ಜನನ. ಪ್ರಾಥಮಿಕ ವಿದ್ಯಾಭ್ಯಾಸವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತ್ರಿಣಿವೆಯಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು “ಯು ಕಮಲಬಾಯಿ ಪ್ರೌಢಶಾಲೆ ಕಡಿಯಾಳಿ” ಉಡುಪಿ ಹಾಗೂ ಪದವಿಪೂರ್ವ ಶಿಕ್ಷಣವನ್ನು ಜೂನಿಯರ್ ಕಾಲೇಜು ಹೊಸನಗರ ಇಲ್ಲಿ ಪೂರೈಸಿದರು. ದ್ವಿತೀಯ PUC ಯವರೆಗೆ ವಿಧ್ಯಾಭ್ಯಾಸ.
ಯಕ್ಷಗಾನ ಕಲಿಯುವ ಉದ್ದೇಶದಿಂದ ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ಉಡುಪಿಯಲ್ಲಿ ಸೇರಿ ಅಲ್ಲಿಯ ಶಿವಪ್ರಭಾ ಯಕ್ಷಗಾನ ಕಲಾಕೇಂದ್ರವನ್ನು ಸೇರಿ, ಅಲ್ಲಿ ಯಕ್ಷಗಾನ ಗುರುಗಳಾದ ಬನ್ನಂಜೆ ಸಂಜೀವ ಸುವರ್ಣ ಹಾಗೂ ಐರೋಡಿ ಮಂಜುನಾಥ ಕುಲಾಲ್ ಇವರಿಂದ ಹೆಜ್ಜೆ ಕಲಿತು ಯಕ್ಷಗಾನ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು.
ನಂತರ ಪಿ.ಯು.ಸಿ ಓದುತ್ತಿರುವಾಗ ಕಾಲೇಜು ರಜಾ ದಿನಗಳಲ್ಲಿ ಗುತ್ಯಮ್ಮ ಮೇಳದಲ್ಲಿ ತಿರುಗಾಟ ನಡೆಸಿ ಬಾಲಗೋಪಾಲ, ಪೀಠಿಕಾ ಸ್ತ್ರೀ ವೇಷ, ಕಟ್ಟು ವೇಷಗಳು, ಹೀಗೆ ಸಹ ಪಾತ್ರಗಳನ್ನು ನಿರ್ವಹಿಸುತ್ತಾ.. ರಂಗದ ನಡೆ, ಪಾತ್ರದ ಒಳ ಹೊರ ಅಂಶಗಳನ್ನು ಕಲಿಯುತ್ತಾ ಯಕ್ಷಗಾನದ ಅನುಭವವನ್ನು ಪಡೆದರು.
ನಂತರ ಯಕ್ಷಗಾನವನ್ನೇ ವೃತ್ತಿಯಾಗಿ ಸ್ವೀಕರಿಸಬೇಕೆಂಬ ಆಸೆಯಿಂದ ಪ್ರಸಿದ್ಧ ಹರಕೆ ಮೇಳವಾದ ಶ್ರೀ ಕ್ಷೇತ್ರ ಮಾರಣಕಟ್ಟೆ ಮೇಳಕ್ಕೆ ಪ್ರಥಮವಾಗಿ ವೃತ್ತಿಕಲಾವಿದನಾಗಿ ಸೇರಿದರು. ಅದೇ ಮೇಳದಲ್ಲಿ ಇದ್ದಂತಹ ಶ್ರೀನಿವಾಸ ಭಟ್ಟರ ಸಂಪೂರ್ಣ ಸಹಕಾರ ಹಾಗು ತಮ್ಮ ಪ್ರತಿಭಾ ಸಾಮರ್ಥ್ಯದ ಮೂಲಕ ಬಹು ಬೇಗ ಒಬ್ಬ ಉತ್ತಮ ಕಲಾವಿದನಾಗಿ ರೂಪುಗೊಂಡರು.
