ಶ್ರೀಮತಿ ಸುನಂದಾ ಬೆಳಗಾಂವಕರರ ಮೊದಲ ಕಥಾಸಂಕಲನ ‘ಮೃದ್ಗಂಧ’. ಇದರಲ್ಲಿರುವ ಎಂಟು ಕತೆಗಳು ಉತ್ತರ ಕರ್ನಾಟಕದ ಸಾಂಸ್ಕೃತಿಕ ಆವರಣದಲ್ಲಿ ಸೃಷ್ಟಿಯಾಗಿವೆ. ಸಿದ್ಧ ಮಾನದಂಡವಿಲ್ಲದೆ ಆರಂಭಗೊಳ್ಳುವ ಇಲ್ಲಿನ ಕತೆಗಳಲ್ಲಿ ಧಾರವಾಡದ ಮಣ್ಣಿನ ವಾಸನೆಯನ್ನು ಬೀರುವ ಆಡುಮಾತಿನ ಲಯವಿದೆ. ಆಕರ್ಷಕ ಆರಂಭ ಮತ್ತು ಅನಿರೀಕ್ಷಿತ ಮುಕ್ತಾಯಗಳಿಲ್ಲ. ಆಪ್ತವೆನಿಸುವ ನಿರೂಪಣೆಯಿದೆ. ಸಾಂಪ್ರದಾಯಿಕ ಬ್ರಾಹ್ಮಣ ಸಂಸ್ಕೃತಿಯ ಹಿನ್ನೆಲೆಯಲ್ಲಿ ಬದುಕುತ್ತಿರುವ ಹಳ್ಳಿಯ ಜನರ ಸ್ಥಿತಿಗತಿಗಳನ್ನು ಚಿತ್ರಿಸುವ ಕತೆಗಳಲ್ಲಿ ಸುಧಾರಣೆಯ ಆವೇಶ, ಸಮಾಜದ ಅಂಧಶ್ರದ್ಧೆಗಳ ಬಗ್ಗೆ ಆಕ್ರೋಶಗಳಿಲ್ಲ. ಮಧ್ಯಂತರದಲ್ಲೇ ಆರಂಭಗೊಂಡು ಹಿನ್ನೋಟ ತಂತ್ರದ ಮೂಲಕ ವಿಷಯಗಳನ್ನು ನಿರೂಪಿಸುತ್ತಾ ಒಂದು ಕಾಲದ ಜೀವನಕ್ರಮವನ್ನು ಹಿಡಿದಿಡುವ ಕತೆಗಳು ಮಾನವೀಯ ಸಂಬಂಧಗಳ ಸೂಕ್ಷ್ಮ ರೂಪವನ್ನು ವಿಶ್ಲೇಷಿಸುತ್ತವೆ. ಗಂಡು ಹೆಣ್ಣೆಂಬ ಭೇದವಿಲ್ಲದೆ ತಮಗೊದಗಿದ ಕಷ್ಟಕರ ಪರಿಸ್ಥಿತಿಯ ನಡುವೆ ಸಿಕ್ಕು ಅಸಹಾಯಕರಾದವರು ಸ್ವೀಕರಿಸುವ ದಿಟ್ಟ ನಿಲುವು, ಸಮಸ್ಯೆಗಳನ್ನು ಎದುರಿಸುವ ರೀತಿಯು ಮುಖ್ಯವಾಗುತ್ತದೆ.
‘ಕುಂಕುಮ ಭರಣಿ’ ಎಂಬ ಕತೆಯಲ್ಲಿ ಕಾಣಿಸುವ ಕುಟುಂಬದೊಳಗೆ ಪರಸ್ಪರ ಸಂಬಂಧವನ್ನು ಹೊಂದಿದ ಎರಡು ವರ್ಗಗಳು ಕಾಣಿಸುತ್ತವೆ. ಮಾವ ಅತ್ತೆಯವರ ಸಂಬಂಧ ಹೊಂದಾಣಿಕೆಯದೆಂದು ಮೇಲ್ನೋಟಕ್ಕೆ ತೋರುವುದಾದರೂ ಅವರ ನಡುವೆ ರಸಿಕತನ ಬೆರೆತ ಸರಸವಿದೆ. ಮಗನಿಗೆ ಸೊಸೆಯ ಮೇಲೆ ರಸಿಕತನವಿಲ್ಲ. ಆದರೂ ಸೊಸೆ ಪರಿಸ್ಥಿತಿಯನ್ನು ಸ್ವೀಕರಿಸಿದ್ದಾಳೆ. ದಾಂಪತ್ಯದಲ್ಲಿ ವಿರಸವಿಲ್ಲದಿದ್ದರೂ ಅತೃಪ್ತಿಯಿದೆ. ಕಳೆದುಹೋದ ಕುಂಕುಮ ಭರಣಿಯು ಕೈಸೇರುವ ಸನ್ನಿವೇಶವು ಅತ್ತೆಯ ದಾಂಪತ್ಯ ಬದುಕಿನ ಗೆಲುವಿನ ಸಂಕೇತವಾಗಿದೆ. ಎರಡು ತಲೆಮಾರನ್ನು ಪ್ರತಿನಿಧಿಸುವ ಅತ್ತೆ ಸೊಸೆಯರ ನಡುವೆ ಗುಣಾತ್ಮಕ ಅಂತರವಿಲ್ಲ. ವರ್ಗಗಳನ್ನು ಮೀರಿದ ಅನುಭವಗಳ ಸಾಮಾನ್ಯತೆಯ ದನಿಯು ಸ್ಪಷ್ಟವಾಗಿ ಕೇಳಿ ಬರುವುದರಿಂದ ಅದಕ್ಕೆ ಸಂಕೀರ್ಣತೆ ಬಂದಿದೆ. ಅತ್ತೆಯವರ ನಿಲುವು ಸಾಂಪ್ರದಾಯಿಕತೆಯ ಸ್ಥಿರೀಕರಣದಂತೆನಿಸಿದರೂ ಬದುಕಿನ ಸಮಗ್ರತೆಯ ದೃಷ್ಟಿಯಿಂದ ಹೆಣ್ಣಿನ ಅಸ್ತಿತ್ವವನ್ನು ಸಮರ್ಥಿಸುತ್ತದೆ. ಹಾಗೆಂದು ಎಲ್ಲ ಕತೆಗಳು ಸಾಂಪ್ರದಾಯಿಕತೆಯನ್ನು ಬೆಂಬಲಿಸುತ್ತವೆ ಎಂದಲ್ಲ. ಬ್ರಾಹ್ಮಣ ಕುಟುಂಬದ ಆಚಾರ ಅನುಷ್ಠಾನಗಳ ನಡುವೆ ಮೂಲೆಗುಂಪಾದ ಮುದುಕಿಯ ಸಂವೇದನೆಗಳನ್ನು ವಿವರಿಸುವ ‘ಉಂಡ ತಳಿಗೆ’ಯು ಸ್ತ್ರೀ ಕೇಂದ್ರಿತವಾಗಿದ್ದರೂ ಕೌಟುಂಬಿಕ ಚೌಕಟ್ಟಿಗೆ ಸೀಮಿತವಾಗಿಲ್ಲ. ಹೆಣ್ಣಿನ ಯಾತನೆಯೇ ಇಲ್ಲಿನ ವಸ್ತುವಾದರೂ ಅದಕ್ಕೆ ಧಾರ್ಮಿಕ ಆಯಾಮವಿದೆ. ಇಲ್ಲಿ ಅಜ್ಜಿಯು ತನ್ನವರಿಂದಲೇ ಶೋಷಣೆಗೊಳಗಾಗುತ್ತಾಳೆ. ಪೂಜೆ ಮುಗಿಯದೆ ಊಟ ಹಾಕುವುದಿಲ್ಲ ಎಂದು ಮಗ ಸೊಸೆಯರು ಹೇಳಿರುವುದರಿಂದ ಆಕೆಯು ಹಸಿದಿರಬೇಕಾಗುತ್ತದೆ. ಬಾರಿ ಬಾರಿಗೂ ಪೂಜೆ ನಡೆಯುವ ಜಾಗದ ಕಡೆ ಇಣುಕಿ ನೋಡುವ ಆಕೆಯ ಹಸಿವಿನ ತೀವ್ರತೆಯು ಮನಮುಟ್ಟುತ್ತದೆ. ಪೂಜೆಯು ಮುಗಿದ ಬಳಿಕ ಮುದುಕಿಯನ್ನು ಮರೆತು ಎಲ್ಲರೂ ಗಡದ್ದಾಗಿ ಊಟ ಮಾಡುತ್ತಾರೆ. ಮನೆಯಲ್ಲಿ ಸಿರಿವಂತಿಕೆಯಿದ್ದರೂ ಹೃದಯ ಶ್ರೀಮಂತಿಕೆಯಿಲ್ಲ. ಪೂಜೆಯ ಆತುರದಲ್ಲಿರುವ ಮಗನಿಗೆ ತನಗೆ ಕೈತುತ್ತು ಉಣಿಸಿದ್ದ ತಾಯಿಯ ಹಸಿವಿನ ಪರಿವೆಯಿಲ್ಲ. ಮುದುಕಿಯಾದ ಆಕೆಯು ಪ್ರತಿಭಟನೆಯ ವಿಚಾರವನ್ನು ಮಾಡಲಾರಳಾದರೂ ಅವಳ ಮೂಕ ಯಾತನೆಯು ವ್ಯವಸ್ಥೆಯ ವಿರುದ್ಧ ಬಂಡೇಳಿಸಬಲ್ಲದು. ವಿಧವೆಯ ಬಾಳಿಗೆ ಅವಕಾಶವಿಲ್ಲದಾಗುವ ಸ್ಥಿತಿ, ತಾಯಿಯಾಗಿ ತನ್ನ ಕರ್ತವ್ಯಗಳನ್ನು ತೀರಿಸಿದ ಬಳಿಕವೂ ಎದುರಾಗುವ ಕುಹಕ ವ್ಯಂಗ್ಯಗಳು, ಸ್ವಂತ ಮಕ್ಕಳಿಂದ ಎದುರಾಗುವ ಅವಮಾನ ಸಂಕಟಗಳ ಚಿತ್ರಣವನ್ನಷ್ಟೇ ನೀಡಿ ವಿರಮಿಸದೆ ಲೇಖಕಿಯು ಜೀವಪರ ನಿಲುವನ್ನು ಹೊಂದಿದ ಪಾತ್ರಗಳನ್ನೂ ಚಿತ್ರಿಸಿ ಕಳಕಳಿಯನ್ನು ಮೆರೆದಿದ್ದಾರೆ. ಪರಿತ್ಯಕ್ತೆಯ ಬದುಕಿನ ಕಷ್ಟ ನಷ್ಟಗಳನ್ನು ಚಿತ್ರಿಸುವುದರೊಂದಿಗೆ ವಸ್ತುನಿಷ್ಠತೆಯನ್ನು ಕಾಯ್ದುಕೊಂಡಿದ್ದಾರೆ. ಸಾಮಾಜಿಕ ಮತ್ತು ಸಾಂಸ್ಕೃತಿಕ ಪರಿಸರವನ್ನು ಸೃಷ್ಟಿಸುವುದರಲ್ಲಿ ಯಶಸ್ವಿಯಾಗಿದ್ದಾರೆ.
‘ಹಾಲಿನ ಋಣ’ದಲ್ಲಿ ಅಚ್ಯುತರಾಯರ ಹೆಂಡತಿಯು ತನ್ನ ಮಗುವನ್ನು ಹೆತ್ತು ತೀರಿಕೊಳ್ಳುತ್ತಾಳೆ. ಆ ಮಗುವಿನ ಪೋಷಣೆಗೆ ಎದೆಹಾಲೇ ಬೇಕು ಎಂದು ವೈದ್ಯರು ಅಭಿಪ್ರಾಯಪಡುತ್ತಾರೆ. ಆಗರ್ಭ ಶ್ರೀಮಂತರಾದ ಅವರು ತಮ್ಮ ತೋಟದ ಮನೆಯನ್ನು ನೋಡಿಕೊಳ್ಳುವ ಬಸಪ್ಪನನ್ನು ಕಾಣಲು ಹೋದಾಗ ಮಗುವಿಗೆ ಮೊಲೆಯುಣಿಸುತ್ತಿದ್ದ ನೀಲವ್ವನ ಮೊಲೆಗಳು ಅವರ ಕಣ್ಣಿಗೆ ಇರಿಯುವಂತೆ ಕಂಡು ಬರುತ್ತವೆ. ಹಾಲು ಒಸರುತ್ತಿರುವ ಮೊಲೆಗಳನ್ನು ನೋಡುತ್ತಿದ್ದ ರಾಯರ ಕಣ್ಣು ಆಕೆಯ ಎದೆಯನ್ನು ನಡುಗಿಸುತ್ತದೆ. ಮುಂದಿನ ದಿನಗಳಲ್ಲಿ ರಾಯರು ತನ್ನನ್ನು ಏನಾದರೂ ಮಾಡುವರೋ ಎಂದು ತಲ್ಲಣಿಸುತ್ತಿರುವಾಗಲೇ “ಬಸಪ್ಪ, ನಿನ್ನಿಂದ ಒಂದು ಕೆಲಸ ಆಗಬೇಕು. ಈ ಕೆಲಸ ಮಾಡಿದರ ನಿನಗ ತೋಟ ಬಿಟ್ಟು ಕೊಡ್ತೀನಿ. ನಿನ್ನ ಹೆಂಡತಿ ನೀಲವ್ವ…” (ಪುಟ 28) ಎನ್ನುವ ಮಾತುಗಳು ಓದುಗರನ್ನು ಸಂಶಯ, ಕುತೂಹಲ ಮತ್ತು ಉದ್ವಿಗ್ನತೆಯ ಬಿಂದುವಿನ ಮೇಲೆ ನಿಲ್ಲಿಸುತ್ತವೆ. “ನೀಲವ್ವ, ನನ್ನ ಮಗ ಅಣ್ಣಯ್ಯ ನಿನ್ನ ಮಗ ಪರಶು ಅಂತ ತಿಳಿದು ಹೊಟ್ಟೀಗೆ ಕೊಟ್ಟರ ನನ್ನ ಮನಿತನ ಉಳಿಸಿಧಂಗ ಆಗತದ” (ಪುಟ 28) ಎಂದು ಕಂಬನಿ ಮಿಡಿದಾಗ ಕದಡಿದ ನೀರು ತಿಳಿಯಾಗುತ್ತದೆ. ಇಲ್ಲಿ ವಿಧುರನೊಬ್ಬನು ಹೆಣ್ಣಿನ ಮೇಲಿನ ಆಕರ್ಷಣೆಯನ್ನು ಮೀರುವ ವಿಚಾರಕ್ಕಿಂತ ಹಾಲಿನ ರೂಪದಲ್ಲಿ ಅನ್ನದಾತನ ಋಣವನ್ನು ಸಲ್ಲಿಸಬಯಸುವ ನೀಲವ್ವನ ಉದಾತ್ತ ಭಾವನೆಯು ಮುಖ್ಯವಾಗುತ್ತದೆ. ಹೊಟ್ಟೆಗೆ ಹಾಲು ಸಾಲದೆ ಪರಶು ಸಾಯುವ ಸನ್ನಿವೇಶವು ಅತಿಭಾವುಕತೆಗೆ ಕಾರಣವಾಗುತ್ತದೆ. ಆಕೆಯ ಹಾಲು ಕುಡಿದು ಬೆಳೆದ ಅಣ್ಣಯ್ಯನು ಮದುವೆಯಾದ ಬಳಿಕ ಅಚ್ಯುತರಾಯರು ದೀಪಾವಳಿಯ ದಿನದಂದು ನೀಲವ್ವನಿಗೆ ಸೀರೆ ಮತ್ತು ಹಣ ಕೊಡುವುದನ್ನು ನೋಡಿದ ಸೊಸೆ ಉಷಾ ಅವರಿಬ್ಬರ ಮೇಲೆ ಅನೈತಿಕ ಸಂಬಂಧವನ್ನು ಅರೋಪಿಸಿ ಅಣ್ಣಯ್ಯನ ಮುಂದೆ ದೂರುತ್ತಾಳೆ. ಕನಲಿದ ಅಣ್ಣಯ್ಯನು ತನಗೆ ಎದೆಹಾಲುಣಿಸಿ ಸಲಹಿದ ನೀಲವ್ವನಿಗೆ ಹೊಡೆಯುತ್ತಾನೆ. “ಹೆಂಡ್ತಿ ಮಾತ ಕೇಳಿ ನನ್ನ ಮ್ಯಾಲ ಪಾಪದ ಹೊರಿ ಹೊರಿಸಿದ್ಯಾ? ನನ್ನ ನಿನ್ನ ಸಂಬಂಧ ನಿನ್ನ ಅಪ್ಪಾರನ್ನು ಕೇಳು” (ಪುಟ 35) ಎಂದಾಗ ಪರಿಸ್ಥಿತಿಯು ಮತ್ತಷ್ಟು ಬಿಗಡಾಯಿಸುತ್ತದೆ. ತಾನು ನೀಲವ್ವನಿಗೆ ಹುಟ್ಟಿದವನೆಂದುಕೊಂಡು ಅಣ್ಣಯ್ಯನು ಮತ್ತಷ್ಟು ದುಡುಕುತ್ತಾನೆ. ನೀಲವ್ವನ ಬದುಕಿನ ಮೌಲ್ಯಗಳು ಆಕೆಯ ಯಾತನೆಗೆ ಕಾರಣವಾಗುತ್ತವೆ. ಅಣ್ಣಯ್ಯನ ಕ್ರೌರ್ಯಕ್ಕೆ ಒಳಗಾದರೂ ತಾಯ್ತನದ ಮೋಹವನ್ನು ಬಿಡಲು ಸಾಧ್ಯವಾಗುವುದಿಲ್ಲ. ಅವನನ್ನು ಶಪಿಸಬೇಕೆಂದು ಒತ್ತಿ ಬರುತ್ತಿದ್ದರೂ ತಾಯ್ತನ ಮತ್ತು ಹಾಲಿನ ಋಣ ಆ ಭಾವನೆಯನ್ನು ತಡೆಯುತ್ತದೆ. ಹೆಣ್ಣು ಗಂಡಿನ ಸಂಬಂಧಗಳನ್ನು ಕಾಮದ ಆಚೆಗಿನ ಭಾವನೆಯಿಂದ ಕಾಣಲು ಸಾಧ್ಯವಾಗದ ಸಮಾಜದ ಸಿನಿಕತನದ ಧೋರಣೆಯ ಬಗ್ಗೆ ಮೂಲಭೂತ ಪ್ರಶ್ನೆಗಳನ್ನು ಎತ್ತುವ ಕತೆಯಲ್ಲಿ ನೀಲವ್ವನ ಔದಾರ್ಯ ಮತ್ತು ಪ್ರೀತಿ ವಾತ್ಸಲ್ಯಗಳು ವೈಭವೀಕರಣಕ್ಕೊಳಗಾಗಿದ್ದರೂ ಲೇಖಕಿಯು ಚಿತ್ರಿಸಿರುವ ಸಾಮಾಜಿಕ ಸಂದರ್ಭದಲ್ಲಿ ಅವುಗಳು ಅಸಹಜ ಅಥವಾ ಅಸಂಭವ ಎನಿಸುವುದಿಲ್ಲ.
ಮನೆಯಲ್ಲಿರುವ ವೃದ್ಧ ತಂದೆತಾಯಿಯರ ಕುರಿತು ಹೊಸ ತಲೆಮಾರು ಪ್ರೀತಿ ಕಾಳಜಿಗಳನ್ನು ತೋರಿ ತಾವು ಅಲಕ್ಷಿತರಲ್ಲ ಎಂಬ ಭರವಸೆಯನ್ನು ಮೂಡಿಸಬೇಕಾದ ಅಗತ್ಯದ ಕಡೆಗೆ ಬೊಟ್ಟು ಮಾಡುವ ‘ಹಾಲಿನ ಋಣ’, ‘ಉಂಡ ತಳಿಗೆ’ಯಂಥ ಕತೆಗಳು ಮಾನವೀಯ ಸಂಬಂಧಗಳ ಮಹತ್ವವನ್ನು ಅರಿತುಕೊಳ್ಳಬೇಕಾದ ಅಗತ್ಯವನ್ನು ಮನಗಾಣಿಸುತ್ತದೆ. ವೃದ್ಧ ತಂದೆತಾಯಿಯರೊಂದಿಗೆ ವಾತ್ಸಲ್ಯ ಮಮಕಾರಗಳನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲದ ಕೃತಘ್ನ ಬದುಕು ಅನಾವರಣಗೊಳಿಸುವ ಕತೆಗಳಲ್ಲಿ ಹಿರಿಯರಿಗೆ ಕಿರಿಯರ ಮೇಲಿನ ಅಪನಂಬಿಕೆ, ಕಿರಿಯರಿಗೆ ಹಿರಿಯರ ಮೇಲಿರುವ ಅಸಮಾಧಾನ- ತಿರಸ್ಕಾರ, ತಪ್ಪುಗ್ರಹಿಕೆ, ತಲೆಮಾರುಗಳ ಅಂತರಗಳಿಂದಾಗಿ ಮನುಷ್ಯರ ನಡುವೆ ಗೋಡೆ ಕಂದರಗಳು ಸೃಷ್ಟಿಯಾಗಬಾರದು ಎಂಬ ಆಶಯವಿದೆ.
