Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ನಾಟಕ ವಿಮರ್ಶೆ | ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ – ‘ಶರ್ಮಿಷ್ಠೆ’
    Drama

    ನಾಟಕ ವಿಮರ್ಶೆ | ಪುರಾಣ ಕಥನದ ಅಪೂರ್ವ ರಂಗ ಪ್ರಯೋಗ – ‘ಶರ್ಮಿಷ್ಠೆ’

    May 7, 2025No Comments7 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಏಕವ್ಯಕ್ತಿಯಲ್ಲಿ ಬಹು ಚಹರೆಗಳನ್ನು ಬಿಂಬಿಸುವ ಕಲಾಪ್ರೌಢಿಮೆಯ ಸೃಜನಶೀಲ ಪ್ರಯತ್ನ

    ಬೆಂಗಳೂರಿನ ‘ರಂಗ ಸಂಪದ’ ಕರ್ನಾಟಕದ ರಂಗಭೂಮಿಯನ್ನು ಕಳೆದ ಐದು ದಶಕಗಳಿಂದ ಶ್ರೀಮಂತಗೊಳಿಸುತ್ತಿರುವ ಒಂದು ರಂಗತಂಡ. ಭೌತಿಕವಾಗಿ ಕನ್ನಡ ರಂಗಭೂಮಿಯ ಸಮೃದ್ಧ ಬೆಳವಣಿಗೆ ಮತ್ತು ಕಲಾ ವಿಸ್ತರಣೆಗೆ ಅಪಾರ ಕೊಡುಗೆ ಸಲ್ಲಿಸಿರುವುದೇ ಅಲ್ಲದೆ, ನೂರಾರು ಕಲಾವಿದರನ್ನು ಪೋಷಿಸಿ, ಬೆಳೆಸಿ ಕನ್ನಡ ರಂಗಭೂಮಿಯ ಸೃಜನಶೀಲ ಬೆಳವಣಿಗೆಗೆ ಅಹರ್ನಿಶಿ ದುಡಿಯುತ್ತಿರುವ ಒಂದು ತಂಡ ‘ರಂಗಸಂಪದ’. ಈ ಐದು ದಶಕಗಳಲ್ಲಿ ಹಲವು ವಿಶಿಷ್ಟ ನಾಟಕಗಳನ್ನು ಪ್ರಸ್ತುತಪಡಿಸುವ ಮೂಲಕ, ಹೊಸ ರಂಗಪ್ರಯೋಗಗಳಿಗೆ ಸದಾ ತೆರೆದ ಬಾಗಿಲಾಗಿರುವ ರಂಗಸಂಪದ ಈ ಬಾರಿ, ಭಾರತದ ಪೌರಾಣಿಕ ಜಗತ್ತಿನ ಅಪೂರ್ವ ಕಥನ ‘ಯಯಾತಿ’ಯನ್ನು ಸಂಧಿಸಿದ್ದು, ಈ ಕಥನದಲ್ಲಿ ವಿಶಿಷ್ಟ ಪಾತ್ರಧಾರಿಯಾಗಿ ಓದುಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವ ‘ಶರ್ಮಿಷ್ಠೆ’ಯನ್ನು ರಂಗದ ಮೇಲೆ ತರಲಾಗಿದೆ. ಯಶಸ್ವಿಯಾಗಿ ಎಂದು ಹೇಳಬೇಕಿಲ್ಲ.

    ಈ ಪ್ರಯೋಗದ ವೈಶಿಷ್ಟ್ಯ ಇರುವುದು ‘ಶರ್ಮಿಷ್ಠೆ’ಯ ಕಥನವನ್ನು ಏಕವ್ಯಕ್ತಿ ನಾಟಕದ ಮೂಲಕ ರಂಗದ ಮೇಲೆ ತಂದಿರುವುದು. ಸಾಮಾನ್ಯವಾಗಿ ರಂಗಭೂಮಿಯಲ್ಲೂ ಸಹ ಸಾಂಪ್ರದಾಯಿಕ ಮನಸುಗಳು ಮತ್ತು ಸಮಕಾಲೀನ ಘಟ್ಟದಲ್ಲಿ ಭಿನ್ನ ಆಲೋಚನೆಯ ರಂಗಕರ್ಮಿಗಳು ಏಕವ್ಯಕ್ತಿ ನಾಟಕಗಳನ್ನು ಪ್ರಶ್ನಾತೀತವಾಗಿ ಸ್ವೀಕರಿಸುವುದಿಲ್ಲ. ಪ್ರಶ್ನಾತೀತತೆ ಅಪೇಕ್ಷಣೀಯವೂ ಅಲ್ಲ. ಮೇಲಾಗಿ ಈ ಭಿನ್ನತೆ-ಭಿನ್ನಮತದ ಸೊಗಸು ಸೃಜನಶೀಲ ರಂಗಭೂಮಿಯನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತಲೇ ಹೋಗುತ್ತದೆ. ಏಕೆಂದರೆ ಏಕವ್ಯಕ್ತಿ ನಾಟಕ ಎಂಬ ಹೊಸ ಪ್ರಕಾರದ ಪ್ರಯೋಗಗಳು ಕನ್ನಡ ರಂಗಭೂಮಿಗೆ ತಡವಾಗಿ ತೆರೆದುಕೊಂಡರೂ ಅದನ್ನು ರಂಗಾಸಕ್ತರಿಗೆ ಮತ್ತು ವಿಮರ್ಶಕರಿಗೆ ಪರಿಣಾಮಕಾರಿಯಾಗಿ ಮುಟ್ಟಿಸುವ ಪ್ರಯತ್ನಗಳು ನಮ್ಮಲ್ಲಿ ನಡೆದಿವೆ. ಈ ಸರಣಿಗೆ ಇತ್ತೀಚಿನ ಸೇರ್ಪಡೆ, ಹಿರಿಯ ರಂಗ ಕಲಾವಿದೆ ಉಮಾಶ್ರೀ ನಟಿಸಿರುವ ‘ರಂಗ ಸಂಪದ’ ತಂಡದ ‘ಶರ್ಮಿಷ್ಠೆ’.

    ಪೌರಾಣಿಕ ನೆಲೆಯ ಕಥಾ ಹಂದರ :
    ಭಾರತದಲ್ಲಷ್ಟೇ ಅಲ್ಲ ಯಾವುದೇ ದೇಶ-ಸಂಸ್ಕೃತಿಯಲ್ಲಾದರೂ ಪುರಾಣ ಕಥನಗಳ ಮೂಲ ಏನೇ ಇದ್ದರೂ, ಸಮಕಾಲೀನ ಯುಗದಲ್ಲಿ ಅದು ಅಮೂರ್ತ ನೆಲೆಯಲ್ಲೇ ಬರಹ ರೂಪದಲ್ಲಿ ವ್ಯಕ್ತವಾಗುತ್ತವೆ. ಈ ಅಮೂರ್ತತೆಯೇ ಆಧುನಿಕ ಯುಗದ ಸಾಹಿತ್ಯ ಮತ್ತು ರಂಗಭೂಮಿಯ ಸೃಜನಶೀಲ ವಿಕಸನಕ್ಕೆ ಪ್ರಧಾನ ಶಕ್ತಿಯೂ ಆಗಿರುತ್ತದೆ. ಈ ಅಮೂರ್ತತೆಯನ್ನು ಬಳಸಿಕೊಳ್ಳುವ ಹಾದಿಯಲ್ಲಿ ಮೂಲ ಕಥನಕ್ಕೇನೂ ಚ್ಯುತಿ ಉಂಟಾಗುವುದಿಲ್ಲ. ಆದರೆ ಸಮಕಾಲೀನಗೊಳಿಸುವ ಮೂಲಕ ಅದರೊಳಗಿನ ಭಾವ ಮತ್ತು ಅಂತಃಸತ್ವವನ್ನು ಮತ್ತಷ್ಟು ತೀಕ್ಷ್ಣಗೊಳಿಸುವ ಸಾಧ್ಯತೆಗಳಿರುತ್ತವೆ. ಕನ್ನಡದಲ್ಲಿ ವಿ.ಎಂ. ಇನಾಂದಾರ್‌ ಅವರ ಅನುವಾದದ ಮೂಲಕ ಪರಿಚಯವಾದ ವಿ.ಎಸ್.‌ ಖಾಂಡೇಕರ್‌ ಅವರ ಕಾದಂಬರಿ ‘ಯಯಾತಿ’ ಇಂತಹ ಒಂದು ಅಪೂರ್ವ ಮೇರುಕೃತಿ.

    ಈ ಕಥನದಲ್ಲಿ ಓದುಗರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಬಿಡುವ ಪಾತ್ರಗಳು ಸ್ವತಃ ಯಯಾತಿ, ಕಚ, ದೇವಯಾನಿ ಮತ್ತು ವಿಶೇಷವಾಗಿ ಶರ್ಮಿಷ್ಠೆ. ಮಹಾಭಾರತ ಪೂರ್ವದ ಪುರಾಣ ಕಥನ ‘ಯಯಾತಿ’ಯ ಪ್ರಧಾನ ಪಾತ್ರವಾದ ವೃಷ ಪರ್ವ ರಾಜನ ಮಗಳು, ಯಯಾತಿ, ದೊರೆಯಿಂದ ಪುತ್ರರನ್ನು ಪಡೆಯುವ ದಾಸಿ, ಆದಿಪರ್ವದ ಪುರು ಮಹಾರಾಜನ ತಾಯಿ, ರಾಕ್ಷಸಗುರು ಶುಕ್ರಾಚಾರ್ಯನ ಮಗಳು ದೇವಯಾನಿಯ ಬಾಲ್ಯದ ಗೆಳತಿ ಮತ್ತು ಆನಂತರದ ದಾಸಿ, ಶರ್ಮಿಷ್ಠೆ ಹಲವು ಕಾರಣಗಳಿಗಾಗಿ 21ನೇ ಶತಮಾನದಲ್ಲೂ ನಿರ್ವಚಿಸಬಹುದಾದ ಒಬ್ಬ ಮಹಿಳೆಯಾಗಿ ಕಾಣುತ್ತಾಳೆ. ಮಹಿಳೆಯ ಒಳಬೇಗುದಿ, ಭಾವನೆಗಳ ಅಂತರ್‌ಕಲಹ, ಸಾಂದರ್ಭಿಕ ಸಂದಿಗ್ಧತೆಗಳು ಮತ್ತು ಪಿತೃಪ್ರಧಾನ ವ್ಯವಸ್ಥೆಯಿಂದ ಅನುಭವಿಸುವ ಅಸಹಾಯಕತೆ, ಇವೆಲ್ಲವನ್ನೂ ಈ ಒಂದು ಪಾತ್ರದಲ್ಲಿ ಶೋಧಿಸಬಹುದು.