ಮಾರಣಕಟ್ಟೆ ಮೇಳದಲ್ಲಿ ಅನೇಕ ಅನುಭವಿ ಕಲಾವಿದರ ಒಡನಾಟ ಮಾರ್ಗದರ್ಶನದ ಜೊತೆಗೆ ಮೇಳದಲ್ಲಿ ಗುರುವಿನ ಸ್ಥಾನದಲ್ಲಿ ತಮ್ಮನ್ನು ತಿದ್ದಿತೀಡಿದವರು ಅರೆಹೊಳೆ ಸಂಜೀವ ಶೆಟ್ಟಿ ಹಾಗೂ ಹೆನ್ನಾಬೈಲ್ ಸಂಜೀವ ಶೆಟ್ಟಿ. ಇವರೆಲ್ಲರ ಸಹಕಾರದಿಂದ ಒಬ್ಬ ಉತ್ತಮ ಸ್ತ್ರೀ ವೇಷಧಾರಿಯಾಗಿ ರೂಪುಗೊಂಡರು. ಪ್ರಮುಖ ಸ್ತ್ರೀ ಪಾತ್ರಗಳಾದ ತ್ರೈಲೋಕ ಸುಂದರಿ, ತಾರಾವಳಿ, ಮೀನಾಕ್ಷಿ, ಪದ್ಮಾವತಿ, ಅಸಿಕೆ, ರಂಭೆ, ಮೋಹಿನಿ, ನೆಚ್ಚಿನ ಪಾತ್ರವಾದ ಮಾರಣಕಟ್ಟೆ ಕ್ಷೇತ್ರ ಮಹಾತ್ಮೆಯ ಮಾಯಾಮಹಿ, ಹಾಗೂ ಅತಿ ಚಿಕ್ಕ ಪ್ರಾಯದಲ್ಲೆ ಸಂಪೂರ್ಣ ದೇವಿ ಮಹಾತ್ಮೆಯ ಮಹಿಷ ಮರ್ದಿನಿ ಹಾಗೂ ಕೌಶಿಕೆ ಪಾತ್ರ ನಿರ್ವಹಿಸಿದ್ದಾರೆ.
ಬಾಲ್ಯದಲ್ಲಿಯೇ ನಾಗರಕೊಡಿಗೆಯಂತಹ ಊರಿನ ಯಕ್ಷಗಾನದ ವಾತಾವರಣದಲ್ಲೇ ಬೆಳೆದ ಇವರು ಊರಿನಲ್ಲಿ ನಡೆಯುತ್ತಿದ್ದ ಆಟಗಳನ್ನು ನೋಡಿ, ಮಹಿಷಾಸುರ, ಚಂಡಮುಂಡ ಮುಂತಾದ ಬಣ್ಣದ ವೇಷಗಳಿಗೆ ಆಕರ್ಷಿತರಾಗಿ ಯಕ್ಷಗಾನದ ಆಸಕ್ತಿ ಬೆಳೆಸಿಕೊಂಡರು. ಈ ಆಸಕ್ತಿಗೆ ದೇವೇಂದ್ರ ನಾಗರಕೊಡಿಗೆಯವರು ಆಸರೆಯಾಗಿ ನಿಂತರು.
ಬದುಕಿನ ಗುರಿಯನ್ನು ನಿರ್ಧರಿಸದೆ ಇರುವಂತಹ ಹುಡುಗಾಟದ ಸಮಯದಲ್ಲೆ ವಿದ್ಯಾಭ್ಯಾಸಕ್ಕೂ ತೊಡಕಾಗಿಸದೆ ಉಡುಪಿಯಲ್ಲಿ ಹೈಸ್ಕೂಲ್ ಜೊತೆಗೆ ಯಕ್ಷಗಾನ ಕೇಂದ್ರಕ್ಕೂ ಸೇರಿಸಿ ಶಾಲಾ ಕಲಿಕೆಯ ಜೊತಗೆ ಕಲಾವಿದನಾಗಿ ಕಾಣುವಲ್ಲಿ ಪ್ರಮುಖ ಪಾತ್ರವಹಿಸಿ, ಇಂದು ಯಕ್ಷಗಾನ ಕ್ಷೇತ್ರದಲ್ಲಿ ದುಡಿದು ಬದುಕು ಕಟ್ಟಿಕೊಂಡು, ನಾಲ್ಕು ಜನರು ಗುರುತಿಸುವ ಹಾಗೆ ಬೆಳೆಯಲು ದೇವೇಂದ್ರ ನಾಗರಕೊಡಿಗೆಯವರ ಪಾತ್ರ ಪ್ರಮುಖವಾಗಿದೆ.