‘ಕತೆ ಓದಿದೆಯಾ’ ಎಂಬ ರಚನೆಯು ಕತೆಯಲ್ಲಿ ಕತೆಯನ್ನು ಹೇಳುವ ತಂತ್ರವನ್ನು ಒಳಗೊಂಡಿದೆ. ಈ ಕತೆಯಲ್ಲಿ ಲೇಖಕಿಯು ಅದಕ್ಕೆ ತಕ್ಕ ಪ್ರಾಥಮಿಕ ಹಿನ್ನೆಲೆಯನ್ನು ಒದಗಿಸಿದ ಬಳಿಕ ಹಿಂದೆ ಸರಿದು ಜಾಹ್ನವಿಯ ಸ್ವರಚಿತ ಕತೆಯ ಮೂಲಕ ಕಥನವನ್ನು ಆರಂಭಿಸುತ್ತಾಳೆ. ಮುಂದೆ ಬರಲಿರುವ ದಾರುಣ ಸನ್ನಿವೇಶದ ಸೂಚನೆಯನ್ನು ಕೊಡದೆ ರಾಜಾರಾಯ-ಯಶೋದ ದಂಪತಿಗೆ ಏಳು ವರುಷಗಳ ಬಳಿಕ ಹುಟ್ಟಿದ ಮಗು ಶ್ರೀಕೃಷ್ಣನ ನಾಮಕರಣ ಸಮಾರಂಭದ ಸಂಭ್ರಮ ಸಡಗರದೊಂದಿಗೆ ಆರಂಭವಾಗುವ ಕತೆಯಲ್ಲಿ ಮುಂಬರುವ ಸಾವಿನ ಸುಳಿವು ಇಲ್ಲದಿರುವುದು ಕತೆಗಾರಿಕೆಯ ದೃಷ್ಟಿಯಿಂದ ಗಮನಾರ್ಹವಾಗಿದೆ. ನಾಮಕರಣಕ್ಕಾಗಿ ಮಗುವನ್ನು ಎತ್ತಿಕೊಂಡು ಬರಲು ಅದರ ಅಕ್ಕ ಸಿಂಧು ಕೋಣೆಗೆ ಬಂದಾಗ ಅದಾಗಲೇ ನಿದ್ದೆಹೋಗಿದ್ದ ಮಗುವಿನ ಮೇಲೆ ಗೋಡೆಗೆ ಅನಿಸಿಟ್ಟ ಹಾಸಿಗೆಯ ಸುರುಳಿಗಳು ಬಿದ್ದು ಉಸಿರುಗಟ್ಟಿ ಸತ್ತಿರುತ್ತದೆ.
ಮಾಸ್ತಿಯವರ ಅನೇಕ ಕತೆಗಳಲ್ಲೂ ನಿರೂಪಕನ ಮೂಲಕ ಕತೆಯನ್ನು ಹೇಳುವ ತಂತ್ರವನ್ನು ಕಾಣುತ್ತೇವೆ. ಆನಂದಕಂದರ ‘ಮಲ್ಲಮ್ಮನ ಮಹಾಭಾರತ’, ಕಡೆಂಗೋಡ್ಲು ಶಂಕರ ಭಟ್ಟರ ‘ಅದ್ದಿಟ್ಟು’, ಸೇಡಿಯಾಪು ಕೃಷ್ಣ ಭಟ್ಟರ ‘ನಾಗರಬೆತ್ತ’, ಅನಂತಮೂರ್ತಿಯವರ ‘ತಾಯಿ’ ಕತೆಗಳಲ್ಲಿ ಈ ತಂತ್ರವು ತಮ್ಮದೇ ಆದ ಬದಲಾವಣೆಗಳೊಂದಿಗೆ ಕಾಣಿಸಿಕೊಂಡಿವೆ. ಆದರೆ ಅಕ್ಕನ ಮೂಲಕ ತಮ್ಮನ ಸಾವಿನ ಕತೆಯನ್ನು ಹೇಳುವ ‘ಕತೆ ಓದಿದೆಯಾ?’ದ ಕಥನ ತಂತ್ರವು ತಾಯಿಯ ಮೂಲಕ ಮಗಳ ಸಾವನ್ನು ವಿವರಿಸುವ ‘ಅದ್ದಿಟ್ಟಿ’ಗೆ ಸಮೀಪವಾಗಿದೆ. ಅಲ್ಲಿನ ಪಾತ್ರಗಳಿಗೆ ಅವರದ್ದೇ ಆದ ವ್ಯಕ್ತಿತ್ವ, ಭಾಷೆ, ಶೈಲಿಗಳನ್ನು ಕೊಟ್ಟು ಅವುಗಳ ಮೂಲಕ ಕತೆಯನ್ನು ಹೇಳಿಸುತ್ತಾಳೆ. ಇದು ಯಶೋದೆಯ ಕತೆಯಲ್ಲ. ಆಕೆಯ ಹಿರಿಯ ಮಗಳು ಸಿಂಧುವಿನ ಕತೆ. “ಆ ಹತಭಾಗಿ ಸಿಂಧು ನಾನು. ನಿನ್ನ ಪ್ರಿಯ ಗೆಳತಿ ಜಾಹ್ನವಿ. ಶ್ರೀಕೃಷ್ಣ ನನ್ನ ತಮ್ಮ” (ಪುಟ 165) ಎನ್ನುವ ಮೂಲಕ ಸಿಂಧುವಿನ ಜಾಗದಲ್ಲಿ ಕಾಣಿಸಿಕೊಳ್ಳುವ ಜಾಹ್ನವಿಯು ಯಶೋದೆಯ ಪಾತ್ರದ ವಿಸ್ತರಣವಾಗಿದ್ದು, ಆಕೆಯ ವ್ಯಕ್ತಿತ್ವ ಮತ್ತು ಮನೋಧರ್ಮಗಳ ಅಭಿವ್ಯಕ್ತಿಗೆ ಪೂರಕವಾಗಿ ಬರುತ್ತಾಳೆ. ಆದ್ದರಿಂದ ಜಾಹ್ನವಿಯು ಬರೆದ ಕತೆಯಲ್ಲಿನ ಮೆಲೋಡ್ರಾಮದ ಅಂಶಗಳು ಇಲ್ಲವಾಗಿ ಆಕೆಯು ಒಳಕತೆಯನ್ನು ನಿರೂಪಿಸುವ ಮತ್ತು ಪ್ರತಿಕ್ರಿಯಿಸುವ ಪ್ರಕ್ರಿಯೆಯು ಮುಖ್ಯವಾಗುತ್ತದೆ, ಬದುಕಿನ ನಶ್ವರತೆಯನ್ನು ಮನಗಾಣಿಸಿದ ರೀತಿಯು ಮಾರ್ಮಿಕವಾಗಿದೆ. ವ್ಯಾವಹಾರಿಕ ತಿಳುವಳಿಕೆ, ಧರ್ಮಶ್ರದ್ಧೆ, ವಿಧಿಯ ಕೈವಾಡದ ಅರಿವು, ವಾಸ್ತವ ಪ್ರಜ್ಞೆ, ಕರುಳಿನ ನೋವು, ಇವೆಲ್ಲ ಮನಸ್ಸನ್ನು ವಿರುದ್ಧ ದಿಕ್ಕಿಗೆ ಎಳೆಯುತ್ತಿದ್ದರೂ ಅವುಗಳನ್ನು ಒಂದೆಡೆಯಲ್ಲಿ ಕೂಡಿಸಿ ಹಿಡಿದ ಮನೋಧರ್ಮ, ನಿರುದ್ವಿಗ್ನ ನಿರೂಪಣೆಯ ಹಿಂದೆ ಕಾಣುವ ಸಂಯಮ, ತಿಳುವಳಿಕೆಗಳು ಮಹತ್ವದ್ದಾಗಿವೆ.