    ನಮ್ಮ ನಡುವಿನ ಸೃಜನಶೀಲ ನಾಟಕಕಾರ ಬೇಲೂರು ರಘುನಂದನ್‌ ಶರ್ಮಿಷ್ಠೆಯ ಪಾತ್ರದ ಮೂಲಕ ಇಡೀ ಕಥಾವಸ್ತುವನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಕನ್ನಡದ ಖ್ಯಾತ ರಂಗ ನರ್ದೇಸಶಕ ಚಿದಂಬರರಾವ್‌ ಜಂಬೆ ಇದನ್ನು ನೀರ್ದೆಶಿಸಿ ರಂಗವಿನ್ಯಾಸ ನೀಡಿದ್ದಾರೆ. ಎಲ್ಲಕ್ಕಿಂತಲೂ ಮಿಗಿಲಾಗಿ ಉಮಾಶ್ರೀ ಇಡೀ ನಾಟಕಕ್ಕೆ ಜೀವ ಕಳೆ ತುಂಬಿದ್ದಾರೆ. ‘ಯಯಾತಿ’ ಕತೆಯಲ್ಲಿ ಶರ್ಮಿಷ್ಠೆಯ ಪಾತ್ರವೇ ಅತ್ಯಂತ ಸಂಕೀರ್ಣವಾದದ್ದು. ಅಮರತ್ವದ ಮಹತ್ವಾಕಾಂಕ್ಷೆ ಒಬ್ಬ ವ್ಯಕ್ತಿಯನ್ನು ಎಂತಹ ಪಾಪಕೂಪಕ್ಕೆ ದೂಡುತ್ತದೆ ಎನ್ನುವುದಕ್ಕೆ ಯಯಾತಿ ಸಾಕ್ಷಿಯಾದರೆ, ತಾರುಣ್ಯವನ್ನು ಬಲಿಕೊಟ್ಟು ವೃದ್ಧಾಪ್ಯಕ್ಕೆ ಒಡ್ಡಿಕೊಳ್ಳುವ ಪುರು ತ್ಯಾಗ-ಕರ್ತವ್ಯ ಪ್ರಜ್ಞೆಯ ಸಂಕೇತವಾಗಿ ನಿಲ್ಲುತ್ತಾನೆ. ಇವರಿಬ್ಬರ ನಡುವೆ ಅಪರಾಧಿ ಪ್ರಜ್ಞೆಗೆ ಶರಣಾಗಿ, ತನ್ನ ಬಾಲ್ಯದ ಒಡನಾಡಿಗೇ ದಾಸಿಯಾಗಲು ಮುಂದಾಗುವ ದೈತ್ಯ ರಾಜನ ಮಗಳು ಶರ್ಮಿಷ್ಠೆ. ಮಹಿಳೆಯ ತಲ್ಲಣ ತುಮುಲಗಳಿಗೆ ಸಾಕ್ಷಿಯಾಗಿ, ತಾಯ್ಮಮತೆ ಮತ್ತು ಸಹಜ ಪುತ್ರ ವ್ಯಾಮೋಹವನ್ನೂ ದಾಟಿ ತನ್ನ ವ್ಯಕ್ತಿನಿಷ್ಠೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಮಗನ ಅಕಾಲಿಕ ವೃದ್ಧಾಪ್ಯಕ್ಕೂ ಸಾಕ್ಷಿಯಾಗುವ ತಾಯಿಯಾಗಿ ಶರ್ಮಿಷ್ಠೆ ಈ ನಾಟಕದ ಕೇಂದ್ರ ಬಿಂದುವಾಗುತ್ತಾಳೆ.

    ಇಲ್ಲಿ ಶರ್ಮಿಷ್ಠೆ ಯಯಾತಿಯ ತಾರುಣ್ಯದ ಭ್ರಮೆಯ ಹಿಂದಿನ ಲೋಭ, ದುರಾಸೆಯನ್ನು ಪ್ರಶ್ನಿಸುವ ದಿಟ್ಟ ಮಹಿಳೆಯಾಗಿ ಒಂದೆಡೆ ಕಂಡರೆ ಮತ್ತೊಂದೆಡೆ ಪುತ್ರನ ವಾರ್ಧಕ್ಯದಿಂದ ಸಂಕಟಕ್ಕೀಡಾಗುವ ಹೆತ್ತೊಡಲ ಅಭಿವ್ಯಕ್ತಿಯಾಗಿಯೂ ಕಾಣುತ್ತಾಳೆ. ಈ ನಡುವೆ ಪ್ರಭುತ್ವ ರಾಜಕಾರಣದ ಅತಿರೇಕಗಳು, ರಾಜಪ್ರಭುತ್ವದ ಯಜಮಾನಿಕೆ ಮತ್ತು ಮಹಿಳೆಯ ಮೇಲೆ ಹೇರಲ್ಪಡುವ ವಸ್ತ್ರ ಸಂಹಿತೆಯೇ ಮೊದಲಾದ ಪುರುಷಾಧಿಪತ್ಯದ ಕಟ್ಟಳೆಗಳು ಇವೆಲ್ಲವನ್ನೂ ಏಕಾಂಗಿಯಾಗಿ ಪ್ರತಿರೋಧಿಸಿ, ಪ್ರಶ್ನಿಸುತ್ತಲೇ, ಮನುಷ್ಯನ ಬದುಕಿನ ಸಾರ್ಥಕತೆಯನ್ನು ವಾಸ್ತವಿಕ ನೆಲೆಯಲ್ಲಿ ಬಿಂಬಿಸುವ ಮೂಲಕ ಭ್ರಮಾಧೀನ ಯಯಾತಿ ಮತ್ತು ಪುರು ಇಬ್ಬರ ನಡುವಿನ ಹುಸಿ ಜಗತ್ತನ್ನು ಬೆತ್ತಲೆಗೊಳಿಸಿ, ಪುರುವನ್ನು ಬಂಧಮುಕ್ತಳನ್ನಾಗಿ ಮಾಡಿ ಕೊನೆಗೆ ರಾಜಮಾತೆಯ ಪಟ್ಟವನ್ನೂ ಸ್ವೀಕರಿಸದೆ ವಾನಪ್ರಸ್ಥಕ್ಕೆ ತೆರಳುವ ಸ್ವಾಭಿಮಾನಿ ಮಹಿಳೆಯಾಗಿ ಶರ್ಮಿಷ್ಠೆ ಸಮಕಾಲೀನ ಪ್ರೇಕ್ಷಕರ ನಡುವೆ ನಿಲ್ಲುತ್ತಾಳೆ.