ಯಕ್ಷಗಾನವನ್ನು ವೃತ್ತಿಯಾಗಿ ಪ್ರಾರಂಭಿಸಿ ಆರು ವರ್ಷ ಪೂರೈಸಿರುವ ಇವರು ರಂಗದಲ್ಲಿ ಹೆಸರಾಂತ ಕಲಾವಿದರಾದ ಕೊಂಡದಕುಳಿ, ಶಶಿಕಾಂತ್ ಶೆಟ್ಟಿ, ನೀಲ್ಕೋಡು ಶಂಕರ ಹೆಗಡೆ, ಸುಧೀರ್ ಉಪ್ಪೂರು, ಪ್ರಸನ್ನ ಶೆಟ್ಟಿಗಾರ್, ಗುಂಡಿಬೈಲ್ ಗಣಪತಿ ಭಟ್, ಹೆನ್ನಾಬೈಲ್ ವಿಶ್ವನಾಥ ಪೂಜಾರಿ, ಮಾರಣಕಟ್ಟೆ ಮೂರು ಮೇಳದ ಶ್ರೇಷ್ಠ ಕಲಾವಿದರ ಒಡನಾಟ ಪಡೆದಿರುತ್ತೀರಿ.
ರಂಗಕ್ಕೆ ಹೋಗುವ ಮೊದಲು ಪ್ರಸಂಗದ ಬಗ್ಗೆ ಯಾವ ರೀತಿಯ ತಯಾರಿ ಮಾಡಿಕೊಳ್ಳುತ್ತೀರಿ ನೀವು:-
ಹಿರಿಯ ಕಲಾವಿದರಿಂದ ಕೇಳಿ ಹಿರಿಯ ಕಲಾವಿದರು ಮಾಡಿದ ವಿಡಿಯೋ ಯಾವುದಾದರೂ ಇದ್ದರೆ ನೋಡಿ ರಂಗ ಪ್ರವೇಶ ಮಾಡುತ್ತೇನೆ.
ಯಕ್ಷಗಾನದ ಸ್ಥಿತಿ ಗತಿ ಅಂತ ಹೇಳಿದ್ರೆ ಮೊದಲಿನ ಹಾಗೆ ಇಲ್ಲ, ತುಂಬಾ ಬದಲಾವಣೆ ಆಗಿದೆ. ಮೊದಲು ಕಲೆ ಶ್ರೀಮಂತವಾಗಿತ್ತು ಕಲಾವಿದ ಬಡವನಾಗಿದ್ದ. ಈಗ ಕಲೆಯು ಶ್ರೀಮಂತವಾಗಿದೆ ಕಲಾವಿದನು ಶ್ರೀಮಂತನಾಗಿದ್ದಾನೆ.