ಬದುಕಿನಲ್ಲಿ ಹುಟ್ಟುವ ಸಮಸ್ಯೆಯನ್ನು ಎದುರಿಸುವ ದಾರಿಯನ್ನು ಕಂಡುಕೊಳ್ಳುವ ಪ್ರಕ್ರಿಯೆಯಲ್ಲಿ ಬೆಳೆಯುವ ‘ಆಣಿಕಲ್ಲ ಮಳಿ’ಯಲ್ಲಿ ತಾಯಿ ಮತ್ತು ಅನೈತಿಕವಾಗಿ ಬಸಿರಾದ ಮಗಳು ತಾವೆಲ್ಲಿ ತಪ್ಪಿದೆವು ಎಂದುಕೊಳ್ಳುತ್ತಾ ತಡಕಾಡುತ್ತಾರೆ. ಮಗಳು ಸಂಗಿಯು ನಿಂಗನಿಗೆ ಬಸಿರಾದಾಗ ಆತನು ಆಕೆಯನ್ನು ಬಿಟ್ಟು ಓಡಿಹೋಗುತ್ತಾನೆ. ಸಂಗಿಯು ಮಗುವನ್ನು ಹೆತ್ತು ಸಾಕುತ್ತಿದ್ದ ದಿನಗಳಲ್ಲಿ ಊರಗೌಡನ ಮಗ ಮತ್ತು ತಂಡದವರು ಆಕೆಯನ್ನು ಬಲಾತ್ಕರಿಸುತ್ತಾರೆ. ನ್ಯಾಯ ಕೇಳಲು ಹೋದ ತಾಯಿ ಮತ್ತು ಗೌಡರ ಮನೆಯವರ ನಡುವೆ ಜಗಳವಾಗುವ ಸಂದರ್ಭದಲ್ಲಿ ಸಂಗಿಯು ಊರಗೌಡ ಮತ್ತು ತಾಯಿಯ ಸಂಬಂಧದಿಂದ ಹುಟ್ಟಿದವಳೆಂಬ ವಿಚಾರವು ಬಯಲಾಗುತ್ತದೆ. ಅಣ್ಣನು ತಂಗಿಯ ಮೇಲೆಯೇ ಅತ್ಯಾಚಾರವನ್ನು ಮಾಡಿದ ವಿಚಾರವು ವ್ಯಂಗ್ಯವಾಗಿ ಕಾಣಿಸಿಕೊಳ್ಳುತ್ತದೆ. ಅಂತ್ಯದಲ್ಲಿ ರಹಸ್ಯವನ್ನು ಸ್ಫೋಟಿಸಿ ಓದುಗರನ್ನು ಬೆಚ್ಚಿ ಬೀಳಿಸುವ ತಂತ್ರವನ್ನು ಬಿಟ್ಟುಕೊಟ್ಟ ಕತೆಯು ಸತ್ಯವನ್ನು ಮೊದಲೇ ನಿರೂಪಿಸಿ, ಅದನ್ನು ಒಪ್ಪಿಕೊಂಡೇ ಪಾತ್ರಗಳ ವರ್ತನೆ, ತಲ್ಲಣ ಮತ್ತು ಯಾತನೆಗಳನ್ನು ಗಮನಿಸುವ ಅವಕಾಶವನ್ನು ನೀಡುತ್ತದೆ. ಊರಿಗೆ ಮರಳಿದ ನಿಂಗನಿಗೆ ತನ್ನ ಪ್ರೇಯಸಿ ಬಲಾತ್ಕಾರಕ್ಕೊಳಗಾದನ್ನು ಅರಿತೂ ಆಕೆಯನ್ನು ಮತ್ತೆ ಸ್ವೀಕರಿಸುವಲ್ಲಿ ಪ್ರಬುದ್ಧತೆಯನ್ನು ಕಾಣುತ್ತೇವೆ.
‘ಹುಲ್ಲೂರ ಹುಚ್ಚಿ’ಯು ಹಳ್ಳಿಯಲ್ಲಿ ನಡೆದ ದುರಂತಕ್ಕೆ ಸಂಬಂಧಿಸಿದ ಕತೆಯಾಗಿದ್ದರೂ ಕೌಟುಂಬಿಕ ಚೌಕಟ್ಟಿನೊಳಗೆ ನಡೆಯುತ್ತದೆ. ಆಗರ್ಭ ಶ್ರೀಮಂತರಾದ ಹುಲ್ಲೂರ ಸಂಗಪ್ಪಣ್ಣನವರು ತಮಗೆ ಮಕ್ಕಳಿಲ್ಲದಿರುವುದರಿಂದ ಬಂಗಾರೆವ್ವನನ್ನು ಎರಡನೇ ಮದುವೆಯಾಗುತ್ತಾರೆ. ಆ ಮೊದಲೇ ಯಾರಿಂದಲೋ ಬಸುರಾಗಿದ್ದ ಆಕೆಯು ಎಂಟು ತಿಂಗಳಲ್ಲಿ ಭಾಗಿಯನ್ನು ಹಡೆಯುತ್ತಾಳೆ. ಹೃದಯಭೇದಕ ನೋವನ್ನು ಅರಗಿಸಿಕೊಂಡ ಸಂಗಪ್ಪಣ್ಣನವರು ಅದನ್ನು ತಮ್ಮ ಮಗುವಿನಂತೆ ಬೆಳೆಸುತ್ತಾರೆ. ಬೆಳೆದು ದೊಡ್ಡವಳಾದಾಗ ಭಾಗಿಯು ತನ್ನ ಜೀವದ ಗೆಳತಿಯಾದ ನಾಗಿಯ ಅಣ್ಣ ಶಿವುವನ್ನು ಪ್ರೀತಿಸುತ್ತಾಳೆ. ಆದರೆ ಸಂಗಪ್ಪಣ್ಣನವರು ಮಗಳನ್ನು ಗದುಗಿನ ಶ್ರೀಮಂತ ವೀರಭದ್ರಪ್ಪನವರ ಮಗ ಮಹೇಂದ್ರನೊಡನೆ ಮದುವೆ ಮಾಡಿಸುತ್ತಾರೆ. ಒಬ್ಬನನ್ನು ಪ್ರೀತಿಸಿ ಇನ್ನೊಬ್ಬನನ್ನು ಮದುವೆಯಾದ ಭಾಗಿಯು ಇಬ್ಬಂದಿತನವನ್ನು ಅನುಭವಿಸುತ್ತಾಳೆ. ಗಂಡನ ಜೊತೆ ಮುಖವಾಡವನ್ನು ಧರಿಸಿಯೇ ಬಾಳಿದರೂ ಆಕೆಗೆ ಶಿವೂನ ನೆನಪುಗಳು ಕಾಡುತ್ತವೆ. ಗಂಡ ಮತ್ತು ಪ್ರಿಯಕರರ ನಡುವಿನ ಅಂತರವನ್ನು ತುಂಬಲಾಗುವುದಿಲ್ಲ. ಶ್ರೀಮಂತಿಕೆಯ ವಾತಾವರಣವು ಪ್ರೀತಿಗಾಗಿ ದಹಿಸುವ ಅವಳ ಮನೋಲೋಕವನ್ನು ಸ್ಪರ್ಶಿಸುವುದಿಲ್ಲ. ಪಕ್ಕದಲ್ಲಿ ಮಲಗಿರುವಾಗ ಕನಸಿನಲ್ಲೂ ಶಿವೂನನ್ನೇ ಆತ್ಮೀಯವಾಗಿ ಕೂಗಿ ಕರೆಯುವ ಕ್ರಿಯೆಗಳು ಮಹೇಂದ್ರನ ಮನದಲ್ಲಿ ಅಸಮಾಧಾನವನ್ನು ಹುಟ್ಟಿಸುತ್ತದೆ. ‘ನಿನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ಶಿವೂನದ್ದು’ ಎಂಬ ಆರೋಪವನ್ನು ಹೊರಿಸಿ ಆಕೆಯ ಗರ್ಭಪಾತವನ್ನು ಮಾಡಿಸುತ್ತಾನೆ. ತಾನು ಕಚ್ಚೆಹರುಕನಾಗಿದ್ದರೂ ಹೆಂಡತಿ ಕನ್ಯೆಯಾಗಿರಬೇಕೆಂಬ ಪುರುಷಪ್ರಧಾನ ಧೋರಣೆಯು ಇಲ್ಲಿ ವ್ಯಕ್ತವಾಗುತ್ತದೆ. ಈ ಕತೆಯಲ್ಲಿ ಮೂಡಿಬರುವ ವೈಫಲ್ಯಕ್ಕೆ ಹಲವು ಮುಖಗಳಿವೆ. ಮಾವನವರ ಕಾರುಭಾರುಗಳನ್ನು ನೋಡಿಕೊಳ್ಳುವ ಹೆಸರಿನಲ್ಲಿ ಅತ್ತೆಯವರಾದ ತನ್ನ ವಿಶ್ವಾಸವನ್ನು ಗಳಿಸಿಕೊಂಡು ಹಿಂದೆಯೇ ಬಂದ ಮಹೇಂದ್ರನು ತನ್ನ ಸೆರಗು ಹಿಡಿದಾಗ, ಸೆರಗು ಬಿಚ್ಚಿ, ಹಾಸಿ ಮಲಗಿಸಿ ಅವನ ಮಗುವಿನ ತಾಯಿಯಾದ ಬಂಗಾರೆವ್ವ, ಅಂಥವಳ ಗಂಡನಾಗಿ ಇದನ್ನೆಲ್ಲ ಕಂಡು ಅನುಭವಿಸಬೇಕಾಗಿ ಬಂದ ಸಂಗಪ್ಪಣ್ಣ, ಪ್ರೇಯಸಿ ಭಾಗಿಯನ್ನು ಪಡೆಯಲಾರದೆ ದುಃಖಿಸುವ ಶಿವೂ, ಇವರೆಲ್ಲರೂ ವಿಫಲರೇ. ಸಂಕೀರ್ಣ ವಸ್ತುವನ್ನು ನಿರ್ವಹಿಸುವ ಕತೆಯು ಖಚಿತ ದೃಷ್ಟಿಕೋನ, ಸೂಕ್ತ ವಿವರಗಳು ಮತ್ತು ವಿವಿಧ ಸ್ತರಗಳಲ್ಲಿ ನಡೆಯುವ ಅರ್ಥಕ್ರಿಯೆಗಳನ್ನು ಹೊಂದಿದೆ. ಒಳಿತಿನ ಶಕ್ತಿಗಳು ಅಸಹಾಯಕವಾಗಿ ಕೆಡುಕಿನ ಶಕ್ತಿಯೇ ವಿಜೃಂಭಿಸುವ ಸಂದರ್ಭದಲ್ಲಿ ನಾಗಿಯ ಹೆರಿಗೆಯಾದಾಗ ಆಕೆ ‘ಭಾಗಿ, ನನ್ನ ಭಾಗಿ, ಭಾಗೀರಥಿ’ ಎಂದು ಮಗುವನ್ನು ಕೂಗಿ ಕರೆಯುವಲ್ಲಿ ವ್ಯಕ್ತವಾಗುವ ಗೆಳೆತನದ ಉತ್ಕಟತೆ ಮತ್ತು ಕತ್ತಲೆ ಕರಗಿ ಬೆಳಗಾಗುವಂತೆ ಮಗು ನಗುವ ಕ್ರಿಯೆಯು ಕತೆಗೆ ಸಂಬಂಧಿಸಿದಂತೆ ಆಶಾವಾದಿ ಬೆಳವಣಿಗೆಯಾಗಿದೆ.
ಲೇಖಕಿಯು ಸಣ್ಣಕತೆಯ ಆಧುನಿಕ ತಂತ್ರಗಳನ್ನು ಅಲ್ಲಲ್ಲಿ ಪ್ರಯೋಗಿಸಿದ್ದರೂ ಅವರ ಮನಸ್ಸು ಸಂಕ್ಷೇಪಕ್ಕಿಂತ ದೀರ್ಘಕ್ಕೆ, ಆಳಕ್ಕಿಂತ ವಿಸ್ತಾರದೆಡೆಗೆ ಒಲಿದಿದೆ. ನಿರ್ದಿಷ್ಟ ಚೌಕಟ್ಟಿನೊಳಗೆ ಮುಗಿಯುವ ಹೆಚ್ಚಿನ ಕತೆಗಳ ಸಂಪೂರ್ಣತೆಯು ಅವುಗಳಿಗೆ ಮುಳುವಾಗದಿದ್ದರೂ ಇತರ ಕತೆಗಳ ಸೋಲಿಗೆ ಅವುಗಳ ರಾಚನಿಕ ಸ್ವರೂಪವು ಕಾರಣವಾಗಿದೆ. ಲೇಖಕಿಯು ಕತೆಗಳ ಜೊತೆಗೆ ಲಲಿತಪ್ರಬಂಧಗಳನ್ನು ಬರೆದವರು. ಈ ಎರಡು ಪ್ರಕಾರಗಳ ನಡುವೆ ಅಂತರವಿಲ್ಲದಂಥ ಕತೆಗಳು ಮಸುಕಾಗಿ ತೋರುತ್ತವೆ. ವಿಪುಲ ವಿವರಗಳು, ಲೋಕಾಭಿರಾಮದ ಮಾತುಗಳು, ಹಾಡಿನ ಸಾಲುಗಳು ಏಕಾಗ್ರತೆಗೆ ಭಂಗವನ್ನು ಉಂಟು ಮಾಡುತ್ತವೆ. ಅವರ ‘ಕಜ್ಜಾಯ’, ‘ಕೊಡುವುದೇನು ಕೊಂಬುದೇನು?’ ಲಲಿತ ಪ್ರಬಂಧ ಸಂಕಲನಗಳಲ್ಲಿರುವ ಹೆಚ್ಚಿನ ರಚನೆಗಳು ಒಂದರ್ಥಲ್ಲಿ ಸಣ್ಣಕತೆಗಳೇ ಆಗಿವೆ. ಅವುಗಳಲ್ಲಿರುವ ಪ್ರಬಂಧದ ಅಂಶಗಳನ್ನು ಬಿಟ್ಟು ಉಳಿದ ಭಾಗಗಳನ್ನು ಪುರ್ರಿಚಿಸಿ, ಕತೆಯ ರೂಪದಲ್ಲಿ ಬೆಳೆಸಿದ್ದರೆ ಕನ್ನಡ ಕಥಾಲೋಕಕ್ಕೆ ಪ್ರಾತಿನಿಧಿಕ ಕತೆಗಳು ದೊರೆಕುವ ಸಾಧ್ಯತೆಗಳಿದ್ದವು.