    ರಂಗ ರೂಪದ ವೈಶಿಷ್ಟ್ಯಗಳು :
    ‘ಶರ್ಮಿಷ್ಠೆ’ಯ ರಂಗರೂಪದಲ್ಲಿ ಕೆಲವು ದೃಶ್ಯಗಳು, ಸಂಭಾಷಣೆಗಳು ಸಮಕಾಲೀನತೆಯನ್ನೂ ಪಡೆದುಕೊಂಡಿರುವುದು ಪ್ರಶಂಸಾರ್ಹ. ಪುರು ವಾರ್ಧಕ್ಯವನ್ನು ಆಯ್ಕೆ ಮಾಡಿದಾಗ ಶರ್ಮಿಷ್ಠೆ, ತನ್ನ ಪುತ್ರ ಅವನ ಪತ್ನಿ ಚಿತ್ರಲೇಖೆಯ ಬಗ್ಗೆ ಯೋಚಿಸಲೂ ಇಲ್ಲವಲ್ಲಾ ಎಂದು ದೂಷಿಸುತ್ತಾ “ನನ್ನನ್ನೂ ಚಿತ್ರಲೇಖೆಯನ್ನೂ ಕುಸಿಯುವಂತೆ ಮಾಡಿಬಿಟ್ಟೆಯಲ್ಲಾ” ಎಂದು ಪುರುವನ್ನು ದೂಷಿಸುವ ಮೂಲಕ ಪುರುಷಾಳ್ವಿಕೆಯ ಮನಸ್ಥಿತಿಯನ್ನು ಪ್ರಶ್ನಿಸುತ್ತಾ, ತನ್ನ ಅಸಹಾಯಕತೆಗಾಗಿ ಪರಿತಪಿಸುವುದು, ವಸ್ತ್ರಸಂಹಿತೆಯನ್ನು ಪ್ರಭುತ್ವದ, ಪಿತೃಪ್ರಧಾನ ಯಜಮಾನಿಕೆಯ ಹೇರಿಕೆಯಾಗಿ ಕಾಣುವ ಸಂಭಾಷಣೆಗಳು, “ಗಂಡನಾದರೇನು ಮಗನಾದರೇನು ನೀವಿಬ್ಬರೂ ಒಂದು ಹೆಣ್ಣಿನ ಅಂತರಂಗವನ್ನು ಪ್ರವೇಶಿಸಲು ಸೋತುಬಿಟ್ಟಿರಿ” ಎಂದು ಪುರುಷಾಧಿಪತ್ಯವನ್ನು ಪ್ರಶ್ನಿಸುವುದು, ದಾಸಿಯಾಗಿರುವ ಶರ್ಮಿಷ್ಠೆಯನ್ನು ಒಬ್ಬ ಯತಿ ತನ್ನ ಕಾಮತೃಷೆಗಾಗಿ ಬಳಸಿಕೊಳ್ಳುವ ಪ್ರಸಂಗವೂ ಸಹ ವರ್ತಮಾನವನ್ನು ಬಿಂಬಿಸುತ್ತದೆ. ನಾಟಕದ ಕಥಾವಸ್ತು ಪೌರಾಣಿಕವೇ ಆದರೂ ಅದನ್ನು ಸಮಕಾಲೀನಗೊಳಿಸುವ ಕೆಲವು ಪ್ರಯತ್ನಗಳು ಇಲ್ಲಿವೆ.

    ಪಾತ್ರಗಳ ನಡುವಿನ ವಿರೋಧಾಭಾಸ ಮತ್ತು ಅಂತರಂಗದ ವೈರುಧ್ಯಗಳ ಸಂಘರ್ಷ ಇಡೀ ನಾಟಕವನ್ನು ಆವರಿಸುತ್ತದೆ. ಏಕವ್ಯಕ್ತಿ ನಾಟಕದಲ್ಲಿ ಎಲ್ಲ ಪಾತ್ರಗಳಲ್ಲೂ ನಸುಳುವ ಈ ಲಕ್ಷಣಗಳನ್ನು ಮತ್ತು ಅಭಿವ್ಯಕ್ತಿಗಳ ತಂತುಗಳನ್ನು ತಮ್ಮ ಅಮೋಘ ಭಾವಾಭಿನಯ ಮತ್ತು ಆಂಗಿಕ ಅಭಿವ್ಯಕ್ತಿಯ ಮೂಲಕ, ಯಯಾತಿ, ರಾಜಮಾತೆ, ಕಚದೇವ, ದೇವಯಾನಿ ಮತ್ತು ಸ್ವತಃ ಶರ್ಮಿಷ್ಠೆ ಈ ಎಲ್ಲ ಪಾತ್ರಗಳಲ್ಲೂ ಪರಕಾಯ ಪ್ರವೇಶ ಮಾಡುವ ಉಮಾಶ್ರೀ ಅವರ ಅಮೋಘ ಅಭಿನಯ ಕಲೆಗೆ ಹ್ಯಾಟ್ಸ್‌ ಆಫ್‌ ಹೇಳಲೇಬೇಕು. ದೇಹಭಾಷೆ ಮತ್ತು ಸಂಭಾಷಣೆಯ ನಡುವೆ ಕಾಣುವ ಏರಿಳಿತಗಳು ಮತ್ತು ಕಣ್ಣುಮಿಟಿಕಿಸುವಷ್ಟರಲ್ಲಿ ಬದಲಾಗುವ ಪಾತ್ರಗಳಲ್ಲಿ ತಮ್ಮನ್ನು ತಾವು ಇಳಿಸಿಕೊಂಡು, ತನ್ಮಯತೆ-ತಲ್ಲೀನತೆಗೆ ಸಾಕ್ಷಿಯಾಗಿ ನಿಲ್ಲುವುದು ಉಮಾಶ್ರೀ ಅವರ ಅಭಿನಯ ಸಾಮರ್ಥ್ಯ ಮತ್ತು ಬತ್ತದ ಕಲಾಚೈತನ್ಯಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ.