ಯಕ್ಷಗಾನದ ಇಂದಿನ ಪ್ರೇಕ್ಷಕರ ಬಗ್ಗೆ ಅಭಿಪ್ರಾಯ:-
ಕಲಾವಿದನಿಗೆ ಕಲಾ ಅಭಿಮಾನಿಗಳು ಖಂಡಿತ ಬೇಕು. ಕಲಾಭಿಮಾನಿಗಳಿಂದಲೇ ಕಲಾವಿದರು. ಬೆಳಗಿನ ತನಕ ಯಕ್ಷಗಾನ ಇದ್ದಾಗ ಕಲಾವಿದನಾದವ ಮೂರು ಜನ ನಾಲ್ಕು ಜನ ಇದ್ದರೂ ಕೂಡ ಅವನ ಕರ್ತವ್ಯ ಸರಿಯಾಗಿ ಮಾಡಿ ಬರಬೇಕು. ಆ ಬೆಳಗಿನ ತನಕ ನೋಡುವಂತಹ 3-4 ಜನವೇ ನಿಜವಾದ ಪ್ರೇಕ್ಷಕರು ಹಾಗೂ ವಿಮರ್ಶಕರಾಗಿರುತ್ತಾರೆ.
ಯಕ್ಷರಂಗದಲ್ಲಿ ನಿಮ್ಮ ಮುಂದಿನ ಯೋಜನೆ:-
ಯಕ್ಷಗಾನದಲ್ಲಿ ನಾನೊಬ್ಬ ಒಳ್ಳೆಯ ಕಲಾವಿದನಾಗಬೇಕೆಂಬ ಆಸೆ ಇದೆ ಹಾಗೂ ನನ್ನ ಹುಟ್ಟೂರು ಆದಂತಹ ಹೊಸನಗರ ತಾಲೂಕು ನಾಗರಕೊಡಿಗೆಯಲ್ಲಿ ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಯಕ್ಷಗಾನ ತರಬೇತಿಯನ್ನು ನೀಡುತ್ತಿದ್ದೇನೆ ಹಾಗೆ ಅದನ್ನು ಮತ್ತೆ ಮುಂದುವರಿಸಬೇಕೆಂಬ ಆಸೆಯು ಇದೆ.
ಸಚಿನ್ ಶೆಟ್ಟಿ ಅವರು ಕಲಾ ಪ್ರದರ್ಶನವನ್ನು ಕರಾವಳಿ ಮಲೆನಾಡು ಭಾಗಗಳಲ್ಲಿ ಮಾತ್ರವಲ್ಲದೆ ಉತ್ತರ ಕರ್ನಾಟಕದ ಭಾಗಗಳು ಹಾಗೂ ಬೆಂಗಳೂರು, ದೆಹಲಿ, ಗೋವ, ಮುಂಬೈ, ಹೈದರಾಬಾದ್, ಪುಣೆ, ಔರಂಗಾಬಾದ್, ಮುಂತಾದ ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನ ನೀಡಿರುತ್ತಾರೆ.
ಯಕ್ಷಗಾನ ಬಿಟ್ಟರೆ ಕ್ರೀಡೆಯಲ್ಲಿ ತುಂಬಾ ಆಸಕ್ತಿ ಇದೆ. ಅದರಲ್ಲೂ ಕ್ರಿಕೆಟ್ ನಲ್ಲಿ ತುಂಬಾ ಆಸಕ್ತಿ ಹಾಗೂ ಪುಸ್ತಕ ಓದುವ ಆಸಕ್ತಿ ಇದೆ.
ಸಚಿನ್ ಶೆಟ್ಟಿ ನಾಗರಕೊಡಿಗೆ ಅವರಿಗೆ ಬೆಂಗಳೂರು, ಬಾಂಬೆ, ಶಿವಮೊಗ್ಗ, ಉಡುಪಿ ಹಾಗು ಹುಟ್ಟೂರಿನಲ್ಲಿ ಸನ್ಮಾನಗಳು ಆಗಿದೆ.
ತಂದೆ, ತಾಯಿಯ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನದಿಂದ ಯಕ್ಷಗಾನ ರಂಗದಲ್ಲಿ ಇಂದು ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳುತ್ತಾರೆ ಸಚಿನ್ ಶೆಟ್ಟಿ ನಾಗರಕೊಡಿಗೆ.
- ಶ್ರವಣ್ ಕಾರಂತ್ ಕೆ.
ಶಕ್ತಿನಗರ, ಮಂಗಳೂರು