ವ್ಯವಸ್ಥೆಯೊಳಗಿನ ಕ್ರೌರ್ಯ, ಇನ್ನೂ ಉಳಿದಿರುವ ಜಾತಿ ವೈಷಮ್ಯ, ಮನುಷ್ಯತ್ವದ ಸೆಲೆ ಇಲ್ಲದಂತೆ ಹೊಗೆಯಾಡುತ್ತಿರುವ ಸ್ವಾರ್ಥ, ಸಣ್ಣತನ, ಕ್ಷುದ್ರ ಕ್ಷುಲ್ಲಕತೆಗಳು ನೆಮ್ಮದಿಯ ಉಸಿರಿಗೆ ಆಸ್ಪದವಿಲ್ಲದ ನರಕದ ಮುಖಗಳನ್ನು ಅನಾವರಣಗೊಳಿಸುತ್ತವೆ. ವ್ಯವಸ್ಥೆಯೊಳಗೆ ಜನರು ನಲುಗುವ ರೀತಿ, ಅದನ್ನು ಮೆಟ್ಟಿ ನಿಲ್ಲುವ ವ್ಯಕ್ತಿಯ ಘನತೆ, ಸ್ವಾಭಿಮಾನಗಳನ್ನು ವಿವೇಚಿಸುವ ಲೇಖಕಿಯ ಮಾನವೀಯ ದೃಷ್ಟಿಕೋನವು ಮನುಷ್ಯರಲ್ಲಿನ ಉತ್ತಮಿಕೆಯ ಸಾಧ್ಯತೆಗಳೆಡೆಗೆ ಗಮನವನ್ನು ಹರಿಸುತ್ತದೆ. ಹಳೆಯ ಮತ್ತು ಹೊಸ ತಲೆಮಾರುಗಳನ್ನು ಪ್ರತಿನಿಧಿಸುವ ಪಾತ್ರಗಳು ವ್ಯವಸ್ಥೆಯ ವಿರುದ್ಧ ಬಂಡೇಳದಿದ್ದರೂ ಅದನ್ನು ಸಮರ್ಥಿಸದೆ ಬದುಕಿನೊಡನೆ ಹೋರಾಡುತ್ತಾರೆ. ಅವರ ವಿವೇಕ, ವಾಸ್ತವ ಪ್ರಜ್ಞೆ, ಬದುಕುಳಿಯುವ ಸಾಹಸ, ಹೃದಯವಂತಿಕೆ ಮತ್ತು ವ್ಯಕ್ತಿತ್ವ ನಿರ್ಮಾಣದ ಕಡೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಭಾಷೆಯನ್ನು ಸೂಕ್ಷ್ಮವಾಗಿ ಬಳಸುವ ಲೇಖಕಿಯು ಸಮಾಜದ ಕ್ರೂರ ವಾಸ್ತವವನ್ನು ನಿರ್ಲಿಪ್ತವಾಗಿ, ಉರಿಯುವ ವಿಷಾದದ ನೆಲೆಯಲ್ಲಿ ಮಂಡಿಸುತ್ತಾ ಕತೆಗೆ ಹೊಸ ಅರ್ಥಗಳನ್ನು ಒದಗಿಸುತ್ತಾರೆ. ತಮ್ಮದೇ ರೀತಿಯಲ್ಲಿ ಕತೆಗಳನ್ನು ಹೇಳುತ್ತಾ ಬದುಕಿನ ವ್ಯಂಗ್ಯವೈರುಧ್ಯಗಳತ್ತ ಗಮನ ಸೆಳೆಯುತ್ತಾರೆ. ಪಾತ್ರಗಳಲ್ಲಿ ಉಕ್ಕುವ ಮಾನವೀಯ ಸಂವೇದನೆಗಳು ಲೇಖಕಿಯೊಳಗಿನ ಜೀವನ ಪ್ರೀತಿಯಿಂದ ಮೂಡಿ ಬಂದಿವೆ. ಕತೆಯೊಳಗಿನಿಂದಲೇ ತತ್ವ ಅರಳಿ ಜೀವನದ ರೀತಿಯಾಗುವ ಕ್ರಮವು ಪರಿಣಾಮಕಾರಿಯಾಗಿದೆ.