    ಏಕವ್ಯಕ್ತಿ ನಾಟಕಗಳಲ್ಲಿ ಸವಾಲಾಗಿ ಪರಿಣಮಿಸುವುದು ಧ್ವನಿಯ ಏರಿಳಿತ, ಮೌಖಿಕ ಹಾವಭಾವ, ದೇಹಭಾಷೆ ಮತ್ತು ಸಂವಹನದ ಶೈಲಿಯ ಕ್ಷಣಮಾತ್ರದ ಮನ್ವಂತರಗಳು. ತಾವು ನಿರ್ವಹಿಸುವ ಐದಾರು ಪಾತ್ರಗಳಲ್ಲಿ ವ್ಯಕ್ತಿ ವೈಶಿಷ್ಟ್ಯಗಳಿಗನುಗುಣವಾಗಿ, ಕ್ಷಣಮಾತ್ರದಲ್ಲಿ ತಮ್ಮ ಭಾವಾಭಿನಯವನ್ನು ಮತ್ತೊಂದು ಉತ್ತುಂಗಕ್ಕೆ ಕೊಂಡೊಯ್ಯುವ ಉಮಾಶ್ರೀ ಅವರ ಮೇರು ಪ್ರತಿಭೆ ಮತ್ತು ರಂಗಾಭಿವ್ಯಕ್ತಿಯೇ ಇಡೀ ನಾಟಕದ ಜೀವಾಳ. ಪುರಾಣದ ಶರ್ಮಿಷ್ಠೆಯನ್ನು ಆಧುನಿಕ ನಾಗರಿಕ ಪ್ರೇಕ್ಷಕರ ನಡುವೆ ತಂದು ನಿಲ್ಲಿಸುವಲ್ಲಿ ಯಶಸ್ಸು ಕಾಣುವುದೇ ಆದರೆ ಅದು ಉಮಾಶ್ರೀ ಅವರ ಅಭಿನಯದ ಮೂಲಕ ಎಂದು ನಿಸ್ಸಂಶಯವಾಗಿ ಹೇಳಬಹುದು. ಪ್ರೇಕ್ಷಕರನ್ನು ಮಂತ್ರಮುಗ್ಧರಾಗಿ ಕೂರಿಸುವ ಉಮಾಶ್ರೀ ಬಾಲ್ಯದ ಶರ್ಮಿಷ್ಠೆಯ ಲವಲವಿಕೆಯಿಂದ ದಾಸಿಯಾಗಿ ಅವಳು ಅನುಭವಿಸುವ ತಲ್ಲಣಗಳನ್ನು ಮನಮುಟ್ಟುವಂತೆ ಅಭಿವ್ಯಕ್ತಿಸುತ್ತಲೇ, ಯಯಾತಿ ಪಾಪಪ್ರಜ್ಞೆಯಿಂದ ಪರಿತಪಿಸುವ ದೃಶ್ಯದಲ್ಲಿ, ಶರ್ಮಿಷ್ಠೆ ತಂದೆಯ ಓಲೆಯನ್ನು ಕಂಡು ಭಾವೋದ್ವೇಗಕ್ಕೊಳಗಾಗುವ ದೃಶ್ಯದಲ್ಲಿ ಅವರ ಅಭಿನಯಕ್ಕೆ ಸಾಟಿಯೇ ಇಲ್ಲ ಎನ್ನುವಂತೆ ತಮ್ಮ ಕಲಾಪ್ರೌಢಿಮೆಯನ್ನು ಹೊರಹಾಕುತ್ತಾರೆ.

    ಆದರೆ ನಾಟಕ ಅಂತಿಮ ಘಟ್ಟ ತಲುಪುತ್ತಿದ್ದಂತೆಲ್ಲಾ ವಿವಿಧ ಪಾತ್ರಗಳು ಒಂದೊರೊಳಗೊಂದಾಗಿ, ಮತ್ತೆ ಬೇರಾಗಿ ಮತ್ತೆ ಮುಖಾಮುಖಿಯಾಗಿ ಕಾಣಿಸಿಕೊಳ್ಳುವುದರಿಂದ, ಸಂಭಾಷಣೆಗಳು ಮತ್ತು ಆಂಗಿಕ ಅಭಿನಯವೂ ಸಹ ಸಂಕೀರ್ಣವಾಗುತ್ತಾ ಹೋಗುತ್ತದೆ. ಬಹುಶಃ ಕಾಲಮಿತಿಯೂ ಈ ನಿರೂಪಣಾ ಶೈಲಿಗೆ ಕಾರಣವಾಗಿರಬಹುದು. ನೇಪಥ್ಯದ ನಿರೂಪಣೆಯನ್ನು ಬಳಸಿದ್ದಲ್ಲಿ, ಸನ್ನಿವೇಶಗಳ ಕ್ಷಿಪ್ರ ಬದಲಾವಣೆಯಲ್ಲಿ ಕಲಾವಿದೆಗೆ ಕೊಂಚ ನೆರವಾಗಬಹುದಿತ್ತೇನೋ ಎನಿಸುತ್ತದೆ. ಇದು ರಂಗವಿನ್ಯಾಸ-ನಿರ್ದೇಶಕರ ವಿವೇಚನೆಗೆ ಬಿಟ್ಟ ವಿಚಾರ. ಪ್ರೇಕ್ಷಕರು ಅತ್ತಿತ್ತ ಅಲುಗಾಡದಂತೆ ನೋಡುವುದು ಅನಿವಾರ್ಯವೇ ಆಗಿಬಿಡುತ್ತದೆ. ಆದರೆ ಸಾಮಾನ್ಯ ವೀಕ್ಷಕರಿಗೆ ಈ ಯಾವುದೇ ಸೂಕ್ಷ್ಮಗಳು ಅರಿವಿಗೆ ಬಾರದಂತೆ ಉಮಾಶ್ರೀ ತಮ್ಮ ಪಾತ್ರ ನಿರ್ವಹಣೆ ಮಾಡಿರುವುದು ಆಕೆಯೊಳಗಿನ ದೈತ್ಯ ಕಲಾಪ್ರತಿಭೆಗೆ ಸಾಕ್ಷಿ. ಒಡಲಾಳದ ಸಾಕವ್ವ ದಶಕಗಳ ನಂತರವೂ ರಂಗಾಸಕ್ತರ ಮನಸ್ಸಿನಲ್ಲಿ ಅಕ್ಷರಶಃ ಸಾಕವ್ವಳಾಗಿಯೇ ಉಳಿದುಕೊಂಡಿದ್ದಾಳೆ. ಆದರೆ ಶರ್ಮಿಷ್ಠೆ ಹಾಗೆ ಉಳಿದುಕೊಳ್ಳಬಹುದೇ ? ಇಲ್ಲಿ ಶರ್ಮಿಷ್ಠೆಯನ್ನು ತನ್ನೊಳಗಿಳಿಸಿಕೊಂಡು ಪೌರಾಣಿಕ ವ್ಯಕ್ತಿಗೆ ಜೀವ ತುಂಬಿರುವ ಉಮಾಶ್ರೀ ನೆನಪಿನಲ್ಲಿ ಉಳಿಯುತ್ತಾರೆ. ಸೂಕ್ಷ್ಮ ರಂಗಾಸಕ್ತರು ಇದನ್ನು ಗಮನಿಸಿರಲೂ ಸಾಧ್ಯ.

    ಸಮಕಾಲೀನ ನೆಲೆಯ ಒಳನೋಟ :
    ಬೇಲೂರು ರಘುನಂದನ ಅವರ ಮೂಲ ನಾಟಕದ (ಇದರ ಮೂಲ ಪ್ರತಿಯನ್ನು ನಾನು ಓದಲು ಸಿಕ್ಕಿಲ್ಲ ಎಂದು ಪ್ರಾಮಾಣಿಕವಾಗಿ ಹೇಳಬಯಸುತ್ತೇನೆ) ಅಂತರ್‌ಭಾವ ಮತ್ತು ಅಂತಃಸತ್ವಕ್ಕೆ ಚ್ಯುತಿ ಬಾರದಂತೆ ಹಿರಿಯ ರಂಗಕರ್ಮಿ ಚಿದಂಬರ ರಾವ್‌ ಜಂಬೆ ವಿನ್ಯಾಸಗೊಳಿಸಿ ನಿರ್ದೇಶಿಸಿದ್ದಾರೆ ಎಂದು ಭಾವಿಸಬಹುದು. ಕೆಲವು ಸಂಭಾಷಣೆಗಳಲ್ಲಿ ಶರ್ಮಿಷ್ಠೆ ಸಮಕಾಲೀನ ಮಹಿಳೆಯ ಒಳದನಿಯನ್ನು ಬಿಂಬಿಸುವುದನ್ನು ಗುರುತಿಸಬಹುದಾದರೂ, ಈ ಕಥನವನ್ನು ಇನ್ನೂ ಹೆಚ್ಚು ಸಮಕಾಲೀನಗೊಳಿಸುವ ಸಾಧ್ಯತೆಗಳನ್ನೂ ಪರಿಶೀಲಿಸಬಹುದು. ಉದಾಹರಣೆಗೆ ತನ್ನ ತಪ್ಪಿನ ಅರಿವಾಗಿ, ಪ್ರಾಯಶ್ಚಿತ್ತದ ರೂಪದಲ್ಲಿ ದೇವಯಾನಿಯ ದಾಸಿಯಾಗಿರಲು ಸ್ವಯಂ ತಾನೇ ನಿರ್ಧರಿಸುವ ನಾಟಕದ ಶರ್ಮಿಷ್ಠೆ ಇವತ್ತಿನ ಯುಗದಲ್ಲಿ ಭಿನ್ನವಾಗಿ ಕಾಣಬಹುದಲ್ಲವೇ ?

    ಅಪರಾಧಿ ಪ್ರಜ್ಞೆ ಮತ್ತು ಪ್ರಾಯಶ್ಚಿತ್ತದ ಭಾವನೆಗಳಿಂದಾಚೆ ನೋಡಿದಾಗ, ಜೀವನಪರ್ಯಂತ ದಾಸಿಯಾಗುವ ನಿರ್ಧಾರ ಮಹಿಳೆಯ ಮಾನಸಿಕ ಸ್ಥೈರ್ಯವನ್ನೇ ಪ್ರಶ್ನಿಸುತ್ತದೆಯಲ್ಲದೆ, ಆಧುನಿಕ ಯುಗದ ಸ್ತ್ರೀವಾದಿ ನೆಲೆಯಲ್ಲಿ ನೋಡಿದಾಗ ಆ ಅಸಹಾಯಕತೆ ಮತ್ತು ಅಧೀನತೆಗೊಳಪಡುವ ನಿರ್ಧಾರ ವರ್ತಮಾನದ ತಲೆಮಾರಿಗೆ ಹೊಸ ಹೊಳಹನ್ನು ನೀಡುವುದಿಲ್ಲ. ಹಾಗೆಯೇ ತನ್ನ ಪುತ್ರ ಪುರು ರಾಜ್ಯವನ್ನಾಳುವ ಅಧಿಕಾರ ಪಡೆದುಕೊಂಡರೂ, ತಾನು ರಾಜಮಾತೆಯಾಗಲು ಒಪ್ಪದೆ ವಾನಪ್ರಸ್ತಕ್ಕೆ ಹೋಗಲು ನಿರ್ಧರಿಸುವ ಶರ್ಮಿಷ್ಠೆ ಅದೇ ತ್ಯಾಗಮಯಿ ಹೆಣ್ಣಾಗಿ ಕಾಣುತ್ತಾಳೆ. ತನ್ನ ಹಕ್ಕನ್ನೂ ಪ್ರತಿಪಾದಿಸಲೊಪ್ಪದ ಹೆಣ್ಣಿನ ತ್ಯಾಗದ ಮನೋಭಾವ, ಭಾವನಾತ್ಮಕ ನೆಲೆಯಲ್ಲಿ ಇಂದಿಗೂ ಸಾಂಪ್ರದಾಯಿಕ ಸಮಾಜಕ್ಕೆ ಅಪ್ಯಾಯಮಾನವಾಗಿ ಕಾಣುತ್ತದೆ. ಆದರೆ ಆಧುನಿಕ ಸ್ತ್ರೀವಾದಿ ಪರಿಸರದಲ್ಲಿ ಇದು ಭಿನ್ನವಾಗಿಯೂ ಇರಬಹುದು. ಡಿಜಿಟಲ್‌ ಯುಗದ ಪ್ರಜಾಪ್ರಭುತ್ವದಲ್ಲಿ ತಾನು ಪಡೆದುದನ್ನು ಬಿಟ್ಟುಕೊಡುವ ತ್ಯಾಗಮಯಿ ಹೆಣ್ಣು ಪ್ರಾಚೀನ ಮೌಲ್ಯಗಳಿಗೆ ಶರಣಾಗುವವಳಂತೆ ಕಾಣುತ್ತಾಳೆ.

    ಕನ್ನಡದಲ್ಲಿ ಪುರಾಣ ಕಥನಗಳನ್ನು ರಂಗರೂಪಕ್ಕೆ ಅಳವಡಿಸುವ ಪ್ರಯತ್ನಗಳೇನೂ ಹೊಸದಲ್ಲ. ಆದರೆ ಕಾಲ ಬದಲಾದಂತೆ, ಆಧುನಿಕ ಚಿಂತನಾಧಾರೆಗಳಿಗೆ ಪೂರಕವಾಗಿ, ಈ ಕಥನಗಳನ್ನು ಹೊಸ ರೂಪದಲ್ಲಿ, ಸಮಕಾಲೀನತೆಯೊಂದಿಗೆ. ಭವಿಷ್ಯದ ತಲೆಮಾರಿನ ದೃಷ್ಟಿಯಿಂದ, ಮರುಸೃಷ್ಟಿ ಮಾಡುವ ಅವಕಾಶ ರಂಗಭೂಮಿಗೆ ಇದೆ. ಇದು ರಂಗಭೂಮಿಯ ವೈಶಿಷ್ಟ್ಯವೂ ಹೌದು, ಸೌಂದರ್ಯದ ಒಳಗುಟ್ಟೂ ಹೌದು. ಇಂತಹ ನಿದರ್ಶನಗಳೂ ಸಾಕಷ್ಟಿವೆ. ‘ಶರ್ಮಿಷ್ಠೆ’ ಈ ನಿಟ್ಟಿನಲ್ಲಿ ಯೋಚಿಸುವಂತಾಗಿದ್ದರೆ, ನಾಟಕ ಇನ್ನೂ ಹೆಚ್ಚಿನ ಆಪ್ತತೆಯನ್ನು ಪಡೆದುಕೊಳ್ಳುತ್ತಿತ್ತು ಎನಿಸುತ್ತದೆ. ರಂಗ ನಿರ್ದೇಶಕರ ಮತ್ತು ಮೂಲ ನಾಟಕ ರಚನೆಕಾರರ ಸ್ವಾತಂತ್ರ್ಯಿ ಮತ್ತು ಅಭಿವ್ಯಕ್ತಿಯನ್ನು ಗೌರವಿಸುತ್ತಲೇ, ಈ ಕೆಲವು ಅಂಶಗಳನ್ನು ಪ್ರಸ್ತಾಪಿಸಬಹುದು.

    ತೆರೆದ ಬಾಗಿಲಿನ ರಂಗಸಂಪದ :
    ‘ಶರ್ಮಿಷ್ಠೆ’ಯನ್ನು ರಂಗದ ಮೇಲೆ ಪ್ರಸ್ತುತಪಡಿಸುವ ಮೂಲಕ ರಂಗಸಂಪದ ಕನ್ನಡ ರಂಗಭೂಮಿಗೆ ಮತ್ತೊಂದು ಅಮೂಲ್ಯ ಕೊಡುಗೆಯನ್ನು ನೀಡಿದೆ. ಪ್ರಮೋದ್‌ ಶಿಗ್ಗಾಂವ್‌ ಅವರ ರಂಗಸಜ್ಜಿಕೆ ಮತ್ತು ಉತ್ತರ ಕರ್ನಾಟಕದ ಶೈಲಿಯ ವಸ್ತ್ರವಿನ್ಯಾಸ ಸರಳ-ಸಹಜತೆಯಿಂದ ಕೂಡಿದೆ. ಈ ಏಕವ್ಯಕ್ತಿ ನಾಟಕದ ಮೂಲಕ ಯಯಾತಿಯನ್ನು, ವಿಶೇಷವಾಗಿ ಶರ್ಮಿಷ್ಠೆಯನ್ನು ಮತ್ತೊಮ್ಮೆ ರಂಗಾಸಕ್ತರ ನಡುವೆ ತಂದು ನಿಲ್ಲಿಸುವ ಬೇಲೂರು ರಘುನಂದನ್‌ ಅಭಿನಂದನಾರ್ಹರು. ಅನೂಶ್‌ ಶೆಟ್ಟಿ ಮತ್ತು ಶಿವಲಿಂಗ ಪ್ರಸಾದ್ ಅವರ ಸಂಗೀತ‌ ಸಂಯೋಜನೆ, ಅರುಣ್‌ ಮೂರ್ತಿ ಅವರ ಬೆಳಕಿನ ವಿನ್ಯಾಸ ಕ್ಷಿಪ್ರಗತಿಯಲ್ಲಿ ಬದಲಾಗುತ್ತಲೇ ಇರುವ ಹಾವಭಾವಗಳಿಗೆ ಚ್ಯುತಿ ಬಾರದಂತೆ ನಿರ್ವಹಿಸಲಾಗಿದೆ. ನೇಪಥ್ಯದಲ್ಲಿ ಶರ್ಮಿಷ್ಠೆಯನ್ನು ಸಾಕಾರಗೊಳಿಸಲು ನೆರವಾಗಿರುವ ರಂಗಸಂಪದದ ಎಲ್ಲ ಕಲಾವಿದರೂ ಅಭಿನಂದನಾರ್ಹರು.

    ಈ ನೇಪಥ್ಯ ಕಲಾವಿದರ ಸಹಭಾಗಿತ್ವವೇ ಏಕವ್ಯಕ್ತಿ ನಾಟಕವನ್ನು ರಂಗಾಸಕ್ತರಿಗೆ ಪರಿಣಾಮಕಾರಿಯಾಗಿ ಮುಟ್ಟಿಸುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಈ ನೆಲೆಯಲ್ಲಿ ನೋಡಿದಾಗ ಏಕವ್ಯಕ್ತಿ ನಾಟಕದಲ್ಲಿ ಮೇಲ್ನೋಟಕ್ಕೆ ಕಾಣದ ಸಾಂಘಿಕ-ಸಮುದಾಯ ಪ್ರಜ್ಞೆ ನೇಪಥ್ಯದಲ್ಲಿ ಕಾಣಬಹುದಾಗಿದೆ. ಹೊಸ, ವಿಶಿಷ್ಟ ರಂಗಪ್ರಯೋಗಗಳಿಗೆ ಸದಾ ತೆರೆದುಕೊಂಡಿರುವ ಬೆಂಗಳೂರಿನ ರಂಗಸಂಪದ, ಸಮಕಾಲೀನ ಯುಗಧರ್ಮಕ್ಕೆ ಪೂರಕವಾದ, ವರ್ತಮಾನದ ತಲೆಮಾರನ್ನು ಒಳಗೊಳ್ಳುವ ಹಾಗೂ ಭವಿಷ್ಯದ ಪೀಳಿಗೆಯನ್ನೂ ತಲುಪುವ, ಕಥನಗಳನ್ನು ಪುರಾಣಗಳಿಂದಲೇ ಹೆಕ್ಕಿತೆಗೆದು, ರಂಗದ ಮೇಲೆ ಪ್ರಯೋಗಿಸುವ ನಿಟ್ಟಿನಲ್ಲಿ ಸಾಗಲಿ ಎಂದು ಆಶಿಸುತ್ತೇನೆ. ಕನ್ನಡದ ನಾಟಕ ಸಾಹಿತ್ಯದಲ್ಲೂ ಈ ಪ್ರಯತ್ನಗಳು ಸಾಕಷ್ಟು ವಿಸ್ತರಿಸಬೇಕಿದೆ. ಆಳಕ್ಕಿಳಿದು ಯೋಚಿಸಬೇಕಿದೆ.

    ಆತ್ಮೀಯ ಗೆಳೆಯ ಜೆ. ಲೋಕೇಶ್‌ ಮತ್ತು ಅವರ ಒಡನಾಡಿ ವಿ.ಎಂ. ನಾಗೇಶ್‌ ಅವರ ದಕ್ಷ ನಿರ್ವಹಣೆಯಲ್ಲಿ ರಂಗದ ಮೇಲೆ ಕಾಣಿಸಿಕೊಂಡಿರುವ ಶರ್ಮಿಷ್ಠೆ ಇನ್ನೂ ಹಲವು ಹೊಸ ಪ್ರಯೋಗಗಳಿಗೆ ನಾಂದಿ ಹಾಡಲಿ ಎಂದು ಅಭಿನಂದನಾಪೂರಕವಾಗಿ ಆಶಿಸುತ್ತೇನೆ. ನಾಟಕವನ್ನು ಆಯೋಜಿಸಿ ಮೈಸೂರಿನ ರಂಗಾಸಕ್ತರ ಹೃದಯ ಗೆದ್ದ ರಂಗಸಂಪದ ಬೆಂಗಳೂರು, ಮೈಸೂರಿನ ರಂಗಾಸಕ್ತರಿಗೆ ಈ ಸುಯೋಗ ಕಲ್ಪಿಸಿದ ರಂಗಾಯಣದ ಸಮಸ್ತ ಸಿಬ್ಬಂದಿಗೆ ಮತ್ತು ಈ ನಾಟಕದ ನೇಪಥ್ಯದಲ್ಲಿರುವ ಎಲ್ಲ ಕಲಾವಿದರಿಗೂ ಅಭಿನಂದನೆಗಳು.

    ‘ಶರ್ಮಿಷ್ಠೆ’ ಬಹುಕಾಲ ನೆನಪಿನಲ್ಲುಳಿಯುತ್ತಾಳೆ, ಆದರೆ ಅಲ್ಲಿ ನಮಗೆ ವಿಸ್ಮೃತಿಗೆ ಜಾರದೆ ಶಾಶ್ವತವಾಗಿ ಕಾಣುತ್ತಲೇ ಹೋಗುವ ಚಹರೆ ಮೇರು ನಟಿ ಉಮಾಶ್ರೀ ಅವರದು. ಈ ಮೇರು ನಟಿಯ ಬತ್ತದ ಚೈತನ್ಯ ಮತ್ತು ಕಲಾಪ್ರೌಢಿಮೆಗೆ ಹೃದಯಪೂರ್ವಕ ಅಭಿನಂದನೆಗಳು. ದಿನಾಂಕ 19 ಮತ್ತು 20 ಏಪ್ರಿಲ್‌ 2025ರಂದು ಮೈಸೂರಿನ ರಂಗಾಯಣದ ಭೂಮಿಗೀತದಲ್ಲಿ ‘ಶರ್ಮಿಷ್ಠೆ’ಯನ್ನು ಮೂರು ಪ್ರದರ್ಶನಗಳಲ್ಲಿ ರಂಗಾಸಕ್ತರ ನಡುವೆ ನಿಲ್ಲಿಸಿತ್ತು.

    ನಾಟಕ ವಿಮರ್ಶಕರು : ನಾ ದಿವಾಕರ

    baikady drama review roovari
    Share. Facebook Twitter Pinterest LinkedIn Tumblr WhatsApp Email
    Previous Articleಪುತ್ತೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದ ರಾಜಗೋಪುರದಲ್ಲಿ ತಾಳಮದ್ದಳೆ
    Next Article ಧಾರವಾಡದಲ್ಲಿ ಡಾ. ಜಿ.ಎಸ್. ಆಮೂರ ಜನ್ಮ ಶತಮಾನೋತ್ಸವ ಸಮಾರೋಪ ಸಮಾರಂಭ | ಮೇ 08
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ಪ್ರಶಸ್ತಿ ಪ್ರದಾನ, ನಾಟಕ ಪ್ರದರ್ಶನ ಮತ್ತು ವಿಚಾರ ಮಂಥನ ಕಾರ್ಯಕ್ರಮ | ಮೇ 11 

    May 10, 2025

    ಬೆಂಗಳೂರಿನ ಶ್ರೀ ವಿನಾಯಕ ದೇವಸ್ಥಾನದಲ್ಲಿ ‘ಸುದರ್ಶನ ಗರ್ವಭಂಗ’ ಮತ್ತು ‘ಕುಶ ಲವ ಕಾಳಗ’ ಪ್ರದರ್ಶನ | ಮೇ 17

    May 10, 2025

    ಕಟೀಲಿನಲ್ಲಿ ‘ತುಳುನಾಡು ಮತ್ತು ಕಳರಿ’ ವಿಚಾರಗೋಷ್ಠಿ ಮತ್ತು ಚರ್ಚಾಗೋಷ್ಠಿ | ಮೇ 24

    May 10, 2025

    ಕಲಾಕುಲ್ ಕೊಂಕಣಿ ನಾಟಕ ರೆಪರ್ಟರಿಗೆ ಅರ್ಜಿ ಆಹ್ವಾನ

    May 10, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.