ಬಾಂಧವ್ಯದ ಸುಖವು ಇಲ್ಲದಾಗುತ್ತಿರುವುದರ ಕುರಿತು ಗಾಢ ವಿಷಾದವನ್ನು ಕಟ್ಟಿಕೊಡುವ ಕತೆಗಳು ಜನರ ತಾಳ್ಮೆಯನ್ನು ಇತ್ಯಾತ್ಮಕ-ಕ್ರಿಯಾತ್ಮಕ ರೂಪದಲ್ಲಿ ದಾಖಲಿಸುತ್ತವೆ. ಅನ್ಯಾಯಕ್ಕೊಳಗಾದವರು ಸಮಾಜಕ್ಕೆ ಕೊಡುವ ಪ್ರತಿಕ್ರಿಯೆ ಮತ್ತು ಸ್ವತಂತ್ರ ಅಸ್ತಿತ್ವವನ್ನು ಸ್ಥಾಪಿಸುವ ವಿಧಾನವು ಮುಖ್ಯವೆನಿಸುತ್ತದೆ. ಕೆಲವೊಂದು ಸಮಸ್ಯೆಗಳ ಪರಿಹಾರವು ಸರಳವೆನಿಸುತ್ತಿದ್ದರೂ ಅವರ ಅನುಭವ ಲೋಕವು ಆಧುನಿಕ ಸಮಾಜವು ಎದುರಿಸುತ್ತಿರುವ ದೈನಂದಿನ ಆಗುಹೋಗುಗಳು, ಭಾವನಾತ್ಮಕ ತಳಮಳಗಳನ್ನು ಸ್ಪರ್ಶಿಸುತ್ತದೆ. ನೈತಿಕ ಅಧಪತನದ ಕಡೆ ಬೊಟ್ಟು ಮಾಡುತ್ತದೆ. ಹಳ್ಳಿಯ ಬದುಕನ್ನು ವೈಭವೀಕರಿಸುವ ರಚನೆಗಳೇ ತುಂಬಿಕೊಳ್ಳುತ್ತಿರುವ ಸಂದರ್ಭದಲ್ಲಿ ಇವರ ಕತೆಗಳು ಅಲ್ಲಿನ ಶ್ರೀಮಂತರ ಅಷಾಢಭೂತಿತನ, ಮಧ್ಯಮ ವರ್ಗದವರ ತಲ್ಲಣ ಮತ್ತು ಬಡವರ ಸಂಕಷ್ಟಗಳನ್ನು ಚಿತ್ರಿಸುತ್ತಾ ಬದುಕಿನ ವಿವಿಧ ಮುಖಗಳನ್ನು ಪರಿಚಯಿಸುತ್ತವೆ. ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ವಾದವು ಭದ್ರವಾಗಿ ನೆಲೆಗೊಂಡ ನಂತರ ರೂಪುಗೊಂಡ ಕತೆಗಳು ಯಾವುದೇ ಸಿದ್ದಾಂತಕ್ಕೆ ಕಟ್ಟುಬಿದ್ದಿಲ್ಲ. ಗಂಡು ಹೆಣ್ಣಿನ ಸಂಘರ್ಷ, ಸಾಮುದಾಯಿಕ ತಿಕ್ಕಾಟಗಳು ಸೈದ್ಧಾಂತಿಕ ಸ್ವರೂಪದ್ದಾಗಿಲ್ಲ. ಸಮಾಜದ ಕತೆಗಳಾದರೂ ಇಡೀ ಸಮಾಜದ ಸಂವೇದನೆಯಾಗಿ ರೂಪುಗೊಂಡಿದ್ದು ಬದುಕಿನ ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ನೆಲೆಗಳನ್ನು ಗ್ರಹಿಸುವಲ್ಲಿ ಯಶಸ್ವಿಯಾಗಿವೆ. ಸರಳವಾದ ರಚನಾಕ್ರಮ, ನೇರವಾದ ನಿರೂಪಣೆಗಳ ಮೂಲಕ ರೂಢ ಭಾವನೆಗಳನ್ನು ಕಲಕಿ ಜೋಡಿಸುವ ಪ್ರಯತ್ನವಿದೆ. ನುಡಿಗಟ್ಟು, ರೀತಿ ನೀತಿ, ಸಂಸ್ಕಾರಗಳನ್ನು ಪ್ರತಿಬಿಂಬಿಸುವ ಕತೆಗಳು ಪ್ರೌಢ ಒಳನೋಟಗಳನ್ನು ಹೊಂದಿವೆ. ಈಗಾಗಲೇ ಓದಿರುವ ಹಲವು ಕತೆಗಳ ಸಾಲಿಗೆ ಸೇರಿ ಮರೆತು ಹೋಗಲು ಕಾದಿರುವ ರಚನೆಗಳ ನಡುವೆ ಅನುಭವ ಮತ್ತು ಸೂಕ್ಷ್ಮ ಒಳನೋಟಗಳ ಮೂಲಕ ಸ್ಮರಣೀಯವೆನಿಸಿರುವ ಕತೆಗಳೂ ಇವೆ. ಹಿತಮಿತವಾದ ಬರವಣಿಗೆ-ಆಡಂಬರವಿಲ್ಲದ ನಿರೂಪಣೆ, ಗಟ್ಟಿ ಪಾತ್ರಗಳು, ಸಾಂದ್ರ ಅನುಭವ, ಬದುಕಿನ ಸಮಸ್ಯೆಗಳು, ಹುರುಳಿಲ್ಲದ ವಿಚಾರಗಳ ವಿರುದ್ಧ ಎತ್ತುವ ಪ್ರಶ್ನೆಗಳು, ಬದುಕಿನ ತತ್ವಗಳು ಮುಖ್ಯವಾಗುತ್ತವೆ. ಪಳಗಿದ ಬರವಣಿಗೆಯಲ್ಲಿ ಪ್ರಬುದ್ಧ ಮನಸ್ಸನ್ನು ಕಾಣುತ್ತೇವೆ. ಚಮತ್ಕಾರಿಕ ತಿರುವಿಲ್ಲದ ನೇರ ಕಥನ, ಆರೋಗ್ಯಪೂರ್ಣ ಜೀವನ ದೃಷ್ಟಿ ಎಲ್ಲ ವರ್ಗದ ಓದುಗರಿಗೂ ಆಪ್ತವೆನಿಸುತ್ತವೆ. ಪ್ರಚಲಿತ ಸಾಮಾಜಿಕ ವ್ಯವಸ್ಥೆಯ ಅನ್ಯಾಯಗಳನ್ನು ಧ್ವನಿಸುವ ಕತೆಗಳು ಈ ಹೊತ್ತಿನಲ್ಲೂ ಅರ್ಥಪೂರ್ಣವೆನಿಸುತ್ತವೆ.
ವಿಮರ್ಶಕರು ಡಾ. ಸುಭಾಷ್ ಪಟ್ಟಾಜೆ
ಡಾ. ಸುಭಾಷ್ ಪಟ್ಟಾಜೆಯವರು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದಲ್ಲಿ ಡಾ. ಯು. ಮಹೇಶ್ವರಿ ಅವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿದ ‘ಕನ್ನಡ ಮತ್ತು ಮಲಯಾಳಂ ಸಣ್ಣ ಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು- ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ. ಹವ್ಯಾಸಿ ಕತೆಗಾರರಾಗಿರುವ ಇವರ ಕತೆ, ಕವಿತೆ, ಲೇಖನ ಮತ್ತು ಇನ್ನೂರಕ್ಕೂ ಮಿಕ್ಕ ಪುಸ್ತಕ ವಿಮರ್ಶೆಗಳು ಕನ್ನಡ ನಾಡಿನ ಪ್ರಸಿದ್ಧ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ, ಡಿಜಿಟಲ್ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಪ್ರಸಾರಗೊಂಡಿವೆ. ಗೋಡೆ ಮೇಲಿನ ಗೆರೆಗಳು (ಕಥಾ ಸಂಕಲನ) ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್ (ವ್ಯಕ್ತಿ ಚಿತ್ರಣ) ಕಥನ ಕಾರಣ (ಸಂಶೋಧನ ಕೃತಿ) ಶ್ರುತಿ ಹಿಡಿದು ಜೊತೆ ನಡೆದು (ವಿಮರ್ಶಾ ಲೇಖನಗಳ ಸಂಗ್ರಹ) ನುಡಿದು ಸೂತಕಿಗಳಲ್ಲ, ಇಹಪರದ ಧ್ಯಾನ, ಪ್ಲಾಸಿಬೋ (ಸಂಪಾದಿತ) ಎಂಬ ಕೃತಿಗಳನ್ನು ಹೊರತಂದಿರುವ ಇವರು ಕಾಸರಗೋಡು ಜಿಲ್ಲೆಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆ ಶೇಣಿಯಲ್ಲಿ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಧಾರವಾಡದ ಸಾಹಿತ್ಯ ಗಂಗಾ ಸಂಸ್ಥೆಯ ಸಂಚಾಲಕರಾಗಿ, ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆಯ ಸದಸ್ಯರಾಗಿ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದಾರೆ.